ಡುಮಿಂಗ

ಡುಮಿಂಗ

ಪುಸ್ತಕದ ಲೇಖಕ/ಕವಿಯ ಹೆಸರು
ಶಶಿ ತರೀಕೆರೆ
ಪ್ರಕಾಶಕರು
ಛಂದ ಪುಸ್ತಕ, ಬಗ್ಗೇರುಘಟ್ಟ ರಸ್ತೆ, ಬೆಂಗಳೂರು-೫೬೦೦೭೯, ಮೊ: ೯೮೪೪೪೨೨೭೮೨
ಪುಸ್ತಕದ ಬೆಲೆ
ರೂ. ೯೦.೦೦, ಮುದ್ರಣ: ೨೦೧೯

"ಡುಮಿಂಗ" ಎಂಬ ಕಚಗುಳಿಯಿಕ್ಕುವ ಹೆಸರು ಹೊತ್ತ ಶಶಿ ತರೀಕೆರೆಯವರ ಮೊದಲ ಕಥಾಸಂಕಲನ ಇದು. ಈ ಕತೆಗಳನ್ನು ಓದುವಾಗ ಶಶಿ ತರೀಕೆರೆಯವರು ಕಥೆಗಳಿಗೆ ಹೊಸಬರೆನ್ನುವುದು(?) ನಂಬಲಾಗದ ವಿಷಯ. ಇಲ್ಲಿರುವ ಕತೆಗಳನ್ನು ಹೊಸ ಮನಸ್ಥಿತಿಯಿಂದ ಧ್ಯಾನಿಸಿ ಬರೆದಂತಿವೆ. ಇಂದಿನ ಪೀಳಿಗೆಯ ಮಾನಸಿಕ ತಲ್ಲಣಗಳು ಮತ್ತು ದಿನೇ ದಿನೇ ದ್ವೀಪವಾಗುತ್ತಾ ಜಟಿಲಗೊಳ್ಳುತ್ತಿರುವ ಅವರ ಭಾವನಾಜಗತ್ತಿನ ಇಣುಕು ನೋಟವಿದೆ.

ಈ ಸಂಕಲನದ ಬಗ್ಗೆ ಮೂರು ವಿಷಯಗಳನ್ನು ಹೇಳಬೇಕು. ಒಂದು ಕತೆಗಳ ಭಾಷೆ ಮತ್ತು ನಿರೂಪಣಾ ಶೈಲಿ. ಜೇಡಿ ಮಣ್ಣನ್ನು ಬೇಕಾದ ಆಕಾರಕ್ಕೆ ತಿಕ್ಕಿ, ತೀಡಿ ಬಳಸಬಹುದಾದಷ್ಟೇ ಲೀಲಾಜಾಲವಾಗಿ ಭಾಷೆಯನ್ನು ದುಡಿಸಿಕೊಂಡಿರುವ ಪರಿ ಹೊಸದು. ಅದೇ ಹಸಿ ಮಣ್ಣಿಗೆ ಹರಳು ಎಸೆದಂತೆ ಕತೆಗಳೂ ಸಹ ತಟ್ಟನೆ ಹಿಡಿದಿಡುತ್ತವೆ. ಮತ್ತೆ ಮತ್ತೆ ಎಸೆಯುವ ಮಕ್ಕಳಾಟಕ್ಕೆ ಬಿದ್ದಂತೆ, ನಾವೂ ಮತ್ತೆ ಮತ್ತೆ ಕತೆಗಳನ್ನು ಓದುವ ಗೀಳಿಗೆ ಬೀಳಬಹುದು!

ಕೈ ಮಾಡಿದಲ್ಲಿ ನಿಲ್ಲಿಸಿ ಹತ್ತಿಸಿಕೊಳ್ಳುವ ನಮ್ಮ ಮಲೆನಾಡಿನ ಬಸ್ಸುಗಳಂತೆ ಈ ಕತೆಗಳು ಓದಿಸಿಕೊಂಡು ಹೋಗುವ ಓಘವೇ ಓಘ! ಒಂದಿಷ್ಟು ತಿರುವು ಹಾದು, ಮತ್ತೊಂದಿಷ್ಟು ಊರು, ಸಂತೆ, ಗೌಜು ಗದ್ದಲಗಳನ್ನೆಲ್ಲ ಕಾಣಿಸಿ ಯಾವುದೋ ಒಂದು ಅಜ್ಞಾತ ಜಾಗದಲ್ಲಿ ತಟ್ಟನೆ ಇಳಿಸಿಬಿಟ್ಟು ಕಂಗಾಲು ಮಾಡುವಂತೆ, ಎಲ್ಲೆಂದರಲ್ಲಿ ಓದುಗರನ್ನು ಒಂಟಿಯಾಗಿ ಬಿಟ್ಟು ಓಡಿಬಿಡುತ್ತವೆ. ಕಥೆಗಳಿಗೆ ತಾರ್ಕಿಕ ಅಂತ್ಯ ಕೊಡುವ ಗೋಜಿಗೆ ಕಥೆಗಾರ ಹೋಗುವುದಿಲ್ಲ. ನಾನು ಹೇಳಬೇಕಿರುವುದು ಇಷ್ಟೇ, ಅದನ್ನು ಹೇಳಿಯಾಗಿದೆ ಮುಂದಿನ ದಾರಿ ನೀವೇ ನೋಡಿಕೊಳ್ಳಿ ಎಂಬ ದಾರ್ಷ್ಟ್ಯವಿದೆ. ಈ ಕತೆಗಳಿಗೆ ಮುಂದೊಂದು ದಾರಿ ಇದೆಯಾ? ಅದನ್ನು ಓದುಗ ಹುಡುಕಬೇಕಾ? ಕತೆಗಾರನಂತೆ ಈ ಕತೆಗಳು ಸಹ ಹೇಳದೇ ಮಗುಮ್ಮಾಗಿ ಉಳಿಯುತ್ತದೆ.

ಪಾತ್ರಗಳ ಹೆಸರಿನ ಬಗ್ಗೆ ಹೇಳಲೇಬೇಕು. ರಮೇಶ, ಉಮೇಶ, ಗಣೇಶ ಎನ್ನುವಂತ ಹೆಸರುಗಳು ನಮ್ಮ ಕಲ್ಪನೆಗೆ ದಕ್ಕುವಷ್ಟು ವೇಗವಾಗಿ ಈ ಡುಮಿಂಗ, ಪಪೀತಾ, ಹಸ್ತಕ್ಷೇಪ, ಧಾವಂತ, ತಿತ್ಲಿ ಇಂತಹ ವಿಶಿಷ್ಟ ಹೆಸರುಗಳು ನೆನಪಿನಲ್ಲಿ ನಿಲ್ಲುತ್ತವಾ ಎಂಬ ಅನುಮಾನವಿತ್ತು. ವಿಚಿತ್ರ ನೋಡಿ, ಈ ಹೆಸರುಗಳಿಂದ ಪಾತ್ರಗಳ ವ್ಯಕ್ತಿತ್ವಗಳನ್ನು ಹೊಸದಾಗಿ ರೂಪಿಸಿಕೊಳ್ಳವ ಪ್ರಹಸನದಲ್ಲಿ ಇವು ಎಂದೂ ಮರೆಯದ ಹೆಸರುಗಳಾಗಿ ನಮ್ಮಲ್ಲಿ ಉಳಿದುಬಿಡಲಿವೆ! ಈ ಹಿಂದೆ ಬಳಸಿ ಸವಕಲಾದ ದಾರಿಯಲ್ಲಿ ಹೊಸ ಕಲ್ಪನೆಗಳ ಕದ ತಟ್ಟಿ ತಮಗೆ ಬೇಕಂತೆ ಪಾತ್ರ ಸೃಷ್ಟಿ ಮಾಡಿಕೊಳ್ಳಲೆಂದೇ ಲೇಖಕ ಹೊಸ ಹೆಸರಿಟ್ಟು ಓದುಗನ ಮೆದುಳಿಗೆ ಕೈಹಾಕಿದ್ದಾರಾ? ಗೊತ್ತಿಲ್ಲ!

ಕಥಾವಸ್ತು ಚೆನ್ನಾಗಿರುವ ಕೆಲವೊಂದು ಕತೆಗಳನ್ನು ಇನ್ನಷ್ಟು ವಿಸ್ತರಿಸಬಹುದಿತ್ತು. ಓದುವ ರುಚಿ ಹತ್ತುವಾಗಲೇ ಮುಗಿದು ಹೋದ ಕತೆಗಳಿಂದಾಗಿ ಲೇಖಕನ ಮೇಲೆ ರೇಗಿದ್ದುಂಟು. ಇದಕ್ಕಿಂತ ಹೆಚ್ಚಿಗೆ ಕಥೆಗಳ ಬಗ್ಗೆ ಹೇಳಲಾರೆ. ಹೇಳಲಾರೆ ಎನ್ನುವುದಕ್ಕಿಂತ ಹೇಳಲಾಗದ ಅಸಹಾಯಕತೆ ಇದು. ಮೇಲಾಗಿ ಕಥೆಗಳು ನನ್ನೊಂದಿಗೆ ಆಪ್ತ ಧ್ವನಿಯಲ್ಲಿ ಪಿಸುಗುಟ್ಟಿದ್ದನ್ನೇ ನಿಮ್ಮ ಕಿವಿಯಲ್ಲೂ ಉಸುರಬೇಕೆಂದೇನಿಲ್ಲವಲ್ಲ? ಯಾರಿಗೆ ಗೊತ್ತು ಈ ಕತೆಗಳು ನಿಮಗೆ ಬೇರೆಯದೇ ಕಥೆಗಳನ್ನು ಹೇಳಬಹುದು! ನೀವೇ ಓದಿ ಅವುಗಳನ್ನು ವಿಚಾರಿಸಿಕೊಳ್ಳಿ.

-ಕವಿತಾ ಭಟ್