ಡೇಟಿಂಗ್ ಎಂಬ ಟ್ರೆಂಡ್

ಡೇಟಿಂಗ್ ಎಂಬ ಟ್ರೆಂಡ್

ಬರಹ

"ನನ್ನ ಜೊತೆ ಡೇಟಿಂಗ್ ಮಾಡ್ತೀಯಾ?" ಅಂತ ಯಾವುದೇ ಮುಲಾಜಿಲ್ಲದೇ ಕೇಳುವ ಯುವಕ ಯುವತಿಯರು ನಮ್ಮ ಅಸುಪಾಸಿನಲ್ಲಿಯೇ ಸಾಕಷ್ಟು ಇದ್ದಾರೆ ಎಂಬ ವಿಷಯವನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಿದರೂ ಇದು ಸತ್ಯವೇ. ಇದೀಗ ಹುಡುಗರಿಗಿಂತ ಹುಡುಗಿಯರೇ ಡೇಟಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಹೇಳಬಹುದು. ಮೆಟ್ರೋ ನಗರಗಳಲ್ಲಂತೂ ಡೇಟಿಂಗ್ ಅನ್ನುವುದು "ಫ್ಯಾಷನ್" ಆಗಿ ಬಿಟ್ಟಿದೆ. ಕಾಲೇಜು ಕ್ಯಾಂಪಸ್‌ಗಳಿಂದ ಆರಂಭವಾಗುವ ಈ 'ಕಲೆ'ಯು ಕಚೇರಿಗಳ ಕ್ಯಾಬಿನ್‌ಗೂ, ಸಿನಿಮಾ ಮಾಧ್ಯಮಗಳ ಪ್ರಭಾವದಿಂದಾಗಿ ಮೆಟ್ರೋ ನಾಗರಿಕತೆಯ ಭಾಗ ಎಂದೆನಿಸಿಕೊಳ್ಳುವಷ್ಟು ವ್ಯಾಪಿಸಿಕೊಂಡಿದೆ. ಅದೇ ವೇಳೆ ಪ್ರೀತಿ, ಪ್ರಣಯದ ಮುಂದಿನ ಹಂತವಾಗುವ ವಿವಾಹ, ಅನಂತರದ ಲೈಂಗಿಕ ಜೀವನ ಇವೆಲ್ಲಾ ಇಂದು ಕಟ್ಟುಕತೆಗಳಾಗಿ ಮಾರ್ಪಾಡು ಹೊಂದುವ ಹಂತದಲ್ಲಿದೆ.

ತಮ್ಮ ಸಂಗಾತಿಯನ್ನು ಪರಸ್ಪರ ಅರಿತುಕೊಳ್ಳಲು ಡೇಟಿಂಗ್ ಸಹಕಾರಿ ಎಂದು ಇಂದಿನ ಯುವಜನಾಂಗ ಇದಕ್ಕೆ ವಿವರಣೆ ನೀಡುತ್ತದೆಯಾದರೂ ಪ್ರಸಕ್ತ, ಈ ಡೇಟಿಂಗ್ ಯಾವ ಹಂತಕ್ಕೆ ತಲುಪುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದ ಸಂಗತಿ. ಪರಸ್ಪರ ಪರಿಚಯ, ಆಸಕ್ತಿಗಳನ್ನು ಹಂಚಿಕೊಳ್ಳಲು ಮುಕ್ತ ವಾತಾವರಣವನ್ನು ಕಲ್ಪಿಸಿಕೊಡುವ ಡೇಟಿಂಗ್ ಇದೀಗ ಅರ್ಥ ಕಳೆದುಕೊಂಡು ಬರುತ್ತಿದೆ ಎಂದೇ ಹೇಳಬಹುದು. ಐಸ್‌ಕ್ರೀಂ ಮೆಲ್ಲುತ್ತಾ ಆರಂಭವಾಗುವ ಫಸ್ಟ್ ಡೇಟ್ ನಂತರ ಹಾಸಿಗೆಯತ್ತ ತಲುಪುತ್ತದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಇಂಟರ್ನೆಟ್ ಚಾಟ್‌‌, ಮೊಬೈಲ್ ಚಾಟ್‌ನಿಂದ ಆರಂಭವಾಗುವ ಡೇಟಿಂಗ್‌ಗಳ ಸಂಖ್ಯೆಯಲ್ಲಿಯೂ ಅತೀವ ವೃದ್ಧಿ ಕಂಡುಬಂದಿದೆ. ಆದರೆ ಇದೆಲ್ಲಾ ಸರ್ವೇಸಾಮಾನ್ಯವೆಂಬಂತಿರುವ ನಗರದ ಜೀವನ ಶೈಲಿ, ಡೇಟಿಂಗ್‌ಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ. ದೈನಂದಿನ ಜೀವನದಲ್ಲುಂಟಾಗುವ ಬದಲಾವಣೆಗಳು, ಕೆಲಸದ ಒತ್ತಡ, ಏಕಾಂಗಿತನ, ಮಾಧ್ಯಮಗಳ ಪ್ರಭಾವ ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆ ಇವೇ ಮೊದಲಾದವುಗಳು ಭಾರತೀಯ ಸಂಸ್ಕೃತಿಯ ಮೇಲೆ ಅದೆಷ್ಟು ಪ್ರಭಾವ ಬೀರಿದೆಯೆಂದರೆ ಯಾರ ಎದುರಲ್ಲಿಯೂ "ಐ ಡೋಂಟ್ ಕೇರ್" ಎಂದು ಹೇಳಲು ನಮ್ಮ ಯುವಕ ಯುವತಿಯರು ಯಾವುದೇ ಮುಜುಗರವನ್ನು ತೋರಿಸುವುದಿಲ್ಲ.

ಪ್ರೇಮ ಪವಿತ್ರ, ಸುಮಧುರ ಸಂಬಂಧ ಎಂದು ಹೇಳಿದರೂ, ಪ್ರೇಮದ ಅತಿರೇಕಕ್ಕೆ ತಲುಪಿದ ಪ್ರೇಮಿಗಳು ಸಂಬಂಧವನ್ನು ಸುದೃಢ ಪಡಿಸಲು ಅಥವಾ ನಾನು ನಿನ್ನನ್ನು ಅದೆಷ್ಟು ಪ್ರೀತಿಸುತ್ತೇನೆ ಎಂಬುದನ್ನು ತೋರಿಸುವ ನೆಪದಲ್ಲಿ ಸರ್ವಸ್ವವನ್ನೂ ಪ್ರೇಮಿಗೆ ಒಪ್ಪಿಸುತ್ತಾರೆ. ಇಂತಹಾ ಪ್ರೇಮ(ಕಾಮ) ನಾಟಕದಲ್ಲಿ ಸೋಲುವವರು ಹೆಣ್ಣು ಮಕ್ಕಳೇ..ಆಮೇಲೆ ಕಣ್ಣೀರಿಟ್ಟು ಏನು ಪ್ರಯೋಜನ? ಹೋದ ಮಾನ ತಿರುಗಿ ಬರುವುದೇ? ಇಂತಹ ಘಟನೆಗಳು ಒಂದು ಕಡೆಯಾದರೆ ಇತ್ತ ಯಾವುದೇ ನಾಚಿಕೆಯಿಲ್ಲದೆ "Just for Fun" ಎಂದು ಮೈಕೆಡವಿ ಬೀಗುವವರನ್ನೂ ಕಾಣಬಹುದು. ತಮ್ಮ ಜೀವನವೂ ಸಿನಿಮೀಯ ರೀತಿಯಲ್ಲಾಗಿರಬೇಕೆಂಬ ಬಯಕೆಯ ಗತ್ತಿನಲ್ಲಿ ನಡೆಯುವ ಈ ಯುವಕ ಯುವತಿಯರ ಮುಂದೆ ನಮ್ಮ ಹಳೇ ಸಿನಿಮಾಗಳ ನಾಯಕ ನಾಯಕಿಯರ ಪ್ರೇಮಕಥಾನಕಗಳು ಬರೀ ಬೇಜಾರು ಎನಿಸುತ್ತದೆ. ಇಂದು ಅಂತಹ ಕಥಾ ಪಾತ್ರಗಳು, ಸನ್ನಿವೇಶಗಳು ನಮಗೆ ಹಾಸ್ಯ ಪಾತ್ರಗಳಂತೆ ಭಾಸವಾಗುತ್ತವೆ. ಪ್ರಸ್ತುತ, ಏಕದಿನ ಪಂದ್ಯಗಳಂತೆ ಅಲ್ಪಕಾಲಾವಧಿಯ ಸ್ನೇಹ- ಸಂಬಂಧಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ.

ಇನ್ನೂ ಕೆಲವರಿಗೆ ವಿವಾಹದ ಮೊದಲು ಎಲ್ಲಾ ಕಾರ್ಯಗಳನ್ನು ಸರಿಯಾಗಿ ಅರಿತು 'ಪ್ರಮಾಣ ಪತ್ರ' ಪಡೆಯಬೇಕೆಂಬ ಹಂಬಲ. ತಾನು ಪ್ರೇಮಿಸಿದ ಹುಡುಗ/ಹುಡುಗಿಯನ್ನು ಮದುವೆಯಾಗಲು ಸಾಧ್ಯವಿಲ್ಲದಿದ್ದರೂ ಸರಿ, ಅವನು/ ಅವಳೊಂದಿಗೆ ಅಲ್ಪ ಸುಖವನ್ನಾದರೂ ಅನುಭವಿಸಬೇಕು ಎಂಬ ಕಾತುರ. ತನ್ನನ್ನು ಈವರೆಗೆ ಪ್ರೇಮಿಸಿದನಲ್ಲಾ ಅವನಿಗಾಗಿ ಸ್ವಲ್ಪ ಕಾಲ ಸುಖ ಕೊಡುವುದು/ ಪಡೆಯುವುದರಲ್ಲಿ ತಪ್ಪೇನಿದೆ? ಎಂದು ಚಿಂತಿಸುವ ಇನ್ನು ಕೆಲವರು...ಹೀಗೆ ಡೇಟಿಂಗ್ ವಿಶೇಷಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸದ್ಯ, ಇದೀಗ ಭಾರತದಲ್ಲಿ ಪಾಶ್ಚಾತ್ಯರ ಅನುಕರಣೆ, ಅವರ ಆಚಾರಗಳನ್ನು ಮೈಗೂಡಿಸಿಕೊಂಡಿರುವ ಯುವಜನಾಂಗವು ಪಾಶ್ಚಾತ್ಯರಿಗಿಂತ ತಾವೇನು ಕಡಿಮೆಯಿಲ್ಲ ಅನ್ನುವಷ್ಟರ ಮಟ್ಟಿಗೆ ಬೆಳೆದು ಬಂದಿದೆ.

ಅದೇ ವೇಳೆ, ಕುಟುಂಬ ಸಂಪ್ರದಾಯಗಳ ಬಗ್ಗೆ ಎಳ್ಳಷ್ಟೂ ಅರಿಯದ, ಅಥವಾ ನವಯುಗಕ್ಕೆ ಸವಾಲಾಗಿ ನಿಂತಿರುವ ಯುವಕ ಯುವತಿಯರಿಗೆ ಇದೊಂದು "ಥ್ರಿಲ್" ಅಂತ ಅನಿಸಬಹುದು. ಸಂಪತ್ತಿನಲ್ಲಿ ಮೆರೆಯುವ ಯುವಜನಾಂಗದ ಈ 'FUN'ಗೆ ಬಲಿಯಾದ ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳು!! ಬೆಳಕು ಕಾಣುವ ಮುನ್ನವೇ ಸಾವಿಗೆ ತಳ್ಳಲ್ಪಟ್ಟ ಕಂದಮ್ಮಗಳ ಸಂಖ್ಯೆಯೆಷ್ಟು? ಆತ್ಮಹತ್ಯೆಗಳೆಷ್ಟು? ಇದೆನ್ನೆಲ್ಲಾ ಯೋಚಿಸುವಾಗ "ಅಯ್ಯೋ ಪಾಪ!" ಎಂದೆನಿಸಿದರೂ ಡೇಟಿಂಗ್ ಬಗ್ಗೆ ಮತ್ತಷ್ಟು ಪ್ರಚಾರ ನೀಡುವ ಮಾಧ್ಯಮಗಳು, "ಡೇಟ್... ಇದೆಲ್ಲಾ ಸರ್ವೇ ಸಾಮಾನ್ಯ" ಎಂದು ಬೀಗುತ್ತಾ ನಡೆಯುವ ನಟ ನಟಿಯರು, ಅವರನ್ನು ಅನುಕರಿಸಿ ಹೊಂಡಕ್ಕೆ ಬೀಳುವ ಯುವ ಜನಾಂಗ "ಬುದ್ದಿವಂತ ತಲೆತಿರುಕರಂತೆ" ವರ್ತಿಸುತ್ತಿಲ್ಲವೇ? ಇಂತಹವುಗಳಿಂದಾಗಿಯೇ ವಿವಾಹ- ಕುಟುಂಬ ಸಂಬಂಧಗಳಲ್ಲಿ ಬಿರುಕು ಮೂಡತೊಡಗಿದೆ.ಪರಿಣಾಮವಾಗಿ ವಿವಾಹಗಳಿಗಿಂತ ವಿಚ್ಛೇದನಗಳ ಸಂಖ್ಯೆ ಅಧಿಕವಾಗುತ್ತಿವೆ. ಸಂಬಂಧಗಳು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿವೆ. ಜೀವನ, ಕುಟುಂಬ ವ್ಯವಸ್ಥೆಗಳು ಚಿಂತೆಯ ಗೂಡಾಗಿ ಪರಿಣಮಿಸಿದೆ!

ಇಂತಿರುವಾಗ ಹಿರಿಯರು ಹೇಳುವ ಉಪದೇಶಗಳಿಗೆ ಕಿವಿಗೊಡದೆ "its my life" ಎಂದು ಮನಸೋ ಇಚ್ಛೆ ಮಜಾ ಮಾಡುವ ಯುವಜನಾಂಗಕ್ಕೆ ತನ್ನ ತಪ್ಪುಗಳು ಅರಿವಿಗೆ ಬರುವಾಗ ಕಾಲ ಮೀರಿರುತ್ತದೆ!. ಇನ್ನೂ ಕೆಲವು ಮಾತಾಪಿತರಂತೂ ಮಕ್ಕಳ ಎಲ್ಲಾ ಇಚ್ಛೆಗಳಿಗೂ "ಗ್ರೀನ್ ಸಿಗ್ನಲ್" ತೋರಿಸಿ ಅವರ ದಾರಿ ತಪ್ಪುವಂತೆ ಮಾಡುತ್ತಾರೆ. ಇಲ್ಲಿ ಯಾರನ್ನು ದೂಷಿಸಲಿ? ಎಲ್ಲವೂ ಕಾಲದ ಲೀಲೆ ಎಂದು ಕೈಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ!. ಅಂತೂ ಒಟ್ಟಿನಲ್ಲಿ ಬಾಯ್‌ಫ್ರೆಂಡ್, ಗರ್ಲ್ ಫ್ರೆಂಡ್, ಡೇಟಿಂಗ್ ಎಲ್ಲವೂ ನವಯುಗದ ಟ್ರೆಂಡ್... ಏನಂತೀರಿ?