ಡೈನೋಸಾರ್ ಗಳು ನಾಶವಾಗದೇ ಇದ್ದಿದ್ದರೆ...?! (ಭಾಗ ೨)

ಡೈನೋಸಾರ್ ಗಳು ನಾಶವಾಗದೇ ಇದ್ದಿದ್ದರೆ...?! (ಭಾಗ ೨)

ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವಿಕೆಯಿಂದ ಡೈನೋಸಾರ್ ಗಳ ಅಳಿಯುವಿಕೆ ಆಯಿತು ಎಂಬುದೇನೋ ನಿಜವಿರಬಹುದು. ಆದರೆ ಒಂದೊಮ್ಮೆ ಈ ಕ್ಷುದ್ರಗ್ರಹ ಸ್ವಲ್ಪ ತಡವಾಗಿ ಭೂಮಿಗೆ ಅಪ್ಪಳಿಸಿದಿದ್ದರೆ, ಏನಾಗುತ್ತಿತ್ತು? ಈ ಕ್ಷುದ್ರಗ್ರಹದ ಪಥ ಭೂಮಿಯ ಕಕ್ಷೆಯನ್ನು ಸಮೀಪಿಸುವಲ್ಲಿ ಒಂದಿಷ್ಟು ಸಮಯ ತಡವಾಗಿದ್ದರೆ ಅದು ಭೂಮಿಯ ಗುರುತ್ವಕ್ಕೆ ಒಳಗಾಗುವಷ್ಟು ಸಮೀಪಕ್ಕೆ ಬಾರದೇ, ತನ್ನ ಪಾಡಿಗೆ ಸಾಗಿ ಹೋಗುತ್ತಿತ್ತು. ಅನಾಹುತಗಳೂ ಆಗುತ್ತಿರಲಿಲ್ಲ. ಭೂಮಿಯ ಮೇಲಿನ ಸಕಲ ಜೀವ ಜಂತುಗಳ ಜೀವನವೂ ತನ್ನ ಪಾಡಿಗೆ ನಡೆದುಕೊಂಡಿರುತ್ತಿತ್ತು. ಆದರೆ ಆಗುವುದನ್ನು ತಡೆಯಲು ಸಾಧ್ಯವಿಲ್ಲ.

ಒಂದೊಮ್ಮೆ ಸ್ವಲ್ಪ ಬದಲಾದ ಸಮಯದಲ್ಲಿ ಕ್ಷುದ್ರಗ್ರಹ ಸಮುದ್ರಕ್ಕೆ ಅಪ್ಪಳಿಸಿದಿದ್ದರೆ ಧೂಳು ಮತ್ತು ಬೂದಿ ಭೂಮಂಡಲವನ್ನು ಆವರಿಸುತ್ತಿರಲಿಲ್ಲ. ಆಗ ಭೂಮಿಯ ಮೇಲಿನ ಸಸ್ಯಗಳಿಗೆ ತಮ್ಮ ಆಹಾರ ವ್ಯವಸ್ಥೆಯನ್ನು ಸೂರ್ಯನಿಂದ ಪಡೆದುಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಭೂಮಿಯ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಆಹಾರ ಸರಪಳಿ ತುಂಡಾಗುತ್ತಿರಲಿಲ್ಲ. ಸಮುದ್ರದ ಆಳದಲ್ಲಿ ದೈತ್ಯ ಅಲೆಗಳು ಎದ್ದು ಅಲ್ಲಿರುವ ಜೀವ ಜಾಲಕ್ಕೆ ತೊಂದರೆಯಾಗುತ್ತಿತ್ತು. ಆದರೆ ಈ ಮಟ್ಟಿಗೆ ಸಾಮೂಹಿಕ ಜೀವ ಜಂತುಗಳ ಅಳಿಯುವಿಕೆ ಆಗುತ್ತಿರಲಿಲ್ಲ ಎಂಬುವುದು ಸಂಶೋಧಕರ ಮಾತು.

ಹೀಗೆ ಆಗಿದ್ದರೆ ಡೈನೋಸಾರ್ ಗಳ ಸಾಮ್ರಾಜ್ಯವೂ ಅಂತ್ಯವಾಗದೇ ನಿರಾತಂಕವಾಗಿ ಭೂಮಿಯ ಮೇಲೆ ರಾಜ್ಯಭಾರ ಮಾಡುತ್ತಿತ್ತು. ಸಸ್ಯಹಾರಿ ಡೈನೋಸಾರ್ ಜೊತೆಗೆ ಮಾಂಸಹಾರಿ ಡೈನೋಸಾರ್ ಗಳೂ ಬದುಕಿ ಉಳಿಯುತ್ತಿದ್ದವು. ಮಧ್ಯಜೀವಯುಗದಲ್ಲಿ ಜೀವಿಸುತ್ತಿದ್ದ ಸಸ್ತನಿಗಳು ಕೀಟಭಕ್ಷಕಗಳಾಗಿದ್ದರೂ ಡೈನೋಸಾರ್ ಗಳಿಗೆ ಆಹಾರವಾಗಿಯೇ ಇದ್ದವಾದ್ದರಿಂದ ತಮ್ಮದೇ ಪ್ರಾಬಲ್ಯ ಕಂಡುಕೊಳ್ಳಲು ಅವುಗಳಿಗೆ ಅಸಾಧ್ಯವಾಗಿತ್ತು. 

ಆದರೆ ಡೈನೋಸಾರ್ ಗಳ ನಿರ್ಗಮನದಿಂದಾಗಿ ತಮ್ಮನ್ನು ಬೇಟೆಯಾಡಿ ತಿನ್ನುವ ಜೀವಿಗಳು ಇಲ್ಲದೇ ಇದ್ದುದರಿಂದ ಸಸ್ತನಿಗಳು ನಿಧಾನವಾಗಿ ವಿಕಾಸವಾಗುತ್ತಾ ಹೋದವು. ತಮ್ಮ ಜೀವನ ಶೈಲಿ ಮತ್ತು ಬದುಕುವ ಪರಿಸರಕ್ಕೆ ಹೊಂದಿಕೊಳ್ಳುವ ಗುಣಗಳಿಂದಾಗಿ ಸ್ತನಿಗಳು ಭೂಮಂಡಲದ ಎಲ್ಲೆಡೆ ಹರಡಿ ಬದುಕಲಾರಂಬಿಸಿದವು. ನಿಧಾನವಾಗಿ ಮಾನವ ರೂಪಿ ಜೀವಿಗಳೂ ಉಗಮವಾದ ಕಾರಣ ಎಲ್ಲವೂ ಹತೋಟಿಗೆ ಬರತೊಡಗಿದವು. ಬೃಹತ್ ಗಾತ್ರದ ಡೈನೋಸಾರ್ ಗಳು ನಮ್ಮಿಂದ ದೂರವಾಗಿದ್ದರೂ ಇಂದಿಗೂ ನಮ್ಮ ನಡುವೆ ಕಾಣಸಿಗುವ ಮೊಸಳೆ, ಹಲ್ಲಿ, ಆಮೆ ಮತ್ತು ಕೆಲವೊಂದು ಹಕ್ಕಿಗಳು ಡೈನೋಸಾರ್ ಗಳ ದೂರದ ಸಂಬಂಧಿಗಳು ಎನ್ನಬಹುದು. ಕ್ಷುದ್ರಗ್ರಹಗಳ ಅಪ್ಪಳಿಸುವಿಕೆಯಿಂದಾಗಿ ಅವುಗಳ ರೂಪ, ಗಾತ್ರದಲ್ಲಿ ವ್ಯತ್ಯಾಸವಾಗಿರುವ ಸಾಧ್ಯತೆಗಳಿಂದಾಗಿ ಅವು ಬೃಹತ್ ಗಾತ್ರಕ್ಕೆ ವಿಕಾಸವಾಗಿರಲಿಕ್ಕಿಲ್ಲ. ಕ್ಷುದ್ರಗ್ರಹ ಅಪ್ಪಳಿಸದೇ ಇದ್ದಿದ್ದರೆ ಇಂದಿನ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು.

ಇನ್ನೊಂದು ಕುತೂಹಲಕಾರಿ ವಿಷಯವನ್ನು ನಾವಿಲ್ಲಿ ಚರ್ಚಿಸಲೇ ಬೇಕು. ಏನೆಂದರೆ ಒಂದೊಮ್ಮೆ ಡೈನೋಸಾರ್ ಗಳು ನಿರ್ನಾಮವಾಗದೇ ಅವುಗಳೂ ಕಾಲ ಕಾಲಕ್ಕೆ ಬದಲಾವಣೆಯಾಗುತ್ತಾ ಬಂದಿದ್ದರೆ ಏನಾಗುತ್ತಿತ್ತು. ಅಂದು ಡೈನೋಸಾರ್ ಗಳ ಮೆದುಳು ಬಹಳ ಪುಟ್ಟದಾಗಿದ್ದು, ಅವುಗಳಿಗೆ ಬೇಟೆಯಾಡಲು ಮತ್ತು ತಿನ್ನಲು ಹೊರತು ಪಡಿಸಿ ಏನೂ ಗೊತ್ತಿರಲಿಲ್ಲ. ಹಲವಾರು ಸಮಯದವರೆಗೆ ನಡೆದ ಘಟನೆಗಳನ್ನು ನೆನಪಿನಲ್ಲಿಡಲೂ ಸಾಧ್ಯವಾಗುತ್ತಿರಲಿಲ್ಲ. ಮಾನವನ ಭೌದ್ದಿಕ ಮಟ್ಟದ ಬೆಳವಣಿಗೆಯಲ್ಲದಿದ್ದರೂ ನಮ್ಮ ನಡುವೆ ಇರುವ ಚಿಂಪಾಂಜಿ, ಮಂಗಗಳು, ಹುಲಿಗಳು ಮುಂತಾದ ಪ್ರಾಣಿಗಳಂತೆ ಬುದ್ಧಿ ಬೆಳೆದಿದ್ದರೆ ಏನಾಗುತ್ತಿತ್ತು? 

ಆ ಸಮಯದಲ್ಲೂ ಡೈನೋಸಾರ್ ಗಳ ಮಿದುಳಿನಲ್ಲಿ ಸ್ವಲ್ಪ ಮಟ್ಟಿಗೆ ವಿಕಸನವಾಗಿತ್ತಂತೆ. ಡೈನೋಸಾರ್ ಗಳಲ್ಲಿ ಕಂಡು ಬರುವ ‘ಟ್ರೂಡನ್' (Troodon) ಎಂಬ ವರ್ಗವು ಅಲ್ಪಮಟ್ಟಿಗೆ ಬುದ್ಧಿ ಶಕ್ತಿಯನ್ನು ಬೆಳೆಸಿಕೊಂಡಿತ್ತಂತೆ. ಆಕಾರದಲ್ಲಿ ಮನುಷ್ಯರಷ್ಟೇ ದೊಡ್ಡದಾಗಿದ್ದ ಟ್ರೂಡನ್ ನ ಮೆದುಳು ಮಾತ್ರ ಒಂದು ಲಿಂಬೆ ಹಣ್ಣಿನ ಅರ್ಧದ ಗಾತ್ರವಿತ್ತು. (ಚಿತ್ರ ನೋಡಿ) ಆದರೆ ಈ ವರ್ಗದ ಡೈನೋಸಾರ್ ಗಳ ಕಣ್ಣುಗಳು ದೊಡ್ಡದಾಗಿದ್ದು, ಹಲವಾರು ಸಂಗತಿಗಳನ್ನು ದಾಖಲಿಸಿಕೊಳ್ಳುವಲ್ಲಿ ಸಫಲವಾಗಿತ್ತು. ಇವುಗಳಿಗೆ ಇತರೆ ಡೈನೋಸಾರ್ ಗಳಂತೆ ಮುಖದಿಂದ ಪಕ್ಕಕ್ಕೆ ತಿರುಗಿದ ಕಣ್ಣುಗಳಿರದೆ, ಮನುಷ್ಯನಂತೆ ಎದುರು ತಿರುಗಿರುವ ಕಣ್ಣುಗಳಿದ್ದವು. ಈ ಪೀಳಿಗೆಯ ಡೈನೋಸಾರ್ ಬದುಕಿ ಉಳಿದಿದ್ದರೆ ಮುಂದಿನ ದಿನಗಳಲ್ಲಿ ನಿಧಾನವಾಗಿ ವಿಕಾಸಗೊಳ್ಳುತ್ತಾ ಸಾಗುವ ಸಾಧ್ಯತೆ ಇತ್ತು. ಆದರೆ ಕ್ಷುದ್ರಗ್ರಹದ ಹೊಡೆದ ಇವೆಲ್ಲವನ್ನೂ ನಾಶ ಮಾಡಿ ಬಿಟ್ಟಿತು. ಆದರೆ ವಿಕಾಸಗೊಂಡ ಡೈನೋಸಾರ್ ಇಂದು ಇದ್ದಿದ್ದರೆ ಮನುಷ್ಯ ಬಹಳ ಸಂಕಷ್ಟಕ್ಕೆ ಸಿಲುಕುತ್ತಿದ್ದ ಎಂಬುವುದು ಮಾತ್ರ ಸತ್ಯ ಸಂಗತಿ. ಕಾಡಿನಿಂದ ನಾಡಿಗೆ ಬರುವ ಆನೆ, ಹುಲಿ, ಚಿರತೆಗಳನ್ನು ನಿಯಂತ್ರಿಸುವಲ್ಲಿ ಹರೋಹರವಾಗುತ್ತಿರುವ ಮಾನವನಿಗೆ ಇನ್ನು ಡೈನೋಸಾರ್ ಗಳನ್ನು ನಿಯಂತ್ರಿಸುವುದು ಎಷ್ಟು ಕಷ್ಟವಾಗುತ್ತಿತ್ತು. ಅದಕ್ಕೇ ಪ್ರಕೃತಿಯೇ ಅದನ್ನು ನಿಯಂತ್ರಿಸಿ ಬಿಟ್ಟಿತು ಎಂದು ಕೆಲವೊಮ್ಮೆ ಅನಿಸುತ್ತದೆ.

(ಆಧಾರ) (ಮುಗಿಯಿತು)

ಚಿತ್ರ ಕೃಪೆ: ಅಂತರ್ಜಾಲ ತಾಣ