ಡಿಸೆಂಬರ್ 31ರ ಇಳಿಹೊತ್ತಿನಲ್ಲಿ…

ಡಿಸೆಂಬರ್ 31ರ ಇಳಿಹೊತ್ತಿನಲ್ಲಿ…

ಇನ್ನು ಕೆಲವೇ ಗಂಟೆಗಳನ್ನು ಕಳೆದರೆ ಹೊಸ ವರ್ಷ ನಮ್ಮೆದುರು ಬಂದು ನಿಲ್ಲುತ್ತದೆ. ಯಾರು ಏನೇ ಹೇಳಲಿ ಬಹುತೇಕ ಮಂದಿ ಬಳಸುವ ಕ್ಯಾಲೆಂಡರ್ ಹಳೆಯದಾಗಿ ಹೊಸ ಕ್ಯಾಲೆಂಡರ್ ಮನೆಯ ಗೋಡೆಯಲ್ಲಿ ನೇತಾಡಲು ಪ್ರಾರಂಭವಾಗುತ್ತದೆ. ಮತ್ತೆ ಭರ್ತಿ ೩೬೫ ದಿನಗಳನ್ನು ಕಳೆಯ ಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು, ನಿರುದ್ಯೋಗಿಗಳಿಗೆ ಉದ್ಯೋಗ, ಉದ್ಯೋಗದಲ್ಲಿರುವವರಿಗೆ ಹೊಸ ಉದ್ಯೋಗ ಅವಕಾಶ, ಅವಿವಾಹಿತರಿಗೆ ವಿವಾಹ ಯೋಗ, ವ್ಯಾಪಾರದಲ್ಲಿ ಸೋತು ಹೋಗಿರುವವರಿಗೆ ನೂತನ ಆಶಾಭಾವನೆ, ಪ್ರತೀ ವರ್ಷದಂತೆ ಬರುವ ಹಬ್ಬ ಹರಿದಿನಗಳು, ಹುಟ್ಟು ಹಬ್ಬದ ಸಂಭ್ರಮ, ಸತ್ತು ಹೋದವರ ಮನೆಯ ಸೂತಕ, ಆಟ, ಸಿನೆಮಾದಲ್ಲಿನ ಸೋಲು ಗೆಲುವು ಎಲ್ಲವೂ ಮುಂದಿನ ಹೊಸ ವರ್ಷದಲ್ಲಿ ನಾವು ಕಾಣಲಿದ್ಡೇವೆ. 

ಕಳೆದು ಹೋದ ೨೦೨೪ ಎಂಬ ವರ್ಷದ ನಮ್ಮ ಅನುಭವಗಳು ಮುಂದಿನ ವರ್ಷಕ್ಕೆ ಪಾಠವಾಗಬಲ್ಲವು. ಕಳೆದ ವರ್ಷದ ಸೋಲು ಮುಂದಿನ ವರ್ಷದಲ್ಲಿ ಗೆಲುವಾಗಿಸಿಕೊಳ್ಳಬೇಕು ಎನ್ನುವ ಗುರಿ ಇರಲಿ. ಜನವರಿ ೧ ಕ್ಕೆ ಬೆಳಿಗ್ಗೆ ಎದ್ದು ಮತ್ತೆ ಪ್ರಾರಂಭಿಸಿದ ವಾಕಿಂಗ್, ಯೋಗ, ಆಟಗಳು ಇಡೀ ವರ್ಷ ನಿರಂತರವಾಗಿ ಮುಂದುವರೆಯಲಿ. ಹೀಗಾದರೆ ಮಾತ್ರ ನಾವು ಹಿಂದಿನ ವರ್ಷದ ತಪ್ಪುಗಳಿಂದ ಪಾಠ ಕಲಿತಿದ್ದೇವೆ ಎಂದು ಅರಿವಾಗುತ್ತದೆ. ಪ್ರತೀ ವರ್ಷ ಮಾಡಿದ ತಪ್ಪುಗಳನ್ನು ಹೊಸ ವರ್ಷದಲ್ಲೂ ಮಾಡಿದರೆ ಅದಕ್ಕೆ ಅರ್ಥವಿರುವುದಿಲ್ಲ. ಎಷ್ಟು ತಪ್ಪುಗಳನ್ನು ಮಾಡಿದರೂ ಆತ ಕಲಿಯುವುದೇ ಇಲ್ಲವಲ್ಲಾ ಎನ್ನುವ ಮಾತು ಬೇರೆಯವರಿಂದ ಕೇಳಬಾರದು ಅಲ್ಲವೇ?

ನಾವು ಬದುಕಿರುವ ಈ ಪ್ರಪಂಚವು ೨೦೨೪ರಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ರಾಜಕೀಯವಾಗಿರಬಹುದು, ಕ್ರೀಡೆಗಳಲ್ಲಿರಬಹುದು ಅಥವಾ ಸಿನೆಮಾ ರಂಗದಲ್ಲಿ ಆಗಿರಬಹುದು ಬದಲಾವಣೆಗಳು ನಿರಂತರ. ಕೆಲವು ಆಶಾದಾಯಕವಾಗಿದೆ ಅನಿಸಿದರೂ ನಾವಿನ್ನೂ ಸಾಧಿಸಬೇಕಾದದ್ದು ಬಹಳ ಇದೆ ಅನಿಸುವುದಿದೆ. ಅದಕ್ಕಾಗಿ ೨೦೨೫ನ್ನು ತೆಗೆದು ಇಡಬೇಕು. ನಾವು ‘ಜೆನ್-ಝಡ್’ ತಲೆಮಾರಿನಿಂದ ಮುಂದಿನ ವರ್ಷ ಅಂದರೆ ೨೦೨೫ ರಿಂದ ೨೦೩೯ರ ತನಕ ‘ಜೆನ್ - ಬೀಟಾ’ ತಲೆಮಾರಿಗೆ ಹೋಗುತ್ತಿದ್ದೇವೆ. ಮುಂದಿನ ವರ್ಷ ಜನವರಿ ೧ರಂದು ಹುಟ್ಟುವ ಮಕ್ಕಳು ಹೊಸ ತಲೆಮಾರಿಗೆ ಸೇರುತ್ತಾರೆ. ಈ ತಲೆಮಾರನ್ನು ಸಮಾಜಶಾಸ್ತ್ರಜ್ಞರು ‘ಜೆನ್-ಬೀಟಾ’ ತಲೆಮಾರು ಎಂದು ಕರೆಯುತ್ತಾರೆ. ಈ ವರ್ಷಗಳಲ್ಲಿ ಹುಟ್ಟಿದ ಬಹುತೇಕರು ೨೨ನೇ ಶತಮಾನವನ್ನು ಕಾಣಲಿದ್ದಾರೆ ಎನ್ನುವುದು ಅವರ ಅಂಬೋಣ. ಸಮಾಜ ಶಾಸ್ತ್ರಜ್ಞ ಮಾರ್ಕ್ ಮೆಕ್ ಕ್ರಿಂಡಲ್ ರ ಪ್ರಕಾರ ಮುಂದಿನ ೧೦ ವರ್ಷಗಳಲ್ಲಿ ಜೆನ್-ಬೀಟಾ ತಲೆಮಾರು ಜಗತ್ತಿನ ಜನಸಂಖ್ಯೆಯ ಶೇ.೧೬ರಷ್ಟು ಆಗಲಿದ್ದಾರೆ. 

ಕಳೆದು ಹೋಗುತ್ತಿರುವ ೨೦೨೪ರಲ್ಲಿ ರಾಜಕೀಯವಾಗಿ ಕೆಲವೆಡೆ ಹೊಸ ಸರಕಾರಗಳು ಬಂದವು, ಕೆಲವು ಹಳೆಯ ಸರಕಾರಗಳು ಮುಂದುವರೆದವು, ಕ್ರೀಡೆಯಲ್ಲೂ ಹೊಸತನ ಕಂಡು ಬಂತು. ಕ್ರಿಕೆಟ್ ನಲ್ಲಿ T-20 ವಿಶ್ವಕಪ್ ಗೆದ್ದುಕೊಂಡೆವು, ಡಿ. ಗುಕೇಶ್ ಚೆಸ್ ಚಾಂಪಿಯನ್ ಆಗಿ ಗುರುತಿಸಿಕೊಂಡರು. ಸಿನೆಮಾರಂಗದಲ್ಲೂ ಹೊಸತನ ಕಂಡು ಬಂತು. ಚಿತ್ರನಟ ದರ್ಶನ್ ಕೊಲೆಕೇಸಿನಲ್ಲಿ ಬಂಧನಕ್ಕೊಳಪಟ್ಟರು. ಬಾಂಗ್ಲಾ ದೇಶದಲ್ಲಿ ಶೇಖ್ ಹಸೀನಾ ಸರಕಾರ ಪತನಗೊಂಡಿತು. ಒಲಂಪಿಕ್ಸ್ ನಲ್ಲಿ ನಿರೀಕ್ಷೆಯಷ್ಟು ಪದಕಗಳು ಬಾರದೇ ಇದ್ದರೂ, ಪ್ಯಾರಾ ಒಲಂಪಿಕ್ಸ್ ನಲ್ಲಿ ಕ್ರೀಡಾಳುಗಳು ಈ ಕೊರತೆಯನ್ನು ನೀಗಿಸಿದರು. ವಯನಾಡು ಭೂಕುಸಿತ, ದ.ಕೊರಿಯಾ, ಅಝರ್ ಬೈಜಾನ್ ವಿಮಾನ ಪತನ, ತಿರುಪತಿ ಲಡ್ಡು ವಿವಾದಗಳೂ ನಡೆದವು. ಅಯೋಧ್ಯೆಯಲ್ಲಿ ಅಂತೂ ಇಂತೂ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣವಾಗಿ ಉದ್ಘಾಟನೆಯಾಯಿತು. 

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ತಬಲಾ ಮಾಂತ್ರಿಕ ಜಾಕಿರ್ ಹುಸೇನ್, ವೃಕ್ಷ ದೇವತೆ ತುಳಸೀ ಗೌಡ, ಖ್ಯಾತ ಉದ್ಯಮಿ ರತನ್ ಟಾಟಾ, ನಿರೂಪಕಿ ಅಪರ್ಣಾ, ಮಾಜಿ ಮಂತ್ರಿ ನಟವರ್ ಸಿಂಗ್, ಶ್ರೀನಿವಾಸ ಪ್ರಸಾದ್, ಸರೋದ್ ಮಾಂತ್ರಿಕ ರಾಜೀವ ತಾರಾನಾಥ, ಸಿನೆಮಾ ನಟ, ನಿರ್ಮಾಪಕ ದ್ವಾರಕೀಶ್, ಕೆ.ಶಿವರಾಂ, ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾದ ಫಾಲಿ ನಾರಿಮನ್ ಮೊದಲಾದವರೆಲ್ಲಾ ಅಗಲಿದ್ದು ೨೦೨೪ರಲ್ಲೇ.

ಹಳೆಯ ವರುಷ ತನ್ನ ಹಳೆಯ ಕಂಬಳಿ ಮಡಚಿ, ಹೊಸ ವರ್ಷಕ್ಕೆ ಹೊಸ ಕಂಬಳಿಯನ್ನು ಹಾಸುವ ಈ ಹೊತ್ತಿನಲ್ಲಿ ಎಲ್ಲರ ಬದುಕು ಹಸನಾಗಲಿ, ಈ ವರ್ಷ ಪೂರೈಸದ ನಿಮ್ಮ ಬಯಕೆ, ಆಶೋತ್ತರಗಳು, ನಿರೀಕ್ಷೆಗಳು ಮುಂದಿನ ವರ್ಷ ಪೂರೈಸಲಿ. ಎಲ್ಲರಿಗೂ ಹ್ಯಾಪಿ ನ್ಯೂ ಇಯರ್ ೨೦೨೫.

ಚಿತ್ರ ಕೃಪೆ: ಅಂತರ್ಜಾಲ ತಾಣ