ಡಿಜಿಟಲ್ ಯೋಗಕ್ಷೇಮ - ೧
ರಾತ್ರಿಯ ಹೊತ್ತು ಮಕ್ಕಳಿಗೆ ಕಥೆ ಹೇಳಲೆಂದು ಹಿಂದಿನ ಕಾಲದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಈಗ ಮೊಬೈಲು ಫೋನುಗಳನ್ನು ಇಟ್ಟುಕೊಳ್ಳುತ್ತಾರೆ. ಮೊನ್ನೆ ನಲ್ಮೆಯ ಮಡದಿ ಹೀಗೆಯೇ ಮಕ್ಕಳಿಗೆ ಕಥೆ ಹೇಳಲೆಂದು ಮೊಬೈಲ್ ಹಿಡಿದುಕೊಂಡವಳು ಕಥೆ ಹೇಳುತ್ತ ಹಾಗೆಯೇ ನಿದ್ರೆ ಹೋಗಿಬಿಟ್ಟಿದ್ದಳು. ಮಕ್ಕಳೂ ನಿದ್ರೆ ಹೋಗಿದ್ದರು. ಆದರೆ ಮೊಬೈಲು ಮಾತ್ರ ಇವರುಗಳ ನಡುವೆ ಸಿಕ್ಕಿಹಾಕಿಕೊಂಡು ಕಾದು ಕೆಂಡದಂತೆ ಬಿಸಿಯಾಗಿತ್ತು. ನಾನು ನೋಡದೇ ಹೋಗಿದ್ದರೆ ಅದು ಬಹುಶಃ “ಭಡ್" ಅಂದಿರುತ್ತಿತ್ತೋ ಏನೋ. ಸ್ವಲ್ಪದರಲ್ಲಿ ಬದುಕಿಕೊಂಡೆವು. ಹಿಂದಿನ ಕಾಲದವರಿಗೆ ಈ ಸಮಸ್ಯೆ ಇರಲಿಲ್ಲ. ಪುಸ್ತಕದ ಮೇಲೆ ಮಲಗಿ ಹೊರಳಾಡಿದರೂ ಕೂಡ ಬೆಳಗಾಗುವವರೆಗೂ ಜಡವಾಗಿ ಬಿದ್ದಿರುತ್ತಿದ್ದವು ಎನಿಸುತ್ತದೆ, ಹೀಗಾಗಿ ಇದರ ಬಗ್ಗೆ ಯಾರಾದರೂ ಬರೆದಿದ್ದು ಓದಿ ಕಾಣೆ. ಹಿಂದಿನ ಕಾಲದವರಿಗೆ ರಾತ್ರಿಯ ಹೊತ್ತೂ ರಿಂಗಣಿಸುವ ವಾಟ್ಸಾಪ್ ಫಾರ್ವರ್ಡುಗಳ ತೊಂದರೆ ಇರಲಿಲ್ಲ. ಬೆಳಗಾಗಿ "ಗುಡ್ ಮಾರ್ನಿಂಗ್”, ರಾತ್ರಿಗೆ "ಗುಡ್ ನೈಟ್” ಸಂದೇಶಗಳನ್ನು ಕಳುಹಿಸುವ ಹಲವರು ತಮಗೆ “ನೈಟ್” ಆಗುವ ಸಮಯ ಬೇರೆಯವರಿಗೆ "ಮಿಡ್ ನೈಟ್" ಆಗಿರುತ್ತದೆ ಎಂಬ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಮಲಗುವ ಮುನ್ನ ಸಿಕ್ಕಿದ ಯಾವುದೋ ಒಂದು ಫೋಟೋ ತೆಗೆದುಕೊಂಡು ಮನಸ್ಸಿಗೆ ಬಂದದ್ದನ್ನೆಲ್ಲ ಟೈಪಿಸಿ ಅಲ್ಲಿಗೆ “ಗುಡ್ ನೈಟ್” ಎಂದು ಒತ್ತಿಬಿಡುತ್ತಾರೆ. ಮುಂಚಿನ ಸ್ಮಾರ್ಟ್ ಫೋನುಗಳಲ್ಲಿ ಈ ರೀತಿ ರಾತ್ರಿಯ ಹೊತ್ತು ಎದುರಾಗುವ ತೊಂದರೆಗಳಿಗೆ ನೇರ ಸಮಾಧಾನ ಇರಲಿಲ್ಲ. ಆಗೆಲ್ಲ ಫೋನನ್ನು ಸೈಲೆಂಟ್ ಮೋಡ್ ನಲ್ಲಿ ಇಡುವುದು ಮರೆತಿರೋ, ಅಂದಿಗೆ ಅದು ನಿದ್ರೆಯಿಲ್ಲದ "ಗುಡ್ ನೈಟ್” ಏ. ಈಗ ಬರುವ ಸ್ಮಾರ್ಟ್ ಫೋನುಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಈಗ "ಡಿ ಎನ್ ಡಿ” ಕಾಲ.
ಡು ನಾಟ್ ಡಿಸ್ಟರ್ಬ್
ಈಗ ಬಹುತೇಕ ಸ್ಮಾರ್ಟ್ ಫೋನುಗಳಲ್ಲಿ ಸ್ಕ್ರೀನಿನ ಮೇಲ್ಭಾಗದಿಂದ ಸ್ವೈಪ್ ಮಾಡಿದರೆ ಕಾಣುವ ಆಯ್ಕೆಗಳಲ್ಲಿ “ಡು ನಾಟ್ ಡಿಸ್ಟರ್ಬ್” ಎಂಬುದೂ ಒಂದು ಇರುತ್ತದೆ. ಇದನ್ನು ಸ್ವಿಚ್ ಆನ್ ಮಾಡಿದರೆ ನಿಮ್ಮ ಸ್ಮಾರ್ಟ್ ಫೋನು ಗಲಾಟೆ ಮಾಡದೆ ಸುಮ್ಮನೆ ಕುಳಿತಿರುತ್ತದೆ. ಈಗಷ್ಟೇ ಈ ಲೇಖನವನ್ನು ಬರೆಯುವ ಮುನ್ನ ನನ್ನ ಎರಡೂ ಫೋನುಗಳಲ್ಲಿ ಡು ನಾಟ್ ಡಿಸ್ಟರ್ಬ್ ಗುಂಡಿಯನ್ನು ಒತ್ತಿ ಈಗ ಬರೆಯುತ್ತ ಕುಳಿತಿರುವೆ. ತುಂಬಾ ಮಂದಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೀಗೊಂದು ಸವಲತ್ತು ಇರುವುದರ ಬಗ್ಗೆ ಗೊತ್ತಿರುವುದಿಲ್ಲ. ಆದರೆ ಇದರ ಬಗ್ಗೆ ಗೊತ್ತಿರುವ ಹಲವರು ಇದನ್ನು ಬಳಸುವುದಿಲ್ಲ. ಈಗಲೂ ಸೈಲೆಂಟ್ ಮೋಡ್ ನಲ್ಲಿ ಇಟ್ಟುಕೊಳ್ಳುವವರು ಕೆಲವರಾದರೆ, ಕೆಲವರು “ಇಲ್ರೀ, ಅದನ್ನು ಒತ್ತಿ ಆಮೇಲೆ ಮರೆತುಬಿಡುತ್ತೀನಿ. ಆಮೇಲೆ ಯಾವ ಕಾಲ್ ಬಂದರೂ ಗೊತ್ತಾಗುವುದಿಲ್ಲ” ಎನ್ನುವವರು ಇದ್ದಾರೆ. ಒಂದು ದಿನ ನನಗೂ ಹಾಗೆಯೇ ಆಗಿಹೋಯ್ತು. ಯಾವುದೋ ಇಂಪಾರ್ಟೆಂಟ್ ಮೀಟಿಂಗ್ ಎಂದು ಡಿ & ಡಿ ಇಟ್ಟು ಅದನ್ನು ತೆಗೆಯುವುದನ್ನು ಮರೆತುಬಿಟ್ಟೆ. ಎಷ್ಟೋ ಹೊತ್ತಿನ ನಂತರ ನೆನಪಾಗಿ ಫೋನ್ ಚೆಕ್ ಮಾಡುವಷ್ಟರಲ್ಲಿ ಹತ್ತಾರು ಮಿಸ್ಡ್ ಕಾಲ್ ಗಳು ಜಮಾಯಿಸಿದ್ದವು. ಮನೆಯಲ್ಲಿ ಏನೋ ತೊಂದರೆಯಾಗಿ ಮಡದಿ ಹಲವು ಬಾರಿ ಫೋನ್ ಮಾಡಲು ಪ್ರಯತ್ನಿಸಿದ್ದಳು. ವಾಪಸ್ ಫೋನು ಮಾಡುತ್ತಲೇ “ಎಷ್ಟು ಬಾರಿ ಫೋನ್ ಮಾಡುವುದು? ಫೋನ್ ಎತ್ತಿಕೊಳ್ಳುವುದೇ ಇಲ್ಲ” ಎಂದು ಗುಡುಗಿದಳು!
ಈಗ ಅದಕ್ಕೂ ಒಂದು ಪರಿಹಾರ ಸಿಕ್ಕಿತು - ನನ್ನ ಬಳಿ ಇರುವ ಸ್ಮಾರ್ಟ್ ಫೋನಿನಲ್ಲಿ ಅದೊಂದು ಫೀಚರ್ ಇದೆ. ಅದರ ಮುಖ ಕೆಳಗೆ ಮಾಡಿ ಇಟ್ಟರೆ ತಾನಾಗಿಯೇ ಡು ನಾಟ್ ಡಿಸ್ಟರ್ಬ್ ಮೋಡ್ ಆನ್ ಆಗಿಬಿಡುತ್ತದೆ. ಈ ವಿಷಯವನ್ನೂ ನೆನಪಿಟ್ಟುಕೊಳ್ಳುವುದು ಕಷ್ಟ. ಒಮ್ಮೆ ಕಾರಿನಲ್ಲಿ ಬ್ಲೂಟೂತ್ ಆನ್ ಮಾಡಿದ್ದರೂ ಮರೆತು ಫೋನು ಮುಖ ಕೆಳಗಾಗಿ ಇಟ್ಟುಕೊಂಡಿದ್ದೆ - ಫೋನ್ ಕಾಲ್ ಗಳೇ ಬರಲಿಲ್ಲ. ಎಷ್ಟೋ ಹೊತ್ತಿನ ನಂತರ “ಇದೇನು, ಇಷ್ಟೊಂದು ಮಿಸ್ಡ್ ಕಾಲ್ಸ್ ಇವೆ. ಯಾಕೆ ರಿಂಗ್ ಆಗಲಿಲ್ಲ?” ಎಂದು ಸ್ವಲ್ಪ ಹೊತ್ತು ತಲೆ ಕೆಡಿಸಿಕೊಂಡಿದ್ದೆ.
- ಮುಂದುವರೆದ ಭಾಗ ಸಂಪದದಲ್ಲಿ ಮುಂಬರುವ ದಿನಗಳಲ್ಲಿ ಪೋಸ್ಟ್ ಮಾಡಲಾಗುವುದು.
(ಈ ಸರಣಿಯ ಪರಿಷ್ಕೃತ ಆವೃತ್ತಿ ೨೦೨೦ರ ವಿಜಯವಾಣಿ ಯುಗಾದಿ ಸಂಚಿಕೆಯಲ್ಲಿ ಪ್ರಕಟವಾಗಿದೆ)