ಡೊನಾಲ್ಡ್ ಟ್ರಂಪ್ - ಸಹಜವೇ - ಅತಿರೇಕಿಯೇ....?

ಡೊನಾಲ್ಡ್ ಟ್ರಂಪ್ - ಸಹಜವೇ - ಅತಿರೇಕಿಯೇ....?

ಸಾಮಾನ್ಯ, ಸಾಂಪ್ರದಾಯಿಕ ರಾಜಕೀಯ ನಿರೀಕ್ಷೆಗಳನ್ನು ಮೀರಿ ಅಮೆರಿಕದ ಮತದಾರರು ಸ್ವಲ್ಪ ಹೆಚ್ಚು ಅನಿರೀಕ್ಷಿತ ಒಲವು ಮತ್ತು ಬೆಂಬಲವನ್ನು ನೀಡಿ ಎರಡನೆಯ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅವರನ್ನು ಗೆಲ್ಲಿಸಿದ್ದಾರೆ. ಸಿಂಹದಂತೆ ಅಬ್ಬರಿಸುತ್ತಿದ್ದ, ಜಾಗತೀಕರಣದ ಸ್ಪರ್ಧೆಯಲ್ಲಿ ತಮ್ಮನ್ನು ತಡೆಯುವವರಿಲ್ಲ ಎಂದು ಬೀಗುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ಈಗ " ಅಮೆರಿಕ ಮೊದಲು " ಎಂಬ ನೀತಿ ಅಳವಡಿಸಿಕೊಂಡು ಇಲಿಯಂತೆ ಬಿಲದೊಳಗೆ ಸೇರಲು ಹವಣಿಸುತ್ತಾ, ಮೇಲ್ನೋಟಕ್ಕೆ ಯಾವುದೋ ಸಾಕು ಪ್ರಾಣಿಯಂತೆ ಬೊಗಳುತ್ತಿದೆ. 

ಇಲ್ಲ, ಅದು ಅಮೆರಿಕಾದ  ನೀತಿಯಲ್ಲ,‌ ಕೇವಲ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಇದಕ್ಕೆ ಹೊಣೆ ಎಂದು ಭಾವಿಸಿ, ವಿಶ್ವದ ದೊಡ್ಡಣ್ಣ ಅನೇಕ ಬಾರಿ ದೊಡ್ಡಣ್ಣನಂತೆ ಜವಾಬ್ದಾರಿ ನಿರ್ವಹಿಸಿರುವುದು ನಿಜವಾದರೂ ಈ ಬಾರಿ ಏನೋ ಒತ್ತಡಕ್ಕೆ ಒಳಗಾದ ಅಮೆರಿಕಾದ ಜನತೆ ಈ ವ್ಯಾಪಾರಿ ಮನೋಭಾವದ ಆಕ್ರಮಣಕಾರಿ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಚುನಾಯಿಸಿದರು. ಮೂಲತಃ ಭಾರತ ಚೀನಾ ಮುಂತಾದ ದೇಶಗಳು ಪ್ರಾರಂಭದಲ್ಲಿ ಈ ಜಾಗತೀಕರಣದ ಮುಕ್ತ ಮಾರುಕಟ್ಟೆಗೆ ಒಗ್ಗಿಕೊಳ್ಳದೆ ಅಪಾರ ಸಂಕಷ್ಟಕ್ಕೆ ಒಳಗಾದವು. ಅತಿಹೆಚ್ಚು ಜನಸಂಖ್ಯೆ, ಅಜ್ಞಾನ, ಬಡತನ ಮುಂತಾದ ಕಾರಣಗಳಿಂದ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಸೋಲುತ್ತಾ ಗಲಿಬಿಲಿಗೊಳಗಾದವು. 

ಆದರೆ ನಿಧಾನವಾಗಿ ಮತ್ತು ಖಚಿತವಾಗಿ ಮೊದಲು ಚೀನಾ ನಂತರ ಭಾರತ ತಮ್ಮ ಪ್ರತಿಭೆಯಿಂದ ಮುನ್ನಡೆಗೆ ಬರತೊಡಗಿದವು. ವ್ಯಾಪಾರ, ವ್ಯವಹಾರ, ತಂತ್ರಜ್ಞಾನ, ಕ್ಷೇತ್ರದಲ್ಲಿ ತಾವೂ ಸ್ಪರ್ಧೆ ಒಡ್ಡತೊಡಗಿದವು. ಚೀನಾ ಕ್ರೀಡೆಯಲ್ಲೂ ಅಮೆರಿಕಾಗೆ ಸೆಡ್ಡು ಹೊಡೆಯಿತು. ಅದಕ್ಕಾಗಿಯೇ ಅಮೆರಿಕಾ ತಮ್ಮ ಈ ಸ್ಪರ್ಧಿಗಳಿಗೆ ವೀಸಾ ನಿಯಂತ್ರಣ, ತೆರಿಗೆ ನಿರ್ಬಂಧ, ಅಧಿಕ ತೆರಿಗೆ ಮುಂತಾದ ಅಸ್ತ್ರಗಳ ಮೂಲಕ ನಿಯಂತ್ರಣ ಹೇರಲು - ಹೆದರಿಸಲು ಪ್ರಾರಂಭಿಸಿದೆ. ಭಯೋತ್ಪಾದಕ  ಮತ್ತು ವಿಶ್ವದ ಶಾಂತಿ ಭದ್ರತೆಗೆ ಅಪಾಯ ಒಡ್ಡುವ ದೇಶಗಳಿಗೆ ನಿಷೇಧ ಸರಿ, ಆದರೆ ವ್ಯಾಪಾರ ವಹಿವಾಟು ನಡೆಸುವ ದೇಶಗಳಿಗೆ ಬೆದರಿಕೆಯ ನಿಷೇದ ತುಂಬಾ ಅಪಾಯಕಾರಿ ಮತ್ತು ಹೇಡಿತನದ್ದು.

ಹೌದು, ಎಲ್ಲಾ ದೇಶಗಳು ತಮ್ಮ ಹಿತಾಸಕ್ತಿಗೆ ಮೊದಲ ಆದ್ಯತೆ ಎಂಬುದು ನಿಜ. ಆದರೆ ಜಾಗತೀಕರಣದ ನೀತಿ ನಿಯಮಗಳು ವಿಶ್ವವನ್ನು ಒಂದು ಒಕ್ಕೂಟವಾಗಿಸಿವೆ. ಇಷ್ಟ ಇದೆಯೋ ಇಲ್ಲವೋ ಅದನ್ನು ಒಪ್ಪಿಕೊಂಡಾಗಿದೆ. ಈಗ ಅದರ ಹಿತಾಸಕ್ತಿಗೆ ಧಕ್ಕೆ ತರದಂತೆ ನೋಡಿಕೊಳ್ಳಬೇಕಿದೆ. ತಮಗೆ ಲಾಭವಾಗುವಾಗ ಒಂದು ನೀತಿ, ನಷ್ಟವಾಗುವಾಗ ಇನ್ನೊಂದು ನೀತಿ ಎಂಬ ವ್ಯಾಪಾರದ ಸ್ವಾರ್ಥ ಒಂದು ದೇಶವಾಗಿ ಅದರ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತದೆ. ಭಾರತಕ್ಕೂ ಇದರಲ್ಲಿ ಎಚ್ಚರಿಕೆ ಇದೆ. ಕೇವಲ ದೇಶಾಭಿಮಾನದ ಹೆಸರಿನಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬುದು ಸರಿಯಲ್ಲ. ಅದು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಮತ್ತು ನಮ್ಮ ಅಸಾಮರ್ಥ್ಯ ತೋರಿಸುತ್ತದೆ. ಬದಲಾಗಿ ಚೀನಾ ದೇಶಕ್ಕಿಂತ ಅಥವಾ ಜಗತ್ತಿನ ಇನ್ಯಾವುದೇ ದೇಶಕ್ಕಿಂತ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಸಾಮರ್ಥ್ಯ ಗಳಿಸಿಕೊಳ್ಳಬೇಕಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಕಡಿಮೆಯಾದರೆ ಈ ಸಾಮರ್ಥ್ಯ ವೃದ್ಧಿಸುತ್ತದೆ.

ಈಗಲೂ ಎಲ್ಲಾ ಕ್ಷೇತ್ರಗಳಲ್ಲೂ ಅಮೆರಿಕ ದೇಶವೇ ಮುಂದಿದೆ. ಭಾರತ ಮತ್ತು ವಿಶ್ವದ ಶಾಂತಿ ಸ್ವಾತಂತ್ರ್ಯ ಮತ್ತು ಸಮಾನತೆಯ ದೃಷ್ಟಿಯಿಂದ ಅದು ಉತ್ತಮ ಕೂಡ. ಆದರೆ ಅದು ತನ್ನ ಪ್ರತಿಭೆ ಸಾಮರ್ಥ್ಯದಿಂದ ಇದನ್ನು ಉಳಿಸಿಕೊಳ್ಳಬೇಕೆ ಹೊರತು ಬೆದರಿಕೆಯಿಂದ ಅಲ್ಲ. ಭಾರತಕ್ಕೆ ಪರೋಕ್ಷವಾಗಿ ಬೆದರಿಕೆ ಒಡ್ಡಿದ ಅಮೆರಿಕ ಅಧ್ಯಕ್ಷರ ನಡೆ ಅತ್ಯಂತ ಬಾಲಿಶ ಮತ್ತು ಹೇಡಿತನದ ಲಕ್ಷಣ ಎಂದು ಭಾರತದ ಹಿತದೃಷ್ಟಿಯಿಂದ ಭಾವಿಸಬೇಕಾಗಿದೆ. ಇದರ ಮುಂದಿನ ಪರಿಣಾಮಗಳು ಜಾಗತಿಕವಾಗಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಬಹುದು.

ವಿಶ್ವದ ಬಹುತೇಕ ರಾಷ್ಟ್ರಗಳು ಮತ್ತೆ ತಮ್ಮ ಬಿಲದೊಳಗೆ ಸ್ವಾವಲಂಬನೆಯ ಹೆಸರಿನಲ್ಲಿ ಅಡಗಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ. ಸುಮಾರು 30-35 ವರ್ಷಗಳ ಹಿಂದೆ ಜಾಗತಿಕವಾಗಿ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಒಪ್ಪಂದಕ್ಕೆ ಕೆಲವು ದೇಶಗಳು ಉತ್ಸಾಹದಿಂದ, ಮತ್ತೆ ಕೆಲವು ದೇಶಗಳು ಅನಿವಾರ್ಯವಾಗಿ ಸಹಿ ಹಾಕಿದವು. ಹೆಚ್ಚು ಕಡಿಮೆ ವಿಶ್ವವೇ ಒಂದು ಬೃಹತ್ ಮಾರುಕಟ್ಟೆಯಾಯಿತು. ಬೇರೆ ಬೇರೆ ದೇಶದ ಯಾವ ಯಾವುದೋ ವಸ್ತುಗಳು ಇನ್ನೆಲ್ಲೋ ಮಾರುಕಟ್ಟೆ ವಿಸ್ತರಿಸಿಕೊಂಡು ಬೆಳೆಯುತ್ತಾ ಹೋದವು. ಹಾಗೆಯೇ ಕೆಲವು ದೇಶಗಳು ಅದರ ಸ್ಪರ್ಧೆ ಎದುರಿಸಲಾಗದೆ ತತ್ತರಿಸಿದವು. 

ಪ್ರಾರಂಭದಲ್ಲಿ ಅಮೆರಿಕ ಮತ್ತು ಯೂರೋಪಿಯನ್ ದೇಶಗಳು, ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಜನಸಂಖ್ಯೆಯ ಕಾರಣದಿಂದ ಬಹುದೊಡ್ಡ ಮಾರುಕಟ್ಟೆ ಆಕ್ರಮಿಸಿ ಬಹಳಷ್ಟು ಲಾಭ ಮಾಡಿಕೊಂಡವು. ಕೃಷಿ ಪ್ರಧಾನ ಭಾರತ ಮತ್ತು  ಉತ್ಪಾದನಾ ದೈತ್ಯ ಚೀನಾ ಪ್ರಾರಂಭದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದವು. ಆದರೆ ನಂತರ ಕೃಷಿ ಹೊರತುಪಡಿಸಿ ಭಾರತ ಇತರೆ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸಿದ್ದವಾಯಿತು. ಮುಖ್ಯವಾಗಿ ಐಟಿ ಬಿಟಿ, ಸೇವಾ ವಲಯದಲ್ಲಿ ಜಾಗತಿಕವಾಗಿ ಸಾಕಷ್ಟು ಮುನ್ನಡೆಯಿತು. ಹಾಗೆಯೇ ಚೀನಾ ತನ್ನ ಮಾನವ ಸಂಪನ್ಮೂಲಗಳನ್ನು ಚೆನ್ನಾಗಿ ಬೆಳೆಸಿಕೊಂಡು ವಿಶ್ವ ಮಾರುಕಟ್ಟೆಯಲ್ಲಿ ಮುನ್ನುಗ್ಗಿತು.

ಅದರ ಪರಿಣಾಮ ಜಾಗತಿಕವಾಗಿ ಎಲ್ಲಾ ಲೆಕ್ಕಾಚಾರಗಳು ಬುಡಮೇಲಾಗುತ್ತಿದೆ.  ಅನಿವಾರ್ಯತೆಯನ್ನು ಅವಕಾಶವಾಗಿ ಬಳಸಿಕೊಳ್ಳಬೇಕು ಎಂಬ  ತರ್ಕ ಶಾಸ್ತ್ರದ ಮೂಲ ನಿಯಮಗಳನ್ನು  ಕೆಲವು ದೇಶಗಳು ಬಳಸಿಕೊಳ್ಳುತ್ತಿವೆ. ಸ್ವಾವಲಂಬನೆಯ ಗ್ರಾಮ ಸ್ವರಾಜ್ಯದ ಬಗ್ಗೆ ಆಸಕ್ತಿ ಹೆಚ್ಚು ಬೆಳೆಸಿಕೊಳ್ಳುತ್ತಿವೆ. ಹಾಗೆಯೇ ಕೆಲವು ದೇಶಗಳು ಸಂಕಷ್ಟಕ್ಕೆ ಗುರಿಯಾಗಿರುವುದರಿಂದ ಮುಕ್ತ ಮಾರುಕಟ್ಟೆ ಈ ಕ್ಷಣದಲ್ಲಿ ಸ್ವಲ್ಪ ಮಟ್ಟಿಗೆ ತನ್ನ ಪ್ರಭಾವ ಕಳೆದುಕೊಂಡಿದೆ.

ಆಂತರಿಕವಾಗಿ ನಾವು ಹೆಚ್ಚು ಬಲಶಾಲಿಗಳಾದರೆ ತನ್ನಿಂದ ತಾನೇ ‌ವಿಶ್ವಮಟ್ಟಕ್ಕೆ ಏರಬಹುದು. ಕೇವಲ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ಹಪಾಹಪಿಗೆ ಬಿದ್ದರೆ ಅದು ಒಣ ಜಂಭವಾಗುತ್ತದೆ. ಅಮೆರಿಕನ್ನರು ಮೊದಲು ಎಂದು ಅಮೆರಿಕಾದ ನೀತಿ, ಈ ಸಂದರ್ಭದಲ್ಲಿ ಆಕ್ರಮಣಕಾರಿ ಆರ್ಥಿಕ ನೀತಿಗಳಿಂದ ವಿಶ್ವದ ನಾಯಕತ್ವ ವಹಿಸಲು ಹಾತೊರೆಯುತ್ತಿರುವ ಚೀನಾ, ಈ ನಡುವೆ ತಂತ್ರಜ್ಞಾನ ಮತ್ತು ಗ್ರಾಮೀಣ ಆರ್ಥಿಕತೆಯತ್ತ ಸಾಗುತ್ತಿರುವ ಭಾರತ ಎಲ್ಲವೂ ಮುಂದಿನ ದಿನಗಳನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. ಭಾರತ ಹಿಂದೆಯೂ ಗ್ರಾಮೀಣ ಆರ್ಥಿಕತೆಯ ಮೇಲೆ ಅವಲಂಬಿತವಾಗಿತ್ತು. ಆದರೆ ದಿನನಿತ್ಯದ ವಸ್ತುಗಳ ಗುಣಮಟ್ಟ ಮತ್ತು ಬೆಲೆಯಲ್ಲಿ ನಿಯಂತ್ರಣ ‌ಸಾಧಿಸದೆ ಶ್ರೀಮಂತರು ‌ಪಾಶ್ಚಾತ್ಯ ವಸ್ತುಗಳತ್ತಾ ಮತ್ತು ಬಡವರು ಚೀನಾದ ‌ವಸ್ತುಗಳತ್ತಾ ಆಕರ್ಷಿತರಾದರು. ಈಗ ಆ ತಪ್ಪನ್ನು ಮತ್ತೆ ಮಾಡದೆ ಮೇಕ್ ಇನ್ ಇಂಡಿಯಾ ಯಶಸ್ವಿಯಾಗಬೇಕಾದರೆ ನಮ್ಮ ವಸ್ತುಗಳು ಗುಣಮಟ್ಟ ಮತ್ತು ಬೆಲೆಗಳ ಮೇಲೆ ನಿಯಂತ್ರಣ ಸಾಧಿಸಬೇಕಿದೆ. ಲಂಚ, ಜಾಗದ ಬಾಡಿಗೆ, ಅಧಿಕಾರಿಗಳ ಉಪಟಳ ಮುಂತಾದ ಕಾರಣಗಳಿಂದ ಇದು ಹಳಿ ತಪ್ಪಿದರೆ ಮತ್ತೆ ವಿದೇಶಿ ವಸ್ತುಗಳ ವ್ಯಾಮೋಹಕ್ಕೆ ಬೀಳುವುದು ನಿಶ್ಚಿತ. ಏಕೆಂದರೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಅಧಿಕೃತವಾಗಿ ಇನ್ನೂ ಜಾರಿಯಲ್ಲಿದೆ ಎಂಬುದನ್ನು ಮರೆಯಬಾರದು. 

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಗಳು ಸಹ ತುಂಬಾ ಅಕ್ರಮಣಕಾರಿ ಮತ್ತು ಪೊಸೆಸಿವ್ ಹಾಗೆ ಕಾಣುತ್ತಿದೆ. ತಾನೇ ಅತ್ಯಂತ ಬಲಾಢ್ಯ, ಶ್ರೀಮಂತ, ತಾನು ಹೇಳಿದಂತೆ ಇತರರು ಕೇಳಬೇಕು, ತಾನು ಯಾರನ್ನು ಬೇಕಾದರೂ ಆಕ್ರಮಿಸಿಕೊಳ್ಳಬಲ್ಲೆ ಎಂಬ ಮನೋಭಾವವು ಕಾಣುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವ ನಿರ್ಧಾರ ಅತ್ಯಂತ ಬಾಲಿಶ, ಹೇಡಿತನ ಮತ್ತು ವಿಶ್ವ ಮಟ್ಟದಲ್ಲಿ ಚೀನಾದ ಪ್ರಭಾವ ಹೆಚ್ಚಾಗಲು ಕಾರಣವಾಗಬಹುದು. ಈ ಎಲ್ಲಾ ನಡವಳಿಕೆಗಳನ್ನು ಗಮನಿಸಿದಾಗ ಅವರೊಬ್ಬ ಅತಿರೇಕಿಯಂತೆ ಕಾಣುತ್ತಿದ್ದಾರೆ. ನೋಡೋಣ ಮುಂದಿನ ದಿನಗಳು ಹೇಗಿರುತ್ತದೋ ಏನೋ. ಒಟ್ಟಿನಲ್ಲಿ ಏನೇ ಬರಲಿ ಎಲ್ಲವನ್ನು ಎದುರಿಸಲೇಬೇಕು ಅದೇ ಪ್ರಕೃತಿಯ ಸಹಜ ನ್ಯಾಯ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ