ಡೊನಾಲ್ಡ್ ಟ್ರಂಪ್ ಬಾಲಿಶ ಹೇಳಿಕೆಗಳು ಇನ್ನಾದರೂ ನಿಲ್ಲಲಿ

ಜಮ್ಮು-ಕಾಶ್ಮೀರದ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಆರಂಭವಾಗಿದ್ದ ಯುದ್ಧವನ್ನು ಅಂತ್ಯಗೊಳಿಸಿದ್ದೇ ನಾನು ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ ೧೫ ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಏಕಾಏಕಿ ಉಲ್ಟಾ ಹೊಡೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಎರಡೂ ದೇಶಗಳೇ ಈ ಸಂಘರ್ಷವನ್ನು ಬಗೆಹರಿಸಿಕೊಂಡಿವೆ ಎಂಬುದು ಅವರ ಹೊಸ ಹೇಳಿಕೆ. ಹಾಗಿದ್ದ ಮೇಲೆ, ೧೫ ಬಾರಿ ಟ್ರಂಪ್ ಹೇಳಿದ್ದು ಸುಳ್ಳೆ? ಅಥವಾ ಹುಡುಗಾಟಿಕೆಯೇ? ಅಥವಾ ಜಗತ್ತನ್ನು ದಾರಿ ತಪ್ಪಿಸುವ ಪ್ರಯತ್ನವೇ? ಅಥವಾ ಕೆಲವು ವರದಿಗಳಂತೆ, ಯುದ್ಧ ನಿಲ್ಲಿಸಿದ್ದಾಗಿ ಬಿಂಬಿಸಿಕೊಂಡು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯುವ ಯತ್ನವೇ? ಈ ಎಲ್ಲ ಪ್ರಶ್ನೆಗಳಿಗೂ ಯಾವುದೇ ಉತ್ತರ ಸಿಗುತ್ತಿಲ್ಲ, ಬಹುಶಃ ಟ್ರಂಪ್ ಅವರ ಕಡೆಯಿಂದ ಸಿಗುವುದೂ ಇಲ್ಲ.
ಟ್ರಂಪ್ ಈ ರೀತಿ ತಾವೇ ನೀಡಿದ ಹೇಳಿಕೆ, ತಾವೇ ತೆಗೆದುಕೊಂಡ ನಿರ್ಧಾರ ಹಾಗೂ ತಾವೇ ಕೈಗೊಂಡ ಕ್ರಮಗಳಿಂದ ಹಿಂದೆ ಸರಿಯುತ್ತಿರುವುದು ಇದೇ ಮೊದಲೇನಲ್ಲ. ಅಮೆರಿಕ ಕಂಡ ಅತ್ಯಂತ ವಿಚಿತ್ರ ಅಧ್ಯಕ್ಷ ಟ್ರಂಪ್ ಎಂದರೆ ಪ್ರಾಯಶಃ ಯಾರೂ ತಳ್ಳಿ ಹಾಕುವುದಿಲ್ಲ! ಅಮೆರಿಕ ಅತ್ಯಂತ ಮುಂದುವರಿದ ಹಾಗೂ ಬಲಿಷ್ಟ ದೇಶ, ಅದನು ವಿಶ್ವದ ದೊಡ್ಡಣ್ಣ ಎಂದು ಕರೆಯುವುದೂ ಅದೇ ಕಾರಣಕ್ಕೆ.
ವಿಶ್ವದ ಆಗುಹೋಗುಗಳಲ್ಲಿ ಹಲವಾರು ದಶಕಗಳಿಂದ ಅಮೆರಿಕ ಪ್ರಮುಖ ಪಾತ್ರ ವಹಿಸುತ್ತಲೇ ಬಂದಿದೆ. ಆ ದೇಶದ ಅಧ್ಯಕ್ಷರ ಪ್ರತಿ ನಡೆಯನ್ನೂ ಇಡೀ ವಿಶ್ವವೇ ಗಮನಹರಿಸುತ್ತಿರುತ್ತದೆ. ಆದರೆ ಟ್ರಂಪ್ ಇದ್ಯಾವುದರ ಪರಿವೇ ಇಲ್ಲದಂತೆ ವರ್ತಿಸುತ್ತಾ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಸ್ರೇಲ್ - ಇರಾನ್ ವಿಷಯದಲ್ಲಿ ಅವರು ಶಾಂತಿ ಕಾಪಾಡಲು ತಾಕೀತು ಮಾಡಬಹುದಿತ್ತು ಅಥವಾ ಇನ್ನಾವುದೇ ಕ್ರಮಗಳನ್ನು ಜರುಗಿಸಬಹುದಿತ್ತು. ರಷ್ಯಾ - ಉಕ್ರೇನ್ ಸಮರವನ್ನೂ ಅವರು ನಿಲ್ಲಿಸಬಹುದಿತ್ತು. ಆದರೆ ಇರಾನ್ ವಿಷಯದಲ್ಲಿ ತಾವೇ ಯುದ್ಧಕ್ಕಿಳಿಯುವ ಮಾತುಗಳನ್ನು ಆಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ಒಯ್ಯುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದಾಗ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನ್ನು ರಾಕೆಟ್ ಮ್ಯಾನ್ ಎಂದು ಮೂದಲಿಸಿ, ಆತನಿಗೆ ಪಾಠ ಕಲಿಸುವುದಾಗಿ ಅಬ್ಬರಿಸಿ ಬಳಿಕ ಉನ್ ಜತೆ ಕೈಕುಲುಕಿ ಬಂದಿದ್ದರು. ಜಗತ್ತು ಅಮೆರಿಕ ಅಧ್ಯಕ್ಷರಿಂದ ಸ್ಥಿರವಾದ ನಿಲುವು ಬಯಸುತ್ತದೆ. ಟ್ರಂಪ್ ಇದನ್ನು ಅರ್ಥ ಮಾಡಿಕೊಳಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೧-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ