ಡಿಕೆಎನ್ ಮೇಷ್ಟ್ರು ಮತ್ತವರ ನಗು ಭಾಗ ೩

ಡಿಕೆಎನ್ ಮೇಷ್ಟ್ರು ಮತ್ತವರ ನಗು ಭಾಗ ೩

ಬರಹ

"ನೀವು ಬದಲಾಗಿಬಿಟ್ರಿ ಸರ್ .ನಿಮಗೆ ನೆನಪಿದ್ಯಾ ೧೯೮೦ ಬ್ಯಾಕ್ ಕರ್ಕೊಂಡು ನಾವೆಲ್ಲಾ ಜೋಗಕ್ಕೆ ಹೋಗಿದ್ವಿ .ನಿಮ್ಮ ಸ್ಕ್ರಿಕ್ಟ್ ನೆಸ್ ನೋಡಿನೇ ಎಷ್ಟೋ ಜನ ತಂದೆ ತಾಯಂದಿರು ತಮ್ಮ ಹೆಣ್ಣುಮಕ್ಕಳನ್ನ ಟ್ರಿಪ್ಗೆ ಕಳಿಸಿದ್ರು . ಜೋಗದಲ್ಲಿ ಎಲ್ಲರಿಗೂ ಫಾಲ್ಸ್ ತೋರಿಸಿ ಕರೆಂಟ್ ಹೇಗೆ ತಯಾರಾಗುತ್ತೆ ಅಂತ ಹೇಳಿ ವಾಪಸು ಹೋಗಕ್ಕೆ ಮೇಲಕ್ಕೆ ಬಂದ್ವಿ . ನೀವು ಮತ್ತೆ ಜೋಗದ ಕೆಳಗೆ ಹೋಗಿ ಬರ್ತೀನಿ ಅಂತ ಇಳಿದ್ರಿ . ನಾವೆಲ್ಲಾ ನಿಮ್ಮದು ಅತಿ ಅಂತ ಅಂದುಕೊಂಡಿದ್ದು ನಿಜ ಆದ್ರೆ ನೀವು ಜೋಗದ ಕೆಳಗಿಂದ ಆ ಸುರೇಶ ಮತ್ತೆ ಶೈಲಾನ ಕರ್ಕೊಂಡು ಬಂದಾಗ ನಮಗೆಲ್ಲಾ ಅರ್ಥ ಆಗೋಯ್ತು ಅಲ್ಲಿ ತನಕ ಸುಮ್ಮನೆ ಇದ್ದೋರು ಮೇಲೆ ಬಂದ ತಕ್ಷಣ ಹೊಡೆಯೋಕೆ ಶುರು ಮಾಡಿದ್ರಲ್ಲ .ಹೆಡ್ ಮಾಷ್ಟ್ರೆ ಕಕ್ಕಾಬಿಕ್ಕಿ ಆಗಿಬಿಟ್ರು .ನಿಮ್ಮ ಹೊಡೆತಗಳಿಗೆ ಸುರೇಶ ಸತ್ತೇ ಹೋಗ್ತನೇನೋ ಅನ್ನಿಸಿಬಿಟ್ಟಿತ್ತು .ಆಮೇಲೆ ನಾವೂ ಅವರಿಗೆ ಬುಧ್ಧಿ ಹೇಳಿದ್ವಿ ಆದರೆ ನೀವು ಹೇಗೆ ಎಲ್ಲವನ್ನೂ , ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸ್ತಿರ್ತೀರ ಅನ್ನೋದು ನಮಗೆ ಆಶ್ಚರ್ಯವನ್ನ ಉಂಟುಮಾಡಿತ್ತು . ಮತ್ತೆ ನಿಮ್ಮ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿತ್ತು..ಅಷ್ಟೊಂದು, ಹುಡುಗರನ್ನ ಹಚ್ಚಿಕೊಳ್ಳೋ ನೀವು ಈಗ ಅವರನ್ನ ಅವರ ಪಾಡಿಗೆ ಬಿಟ್ಟು ಬಿಡ್ತೀನಿ ಅಂದ್ರೆ ಹೇಗೆ ಸರ್ "**********
***** "ಇಲ್ಲ ಜಿ ಎ ಎಂ ನಾನು ಹುಡುಗರನ್ನ ಹಚ್ಚಿಕೊಳ್ಳಲ್ಲ ಅಂತ ಅಲ್ಲ ಆದ್ರೆ ಕೆಲವು ಸಗಣಿಗಳನ್ನ ಬಿಟ್ಟು ಬಿಡ್ತೀನಿ ಅವರನ್ನ ಸರಿ ಮಾಡೋಕೆ ಹೋಗಲ್ಲ .ನನ್ನನ್ನೇ 'ಆ ನನ್ಮಗ ನನ್ನನ್ನೇನು ಮಾಡ್ತಾನೆ ' ಅನ್ನೋ ಹುಡುಗರಿಗೆ ಏನ್ ಮಾಡ್ಬೇಕು?ಅಂಥವರನ್ನ ಮುಟ್ಟೋದಕ್ಕೂ ಹೇಸಿಗೆಯಾಗುತ್ತೆ .ಒಬ್ಬ ಟೀಚರ್ ಜೆನರೇಶನ್ ನ ಜೊತೆ ಜೊತೆಗೆ ಬೆಳಿತಾನೆ .ಹೆಗಲ ಮೇಲೆ ಬಟ್ಟೆ ಚೀಲ ಹಾಕ್ಕೊಂಡು ಹೋಗೋ ಹುಡುಗರನ್ನ ನೋಡಿದೀನಿ ಬೆನ್ನ ಹಿಂದೆ ಬ್ಯಾಗ್ ಹಾಕ್ಕೊಂಡು ಹೋಗೋ ಹುಡುಗರನ್ನ ನೋಡಿದಿವಿ ಈಗ ಕೈಯಲ್ಲಿ ಒಂದು ಪುಸ್ತಕ ಹಿಡ್ಕೊಂಡು ಬರೋ ಹುಡುಗರನ್ನ ನೋಡ್ತಾ ಇದೀವಿ ಅವಾಗಿನ ಹುಡುಗರ ಮನಸ್ತಿತಿ ಈಗಿನ ಹುಡುಗರ ಮನಸ್ತಿತಿ ಎಲ್ಲವನ್ನ ಒಬ್ಬ ಟೀಚರ್ ಮಾತ್ರ ಅರ್ಥ ಮಾಡ್ಕೊಬಲ್ಲ .ಮೊನ್ನೆ ನೀವು ಯಾರೋ ಹುಡುಗನ್ನ ಹೊಡೆದಿದ್ದಕ್ಕೆ ಅವರಪ್ಪ ಪೋಲಿಸ್ ನ ಕರ್ಕೊಂಡು ಬಂದಿದ್ದನಲ್ಲ ನಮಗೇನು ಸುಮ್ನೆ ಹೊಡೆಯೋಕೆ ಹುಚ್ಚಾ .ಯಾರೋ ಕೆಲವು ಶಿಕ್ಷಕರು ಹಾಗಿರಬಹುದು ಆ ರೀತಿ ಇರೋರು ತುಂಬಾ ಕಡಿಮೆ .ಬಿಟ್ಟು ಹೋದ ಒಂದು ನಾಕು ಜನ ಹುಡುಗರು ನಮ್ಮನ್ನ ನೆನಪಿಸಿಕೊಂಡರೆ ಅಷ್ಟೇ ಸಾಕು ನಮಗೆ .ಈಗ್ಲೂ ಆ ರಂಗನಾಥ ಸಾಂಬ ಮೂರ್ತಿ ಬರ್ತಾರೆ ಅವರೆಲ್ಲಾ ಲಕ್ಚರರ್ ಆಗಿದಾರೆ .ಬ್ರಹ್ಮ ಗಣ ರುದ್ರ ಗಣ ಛಂದಸ್ಸಿನ ಬಗ್ಗೆ ಕೇಳಕ್ಕೆ ಬರ್ತಾರೆ ಕಲಿತೀವಿ ಅನ್ನೋ ಹುಡುಗರಿಗೆ ಎಷ್ಟು ಬೇಕಾದರೂ ಹೇಳಿಕೊಡಬಹುದು , ಸಾಕು ಅಂತ ಹುಡುಗರು . ****
*******ಇದಾಗಿ ಎರಡು ವರ್ಷ ಕಳೆದ ಮೇಲೆ ಡಿ ಕೆ ಎನ್ ಮೇಷ್ಟ್ರು ರಿಟೈರ್ ಆಗಿದಾರೆ ಈಗ್ಲೂ ಸ್ಕೂಲಿನ ಕಟ್ಟೆ ಮೇಲೆ ಕೂತು ಹೋಗ್ತಾರೆ.ಅದೇ ದಾರೀಲಿ ಅಮಾನ್ 'ಹಾಲೈಸ್' ಅಂತ ಕೂಗಿಕೊಂಡು ಬರ್ತಾನೆ ಮತ್ತೆ ಮೇಷ್ಟ್ರನ್ನ ನೋಡಿ 'ನಮಸ್ಕಾರ ಸಾರ್'ಅಂತಾನೆ .ಆ ಜೋಗದ ಸುರೇಶನಿಗೆ ಮದುವೆ ಆಗಿ ಎರಡು ಮಕ್ಕಳಿದಾವೆ ಬೇಸಾಯ ಮಾಡ್ತಾನೆ ಮತ್ತು ಹಿಂದಿ ಟೀಚರ್ ಆಗಿದಾನೆ .ಸಿಕ್ಕಾಗಲೆಲ್ಲಾ ಮೇಷ್ಟ್ರು 'ಎನ್ ಸುರೇಶ ಜೋಗಕ್ಕೆ ಹೋಗೋಣ್ವಾ?' ಎಂದು ಹಾಸ್ಯ ಮಾಡುತ್ತಾರೆ.'ಸುಮ್ನಿರಿ ಸಾರ್ ನಮ್ಮೆಂಗಸರಿಗೆ ಗೊತ್ತಾದ್ರೆ ಅಷ್ಟೇ'ಅಂದು ನಗುತ್ತಾನೆ .ಶೈಳಗೆ ಬೇರೆ ಊರಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಮೊನ್ನೆ ತನ್ನ ಮಗಳ ಜಾತಕ ತೋರಿಸಲು ಮೇಷ್ಟ್ರಹತ್ತಿರ ಬಂದಿದ್ದಳು .ಈಗಲೂ ಸುಮಾರು ಹುಡುಗರು ಬಂದು ಮಾತನಾಡಿಸಿಕೊಂಡು ಹೋಗುತ್ತಾರೆ ಕೆಲವರು ಬೈದುಕೊಂಡೂ ಹೋಗುತ್ತಾರೆ. ಎಲ್ಲದಕ್ಕೂ ಡಿ ಕೆ ಎನ್ ನಗುತ್ತಲೇ ಇರುತ್ತಾರೆ .

ಮುಗಿಯಿತು