ಡೆಂಗ್ಯೂ ಜ್ವರವನ್ನು ಎದುರಿಸುವುದು ಹೇಗೆ?

ಡೆಂಗ್ಯೂ ಜ್ವರವನ್ನು ಎದುರಿಸುವುದು ಹೇಗೆ?

ಕಳೆದ ವಾರ ನೈಸರ್ಗಿಕ ವಿಧಾನಗಳಾದ ಮನೆಮದ್ದುಗಳಿಂದ ಮಳೆಗಾಲದಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳಿಂದ ಪರಿಹಾರಗಳನ್ನು ಪಡೆದುಕೊಳ್ಳುವುದು ಹೇಗೆ? ಎನ್ನುವುದನ್ನು ತಿಳಿಸಿಕೊಟ್ಟಿದ್ದೆವು. ಇತ್ತೀಚೆಗೆ ಮಲೇರಿಯಾ, ಚಿಕುನ್ ಗುನ್ಯಾ ಮುಂತಾದ ಜ್ವರಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಜ್ವರ ಬಂದು ಹೋದ ಬಳಿಕ ಪ್ರಾರಂಭವಾಗುವ ನಿತ್ರಾಣವು ನಮ್ಮ ರಕ್ತದಲ್ಲಿನ ಪ್ಲೇಟ್ ಲೆಟ್ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಲಕ್ಷಣವಾಗಿರುತ್ತದೆ. ಇದರ ಜೊತೆ ಉಸಿರಾಟದ ತೊಂದರೆ, ಕೈಕಾಲು ನೋವುಗಳೂ ಕಾಣಿಸುವ ಸಂಭವ ಇದೆ.

ಆದುದರಿಂದ ಈ ಜ್ವರದ ಲಕ್ಷಣಗಳು ಕಾಣಿಸುತ್ತಲೇ ಕೂಡಲೇ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಹಾಗೂ ಸಾಕಷ್ಟು ವಿಶ್ರಾಂತಿ ಪಡೆಯುವ ಮೂಲಕ ಈ ಡೆಂಗ್ಯೂ ಜ್ವರದ ಮೇಲೆ ನಿಯಂತ್ರಣವನ್ನು ಸಾಧಿಸಬಹುದು. ಕೆಲವು ಮುನ್ನೆಚ್ಚರಿಕೆಯ ಜೊತೆಗೆ ಒಂದಿಷ್ಟು ಆಹಾರ ನಿಯಂತ್ರಣವನ್ನು ಪಾಲಿಸಿದರೆ ಜ್ವರದ ಪರಿಣಾಮಗಳಿಂದ ಬೇಗನೇ ಗುಣಮುಖವಾಗಬಹುದು.

ಡೆಂಗ್ಯೂ ಜ್ವರ ಬಂದಾಗ ನಮ್ಮ ದೇಹದಲ್ಲಿ ನೀರಿನ ಕೊರತೆಯುಂಟಾಗುತ್ತದೆ. ಇದಕ್ಕಾಗಿ ದಿನವಿಡೀ ಪದೇ ಪದೆ ದ್ರವಾಹಾರವನ್ನು ಸೇವಿಸುವುದು ಉತ್ತಮ. ಎಳನೀರು, ತಾಜಾ ಹಣ್ಣಿನ ರಸ, ಓ ಆರ್ ಎಸ್ ಮೊದಲಾದುವುಗಳನ್ನು ಸೇವಿಸಿ. ಉಗುರು ಬೆಚ್ಚಗಿನ ನೀರನ್ನು ಆಗಾಗ ಕುಡಿಯಿರಿ. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿದಂತೆ ನಮ್ಮ ಶರೀರದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ. ಈ ಮೂಲಕ ದೇಹದಲ್ಲಿರುವ ವೈರಸ್ ಗಳೂ ಮೂತ್ರದ ಮೂಲಕ ಹೊರ ಹೋಗುತ್ತವೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ಹೀಗೆ ನಮ್ಮ ದೇಹದಲ್ಲಿ ವೈರಸ್ ಪ್ರಮಾಣ ಕಡಿಮೆಯಾದರೆ ಜ್ವರವೂ ಬೇಗನೇ ಇಳಿಯುತ್ತದೆ. 

ಡೆಂಗ್ಯೂ ಜ್ವರ ಬಂದಾಗ ದೇಹದಲ್ಲಿ ಪ್ರತಿರೋಧ ಶಕ್ತಿ ಬಹಳ ಕಡಿಮೆಯಾಗುತ್ತದೆ. ಈ ಕಳೆದುಕೊಂಡ ಶಕ್ತಿಯನ್ನು ಮತ್ತೆ ಪಡೆದುಕೊಳ್ಳಲು ಶರೀರಕ್ಕೆ ಪೋಷಕಾಂಶ ಭರಿತ ಆಹಾರದ ಅವಶ್ಯಕತೆ ಇದೆ. ಅದಕ್ಕಾಗಿ ತಾಜಾ ಹಣ್ಣುಗಳು ಮುಖ್ಯವಾಗಿ ಕೀವಿ ಹಣ್ಣು, ಬಾಳೆ ಹಣ್ಣು, ಸೇಬು, ಬೇಯಿಸಿದ ಬೇಳೆ, ಸೊಪ್ಪು ತರಕಾರಿಗಳನ್ನು ತಿನ್ನಿರಿ. ರೋಗಿ ಬಯಸಿದ ಆಹಾರವನ್ನು ಸ್ವಲ್ಪ ಹೆಚ್ಚಿನ ಮಟ್ಟಿಗೆ ನೀಡುವುದು ಉತ್ತಮ. ಇದರಿಂದ ದೇಹದಲ್ಲಿ ಲವಲವಿಕೆ ಕಂಡು ಬರುತ್ತದೆ. ಮುಖ್ಯವಾಗಿ ಈ ಸಮಯದಲ್ಲಿ ಎಣ್ಣೆಯ ತಿಂಡಿಗಳನ್ನು ತಿನ್ನಬಾರದು. ಕರಿದ, ಹುರಿದ ಯಾವುದೇ ತಿಂಡಿಗಳನ್ನು ತಿನ್ನಬೇಡಿ. ತುಂಬಾ ಖಾರವಾದ ಆಹಾರವನ್ನು ಸೇವಿಸಬೇಡಿ. ಇದರಿಂದ ರೋಗಿಯ ಯಕೃತ್ತಿನ (ಲಿವರ್) ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. 

ಡೆಂಗ್ಯೂ ರೋಗಿಯ ರಕ್ತದಲ್ಲಿ ಪ್ಲೇಟ್ ಲೆಟ್ ಗಳ ಸಂಖ್ಯೆ ಕಡಿಮೆ ಇರುವುದರಿಂದ ಸಹಜವಾಗಿ ಆತ ದುರ್ಬಲನಾಗಿರುತ್ತಾನೆ. ಈ ಕಾರಣದಿಂದ ಹಲ್ಲು ಉಜ್ಜುವಾಗ ತುಂಬಾ ರಭಸವಾಗಿ ಹಲ್ಲನ್ನು ಉಜ್ಜಬೇಡಿ. ವಸಡುಗಳು ದುರ್ಬಲವಾಗಿರುವ ಕಾರಣದಿಂದ ಹಲ್ಲುಗಳಲ್ಲಿ ಮತ್ತು ವಸಡಿನಲ್ಲಿ ನೋವು ಪ್ರಾರಂಭವಾಗಬಹುದು. ಪ್ಲೇಟ್ ಲೆಟ್ ಗಳು ನಮ್ಮ ದೇಹದಲ್ಲಾಗುವ ರಕ್ತಸ್ರಾವವನ್ನು ತಡೆಗಟ್ಟುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುವುದು. ಆದರೆ ಡೆಂಗ್ಯೂ ಜ್ವರ ಬಂದ ಸಮಯದಲ್ಲಿ ಇವುಗಳ ಸಂಖ್ಯೆ ಕಡಿಮೆಯಾಗುವುದರಿಂದ ರಭಸದಿಂದ ಹಲ್ಲು ಉಜ್ಜುವುದರಿಂದ ಬಾಯಿಯಲ್ಲಿ ರಕ್ತಸ್ರಾವವಾಗಬಹುದು. ಬಹಳ ಸಮಯಗಳ ಕಾಲ ಅದು ಹೆಪ್ಪುಗಟ್ಟದೇ ರೋಗಿಗೆ ಇನ್ನಷ್ಟು ನಿತ್ರಾಣವಾಗಬಹುದು. ಈ ಸಮಯದಲ್ಲಿ ಬ್ರಷ್ ಬಳಸದೇ ಕೈಬೆರಳಿನಿಂದಲೇ ಹಲ್ಲುಗಳನ್ನು ನಿಧಾನವಾಗಿ ಉಜ್ಜಿ ಅಥವಾ ಮೌತ್ ಫ್ರೆಷ್ ಬಳಸಿ ಬಾಯಿಯನ್ನು ಮುಕ್ಕಳಿಸಿ. 

ಡೆಂಗ್ಯೂ ಜ್ವರಕ್ಕೆ ನೈಸರ್ಗಿಕವಾದ ಆಹಾರವೇ ಬಹಳ ಉತ್ತಮ. ಬೇವಿನ ಎಲೆ, ಪಪ್ಪಾಯಿ ಎಲೆಯ ರಸಗಳು ಉತ್ತಮ ರೋಗ ನಿವಾರಕಗಳು. ಬೇವಿನ ಎಲೆಗಳಲ್ಲಿ ಬಹಳ ಪ್ರಭಾವಶಾಲಿಯಾದ ಗುಣಗಳಿವೆ ಮತ್ತು ಇವುಗಳು ವೈರಸ್ಸನ್ನು ಕೊಲ್ಲಲು ನೆರವಾಗುತ್ತವೆ. ದೇಹದಲ್ಲಿ ವೈರಸ್ಸುಗಳು ವೃದ್ಧಿಯಾಗುವುದನ್ನು ತಡೆಯುತ್ತದೆ. ಒಂದು ಪಾತ್ರೆಯಲ್ಲಿ ನೀರು ಹಾಕಿ ಸ್ವಲ್ಪ ಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಹೊತ್ತು ತೋಯಿಸಿ ಬಳಿಕ ಚೆನ್ನಾಗಿ ಕುದಿಸಿರಿ. ಈ ನೀರನ್ನು ತಣಿಸಿ ಉಗುರುಬೆಚ್ಚಗೆ ಹಂತಕ್ಕೆ ಬಂದಾಗ ಸೋಸಿ ಆ ನೀರನ್ನು ಕುಡಿಯಿರಿ. ಇದು ರಕ್ತದಲ್ಲಿರುವ ಪ್ಲೇಟ್ ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಬೇವಿನ ಎಲೆಯ ಬದಲು ಪಪ್ಪಾಯಿ ಎಲೆ, ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ತುಳಸಿ ಎಲೆಗಳನ್ನು ಬಳಸಬಹುದು. ಇವುಗಳೂ ಸಹಾ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಈ ಅಂಶಗಳ ಜೊತೆ ಕಾಲಕಾಲಕ್ಕೆ ತಜ್ಞ ವೈದ್ಯರು ನೀಡುವ ಸಲಹೆಗಳನ್ನೂ ತಪ್ಪದೇ ಪಾಲಿಸಬೇಕು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ