ಡಿಜಿಟಲ್ ಡಿವೈಡ್ ಹೋಗಲಾಡಿಸುವುದು ಅಗತ್ಯ

ಡಿಜಿಟಲ್ ಡಿವೈಡ್ ಹೋಗಲಾಡಿಸುವುದು ಅಗತ್ಯ

ಭಾರತದ ಹಳ್ಳಿಗಳು ಸಮರ್ಪಕ ಹಾಗೂ ನಂಬಿಕಸ್ತ ಇಂಟರ್ನೆಟ್ ಸೌಲಭ್ಯ ಇಲ್ಲದೆ ನಗರಗಳಿಂಥ ಹಿಂದೆ ಉಳಿದು ಡಿಜಿಟಲ್ ಡಿವೈಡ್ ನಿರ್ಮಾಣವಾಗಿದೆ.  ಭಾರತದ ಹಳ್ಳಿಗಳಿಗೆ ೩ಜಿ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಕುರಿತು ಯಾವುದೇ ಖಾಸಗಿ ಮೊಬೈಲ್ ಕಂಪನಿಗಳಾಗಲಿ, ಸರ್ಕಾರೀ ನಿಯಂತ್ರಣದ ಬಿಎಸ್ಸೆನ್ನೆಲ್ ಆಗಲೀ ಯಾವುದೇ ಆಸಕ್ತಿ ವಹಿಸದೆ ಇರುವುದು ಇದಕ್ಕೆ ಕಾರಣವಾಗಿದೆ.  ಭಾರತದ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ಬಿಎಸ್ಸೆನ್ನೆಲ್ ಸಂಸ್ಥೆಯ ಲ್ಯಾಂಡ್ ಲೈನ್ ಫೋನ್ ಮೂಲಕ ಲಭ್ಯ ಇದೆ, ಇದು ಕೂಡ ಯಾರ ಮನೆಗಳಿಗೆ ನೆಲದಡಿಯಲ್ಲಿ ಹಾಕಿದ ಕೇಬಲ್ ವೈರುಗಳ ಮೂಲಕ ಫೋನ್ ಸಂಪರ್ಕ ಇದೆಯೋ ಮತ್ತು ಯಾರ ಮನೆ ಟೆಲಿಫೋನ್ ವಿನಿಮಯ ಕೇಂದ್ರದ ಹತ್ತಿರ ಇದೆಯೋ ಅವರಿಗೆ ಮಾತ್ರ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ತಕ್ಕ ಮಟ್ಟಿಗೆ ಲಭಿಸುತ್ತದೆ.  ಯಾರ ಬಳಿ ಲ್ಯಾಂಡ್ ಲೈನ್ ಸಂಪರ್ಕ ಇಲ್ಲವೋ ಅವರಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ಬೇಕೆಂದಾದರೆ ಸಂಪರ್ಕ ಸಿಗುವುದಿಲ್ಲ.  ಹೊಸದಾಗಿ ಲ್ಯಾಂಡ್ಲೈನ್ ಸಂಪರ್ಕ ಬೇಕೆಂದರೆ ಕೇಬಲ್ ಇಲ್ಲವೆಂದೋ, ಟೆಲಿಫೋನ್ ವಿನಿಮಯ ಕೇಂದ್ರದಲ್ಲಿ ಹೊಸ ಸಂಪರ್ಕಗಳಿಗೆ ಬೇಕಾದ ಸಾಮರ್ಥ್ಯ ಇಲ್ಲವೆಂದೋ ಹೇಳಿ ಸಂಪರ್ಕ ನಿರಾಕರಿಸುತ್ತಾರೆ.  ಇರುವ ಕೇಬಲ್ ಸಂಪರ್ಕಗಳು ರಸ್ತೆ ಅಗೆತದಿಂದ ಹಾಳಾದರೆ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇರುವವರಿಗೂ ಬ್ರಾಡ್ ಬ್ಯಾಂಡ್ ಸಂಪರ್ಕ ತಿಂಗಳುಗಟ್ಟಲೆ ಇಲ್ಲವಾಗುತ್ತದೆ.  ಇದನ್ನೆಲ್ಲಾ ನಿವಾರಿಸಲು ಹಳ್ಳಿಗಳಿಗೆ ೩ಜಿ ಮೊಬೈಲ್ ವ್ಯವಸ್ಥೆಯನ್ನು ವಿಸ್ತರಿಸಬೇಕಾದ ಅಗತ್ಯವಿದೆ.  ಇದರಿಂದ ಯಾರಿಗೆ ಯಾವಾಗ ಬೇಕಾದರೂ ಹೊಸದಾಗಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಭಾರತ ಸರ್ಕಾರವು ಸುಮಾರು ೨೦,೦೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಜಾಲ ನಿರ್ಮಿಸಿ ಡಿಜಿಟಲ್ ಡಿವೈಡ್ ಅನ್ನು ನಿವಾರಿಸುವ ಕಾರ್ಯಕ್ರಮವನ್ನು ೨೦೧೦ರಲ್ಲಿಯೇ ಆರಂಭಿಸಿದರೂ ಈ ಯೋಜನೆ ನಾಲ್ಕು ವರ್ಷ ಕಳೆದರೂ ಯಾವುದೇ ಗಮನಾರ್ಹ ಪ್ರಗತಿಯನ್ನು ಸಾಧಿಸಿಲ್ಲ ಎಂಬುದನ್ನು ನೋಡಿದಾಗ ಹಳ್ಳಿಗಳ ಬಗ್ಗೆ ಸರ್ಕಾರಕ್ಕೆ ಎಂಥ ನಿರ್ಲಕ್ಷ್ಯ ಇದೆ ಎಂಬುದು ಗೊತ್ತಾಗುತ್ತದೆ.  ನಗರಗಳಲ್ಲಿ ಐಶಾರಾಮದ ಭೋಗಜೀವನದಲ್ಲಿ ಮುಳುಗಿರುವ ಕೆಲವು ಮಹನೀಯರು ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಅಗತ್ಯವಿಲ್ಲ, ಅಲ್ಲಿ ಅದನ್ನು ಬಳಸಲು ಎಷ್ಟು ಜನರ ಬಳಿ ಕಂಪ್ಯೂಟರ್ ಕೊಳ್ಳುವ ಸಾಮರ್ಥ್ಯ ಇದೆ ಎಂದು ಪ್ರಶ್ನಿಸುತ್ತಾರೆ.  ಇದೇ ಪ್ರಶ್ನೆಯನ್ನು ಹಿಂದೆ ಹಳ್ಳಿಗಳಿಗೆ ಮೊಬೈಲ್ ಬಂದಾಗಲೂ ಕೆಲವು ಮಹನೀಯರು ಕೇಳುತ್ತಿದ್ದರು ಹಳ್ಳಿಗಳಲ್ಲಿ ಮೊಬೈಲ್ ಬಳಸುವ ಸಾಮರ್ಥ್ಯ ಎಷ್ಟು ಜನರಿಗೆ ಇದೆ ಎಂದು.  ಇಂದು ನೋಡಿದರೆ ಹಳ್ಳಿಗಳಲ್ಲಿಯೂ ಮೊಬೈಲ್ ಇಲ್ಲದ ಮನೆಯೇ ಇಲ್ಲವೆಂದರೂ ಸರಿಯೇ.  ಅತೀ ಬಡವರು ಎಂದು ಹೇಳಲ್ಪಡುವ ಕೂಲಿ ಕೆಲಸ ಮಾಡುವವರ ಕೈಯಲ್ಲಿಯೂ ಇಂದು ಮೊಬೈಲ್ ಕಾಣಬಹುದು.

ಇಂಟರ್ನೆಟ್ ಬಳಸಲು ಇಂದು ಸಾವಿರಾರು ರೂಪಾಯಿ ಕೊಟ್ಟು ಕಂಪ್ಯೂಟರ್ ಕೊಳ್ಳಬೇಕೆಂದೇನೂ ಇಲ್ಲ.   ನಾಲ್ಕೈದು ಸಾವಿರ ರೂಪಾಯಿಗಳಿಗೆ ೩ಜಿ ಸೌಲಭ್ಯ ಇರುವ ಮೊಬೈಲ್ ಫೋನುಗಳು ಇಂದು ಲಭ್ಯ.  ಇವುಗಳ ಮೂಲಕ ಅಂತರ್ಜಾಲ ಜಾಲಾಡುವುದು, ಇ-ಮೇಲ್ ಕಳುಹಿಸುವುದು ಹಾಗೂ ನೋಡುವುದು, ವಾಟ್ಸ್ ಅಪ್, ಫೇಸ್ಬುಕ್ ಮೊದಲಾದವುಗಳಲ್ಲಿ ಸಂದೇಶ ಕಳುಹಿಸುವುದು, ಸಂದೇಶಗಳನ್ನು ನೋಡುವುದು, ಫೋಟೋಗಳನ್ನು ಜಾಲಪುಟಕ್ಕೆ ಏರಿಸುವುದು ಹಾಗೂ ಇಳಿಸುವುದು ಮೊದಲಾದವುಗಳನ್ನು ಮಾಡಲು ಸಾಧ್ಯ.  ಅದೇ ರೀತಿ ವಿಡಿಯೋಗಳನ್ನೂ ಜಾಲಪುಟದಿಂದ ಮೊಬೈಲಿಗೆ ಇಳಿಸುವುದು ಹಾಗೂ ಮೊಬೈಲಿನಿಂದ ಜಾಲಪುಟಕ್ಕೆ ಏರಿಸುವುದು ಕೂಡ ೩ಜಿ ಸೌಲಭ್ಯದ ಮೊಬೈಲ್ ಫೋನುಗಳಲ್ಲಿ ಸಾಧ್ಯವಿದೆ.  ಹೀಗಿರುವಾಗ ಹಳ್ಳಿಗರು ಅಂತರ್ಜಾಲವನ್ನು ಬಳಸಲು ಸಾವಿರಾರು ರೂಪಾಯಿ ಕೊಟ್ಟು ಕಂಪ್ಯೂಟರ್ ಕೊಳ್ಳಬೇಕೆಂದೇನೂ ಇಲ್ಲ.

ಹಿಂದೆ ಭಾರತಕ್ಕೆ ಮೊಬೈಲ್ ಫೋನ್ ಬರುವುದಕ್ಕಿಂಥ ಮೊದಲು ಅಮೆರಿಕಾಕ್ಕೆ ಹೋದವರು ಅಲ್ಲಿ ಚಲಿಸುವ ವಾಹನಗಳಲ್ಲಿ ಮೊಬೈಲ್ ಫೋನುಗಳನ್ನು ಬಳಸುವ ವಿಸ್ಮಯವನ್ನು ಪ್ರವಾಸಕಥನಗಳಲ್ಲಿ ಅಚ್ಚರಿಯಿಂದ ಉಲ್ಲೇಖಿಸುತ್ತಿದ್ದರು.  ತಂತ್ರಜ್ಞಾನ ಎಷ್ಟು ಬೇಗ ಭಾರತಕ್ಕೂ ಆಗಮಿಸಿ ಹಳ್ಳಿಹಳ್ಳಿಗಳಲ್ಲಿಯೂ ಇಂದು ಮೊಬೈಲ್ ಬಳಕೆ ವ್ಯಾಪಿಸಿದೆ.  ಅದೇ ರೀತಿ ಪಾಶ್ಚಾತ್ಯ ದೇಶಗಳಿಗೆ ಹೋದವರು ಅಲ್ಲಿನ ಯಾವುದೇ ಸಮಯದಲ್ಲಿ ಹಣ ತೆಗೆಯಬಲ್ಲ ಏಟಿಎಂ ಯಂತ್ರದ ಬಗ್ಗೆಯೂ ಪ್ರವಾಸಕಥನಗಳಲ್ಲಿ ಉಲ್ಲೇಖಿಸುತ್ತಿದ್ದರು.  ಅಂಥ ಏಟಿಎಂ ಯಂತ್ರಗಳು ಕೂಡ ಈಗ ಭಾರತದ ತಾಲೂಕು ಹಾಗೂ ಪ್ರಮುಖ ಪಟ್ಟಣಗಳಿಗೂ ಆಗಮಿಸಿ ಯಾವುದೇ ಸಮಯದಲ್ಲಿಯೂ ಬ್ಯಾಂಕಿನಿಂದ ಹಣ ತೆಗೆಯುವ ಸೌಲಭ್ಯವನ್ನು ನೀಡಿವೆ.  ಹೀಗಾಗಿ ಆರಂಭದಲ್ಲಿ ಯಾವ ತಂತ್ರಜ್ಞಾನ ಎಟುಕಲಾರದ ದುಬಾರಿ ತಂತ್ರಜ್ಞಾನ ಎನಿಸಿಕೊಳ್ಳುತ್ತದೆಯೋ ಅದುವೇ ಹೆಚ್ಚು ಜನ ಬಳಸಲಾರಂಭಿಸಿದಂತೆ ಎಲ್ಲರಿಗೂ ಎಟಕುವ ತಂತ್ರಜ್ಞಾನವಾಗಿ ಮಾರ್ಪಾಟಾಗುತ್ತದೆ.  ೩ಜಿ ತಂತ್ರಜ್ಞಾನವೂ ಅಷ್ಟೇ.  ಹಳ್ಳಿಗಳಲ್ಲಿ ಯಾರು ಬಳಸುತ್ತಾರೆ ಎಂಬ ಉಡಾಫೆಯನ್ನು ಬಿಟ್ಟು ಸರ್ಕಾರ ಹಾಗೂ ಮೊಬೈಲ್ ಕಂಪನಿಗಳು ಹಳ್ಳಿಗಳಿಗೂ ೩ಜಿ ತಂತ್ರಜ್ಞಾನವನ್ನು ತಲುಪಿಸುವ ಅಗತ್ಯ ಇದೆ.  ಸರ್ಕಾರ ಇದನ್ನೊಂದು ಮೂಲಭೂತ ಸೌಲಭ್ಯ ಎಂಬ ದೃಷ್ಟಿಕೋನದಿಂದ ನೋಡಬೇಕೇ ಹೊರತು ಇದರಿಂದ ಲಾಭ ಮಾಡಬೇಕು ಎಂಬ ದೃಷ್ಟಿಕೋನದಲ್ಲಿ ನೋಡಬಾರದು.  ಏಕೆಂದರೆ ಹಳ್ಳಿಗಳಲ್ಲಿ ಜನಸಂಖ್ಯೆ ವಿರಳವಾಗಿರುವುದರಿಂದ ನಗರಗಳಲ್ಲಿ ಸಿಗುವಂಥ ಲಾಭ ಹಳ್ಳಿಗಳಲ್ಲಿ ಸಿಗಲಾರದು. 

Comments