ಡೆಂಗೆ ತಡೆಗೆ ಕಠಿಣ ಕ್ರಮ
ರಾಜ್ಯದಲ್ಲಿ ಮಳೆ ಬೆಳೆ ನೆಮ್ಮದಿ ಹೆಚ್ಚಿರುವ ಹೊತ್ತಿನಲ್ಲಿಯೇ ಡೆಂಗೆ ಜ್ವರದ ಹಾವಳಿ ಉಲ್ಬಣಿಸಿದೆ. ಸೋಮವಾರ ಒಂದೇ ದಿನ ೧೫೦ ಡೆಂಗೆ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ಧೃಢಪಟ್ಟಿರುವುದು ಆತಂಕಕಾರಿ ಸಂಗತಿ. ಸೊಳ್ಳೆಯಿಂದ ಹರಡುವ ಡೆಂಗೆ ಸೋಂಕು ಕುಟುಂಬಗಳ ನೆಮ್ಮದಿಯನ್ನೇ ಹಾಳುಗೆಡವುತ್ತಿದೆ. ಸೋಂಕು ಪೀಡಿತ ವ್ಯಕ್ತಿಯಲ್ಲಿ ಮೈಕೈ ನೋವು, ತಲೆ ನೋವು, ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ರಕ್ತಕಣಗಳ ಸಂಖ್ಯೆ ಕುಗ್ಗುತ್ತದೆ. ನಿರ್ಲಕ್ಷ್ಯ ತೋರಿದರೆ ಅಥವಾ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಕೂಡ ಸಂಭವಿಸುತ್ತದೆ. ಈ ಋತುವಿನಲ್ಲಿ ನೂರಾರು ಜನ ಡೆಂಗೆಗೆ ಬಲಿಯಾಗಿದ್ದೂ ಆಗಿದೆ. ಸಾವಿರಾರು ಮಂದಿ ಡೆಂಗೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯ ಇದೆ ನಿಜ. ಆದರೆ, ಗಂಭೀರ ಪ್ರಕರಣಗಳಲ್ಲಿ ಸರಕಾರಿ ಸವಲತ್ತು ಸಾಕಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯ. ಖಾಸಗಿ ಚಿಕಿತ್ಸೆ ದುಬಾರಿ. ಲಕ್ಷಾಂತರ ರೂ. ಪಾವತಿಸಬೇಕಾಗುತ್ತದೆ. ಎಲ್ಲರ ಬಳಿ ಆರೋಗ್ಯ ವಿಮೆ ಇರುವುದಿಲ್ಲ. ಸರಕಾರ ಒದಗಿಸಿರುವ ವಿಮೆ ಸೌಲಭ್ಯ ಎಲ್ಲರ ನೆಮ್ಮದಿಯನ್ನು ಕಾಯುತ್ತಿಲ್ಲ. ಇದರಿಂದ ಅನೇಕ ಕುಟುಂಬಗಳು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿವೆ. ಕೆಲವರು ಆಸ್ತಿಗಳನ್ನೇ ಮಾರಾಟ ಮಾಡಿ ಆಪ್ತರನ್ನು ಉಳಿಸಿಕೊಳ್ಳುವ ಹೋರಾಟ ನಡೆಸಿದ್ದಾರೆ.
ಇಷ್ಟೆಲ್ಲ ರಂಪಾಟವಾದರೂ ಸರಕಾರದಿಂದ ಡೆಂಗೆ ತಡೆಯುವ ಪ್ರಯತ್ನವೇನೂ ಆಗಿಲ್ಲವೇ? ಆಗಿದೆ ನಿಜ, ಮೇಲ್ಮಟ್ಟದ ಬಹಳಷ್ಟು ಕ್ರಮಗಳು ಚಾಲ್ತಿಯಲ್ಲಿವೆ. ಔಷಧ ಸಿಂಪರಣೆ ಮೂಲಕ ಸೊಳ್ಳೆ ನಾಶ ಪಡಿಸುವುದು, ಗುಂಡಿ ಗಟಾರ ಸ್ವಚ್ಛ ಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಬಂಧ ಪಟ್ಟ ಇಲಾಖೆಗಳು ತಕ್ಕಮಟ್ಟಿಗೆ ಮಾಡಿವೆ. ಇವಿಷ್ಟರಿಂದಲೇ ಹಾವಳಿ ನಿಯಂತ್ರಣ ಸಾಧ್ಯವಾಗಿಲ್ಲ. ಹಾಗಾಗಿ ಸರಕಾರ ಈಗ ಡೆಂಗೆಯನ್ನು ‘ಸಾಂಕ್ರಾಮಿಕ ರೋಗ'ಎಂದು ಘೋಷಣೆ ಮಾಡಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ - ೨೦೨೦ಕ್ಕೆ ಸೂಕ್ತ ತಿದ್ದುಪಡಿ ತರುವ ಇಂಗಿತವನ್ನು ವ್ಯಕ್ತಪಡಿಸಿದೆ. ಇದು ಸರಿಯಾದ ಕ್ರಮ.
ಸದ್ಯದ ಸ್ಥಿತಿ ಪರಿಶೀಲಿಸಿದರೆ, ಕೊರೊನಾ ನಿಯಂತ್ರಣ ಮಾದರಿ ಕ್ರಮಗಳನ್ನೇ ಡೆಂಗೆ ನಿಗ್ರಹಕ್ಕೂ ಅನುಸರಿಸಬೇಕಾದ ಅಗತ್ಯ ಇದೆ. ಸಾಂಕ್ರಾಮಿಕ ರೋಗವೆಂದು ಘೋಷಣೆ ಮಾಡಿರುವುದರಿಂದ ಒಂದಷ್ಟು ಬಿಗಿಕ್ರಮಗಳು ತ್ವರಿತವಾಗಿ ಜಾರಿಯಾಗುವ ನಿರೀಕ್ಷೆ ಇದೆ. ಜಮೀನು, ಕಟ್ಟಡ, ನೀರಿನ ತೊಟ್ಟಿ, ಉದ್ಯಾನವನ, ಆಟದ ಮೈದಾನ ಅಥವಾ ಯಾವುದೇ ಇತರ ಸ್ಥಳದ ಉಸ್ತುವಾರಿ ವಹಿಸಿರುವ ಪ್ರತಿಯೊಬ್ಬ ಮಾಲೀಕರು, ಬಿಲ್ಡರ್, ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೇಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಟ್ಯಾಂಕ್ ಗಳು, ಹೊಂಡಗಳು ಅಥವಾ ನೀರು ನಿಲ್ಲಬಹುದಾದ ಸ್ಥಳಗಳನ್ನು ಸೂಕ್ತ ರೀತಿಯಲ್ಲಿ ನಿರ್ವಗಿಸುವುದನ್ನು ಸರಕಾರ ಕಡ್ಡಾಯಗೊಳಿಸಿದೆ. ಈ ನಿಯಮ ಮೀರುವವರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ಸರಕಾರ ನೀಡಿದೆ. ಇದೆಲ್ಲವೂ ಅಪೇಕ್ಷಿತವೇ ಆಗಿದ್ದು ಜನರು ಕೂಡ ಈ ಜವಾಬ್ದಾರಿಗೆ ಹೆಗಲು ನೀಡಬೇಕಿದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೪-೦೯-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ