ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ನೆನಪಿನಲ್ಲಿ..

ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ನೆನಪಿನಲ್ಲಿ..

ಬರಹ

ನಮ್ಮಜ್ಜ


ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ..
ಕಣ್ಣು ಇಲ್ಲದೆ ಮೆರೆದಾನ
ಕಣ್ಣಿಲ್ಲದೋರಿಗೆ ದಾರಿ ತೋರ್ಸ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.


ಮೂರು ಭಾಷೆ ಪಂಡಿತ
ತಬಲಾ ಹಾರ್ಮೋನಿ ವಾದಕ
ಸಾಹಿತ್ಯ ಕೃಷಿ ಹಚ್ಚ್ಯಾನ
ಸಂಗೀತ ಶಾಲೆ ಮಾಡ್ಯಾನ.
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಆರ್ರಾಗ ಕಣ್ಣು ಕಳಕೊಂಡ,
ಮನಸಿನ ಕಣ್ಣು ತೆರಕೊಂಡ
ಗಾನ ವಿದ್ಯೆಗೆ ಸೋತಾವ
ಪಂಚಾಕ್ಷರಿಗಳ ಹಿಂದೆ ಬಂದಾವ.
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಹಲವಾರು ಶಾಸ್ತ್ರ ಕಲತಾವ
ನೂರಾರು ರಚನೆ ಮಾಡಿದಾವ
19 ಪುರಾಣ ಬರೆದಾನ
19 ನಾಟಕ ಆಡ್ಸ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಕುರುಡರ ಹಿಂಡು ಕಟ್ಯಾನ
ಅನಾಥರ ತಂದೆ ಆಗ್ಯಾನ
ಗದುಗಿಗೆ ಬಂದು ನೆಲೆಸ್ಯಾನ
ವೀರೇಶ್ವರಾಶ್ರಮ ಮಾಡ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಅನಾಥರ ಬಾಳು ಬೆಳಗ್ಯಾನ
ಅಂಧರಿಗೆ ಊರುಗೋಲು ಆಗ್ಯಾನ
ನಿಂತು ವಿದ್ಯೆ ಕಲಸ್ಯಾನ
ನಿತ್ಯ ದಾಸೋಹ ನಡೆಸ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.


ಸಂಗೀತದ ಸಾಧನೆ ಮಾಡ್ಯಾನ
ನೂರಾರು ಬಿರುದು ಪಡೆದಾನ
ಗದುಗಿಗೆ ಕೀರ್ತಿ ತಂದಾನ
ಪುಣ್ಯ ಭೂಮಿ ಮಾಡ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.

ಲೋಕವ ಬಿಟ್ಟು ನಡದಾನ
ಅನಾಥರ ಅನಾಥ ಮಾಡ್ಯಾನ
ಸಂಗೀತದ ಪೀಳಿಗೆ ಕಟ್ಯಾನ
ಎಲ್ಲರ ಮನದಾಗ ನೆಲೆಸ್ಯಾನ
ಇವ ನೋಡ ನಮ್ಮಜ್ಜ
ಗಾನಯೋಗಿ ಪುಟ್ಟಜ್ಜ.


-ಇಂತಿ
ಶಿವಶಂಕರ ವಿಷ್ಣು ಯಳವತ್ತಿ