ಡಾ. ಬಾಬು ರಾಜೇಂದ್ರ ಪ್ರಸಾದ್ ನೆನಪಿಗಾಗಿ ವಕೀಲರ ದಿನ

ಡಾ. ಬಾಬು ರಾಜೇಂದ್ರ ಪ್ರಸಾದ್ ನೆನಪಿಗಾಗಿ ವಕೀಲರ ದಿನ

ಡಿಸೆಂಬರ್ ೩ ವಕೀಲರ ದಿನ. ಈ ದಿನವು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನ. ರಾಜೇಂದ್ರ ಪ್ರಸಾದ್ ಅವರು ಶ್ರೇಷ್ಟ ವಕೀಲರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಬಹುತೇಕ ಮಂದಿ ವಕೀಲಿ ವೃತ್ತಿ ಮಾಡುತ್ತಿದ್ದರು. ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೂ ಉತ್ತಮ ವಕೀಲರಾಗಿದ್ದರು. 

ಕಾನೂನಿನ ಜ್ಞಾನವು ವಕೀಲರಿಗೆ ಉತ್ತಮವಾಗಿರುವುದರಿಂದ ಬಹುತೇಕ ಮಂದಿ ವಕೀಲರು ರಾಜಕೀಯದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಡಾ. ರಾಜೇಂದ್ರ ಪ್ರಸಾದ್ ಅವರು ೧೮೮೪ರ ಡಿಸೆಂಬರ್ ೩ ರಂದು ಬಿಹಾರದ ಜೇರಡ್ಡೆ ಎಂಬ ಗ್ರಾಮವೊಂದರಲ್ಲಿ ಜನಿಸಿದರು. ಇವರ ತಂದೆ ಮಹದೇವ್ ಸಹಾಯ್ ಹಾಗೂ ತಾಯಿ ಕಮಲೇಶ್ವರಿ ದೇವಿ. ಇವರಿಗೆ ೨ ಗಂಡು ಹಾಗೂ ೩ ಮಂದಿ ಹೆಣ್ಣು ಮಕ್ಕಳು. ಮಹದೇವ್ ಸಹಾಯ್ ಅವರು ಸಂಸ್ಕೃತ ಹಾಗೂ ಪಾರಸೀ ಭಾಷಾ ಪಂಡಿತರಾಗಿದ್ದರು. ವೈದ್ಯ ವೃತ್ತಿಯನ್ನೂ ಮಾಡುತ್ತಿದ್ದರು. ಇವರದ್ದು ಸಂಪ್ರದಾಯಸ್ಥ ಹಾಗೂ ದೈವ ಭಕ್ತ ಕುಟುಂಬ. ಈ ಕಾರಣದಿಂದ ಬಾಲ್ಯದಲ್ಲೇ ರಾಮಾಯಣ ಹಾಗೂ ಮಹಾಭಾರತ ಕೇಳುತ್ತಲೇ ರಾಜೇಂದ್ರ ಪ್ರಸಾದ್ ಬೆಳೆದರು. ಇವರದ್ದು ಮಧ್ಯಮ ವರ್ಗದ ಕುಟುಂಬ. ಮನೆಯ ಸಾತ್ವಿಕ ವಾತಾವರಣವು ಬಾಲ್ಯದಿಂದಲೇ ರಾಜೇಂದ್ರ ಪ್ರಸಾದ್ ಅವರು ಬಡವ-ಬಲ್ಲಿದ ಎಂಬ ಭೇಧ ಭಾವ ಮಾಡದೇ ಸಮಜದಲ್ಲಿ ಬದುಕುವುದನ್ನು ಕಲಿಸಿತು. ದೇಶದ ಉನ್ನತ ಹುದ್ದೆಯಾದ ರಾಷ್ಟ್ರಪತಿ ಪದವಿಯಲ್ಲಿ ಇದ್ದರೂ ಬಹಳ ಸರಳವಾಗಿ ಬದುಕಿದರು. ತಮಗೆ ಬರುತ್ತಿದ್ದ ಸಂಬಳವನ್ನೂ ಕಡಿತಗೊಳಿಸಲು ತಿಳಿಸಿದ್ದರು.

ರಾಜೇಂದ್ರ ಪ್ರಸಾದ್ ಅವರಿಗೆ ೧೨ ನೇ ವಯಸ್ಸಿನಲ್ಲೇ ರಾಜವಂಶಿ (ರಾಜಬನ್ಷಿ) ದೇವಿ ಎಂಬ ಹುಡುಗಿ ಜೊತೆ ಮದುವೆಯಾಯಿತು. ಬಾಲ್ಯದಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಇವರು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಬಿ.ಎ., ಎಂ.ಎ. ಹಾಗೂ ಕಾನೂನು ಪದವಿಯನ್ನು ಪಡೆದರು. ಕಲ್ಕತ್ತಾ ಹಾಗೂ ಪಾಟ್ನಾದಲ್ಲಿ ವಕೀಲಿ ವೃತ್ತಿಯನ್ನೂ ನಡೆಸಿದರು. ಇವರು ವಕೀಲ ವೃತ್ತಿಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಯಿಂದ ಪ್ರೇರಣೆಗೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಇವರ ತ್ಯಾಗ ಹಾಗೂ ನಿಸ್ವಾರ್ಥ ಸೇವೆಯನ್ನು ಗಮನಿಸಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಗಣರಾಜ್ಯವಾದ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ಅವರು ಮೊದಲ ರಾಷ್ಟ್ರಪತಿಯಾದರು. ಸುಮಾರು ಹನ್ನೆರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಏಕೈಕ ರಾಷ್ಟಪತಿ ಇವರು. ಇವರ ನಂತರ ಬಂದ ಯಾವುದೇ ರಾಷ್ಟಪತಿಗೆ ಎರಡನೇ ಅವಧಿಗೆ ಅಧಿಕಾರ ಸಿಗಲಿಲ್ಲ. 

ರಾಜೇಂದ್ರ ಪ್ರಸಾದ್ ಅವರಿಗೆ ವಕೀಲ ವೃತ್ತಿ ಮೇಲಿದ್ದ ಪ್ರೀತಿ ಹಾಗೂ ಬದ್ಧತೆಯನ್ನು ಪರಿಗಣಿಸಿ ಅವರ ಜನ್ಮದಿನವಾದ ಡಿಸೆಂಬರ್ ೩ನ್ನು ಪ್ರತೀ ವರ್ಷ ವಕೀಲರ ದಿನವಾಗಿ ಆಚರಿಸಲಾಗುತ್ತದೆ. ವಕೀಲರ ವೃತ್ತಿಯಲ್ಲಿ ಸತತ ಸಂಶೋಧನೆ ಹಾಗೂ ಮಾಹಿತಿ ಸಂಗ್ರಹ ಅತೀ ಅಗತ್ಯವಾಗಿ ಆಗಬೇಕಾಗುತ್ತದೆ. ಈಗಲೂ ಭಾರತದಲ್ಲಿ ಜನರು ತಮ್ಮ ಯಾವುದೇ ಕಲಹ, ವೈಮನಸ್ಸು, ವ್ಯಾಜ್ಯಗಳಿಗೆ, ಮದುವೆ ಅಥವಾ ಸ್ಥಳ ನೊಂದಾವಣೆಗಳಿಗಾಗಿ ಸಂಪರ್ಕಿಸುವುದು ವಕೀಲರನ್ನೇ. ವಕೀಲರನ್ನೇ ದೇವರು ಎಂದು ಹೇಳುವ ಜನರು ಇನ್ನೂ ಇದ್ದಾರೆ. ಹಲವಾರು ವಕೀಲರು ತಮ್ಮ ಕಕ್ಷಿದಾರನ ದಾವೆಯನ್ನು ತಮ್ಮದೇ ಸ್ವಂತ ದಾವೆಯ ರೀತಿ ಪರಿಗಣಿಸಿ ವಾದ ಮಾಡಿ ಗೆಲ್ಲಿಸಿಕೊಟ್ಟವರೂ ಇದ್ದಾರೆ. ವಕೀಲರು ಹಾಗೂ ವೈದ್ಯರಲ್ಲಿ ಸುಳ್ಳು ಹೇಳಲೇ ಬಾರದು ಎಂಬ ಮಾತಿದೆ. ಏಕೆಂದರೆ ನಿಮ್ಮ ಒಂದು ಸುಳ್ಳು ನಿಮ್ಮ ಪಾಲಿಗೆ ಮೃತ್ಯುವೇ ಆದೀತು. ಆದುದರಿಂದ ಈಗಲೂ ಜನರು ವಕೀಲರನ್ನು ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ನಂಬುತ್ತಾರೆ.

ಹಿಂದಿನ ವಕೀಲ ವೃತ್ತಿಗೂ, ಈಗಿನದಕ್ಕೂ ಬಹಳ ವ್ಯತ್ಯಾಸಗಳಿವೆ. ವಕೀಲರ ವೃತ್ತಿಗೆ ಸರಕಾರೀ ಹಾಗೂ ಖಾಸಗಿ ವ್ಯವಸ್ಥೆಯಲ್ಲಿ ಹಲವಾರು ಅವಕಾಶಗಳು ಈಗ ಇವೆ. ಕೆಲವು ಖ್ಯಾತ ವಕೀಲರು ಒಂದು ಕೇಸ್ ನಿಂದ ಲಕ್ಷಾಂತರ ರೂಪಾಯಿಗಳನ್ನು ದುಡಿಯುತ್ತಾರೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುವಾಗ ತಡವಾಗುತ್ತದೆ ಎಂದು ಬಹುತೇಕರ ಅನಿಸಿಕೆ. ಲಕ್ಷಾಂತರ ಕೇಸುಗಳು ವಿವಿಧ ಹಂತದ ಕೋರ್ಟ್ ಗಳಲ್ಲಿ ಬಾಕಿ ಇವೆ. ಇವುಗಳ ತ್ವರಿತ ವಿಲೇವಾರಿ ಹೇಗೆ ಸಾಧ್ಯ ಎಂಬುವುದೂ ಒಂದು ಪ್ರಶ್ನೆಯಾಗಿಯೇ ಉಳಿದಿದೆ. ವಕೀಲರಿಗೆ ತಮ್ಮ ಮಾತು ಹಾಗೂ ಚಾಣಾಕ್ಷತನವೇ ಬಂಡವಾಳ. ಅದರ ಜೊತೆ ಆಯಾ ಕೇಸ್ ಬಗ್ಗೆ ಆಳವಾದ ಅಧ್ಯಯನವೂ ಅತ್ಯಂತ ಅಗತ್ಯ.

ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಉದಾತ್ತ ಮಾರ್ಗದಲ್ಲಿ ನಡೆಯುವುದರ ಮೂಲಕ ನಾವು ಅವರಿಗೆ ಗೌರವ ಸಲ್ಲಿಸಬೇಕಾಗಿದೆ. ಯಾರೂ ನ್ಯಾಯದಿಂದ ವಂಚಿತನಾಗಬಾರದು ಎಂದು ಒಂದು ಮಾತಿದೆ. ಇದರಂತೆ ದೇಶದ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರತಿಯೊಬ್ಬರಿಗೆ ನ್ಯಾಯ ಸಿಗುವಂತೆ ಪ್ರತಿಯೊಬ್ಬ ವಕೀಲನು ಪ್ರಣತೊಡಬೇಕು. ಆಗಲೇ ರಾಜೇಂದ್ರ ಪ್ರಸಾದ್ ಅವರ ಆಶಯ ಈಡೇರುವುದು. ಅವರ ಜನ್ಮ ದಿನವನ್ನು ವಕೀಲರ ದಿನವನ್ನಾಗಿಸಿದಕ್ಕೂ ಸಾರ್ಥಕತೆ ಸಿಗುವುದು.  

ಚಿತ್ರ ಕೃಪೆ: ಆಂತರ್ಜಾಲ ತಾಣ