ಡ್ರಗ್ಸ್ ದಂಧೆಗೆ ಕಡಿವಾಣ - ಸಮನ್ವಯ ಅಗತ್ಯ

ಡ್ರಗ್ಸ್ ದಂಧೆಗೆ ಕಡಿವಾಣ - ಸಮನ್ವಯ ಅಗತ್ಯ

ದೇಶದ ಕೆಲವು ರಾಜ್ಯಗಳಲ್ಲಿ ಮಾದಕ ವಸ್ತುಗಳ ದಂಧೆ ಎಗ್ಗಿಲ್ಲದೆ ಸಾಗಿರುವುದು ನಾಗರಿಕ ಸಮಾಜವನ್ನು ಆತಂಕದ ಮಡುವಿಗೆ ತಳ್ಳಿದೆ. ಐದು ದಿನಗಳ ಹಿಂದೆಯಷ್ಟೇ ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಪೋಲೀಸರು ಒಟ್ಟು ೫,೬೨೦ ಕೋ. ರೂ ಮೌಲ್ಯದ ೫೬೦ ಕೆ ಜಿ ಕೊಕೇನ್ ಮತ್ತು ೪೦ ಕೆ ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಇದರ ಬೆನ್ನಲ್ಲೇ ದೇಶದ ಕೆಲವು ರಾಜ್ಯಗಳಲ್ಲಿ ಈ ಜಾಲದ ಕಬಂಧಬಾಹುಗಳು ಚಾಚಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ವಿನಿಮಯ, ಕೆಸರೆರಚಾಟ ಮುಂದುವರಿಯುತ್ತಿದ್ದಂತೆಯೇ ರವಿವಾರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಗುಜರಾತ್ ಎಟಿಸಿ ಮತ್ತು ದಿಲ್ಲಿ ಎನ್ಸಿಬಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ೧,೮೧೪ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಎಂಡಿ ಡ್ರಗ್ಸ್ ಸಿಂಥೆಟಿಕ್ ಡ್ರಗ್ಸ್ ಅನ್ನು ತಯಾರಿಸುತ್ತಿದ್ದ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದ ತನಿಖಾ ತಂಡಗಳು ಅಪಾರ ಪ್ರಮಾಣದ ಡ್ರಗ್ಸ್ ಮತು ಕಚ್ಚಾವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

ದೇಶದ ವಿವಿಧೆಡೆ ಎಂಡಿ ಡ್ರಗ್ಸ್ ಸಾಗಣೆ, ಮಾರಾಟ, ದಾಸ್ತಾನು ಇರಿಸಿದ್ದ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಎಚ್ಚೆತ್ತುಕೊಂಡಿದ್ದ ತನಿಖಾ ಸಂಸ್ಥೆಗಳು ಈ ಡ್ರಗ್ಸ್ ನ ತಯಾರಿಕೆ, ವಿತರಣಾ ಜಾಲದ ಮೇಲೆ ಹದ್ದುಗಣ್ಣಿರಿಸಿದ್ದವು. ಸುಳಿವನ್ನು ಆಧರಿಸಿ ತನಿಖಾ ತಂಡಗಳು ಪರಿಶೀಲನೆ ನಡೆಸಿದ ವೇಳೆ ಮಾದಕ ದ್ರವ್ಯ ತಯಾರಾಗುತ್ತಿದ್ದ ಸ್ಥಳದ ಬಗೆಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ಕಾರ್ಖಾನೆಯನ್ನು ಪತ್ತೆಹಚ್ಚಿ ಮಾದಕ ದ್ರವ್ಯ ದಂಧೆಯ ವಿರುದ್ಧದ ಹೋರಾಟದಲ್ಲಿ ಮಹತ್ವದ ಯಶ ಕಂಡಿವೆ.

ದೇಶವನ್ನು ಡ್ರಗ್ಸ್ ಮುಕ್ತವನ್ನಾಗಿಸಲು ಕೇಂದ್ರ ಸರಕಾರ ಪಣತೊಟ್ಟಿದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇದೇ ವೇಳೆ ದೇಶದ ವಿವಿದೆಡೆ  ಅದರಲ್ಲೂ ಮುಖ್ಯವಾಗಿ ಹೊಸದಿಲ್ಲಿ, ಪಂಜಾಬ್, ಮಹಾರಾಷ್ಟ್ರ ಸಹಿತ ಹಲವೆಡೆ ಮಾದಕ ದ್ರವ್ಯ ದಂಧೆ ಸಕ್ರಿಯವಾಗಿರುವುದು ಸರಕಾರದ ಉದ್ದೇಶಿತ ಗುರಿ ಸಾಧನೆಗೆ ಬಲುದೊಡ್ಡ ತೊಡರುಗಾಲಾಗಿ ಪರಿಣಮಿಸಿದೆ.

ಈ ದಂಧೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವುದರಿಂದ ಮಾದಕದ್ರವ್ಯ ಜಾಲದ ಮೂಲವನ್ನು ಭೇಧಿಸುವುದುದೇಶದ ತನಿಖಾ ಸಂಸ್ಥೆಗಳಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ ದೇಶದೊಳಕ್ಕೆ ಮಾದಕ ಪದಾರ್ಥಗಳು ಪ್ರವೇಶಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದಲ್ಲಿ ಮತ್ತು ದೇಶದೊಳಗಿನ ದಂಧೆಕೋರರನ್ನು ಮಟ್ಟ ಹಾಕಿದ್ದೇ ಆದಲ್ಲಿ ಈ ಜಾಲವನ್ನು ನಿಯಂತ್ರಿಸುವುದು ಕಷ್ಟಸಾಧ್ಯವೇನಲ್ಲ. ಆದರೆ ಬಹುತೇಕ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳು ಅಥವಾ ದಂಧೆಕೋರರಿಗೆ  ಪ್ರಭಾವಿಗಳು ಮತ್ತು ರಾಜಕೀಯ ಪುಡಾರಿಗಳ ಅಭಯಹಸ್ತ ಇರುವುದರಿಂದ ಈ ಎಲ್ಲ ಪ್ರಕರಣಗಳು ತನಿಖಾ ಹಂತದಲ್ಲಿಯೇ ಹಳ್ಳ ಹಿಡಿಯುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ದೇಶದಲ್ಲಿ ಮಾದಕ ದ್ರವ್ಯ ದಂಧೆ ಇಷ್ಟೊಂದು ಸಕ್ರಿಯವಾಗಿರಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಣ ಸಮನ್ವಯದ ಕೊರತೆ ಬಲುಮುಖ್ಯ ಕಾರಣವಾಗಿದೆ. ಪ್ರತಿಯೊಂದನ್ನು ರಾಜಕೀಯ ದೃಷ್ಟಿಕೋನದಲ್ಲಿಯೇ ನೋಡುವ ಪಕ್ಷಗಳ ಖಾಯಂ ಚಾಳಿಯಿಂದಾಗಿ ಈ ದಂಧೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧೀನಕ್ಕೊಳಪಟ್ಟಿರುವ ತನಿಖಾ ಸಂಸ್ಥೆಗಳು ಅಥವಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದಲ್ಲಿ ಈ ದಂಧೆಗೆ ಕಡಿವಾಣ ಹಾಕುವುದು ಅಷ್ಟೊಂದು ತ್ರಾಸದಾಯಕವಾಗಲಾರದು. ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ಬೆಳಕಿಗೆ ಬಂದಾಗ ನಿಷ್ಪಕ್ಷವಾಗಿ ತನಿಖೆ ನಡೆಸಿ, ಆರೋಪಿಗಳು ಮತ್ತು ಶಾಮೀಲಾದವರನ್ನು ಕಾನೂನಿನ ಕೈಗೆ ಒಪ್ಪಿಸುವ ಕಾರ್ಯವಾಗಬೇಕು. ಹೀಗಾದಾಗಲಷ್ಟೇ ಸರಕಾರದ ನಿರೀಕ್ಷಿತ ಉದ್ಡೇಶ ಈಡೇರಲು ಸಾಧ್ಯ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೭-೧೦-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ