ಡಿಟಿಎಚ್ ಮೂಲಕವೂ ಖರೀದಿಸಿ!

ಡಿಟಿಎಚ್ ಮೂಲಕವೂ ಖರೀದಿಸಿ!

ಬರಹ

(ಇ-ಲೋಕ-72)(28/4/2008 

ಮನೆಗೆ ಟಿವಿ ಚಾನೆಲ್‍ಗಳನ್ನು ನೇರವಾಗಿ ತಲುಪಿಸಿ,ಕೇಬಲ್ ಟಿವಿ ಜಾಲದವರ ಹಂಗಿಲ್ಲದಂತೆ ಮಾಡುವ ಡಿಟಿಎಚ್ ಮೂಲಕ ಇನ್ನೂ ಹೆಚ್ಚಿನ ಸೌಕರ್ಯ ಪಡೆಯಬಾರದೇಕೆ ಎನ್ನುವ ಚಿಂತನೆ ನಡೆದಿದೆ. ಡಿಟಿಎಚ್ ಮೂಲಕ ಗ್ರಾಹಕ ಉಪಗ್ರಹ ಮುಖಾಂತರ ನೇರ ಸಂಪರ್ಕ ಹೊಂದಿರುತ್ತಾನೆ. ಈ ಸಂಪರ್ಕ ಸುಸ್ಪಷ್ಟ ಕೂಡಾ ಆಗಿರುತ್ತದೆ.ಟಿವಿ ರಿಮೋಟ್ ಮೂಲಕ ಟಿವಿ ತೆರೆಯಲ್ಲಿ ಕಾಣಿಸುವ ವಸ್ತುಗಳ ಪೈಕಿ ಬೇಕಾದುದನ್ನು ಆಯ್ಕೆ ಮಾಡುವ ವ್ಯವಸ್ಥೆ ಇದ್ದರೆ, ಟಿವಿಯಲ್ಲಿ ಜಾಹೀರಾತು ಪ್ರದರ್ಶನವಾದ ನಂತರ,ಅವುಗಳಲ್ಲಿ ಬೇಕಾದುದನ್ನು ಆಯ್ದು,ಖರೀದಿಸುವ ತೀರ್ಮಾನವನ್ನು ಗ್ರಾಹಕ ಮಾಡಬಹುದುತಾನೇ?ಮರುಳು ಮಾಡುವ ಜಾಹೀರಾತು ಕಂಡೊಡನೆ ಖರೀದಿಸುವ ನಿರ್ಣಯವನ್ನು ಗ್ರಾಹಕ ಮಾಡಿದರೆ,ಜಾಹೀರಾತುದಾರನಿಗೇ ಲಾಭ.ತಡವಾದರೆ,ಉತ್ಪನ್ನದ ಬಗ್ಗೆ ಗ್ರಾಹಕನಿಗೆ ಮರೆತು ಹೋಗಬಹುದು.ಬಿಸಿಯಿದ್ದಾಗಲೇ ಬೆಣ್ಣೆ ಕರಗಿಸಬೇಕು!ಖರೀದಿಸಲು ತೆರಬೇಕಾದ ಹಣವನ್ನು ಬ್ಯಾಂಕ್ ಖಾತೆ ಅಥವ ಕ್ರೆಡಿಟ್‍ಕಾರ್ಡ್ ಮೂಲಕವೇ ಪಾವತಿಸುವ ವ್ಯವಸ್ಥೆ ಮಾಡುವುದು ಸಾಧ್ಯ.ವಿಮಾನ,ರೈಲ್ವೇ ಟಿಕೆಟ್ ಖರೀದಿಯಂತಹ ಜನಪ್ರಿಯ ಸೇವೆಯನ್ನು ಡಿಟಿಎಚ್ ಮೂಲಕವೂ ನೀಡಿದರೆ,ಈ ಸೇವೆ ಜನಪ್ರಿಯವಾಗುವುದು ಸುಲಭ ತಾನೇ?
ಕಡಿಮೆಯಾಗಿರುವ ಪ್ರತಿಭಾ ಪಲಾಯನ
 ಅರುವತ್ತರ ದಶಕದಿಂದಲೇ ದೇಶ ಪ್ರತಿಭಾಪಲಾಯನ ಸಮಸ್ಯೆಯನ್ನು ಎದುರಿಸುತ್ತಿದೆ. ಐಐಟಿಯಲ್ಲಿ ಕಲಿತವರೆಲ್ಲಾ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಅಥವ ನೌಕರಿ ಅರಸಿ ಹೋಗುವುದು ಸಾಮಾನ್ಯವಾಗಿತ್ತು. ಇತ್ತೀಚೆಗೆ ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದಾಗ,ಸದ್ಯದ ಪರಿಸ್ಥಿತಿ ಹಾಗಿಲ್ಲ ಎನ್ನುವ ಸಮಾಧಾನ ನೀಡುವ ಅಂಶ ಬೆಳಕಿಗೆ ಬಂದಿದೆ.2001ರ ವರೆಗೂ ಐಐಟಿಯಲ್ಲಿ ಪದವೀಧರರಾದವರ ಪೈಕಿ ಶೇಕಡಾ ಮೂವತ್ತೈದು ಜನ ವಿದೇಶಕ್ಕೆ ಸಾಗುತ್ತಿದ್ದರು. ಆದರೆ ನಂತರದಲ್ಲಿ ಪದವಿಗಳಿಸಿದವರ ಪೈಕಿ ದೇಶ ಬಿಟ್ಟು ಹೋಗುವವರ ಸಂಖ್ಯೆ ಅರ್ಧಕ್ಕಿಳಿದಿದೆ.ಭವಿಷ್ಯದಲ್ಲಿ ನಮ್ಮಲ್ಲಿ ಅವಕಾಶಗಳು ಅಮೆರಿಕಾಕ್ಕಿಂತ ಹೆಚ್ಚು ಎನ್ನುವವರ ಸಂಖ್ಯೆಯೇ ಅಧಿಕ ಎನ್ನುವುದು ಗಮನಾರ್ಹ ಅಂಶ.ಈ ಅಬಿಪ್ರಾಯವನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ ಏಳುನೂರು ಜನರ ಪೈಕಿ ಶೇಕಡಾ ಎಪ್ಪತ್ತೈದು ಜನರು ಹೊಂದಿದ್ದರು.
ಫ್ಲಾಶ್ ಕೋಶ ಕಳೆದುಹೋದರೂ ಗಾಬರಿ ಬೇಕಿಲ್ಲ!
 ಈಗ ಜನರು ಸಿಡಿ ಮತ್ತು ಫ್ಲಾಫಿ ಬಳಸುವುದು ಕಡಿಮೆಯಾಗಿದೆ.ಎಲ್ಲರ ಕೈಯಲ್ಲೂ ತಂಬ್ ಡ್ರೈವ್ ಎಂದು ಕರೆಯಲ್ಪಡುವ ಫ್ಲಾಶ್ ಸ್ಮರಣಕೋಶ ರಾರಾಜಿಸುತ್ತದೆ.ಅದನ್ನು ಕಂಪ್ಯೂಟರಿನ ಯುಎಸ್‍ಬಿ ಪೋರ್ಟಿಗೆ ಸಿಕ್ಕಿಸಿ,ಬಳಸಬಹುದು.ಆದರೆ ಇವನ್ನು ಕಂಪ್ಯೂಟರಿನಲ್ಲೇ ಮರೆತು ಬಿಡುವುದು,ಪ್ರಯಾಣಿಸುವಾಗ ಕಳೆದುಕೊಳ್ಳುವುದೂ ಸಾಮಾನ್ಯ.ಕಚೇರಿಯ ಮಹತ್ತ್ವದ ಕಡತಗಳನ್ನು ಇವಲ್ಲಿರಿಸಿದ್ದರೆ,ಕಳೆದುಕೊಂಡಾಗ ಯೋಚನೆಗೀಡಾಗ ಬೇಕಾಗುತ್ತದೆ.ಕಚೇರಿಯ ಗುಟ್ಟುಗಳು ಸುಲಭವಾಗಿ ಇತರರ ಕೈಸೇರುವ ಭೀತಿ ಇದ್ದದ್ದೇ. ಈಗ ಸ್ಕ್ಯಾನ್ ಡಿಸ್ಕ್ ಎಂಬ ಕಂಪೆನಿ ವಿನೂತನ ಸೇವೆ ಆರಂಭಿಸಿದೆ.ಜಾಲತಾಣದ ಮೂಲಕ ಇದರ ಸೇವೆ ಪಡೆದಾಗ,ತಂಬ್ ಡ್ರೈವ್‍ನ ಮಾಹಿತಿಯನ್ನು ಕಂಪೆನಿಯ ತಾಣದಲ್ಲಿ ಸುರಕ್ಷಿತವಾಗಿ ನಕಲಿ ಮಾಡಿಡಬಹುದು.ಜತೆಗೆ ತಂಬ್ ‍ಡ್ರೈವ್‌ನ್ನು ತೆರೆಯಲು,ಗುಪ್ತಸಂಕೇತ ನೀಡಬೇಕಾದ ಅಗತ್ಯ ಬರುವಂತೆ ಮಾಡಲು ಬರುತ್ತದೆ. ಕಳೆದುಹೋದ ತಂಬ್‌ಡ್ರೈವ್ ಇತರರಿಗೆ ಸಿಕ್ಕರೂ,ಅವರು ಅದನ್ನು ತೆರೆಯಲು ಅಸಾಧ್ಯ.ಜತೆಗೆ ಅದರಲ್ಲಿದ್ದ ಮಾಹಿತಿಯು ಅಂತರ್ಜಾಲತಾಣದಲ್ಲಿಯೂ ಸುರಕ್ಷಿತವಾಗಿರುತ್ತದೆ.
ವಿನೂತನ ಸೇವೆಗಳನ್ನು ಒದಗಿಸಲಿರುವ ಯಾಹೂ
 ಯಾಹೂ ಕಂಪೆನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯೋಚನೆಯಲ್ಲಿ ಮೈಕ್ರೋಸಾಫ್ಟ್ ಕಂಪೆನಿ ಇರುವುದು ಈಗ ಜಗಜ್ಜಾಹೀರು.ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಯಾಹೂ ಗಳಿಸಿದ ಲಾಭ ಮೂರು ಪಟ್ಟು ಹೆಚ್ಚಿ,ಮೈಕ್ರೋಸಾಫ್ಟ್ ಯಾಹೂವಿಗೆ ನೀಡಲು ಮುಂದೆ ಬಂದ ಖರೀದಿ ಬೆಲೆ ನಲ್ವತ್ತಾರು ಬಿಲಿಯನ್ ಡಾಲರು ಕಡಿಮೆಯಾಯಿತು ಎನ್ನುವ ಭಾವನೆ ಮೂಡಿಸಲು ಸಫಲವಾಗಿದೆ.ಈ ನಡುವೆಯೇ ಯಾಹೂ ತಾನು ಅಂತರ್ಜಾಲಿಗರಿಗೆ ನೀಡುತ್ತಿರುವ ವೈವಿಧ್ಯಮಯ ಸೇವೆಗಳನ್ನು ಒಂದೇ ಕಡೆ ಲಭ್ಯವಾಗಿಸುವತ್ತ,ತನ್ನ ಅಂತರ್ಜಾಲ ಪೋರ್ಟಲನ್ನು ಮರುವಿನ್ಯಾಸಗೊಳಿಸುವ ಬೃಹತ್ ಯೋಜನೆಗೆ ಕೈಯಿಕ್ಕಿದೆ.ಮಿಂಚಂಚೆ,ಫೊಟೋ ಅಲ್ಬಮ್ ಸೇವೆ ಫ್ಲಿಕರ್,Del.icio.us ಮುಂತಾದ ಸೇವೆಗಳೆಲ್ಲಾ ಇದರಲ್ಲೇ ಲಭ್ಯವಾಗಲಿದೆ.
ಪೊಲೀಸ್ ಬಂಧನದಿಂದ ತಪ್ಪಿಸಿದ ಅಂತರ್ಜಾಲ ತಾಣ
 ಈಜಿಪ್ಟಿನಲ್ಲಿ ಪ್ರವಾಸದಲ್ಲಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಸರಕಾರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನು ವೀಕ್ಷಿಸುತ್ತಾ ನಿಂತಿದ್ದ.ಆಗ ಸ್ಥಳಕ್ಕೆ ಬಂದ ಪೊಲೀಸರು ಗಲಭೆಕೋರರ ಜತೆಗೆ ವಿದ್ಯಾರ್ಥಿಯನ್ನೂ ಬಂಧಿಸಿದರು.ಪೊಲೀಸರ ಬಂಧನದಲ್ಲಿ ಸಾಗುತ್ತಿದ್ದ ವೇಳೆ,ಆತ ತನ್ನ ಮೊಬೈಲ್ ಮೂಲಕ ಟ್ವಿಟರ್ ಅಂತರ್ಜಾಲ ತಾಣದಲ್ಲಿ "ಬಂಧಿಸಲ್ಪಟ್ಟಿದ್ದೇನೆ" ಎಂಬ ಒಂದೇ ಶಬ್ದದ ಬ್ಲಾಗ್ ಬರೆದ. ಟ್ವಿಟರ್ ಎನ್ನುವುದು ವ್ಯಕ್ತಿಯು ತನ್ನ ಪ್ರಸಕ್ತ ಸ್ಥಿತಿಯ ಬಗ್ಗೆ ತನ್ನ ಮಿತ್ರರಿಗೆ ತಿಳಿಸುವ ಬ್ಲಾಗ್ ತಾಣ.ಅದನ್ನೋದಿದ ಆತನ ಅಮೆರಿಕನ್ ಗೆಳೆಯರು ಮತ್ತು ಈಜಿಪ್ಟಿನ ಬ್ಲಾಗ್ ಗೆಳೆಯರು,ಪೊಲೀಸರನ್ನು ಸಂಪರ್ಕಿಸಿ,ಆತನ ಬಿಡುಗಡೆಗೆ ಕ್ರಮ ಕೈಗೊಂಡಿದ್ದರಿಂದ ವಿದ್ಯಾರ್ಥಿಯ ಬಿಡುಗಡೆಯಾಯಿತು.ಈ ಪುಟ್ಟ ಬ್ಲಾಗ್ ತಾಣವನ್ನು ಆತ ಬಳಸಲು ತೊಡಗಿ ಅದಿನ್ನೂ ಒಂದು ವಾರವೂ ಆಗಿರಲಿಲ್ಲ ಎನ್ನುವುದು ವಿಶೇಷ.
udayavani

ashokworld

*ಅಶೋಕ್‍ಕುಮಾರ್ ಎ