ಡಿಜಿಟಲ್ ಪಾವತಿ ದಾಖಲೆ ವಹಿವಾಟು : ಯುಪಿಐ ಯಶೋಗಾಥೆ

ಡಿಜಿಟಲ್ ಪಾವತಿ ದಾಖಲೆ ವಹಿವಾಟು : ಯುಪಿಐ ಯಶೋಗಾಥೆ

ಏಕೀಕೃತ ಪಾವತಿ ವ್ಯವಸ್ಥೆ ( ಯುಪಿಐ- ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್), ಡೆಬಿಟ್- ಕ್ರೆಡಿಟ್ ಕಾರ್ಡ್, ಮೊಬೈಲ್ ವಾಲೆಟ್, ಪ್ರಿಪೆಯ್ಡ್ ಕಾರ್ಡ್ ಮುಂತಾದ ಡಿಜಿಟಲ್ ಪಾವತಿಗಳ ಮೂಲಕ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ೩೮.೩ ಲಕ್ಷ ಕೋಟಿ ರೂಪಾಯಿ ಮೊತ್ತದ ೨೩.೦೬ ಶತಕೋಟಿ ವಹಿವಾಟುಗಳು ನಡೆದಿರುವುದು ವರದಿಯೊಂದರಿಂದ ತಿಳಿದುಬಂದಿದೆ. ಇದು ಡಿಜಿಟಲ್ ಪಾವತಿಯಲ್ಲಿ ಭಾರತ ಸಾಧಿಸಿದ ಮಹತ್ವದ ಮೈಲುಗಲ್ಲು ಆಗಿದೆ. ಈ ಪೈಕಿ ಯುಪಿಐ ಒಂದರಿಂದಲೇ. ೩೨.೫ ಲಕ್ಷ ಕೋಟಿ ರೂಪಾಯಿ ಮೊತ್ತದ ೧೯.೬೫ ಶತಕೋಟಿ ವಹಿವಾಟುಗಳು ನಡೆದಿರುವುದು ಗಮನಾರ್ಹ. ಯುಪಿಐ ವಹಿವಾಟುಗಳ ಪ್ರಮಾಣ ಮತ್ತು ಮೌಲ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಬಹುತೇಕವಾಗಿ ದ್ವಿಗುಣಗೊಂಡಿದೆ. ಇದು ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ ವಹಿವಾಟಿನ ಪ್ರಮಾಣದಲ್ಲಿ ಶೇಕಡ ೮೮ ಮತ್ತು ಮೊತ್ತದಲ್ಲಿ ಶೇಕಡ ೭೧ ರಷ್ಟು ಏರಿಕೆಯಾಗಿದೆ ಎಂದು ವಲ್ಡ್ ಲೈನ್ ಇಂಡಿಯಾದ 'ಡಿಜಿಟಲ್ ಪಾವತಿಗಳ ವರದಿ' ಹೇಳಿರುವುದು ಈ ವ್ಯವಸ್ಥೆಯ ಯಶೋಗಾಥೆಯ ಪ್ರತೀಕವಾಗಿದೆ. ಏಕೀಕೃತ ಪಾವತಿ ವ್ಯವಸ್ಥೆಯು ಹಲವು ಬ್ಯಾಂಕುಗಳು ಒಂದಾಗಿ ಹಣ ಪಾವತಿಗೆ ಮತ್ತು ವರ್ಗಾವಣೆಗೆ ಇರುವ ಬೇರೆ ಬೇರೆ ವ್ಯವಸ್ಥೆಗಳನ್ನು ಏಕೀಕರಿಸಿ ಮಾಡಿದ ವ್ಯವಸ್ಥೆಯಾಗಿದೆ. ಯಾವುದೇ ಎರಡು ಪಕ್ಷಗಾರರ ನಡುವೆ ಹಣ ವರ್ಗಾಯಿಸಲು ಕ್ಷಣಾರ್ಧದಲ್ಲೇ ಇದು ಅವಕಾಶ ಕಲ್ಪಿಸುತ್ತದೆ. ಯುಪಿಎಸ್ ಅಪ್ಲಿಕೇಶನ್ ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಬಳಸದೆಯೇ ಐ ಎಂ ಪಿ ಎಸ್ (ತಕ್ಷಣ ಪಾವತಿ ವ್ಯವಸ್ಥೆ) ಮೂಲಕ ಬೇರೆಯವರಿಗೆ ತ್ವರಿತವಾಗಿ ಹಣವನ್ನು ವರ್ಗಾಯಿಸಲು ಇದು ಅನುಮತಿಸುತ್ತದೆ. ಯುಪಿಐ ಅಭಿವೃದ್ಧಿಪಡಿಸಿದ ಶ್ರೇಯಸ್ಸು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಸ್ಥಾಪಿತಗೊಂಡ ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ( ಎನ್ ಪಿ ಸಿ ಎಲ್- ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ಸಲ್ಲುತ್ತದೆ. ಕ್ಯೂಆರ್ ಕೋಡ್ ಮೂಲಕ ಕಾರ್ಯನಿರ್ವಹಿಸುವ ಈ ವ್ಯವಸ್ಥೆಯನ್ನು ಜಗತ್ತಿನ ೧೦ಕ್ಕೂ ಹೆಚ್ಚು ದೇಶಗಳು ಬಳಸುತ್ತಿರುವುದು ಕೂಡ ಮಹತ್ವದ ಸಂಗತಿಯಾಗಿದೆ. ೨೦೧೬ರ ಏಪ್ರಿಲ್ ನಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡ ಯುಪಿಐ ಈಗ ಬೃಹತ್ ಪ್ರಮಾಣದಲ್ಲಿ ಯಶಸ್ಸು ಕಂಡಿರುವುದನ್ನು ಅಂಕಿಅಂಶಗಳೇ ಸೂಚಿಸುತ್ತವೆ. ಯುಪಿಐ ಮೂಲಕ ಈ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚು ವಹಿವಾಟು ನಡೆಸಿದ್ದವುಗಳಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಅಪ್ಲಿಕೇಶನ್ ಗಳು ಮುಂಚೂಣಿಯಲ್ಲಿವೆ.

ಯುಪಿಐ ರೀತಿಯ ಡಿಜಿಟಲ್ ಪಾವತಿಗಳ ವ್ಯವಸ್ಥೆಗಳು ಸಾಕಷ್ಟು ವಿಶ್ವಾಸಾರ್ಹವಾಗಿವೆ ಎಂಬುದನ್ನು ಗ್ರಾಹಕರು ಒಪ್ಪಿಕೊಂಡಿದ್ದಾರೆ ಎಂಬುದನ್ನು ಈ ಅಂಕಿಅಂಶಗಳು ಬಿಂಬಿಸುತ್ತವೆ. ಸದಾ ಕೈಯಲ್ಲೇ ಇರುವ ಮೊಬೈಲ್ ಫೋನ್ ಮೂಲಕ ನಗದು ರಹಿತವಾಗಿ ತಕ್ಷಣವೇ ಪಾವತಿಸಲು ಸಾಧ್ಯವಾಗುತ್ತಿರುವುದು ಹಾಗೂ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸದಿರುವುದು ಯುಪಿಐ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎನ್ನಬಹುದಾಗಿದೆ. ದೊಡ್ಡ ಪ್ರಮಾಣದ ನಗದನ್ನು ಕೊಂಡೊಯ್ಯುವಾಗ ಕಳ್ಳತನವಾಗುವ, ದೋಚುವ ಅಪಾಯವನ್ನು ಕೂಡ ಇದು ತಪ್ಪಿಸುತ್ತದೆ. ಬಹುಮುಖ್ಯವಾಗಿ, ಕಪ್ಪುಹಣದ ವಹಿವಾಟಿಗೂ ಕಡಿವಾಣ ಹಾಕಲು ಈ ವ್ಯವಸ್ಥೆ ಪೂರಕವಾಗಿದೆ. ಭವಿಷ್ಯದಲ್ಲಿ ನಗದು ಹಣ ಮುದ್ರಿಸುವ ಪ್ರಮಾಣವನ್ನು ವ್ಯಾಪಕವಾಗಿ ಕಡಿತಗೊಳಿಸಲಿದೆ. ಸ್ವದೇಶಿ ನಿರ್ಮಿತ ವ್ಯವಸ್ಥೆಯು ಗ್ರಾಹಕ ಸ್ನೇಹಿಯಾಗಿ ಅಗಾಧ ಯಶ ಕಂಡಿರುವುದು ಮತ್ತು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೬-೧೨-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ