ಡಿಜಿಟಲ್ ಪಾವತಿ ವೇಗವರ್ಧನೆ ಜತೆಗೆ ಸುರಕ್ಷೆಯೂ ಹೆಚ್ಚಲಿ

ಕೊಡು-ಕೊಳ್ಳುವ ವ್ಯವಹಾರದಲ್ಲಿ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟು ಮಾಡಿರುವ ಯೂನಿಫೈಡ್ ಪೇಮೆಂಟ್ ಇಂಟಫೇಸ್-ಯುಪಿಐ ಸೋಮವಾರದಿಂದ ಇನ್ನಷ್ಟು ವೇಗವಾಗಿದೆ. ಇದಕ್ಕೆ ಮುನ್ನ ೩೦ ಸೆಕೆಂಡ್‌ಗಳಷ್ಟು ಅವಧಿ ತೆಗೆದುಕೊಳ್ಳುತ್ತಿದ್ದ ಈ ಪಾವತಿ ಪ್ರಕ್ರಿಯೆ ಇನ್ನು ೧೦ರಿಂದ ೧೫ ಸೆಕೆಂಡ್ ಗಳಲ್ಲಿ ನಡೆಯಲಿದೆ. ಇನ್ನಷ್ಟು ಬಿಡಿಸಿ ಹೇಳಬೇಕೆಂದರೆ, ಪೋನ್ ಪೇ, ಗೂಗಲ್ ಪೇ ಮತ್ತಿತರ ಯುಪಿಐ ವೇದಿಕೆಗಳಲ್ಲಿ ನಾವು ಇನ್ನು ಬಹಳ ವೇಗವಾಗಿ ಹಣ ಪಾವತಿ ಮಾಡಿಬಿಡಬಹುದು. ದೈನಂದಿನ ಬದುಕಿನ ಸಾಮಾನ್ಯ ವ್ಯವಹಾರಗಳನ್ನು ಬಹಳ ಸಲೀಸುಗೊಳಿಸಿರುವ ಈ ಯುಪಿಐ ಇನ್ನಷ್ಟು ಕ್ಷಿಪ್ರಗೊಂಡಿರುವುದು ಸ್ವಾಗತಾರ್ಹ. ಆದರೆ ಈ ಯುಪಿಐ ಮತ್ತಿತರ ಡಿಜಿಟಲ್ ಹಣಕಾಸು ವ್ಯವಹಾರಗಳಷ್ಟೇ ವೇಗವಾಗಿ ವಂಚಕರು ಕೂಡ ಕಾರ್ಯವೆಸಗುತ್ತಿದ್ದಾರೆ. ಇದನ್ನು ತಡೆಗಟ್ಟುವುದಕ್ಕೂ ಸರಕಾರ ಮತ್ತು ಸಂಬಂಧಿತ ಸಂಸ್ಥೆಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಆಗಿರುವ ಪ್ರಗತಿಗೆ ಇದೊಂದು ಕಪ್ಪುಚುಕ್ಕೆ ಆಗಿರಲಿದೆ.
ಯುಪಿಐ ಸೇವೆಗಳನ್ನು ಸೋಮವಾರದಿಂದ ಇನ್ನಷ್ಟು ಕ್ಷಿಪ್ರಗೊಳಿಸುವ ಕ್ರಮಗಳನ್ನು ಈ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಸಿಪಿಐ) ಕೈಗೊಂಡಿದೆ. ಈ ಬಗ್ಗೆ ಅಧಿಸೂಚನೆಯನ್ನು ಅದು ಎಪ್ರಿಲ್‌ನಲ್ಲೇ ಬಿಡುಗಡೆ ಮಾಡಿತ್ತು, ಈಗ ಜಾರಿಗೊಳಿಸಲಾಗಿದೆ. ಇದರಿಂದಾಗಿ ವಹಿವಾಟು ನಡೆಯುವ ಎರಡೂ ಬ್ಯಾಂಕ್‌ಗಳು ಹಾಗೂ ಗೂಗಲ್ ಪೇ, ಪೇಟಿಎಂ, ಫೋನ್‌ಪೇಯಂತಹ ಪಾವತಿ ಆ್ಯಪ್‌ಗಳಿಗೆ ಪ್ರಯೋಜನವಾಗಲಿದೆ. ಹಣ ಪಾವತಿ, ವಹಿವಾಟುಮಾಹಿತಿ ಪರಿಶೀಲನೆ, ಹಿಮ್ಮುಖ ಪಾವತಿ, ವಿಳಾಸ ಪರಿಶೀಲನೆಯಂತಹ ಪ್ರಕ್ರಿಯೆಗಳ ವೇಗವನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಪಾವತಿಯು ೩೦ ಸೆಕೆಂಡ್ ಸಮಯ ತೆಗೆದುಕೊಳ್ಳುತ್ತಿದ್ದರೆ, ಇನ್ನು ೧೫ ಸೆಕೆಂಡ್ ಮಾತ್ರ ತೆಗೆದುಕೊಳ್ಳಲಿದೆ. ವಹಿವಾಟು ಪರಿಶೀಲನೆ, ಹಿಮುಖ ಪಾವತಿ, ವಿಳಾಸ ಪರಿಶೀಲನೆಯಂತಹ ಇದಕ್ಕೆ ಸಂಬಂಧಿಸಿದ ಇತರ ಪ್ರಕ್ರಿಯೆಗಳ ವೇಗ ಕೂಡ ಹೆಚ್ಚಲಿದೆ.
`ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ ದೇಶದಲ್ಲಿ ಜಾರಿಗೆ ಬಂದಂದಿನಿಂದ ಅಪಾರ ಅನುಕೂಲವನ್ನು ಒದಗಿಸಿಕೊಟ್ಟಿದೆ. ಚಿಲ್ಲರೆ ಹಣ ಇರಿಸಿಕೊಳ್ಳುವುದು, ಜೇಬಿನಲ್ಲಿ ದೊಡ್ಡ ಮೊತ್ತದ ಹಣ ಇರಿಸಿಕೊಳ್ಳುವುದು ಇತ್ಯಾದಿ ವಿಷಯಗಳಿಂದ ಇದು ಸಾಕಷ್ಟು ಮಟ್ಟಿಗೆ ಮುಕ್ತಿ ದೊರಕಿಸಿದೆ. ಒಂದೆರಡು ರೂಪಾಯಿಗಳ ಚಿಲ್ಲರೆ ವ್ಯವಹಾರದಿಂದ ತೊಡಗಿ ಸಾವಿರಾರು ರೂಪಾಯಿಗಳ ವರೆಗೆ ಇದರ ಮೂಲಕ ಡಿಜಿಟಲ್ ಆಗಿ ವ್ಯವಹಾರ ನಡೆಸಲು ಸಾಧ್ಯವಾಗಿರುವುದು ಬಹಳ ದೊಡ್ಡ ಅನುಕೂಲ. ಸರಕಾರದ ದೃಷ್ಟಿಯಿಂದ ಹೇಳುವುದಾದರೆ, ಚಿಲ್ಲರೆ ವ್ಯವಹಾರವಾಗಿ ನಡೆಯುವ ಹಣ ಪಾವತಿ ಪ್ರಕ್ರಿಯೆಯ ಬಹ್ವಂಶವನ್ನು ಯುಪಿಐಯು ಬ್ಯಾಂಕ್ ಮೂಲಕ ನಡೆಯುವುದಕ್ಕೆ ಅನುವು ಮಾಡಿಕೊಟ್ಟಿದೆ. ಅಂದರೆ ಇದು ಆದಾಯ ತೆರಿಗೆ ಮತ್ತಿತರ ಕಾನೂನು ಚೌಕಟ್ಟಿಗೆ ಒಳಪಡುವಂತಾಗಿದೆ. ಭಾರತದಲ್ಲಿ ಇದರ ಯಶಸ್ಸನ್ನು ಗಮನಿಸಿ ಹಲವಾರು ದೇಶಗಳು ಕೂಡ ಇದನ್ನು ಅಳವಡಿಸಿಕೊಂಡಿವೆ.
ಇವೆಲ್ಲ ಡಿಜಿಟಲ್ ಹಣ ಪಾವತಿಯ ಒಳ್ಳೆಯ ಮುಖಗಳಾದರೆ, ವಂಚಕರಿಗೆ ಅನುಕೂಲ ಸೃಷ್ಟಿಸಿಕೊಡುವುದು ಅದು ಸೃಷ್ಟಿಸಿರುವ ಸಮಸ್ಯೆಗಳಲ್ಲಿ ಮುಖ್ಯವಾದದ್ದು. ಇದರಿಂದಾಗಿ ಅನೇಕ ಅಮಾಯಕರು ದಿನಂಪ್ರತಿ ಎಂಬಂತೆ ಹಣ ಕಳೆದುಕೊಳ್ಳುತ್ತಿರುವುದು ವರದಿಯಾಗುತ್ತಿದೆ. ಬ್ಯಾಂಕ್ ಖಾತೆ, ಆಧಾರ್, ವಿವಿಧ ಡಿಜಿಟಲ್ ಪಾವತಿ ಆ್ಯಪ್ ಗಳು, ಪಾನ್ ಸಂಖ್ಯೆ, ಮೊಬೈಲ್ ಸಂಖ್ಯೆ ಇವೆಲ್ಲ ಒಂದಕ್ಕೊಂದು ಜೋಡಣೆಯಾಗಿರುವುದು ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಇಂತಹ ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಅನುಕೂಲಕರವಾಗಿ ಮಾರ್ಪಡಿಸು ವುದರ ಜತೆಗೇ ಅವುಗಳ ಸುರಕ್ಷೆಯ ಬಗೆಗೂ ಸಂಬಂಧಪಟ್ಟವರು ಹೆಚ್ಚು ಗಮನ ಹರಿಸಬೇಕು. ಆಗ ಇದು ಇನ್ನಷ್ಟು ವಿಶ್ವಾಸಾರ್ಹವಾಗಿ ಹೆಚ್ಚು ಜನಮನ್ನಣೆಗಳಿಸಬಲ್ಲುದು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೭-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ