ಡಿಸೆಂಬರ್ ೧- ವಿಶ್ವ ಏಡ್ಸ್ ದಿನ
ಹೆಚ್ ಐ ವಿ ಏಡ್ಸ್ ಎಂಬ ಕಾಯಿಲೆ (ಕೊರತೆ) ಒಂದು ಸಮಯದಲ್ಲಿ ಭೀಕರ, ಮಾರಣಾಂತಿಕ ಅನ್ನಿಸಿತ್ತು. ತಕ್ಷಣಕ್ಕೆ ಉಸಿರು ನಿಲ್ಲಿಸದಿದ್ದರೂ, ನಿಧಾನವಾಗಿ ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸುವುದು, ರೋಗ ನಿರೋಧ ಶಕ್ತಿಯನ್ನು ಕುಗ್ಗಿಸುವುದು. ಒಮ್ಮೆ ಈ ರೋಗ ಬಂದಾಯಿತು ಎಂದರೆ ಆತನ/ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸುವುದು, ಹಿಂಜರಿಕೆ, ಕೀಳರಿಮೆ, ಎಲ್ಲರೊಂದಿಗೆ ಸಭೆ ಸಮಾರಂಭಗಳಲ್ಲಿ ಬೆರೆಯಲು ಹಿಂದೇಟು ಮನೋಭಾವ ಇತ್ಯಾದಿ ಇದರ ಉಪಟಳಗಳು.
ಸರಕಾರದ ಒಂದು ಯೋಜನೆಯಂತೆ 2030 ರ ವೇಳೆಗೆ ಹೆಚ್ ಐ ವಿ ಏಡ್ಸ್ ಸೋಂಕಿತರನ್ನು ಶೂನ್ಯಕ್ಕೆ ತರಬೇಕೆಂಬ ಗುರಿಯಿತ್ತಂತೆ. ಆದರೆ ಹೀಗೆ ಮುಂದುವರಿದರೆ ಕಷ್ಟವಿದೆ. ಸೋಂಕಿತರ ಪತ್ತೆಯೇ ವಿಳಂಬ, ಪತ್ತೆಯಾದರೂ ಚಿಕಿತ್ಸೆಗೆ ಸ್ಪಂದಿಸದಿರುವುದು.
೧೯೮೧ರಲ್ಲಿ ಮೊದಲ ಸಲ ಈ ವೈರಾಣುವಿನ ಹಾವಳಿಯನ್ನು ಅಮೇರಿಕಾದಲ್ಲಿ ಗುರುತಿಸಲಾಯಿತು. ಭಾರತದ ಚೆನ್ನೈನಲ್ಲಿ ೧೯೮೬ರಲ್ಲಿ ಕಂಡು ಬಂತು. ೧೯೮೩ರಲ್ಲಿ ಫ್ರೆಂಚ್ ವಿಜ್ಞಾನಿಯೊಬ್ಬರು ಈ ಮಾರಣಾಂತಿಕ ವೈರಸನ್ನು ಕಂಡುಹಿಡಿದರಂತೆ. ಇದೊಂದು ವೈದ್ಯ ವಿಜ್ಞಾನ ಪ್ರಪಂಚಕ್ಕೇ ಸವಾಲು ಆಗಿ ತಲೆದೋರಿದ ರೋಗವೆನ್ನಬಹುದು. ಈ ಕಾಯಿಲೆಯ ಮುಂಜಾಗ್ರತೆಯ ಬಗ್ಗೆ ಮಾಹಿತಿ ಕೊಡುವ ಕಾರ್ಯವಾಗಬೇಕು.
ರೋಗ ಒಮ್ಮೆ ದೇಹದಲ್ಲಿ ಕಾಣಿಸಿಕೊಂಡಿತಾದರೆ ಚಿಕಿತ್ಸೆಗೆ ಹಿಂದೇಟು ಹಾಕಬಾರದು. ಪರಿಸರದಲ್ಲಿ ತಿಳಿದರೆ ಎಂಬ ಆತಂಕದಿಂದಾಗಿ ಕಾಯಿಲೆ ಬೇಗ ಹಬ್ಬುತ್ತದೆ. ಎಷ್ಟೇ ಗೌಪ್ಯತೆ ಕಾಪಾಡಿದರೂ ವಿಷಯ ಹೊರಬರುವುದೆಂಬ ಅಂಜಿಕೆ. ತಾರತಮ್ಯ ನೀತಿ.
(ಹ್ಯೂಮನ್ ಇಮ್ಯೂನೋಡೆಫಿಷಿಯನ್ಸಿ ವೈರಸ್) ಶರೀರದಲ್ಲಿದೆಯೆಂದಾದರೆ ಜೀವನವಿಡೀ ಚಿಕಿತ್ಸೆ ವೈರಸ್ ಹೆಚ್ಚಾಗದಂತೆ ಬೇಕು. ಇದರಿಂದ ಇದೇ ಏಡ್ಸ್ ಆಗಿ ಪರಿವರ್ತನೆ ಹೊಂದುತ್ತದೆ. ಜಾಗೃತಿ ಮತ್ತು ಜಾಗ್ರತೆ ಮೂಡಿಸುವ ಕೆಲಸ ಎಷ್ಟಿದ್ದರೂ ಸಾಕಾಗದು. ಕೆಲವರು ಜೀವಮಾನವಿಡೀ ಔಷಧ ಬೇಡವೆನ್ನುತ್ತಿರುವುದೂ ಒಂದು ಕಾರಣವಂತೆ.ನಾಟಿ ಮದ್ದು ಮಾಡುತ್ತಿದ್ದಾರೆ.
ಅಸುರಕ್ಷಿತ ಲೈಂಗಿಕತೆ ರೋಗ ಹರಡಲು ಪ್ರಮುಖ ಕಾರಣ. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ರೋಗ ಪೀಡಿತರು ಸ್ವಯಂ ನಿಯಂತ್ರಣ ಮನೋಭಾವ ತಾಳಬೇಕು. ಗರ್ಭಿಣಿಗೆ ಇದ್ದರೆ ಮಗುವಿಗೂ ಬರುವ ಸಾಧ್ಯತೆಯಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆ, ವೀರ್ಯಾಣು, ಎದೆ ಹಾಲಿನ ಮೂಲಕ, ಯೋನಿ, ಗುದ ಸೋಂಕಿನ ಮೂಲಕ, ರೋಗಿಗೆ ಬಳಸಿದ ಸಿರಿಂಜಿನ ಮರುಬಳಕೆ, ರಕ್ತನೀಡಿಕೆ ಮುಂತಾದವುಗಳಿಂದ ರೋಗ ಹಬ್ಬಬಹುದು. ಈ ಬಗ್ಗೆ ಸಂಘಸಂಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಭೆಗಳಲ್ಲಿ, ಸಾರ್ವಜನಿಕ ಪ್ರದೇಶ, ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಜಾಗೃತಿ ಮೂಡಿಸುವ,ಮಾಹಿತಿ ನೀಡುವ ಚಟುವಟಿಕೆ ಇಟ್ಟು ಸಾರ್ವಜನಿಕರನ್ನು ಎಚ್ಚರಿಸಬಹುದು. ಹದಿಹರೆಯದವರಿಗೆ ಅಗತ್ಯವಾಗಿ ಶಿಕ್ಷಣ ನೀಡಬೇಕು. ಆದಷ್ಟೂ ಜನರಲ್ಲಿ ಶೀಘ್ರ ಪತ್ತೆ ಮಾಡುವುದರಿಂದ ಹರಡುವಿಕೆ ತಡೆಗಟ್ಟಬಹುದು .’ತಾವು ಹೇಗೂ ಹಾಳಾದಿರಿ, ಇತರರ ಜೀವ ಮತ್ತು ಜೀವನಕ್ಕೆ ಮಾರಕವಾಗದಿರಿ’ ಎನ್ನಬಹುದು. ಈ ವಿಷಯದಲ್ಲಿ ಮಕ್ಕಳಾಟಿಕೆ ಸಲ್ಲದು .ಪ್ರೌಢಶಾಲಾ ಮಕ್ಕಳು ಅಸುರಕ್ಷತೆ ಲೈಂಗಿಕತೆ ಪ್ರಸಕ್ತ ದಿನಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಫೇಸ್ಬುಕ್, ಪತ್ರಿಕೆಯಲ್ಲಿ ಇತ್ತೀಚೆಗೆ ಓದಿದೆ. ಇದೆಂಥ ಅವಸ್ಥೆ. ಇನ್ನೂ ಮೀಸೆ ಮೂಡದ ಗಂಡುಮಕ್ಕಳು, ಈಗ ತಾನೇ ಹರೆಯಕ್ಕೆ ಕಾಲಿಟ್ಟ ಹೆಣ್ಣು ಮಗು ಇವರ ಯೋಚನೆಗೆ ಏನೆನ್ನಬೇಕು? ಯಾರ ತಪ್ಪು ಇದು? ಅದೂ ಸಾರ್ವಜನಿಕ ಪ್ರದೇಶಗಳಲ್ಲಿ.ತಲೆತಗ್ಗಿಸುವ ವಿಚಾರವಿದು.ಹೆತ್ತವರೇ ನಿಮ್ಮ ಓರೆದೃಷ್ಟಿ ಮಕ್ಕಳ ಮೇಲಿರಲಿ.ಮಾರಣಾಂತಿಕ ಕಾಯಿಲೆ ವಂಶವನ್ನೇ ಹಾಳುಗೆಡಹಬಹುದು.
ನಾವೆಲ್ಲರೂ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಏಡ್ಸ್ ರೋಗ ಬಂದವರ ಬಗ್ಗೆ ಅವರ ಮಕ್ಕಳ ಬಗ್ಗೆ ತಾತ್ಸಾರ ಸಲ್ಲದು. ಅವರಿಗೂ ಬದುಕುವ ಹಕ್ಕಿದೆಯಲ್ಲವೇ? ದೊಡ್ಡವರ ತಪ್ಪಿಗೆ ಪುಟ್ಟ ಕಂದಮ್ಮಗಳು ಹೊಣೆಯೇ? ಎಲ್ಲಾ ಕಡೆಯೂ ಅವರಿಗೂ ಸಮಾನ ಅವಕಾಶವಿತ್ತು ಸಮಾಜದಲ್ಲಿ ತಲೆಯೆತ್ತಿ ಬಾಳ್ವೆ ನಡೆಸಲು ಧೈರ್ಯ ತುಂಬುವ ಕೆಲಸವಾಗಬೇಕು.
-ರತ್ನಾ ಕೆ ಭಟ್,ತಲಂಜೇರಿ
(ಮಾಹಿತಿ: ವಿವಿಧ ಮೂಲಗಳಿಂದ)
ಚಿತ್ರ ಕೃಪೆ: ಇಂಟರ್ನೆಟ್ ತಾಣ