ಡಿಜಿಟಲ್ ಆರ್ಥಿಕ ಕ್ರಾಂತಿಯಲ್ಲಿ ಭಾರತದ ಮತ್ತೊಂದು ಸಾಧನೆ
ಭಾರತೀಯರು ಹಾಗೂ ಸಿಂಗಾಪುರ ಪ್ರಜೆಗಳು ‘ಯುಪಿಐ’ (ಸಿಂಗಾಪುರದಲ್ಲಿ ಪೇನೌ) ಮೂಲಕ ಪರಸ್ಪರ ಹಣ ವರ್ಗಾವಣೆ ಮಾಡಿಕೊಳ್ಳುವ ಸೇವೆಗೆ ಮಂಗಳವಾರ ಚಾಲನೆ ನೀಡಲಾಗಿದೆ. ಭಾರತದಲ್ಲಿ ಯುಪಿಐ ಎಂಬುದು ಇತ್ತೀಚಿನ ವರ್ಷಗಳಲ್ಲಿ, ಅದೂ ಕೊರೋನಾ ವೈರಸ್ ದಾಂಗುಡಿ ಇಟ್ಟ ಬಳಿಕ ಬಲು ಜನಪ್ರಿಯವಾಗಿದೆ. ಸಣ್ಣ ಬೋಂಡಾ ಅಂಗಡಿಯಿಂದ ದೊಡ್ಡ ಬ್ರಾಂಡೆಡ್ ಶೋರೂಂವರೆಗೂ ಯುಪಿಐ ವಹಿವಾಟು ನಡೆಯುತ್ತಿದೆ. ೨೦೨೨ರಲ್ಲಿ ಯುಪಿಐ ಬಳಸಿ ಭಾರತೀಯರು ೭೪ ಶತಕೋಟಿ ವ್ಯವಹಾರ ನಡೆಸಿ, ೧೨೬ ಲಕ್ಷ ಕೋಟಿ ರೂ ಹಣವನ್ನು ವರ್ಗಾಯಿಸಿದ್ದಾರೆ. ಕಳೆದ ಜನವರಿಯೊಂದರಲ್ಲೇ ೧೩ ಲಕ್ಷ ಕೋಟಿ ವಹಿವಾಟನ್ನು ನಡೆಸಿ ೮೦೦ ಕೋಟಿ ರೂ. ಹಣ ವರ್ಗಾಯಿಸಿದ್ದಾರೆ. ಕಳೆದ ವರ್ಷಕ್ಕಿಂತ ಶೇ ೭೪ ರಷ್ಟು ವಹಿವಾಟು ಅಧಿಕವಾಗಿದೆ ಎಂದರೆ ಇದರ ಪ್ರಸಿದ್ಧಿ ಅರಿವಿಗೆ ಬರುತ್ತದೆ. ಜನರಿಗೆ ಹಣ ವರ್ಗಾವಣೆಯನ್ನು ಹಾಗೂ ನಗದು ಇಲ್ಲದಿದ್ದರೂ ಮೊಬೈಲ್ ಮೂಲಕವೇ ಹಣಕಾಸು ವ್ಯವಹಾರ ಮಾಡುವುದನ್ನು ಸುಲಭವಾಗಿಸಿ ಕೊಟ್ಟಿದ್ದು ಯುಪಿಐ. ಇದರಲ್ಲಿ ಹಣ ಕಳುಹಿಸುವವರು ಹಾಗೂ ಸ್ವೀಕರಿಸುವವರ ಬ್ಯಾಂಕ್ ಖಾತೆ ಗೋಚರಿಸುವುದಿಲ್ಲ. ಹಾಗಾಗಿ ಇದು ಸುರಕ್ಷಿತ ಎಂದೇ ಹಣಕಾಸು ತಜ್ಞರು ಹೇಳುತ್ತಾರೆ.
ವಿದೇಶಗಳಿಗೆ ಹಣ ವರ್ಗಾವಣೆ ಮಾಡಲು ಬ್ಯಾಂಕಿಗೆ ಹೋಗಿ ಕೋರಿಕೆ ಇಡಬೇಕಾಗಿತ್ತು. ಬಳಿಕ ಆನ್ ಲೈನ್ ಮೂಲಕ ಹಣ ವರ್ಗಾವಣೆ ಅವಕಾಶ ದೊರೆಯಿತಾದರೂ ಕ್ಲಿಯರೆನ್ಸ್ ಗೆ ಸಮಯ ಬೇಕಾಗಿತ್ತು. ಇದೀಗ ಯುಪಿಐ ನಲ್ಲಿ ಕಳಿಸಿದ ಕೂಡಲೇ ತಲುಪಬೇಕಾದವರಿಗೆ ತಲುಪುತ್ತದೆ. ಇದನ್ನು ಭಾರತದ ಡಿಜಿಟಲ್ ಕ್ರಾಂತಿ ಎಂದು ಕರೆಯಲಾಗುತ್ತದೆ. ಹಲವು ದೇಶಗಳಿಗೆ ಯುಪಿಐ ಮಾದರಿಯಾಗಿದೆ. ಆದರೆ ಇದು ಗಡಿಯಾಚೆಗಿನ ಹಣ ವರ್ಗಾವಣೆಗೆ ಇರಲಿಲ್ಲ. ಅದು ಈಗ ಆರಂಭಗೊಂಡಿದ್ದು ಸಿಂಗಾಪುರ ಮೂಲಕ ಚಾಲನೆ ಪಡೆದುಕೊಂಡಾಗಿದೆ. ಸಿಂಗಾಪುರದಲ್ಲಿ ಆರೂವರೆ ಲಕ್ಷ ಭಾರತೀಯರು ಇದ್ದಾರೆ. ಅವರು ತವರಿಗೆ ಹಣ ಕಳುಹಿಸಬೇಕಾದರೆ ಬ್ಯಾಂಕುಗಳ ಮೊರೆ ಹೋಗಬೇಕಾಗಿತ್ತು. ಒಟ್ಟಾರೆ ಹಣದಲ್ಲಿ ಶೇ ೧೦ರಷ್ಟು ಮೊತ್ತ ಸೇವಾ ಶುಲ್ಕವಾಗಿ ಕಡಿತವಾಗುತ್ತಿತ್ತು. ಆದರೆ ತಕ್ಷಣವೇ ಊರಿಗೆ ಹಣ ತಲುಪುತ್ತಿರಲಿಲ್ಲ. ಆದರೆ ಯುಪಿಐನಲ್ಲಿ ಕ್ಷಣಾರ್ಧದಲ್ಲಿ ಹಣ ವರ್ಗಾವಣೆಯಾಗಲಿದೆ. ಸೇವಾ ಶುಲ್ಕ ಕಡಿಮೆ ಇರಲಿದೆ. ಹೀಗಾಗಿ ಇದು ಅನಿವಾಸಿ ಭಾರತೀಯರಿಗೆ ಲಾಭ. ಯುಪಿಐ ವಿಶ್ವದ ವಿವಿಧ ದೇಶಗಳಿಗೂ ವಿಸ್ತರಣೆಯಾದರೆ ಅಲ್ಲಿ ನೆಲೆಸಿರುವ ಭಾರತೀಯರಿಗೆ ತವರಿಗೆ ಹಣ ಕಳಿಸುವುದು ಸುಲಭವಾಗಲಿದೆ. ಭಾರತದಿಂದ ಪ್ರವಾಸಕ್ಕೆ ತೆರಳುವವರಿಗೂ ಅನುಕೂಲಕ್ಕೆ ಬರಲಿದೆ. ಒಟ್ಟಿನಲ್ಲಿ ಭಾರತ ಡಿಜಿಟಲ್ ಕ್ರಾಂತಿಯಲ್ಲಿ ಮತ್ತೊಂದು ಮಹತ್ತರ ಸಾಧನೆ ಮಾಡಿರುವುದಂತೂ ಸ್ಪಷ್ಟ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೨-೦೨-೨೦೨೩