ಡಿಜಿಟಲ್ ಯೋಗಕ್ಷೇಮ - ೩ - ದಿನ ನಿತ್ಯದ ಸ್ಕ್ರೀನ್ ಟೈಮ್

ಡಿಜಿಟಲ್ ಯೋಗಕ್ಷೇಮ - ೩ - ದಿನ ನಿತ್ಯದ ಸ್ಕ್ರೀನ್ ಟೈಮ್

ದಿನ ನಿತ್ಯದ ಸ್ಕ್ರೀನ್ ಟೈಮ್

ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡುತ್ತಿದ್ದಿರಿ ಎಂಬುದರ ಲೆಕ್ಕ. ಮನೆಯಲ್ಲಿ ಮಡದಿ “ನನ್ನ ಮುಖ ನೋಡುವುದಕ್ಕಿಂತ ಹೆಚ್ಚು ನೀವು ಆ ಸ್ಮಾರ್ಟ್ ಫೋನನ್ನು ನೋಡುತ್ತಿರುತ್ತೀರ” ಎಂಬ ಆಪಾದನೆ ಮಾಡಿದರೆ, ಮಡದಿಯ ಮುಖವನ್ನು ನೋಡಿದ ಲೆಕ್ಕ ಗೊತ್ತಿಲ್ಲ, ಆದರೆ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ಎವೆಯಿಕ್ಕದೆ ನೋಡುತ್ತಿದ್ದಿರಿ ಎಂಬುದರ ಖರೆ ಲೆಕ್ಕ ನಿಮಗೆ ಈಗ ಸಿಗುತ್ತದೆ. 

ದಿನಕ್ಕೆ ನಿರ್ದಿಷ್ಟ ಸಮಯದವರೆಗೂ ಬಳಸಿದ ನಂತರ ಗ್ಯಾಜೆಟ್ಟು ತಾನಾಗಿಯೇ ನಿಮಗೆ “ಈಗ ನೀವು ಇದನ್ನು ಇಷ್ಟು ಹೊತ್ತು ಬಳಸಿದ್ದೀರಿ. ಈಗ ನಿಲ್ಲಿಸಲೇ?” ಎಂದು ಮತ್ತಷ್ಟು ಬಳಸುವ ಮುನ್ನ ತಿಳಿಸಬಲ್ಲುದು. 

ವಿಶೇಷವಾಗಿ ಮಕ್ಕಳಿಗೆ ಕೊಡುವ ಗ್ಯಾಜೆಟ್ಟುಗಳಲ್ಲಿ ಸ್ಕ್ರೀನ್ ಟೈಮ್ ಅನ್ನು ಮಿತಿಯಲ್ಲಿಡಬಹುದು. ಮಕ್ಕಳ ಎಳೆಯ ಕಣ್ಣುಗಳಿಗೆ ಹೆಚ್ಚಿನ ಒತ್ತಡ ಉಂಟು ಮಾಡುವ ಬಹುತೇಕ ಬ್ಯಾಕ್ ಲಿಟ್ ಎಲ್ ಇ ಡಿ ಸ್ಕ್ರೀನುಗಳಿರುವ ಗ್ಯಾಜೆಟ್ ಗಳನ್ನು ಮಿತಿಯಾಗಿ ಬಳಸಿದಲ್ಲಿ ಉತ್ತಮ. 

 

ಮಕ್ಕಳಿಗಷ್ಟೇ ಅಲ್ಲ, ಎಲ್ಲರಿಗೂ ಅನ್ವಯವಾಗುವ ಸಲಹೆ - ರಾತ್ರಿಯ ಹೊತ್ತು ಮಲಗುವ ಮುನ್ನ ಕೆಲವು ಗಂಟೆಗಳ ಕಾಲ ಗ್ಯಾಜೆಟ್ ಗಳನ್ನು ಬಳಸಬೇಡಿ ಎಂಬುದು. ಇದನ್ನು ಕಾರ್ಯರೂಪಕ್ಕೆ ತರುವುದು ಇತ್ತೀಚೆಗೆ ಬಹಳ ಕಷ್ಟಕರವಾದ ವಿಷಯ. ರಾತ್ರಿಯ ಹೊತ್ತು ಎನೋ ಒಂದು ಫೋನು ಬಂದರೂ ಆಯಿತು. ಆ ಫೋನ್ ಕಾಲ್ ಗೆ ಉತ್ತರ ಕೊಟ್ಟು ನಾವು ಫೋನನ್ನು ಸುಮ್ಮನೆ ವಾಪಸ್ ಇಡುತ್ತೇವೆಯೇ? “ನೋಡೋಣ, ಸುದ್ದಿ ಏನು?” - ನ್ಯೂಸ್ ಆಪ್ ತೆಗೆದಿಟ್ಟುಕೊಂಡು ಓದುತ್ತೇವೆ. “ಫೇಸ್ ಬುಕ್ ಒಮ್ಮೆ ಒಂದಷ್ಟು ನಿಮಿಷ ನೋಡಿಬಿಡೋಣ” - ಅಲ್ಲಿಂದ ಹತ್ತಿಪ್ಪತ್ತು ನಿಮಿಷವಾದರೂ ಫೇಸ್ಬುಕ್ ಅಥವ ಟ್ವಿಟರ್ ನೋಡುತ್ತೇವೆ. ಹೀಗೆ ಗ್ಯಾಜೆಟ್ ಗಳು ತುಂಬಿರುವ ಜೀವನದಲ್ಲಿ ರಾತ್ರಿಯ ಹೊತ್ತು ಮಲಗುವ ಮುನ್ನ ಅವುಗಳಿಂದ ದೂರವಿರುವುದು ಕಷ್ಟದ ವಿಷಯವೇ. ಆದರೆ ಇದಕ್ಕೂ ಒಂದು ಪರಿಹಾರ ಇದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಡಿವೈಸುಗಳಲ್ಲಿ “ನೈಟ್ ಲೈಟ್” ಅಥವ ರಾತ್ರಿಯ ಹೊತ್ತು ಪರದೆಯ ಹೊಳಪನ್ನು ಕ್ಷೀಣವಾಗಿಸುವ ಸವಲತ್ತು ಲಭ್ಯವಿದೆ. ಇದರಿಂದ ಕಣ್ಣಿನ ಮೇಲೆ ಹೆಚ್ಚು ಪ್ರಖರವಾದ ಬೆಳಕು ಬೀಳದು. ಬಹಳಷ್ಟು ಹೊತ್ತು ಪ್ರಖರವಾದ ಬೆಳಕು ಕಣ್ಣಿನ ಮೇಲೆ ಬಿದ್ದಲ್ಲಿ ನಿದ್ರೆ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆ ಹೆಚ್ಚು ಎಂಬುದು ತಿಳಿದಿರುವ ವಿಷಯ. 

ಈ ನೈಟ್ ಲೈಟ್ ವ್ಯವಸ್ಥೆ ಬಂದ ಹೊಸತರಲ್ಲಿ ಮಡದಿಯ ಫೋನು ತೆಗೆದುಕೊಂಡು ಅದರಲ್ಲಿ ರಾತ್ರಿ ಹತ್ತರ ನಂತರ ಬೆಳಕು ಕ್ಷೀಣವಾಗುವಂತೆ ಮಾಡಿಟ್ಟಿದ್ದೆ. ಅವಳು “ನನ್ನ ಮೊಬೈಲ್ ಏನೋ ಆಗಿದೆ. ಸರಿ ಮಾಡಿಕೊಡಿ” ಎಂದು ವಾಪಸ್ ಕೊಟ್ಟಿದ್ದಳು! 

 - ಮುಂದುವರೆದ ಭಾಗ ಸಂಪದದಲ್ಲಿ ಮುಂಬರುವ ದಿನಗಳಲ್ಲಿ ಪೋಸ್ಟ್ ಮಾಡಲಾಗುವುದು. 

(ಈ ಸರಣಿಯ ಪರಿಷ್ಕೃತ ಆವೃತ್ತಿ ೨೦೨೦ರ ವಿಜಯವಾಣಿ ಯುಗಾದಿ ಸಂಚಿಕೆಯಲ್ಲಿ ಪ್ರಕಟವಾಗಿದೆ)