ಢೆಲ್ಲಿಗೆ ರೈತರ ದಂಡಯಾತ್ರೆ: ಕೃಷಿರಂಗದ ಸವಾಲುಗಳ ಅಗ್ನಿಪರೀಕ್ಷೆ
ನವಂಬರ್ ೨೯ ಮತ್ತು ೩೦ರಂದು ೫೦,೦೦೦ ರೈತರು, ಕೃಷಿಕೆಲಸಗಾರರು ದೇಶದ ರಾಜಧಾನಿಯ ರಾಮ್ಲೀಲಾ ಮೈದಾನದಿಂದ ಸಂಸತ್ ರಸ್ತೆಗೆ ನಡೆದು ಬಂದರು – ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳ್ನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ ರಾಜ್ಯಗಳ ರೈತರು.
ನವಂಬರ್ ೨೪, ೨೦೧೬ರಂದು ಕೂಡ, ದೇಶದ ನಾಲ್ಕು ದಿಕ್ಕುಗಳಿಂದ ಜಾಥಾ ಹೊರಟ ರೈತರು ಢೆಲ್ಲಿಯಲ್ಲಿ ಒಟ್ಟು ಸೇರಿದ್ದರು; ಆ ದಿನ ೨೦,೦೦೦ ರೈತರು ಸಂಸತ್ ರಸ್ತೆಯಲ್ಲಿ ಜಮಾಯಿಸಿ ಸರಕಾರದ ಧೋರಣೆಗಳನ್ನು ಪ್ರತಿಭಟಿಸಿ, ತಮ್ಮ ಫಸಲಿಗೆ ಉತ್ತಮ ಬೆಲೆ ಸಿಗಬೇಕೆಂದು ಆಗ್ರಹಿಸಿದ್ದರು.
ಮಾರ್ಚ್ ೧೨, ೨೦೧೮ರಂದು ಮುಂಬೈಯ ಅಜಾದ್ ಮೈದಾನಿನಲ್ಲಿಯೂ ಸುಮಾರು ೪೦,೦೦೦ ರೈತರ ಮತ್ತು ಬುಡಕಟ್ಟು ಜನರ ಮಹಾಜನಸಾಗರ. ಅವರು ಮಾರ್ಚ್ ೬ರಂದು ನಾಸಿಕದಿಂದ ಪ್ರತಿಭಟನಾ ಜಾಥಾ ಹೊರಟು, ೧೮೦ ಕಿಮೀ ನಡೆದು ಮುಂಬೈಗೆ ಬಂದವರು – ಉರಿ ಬಿಸಿಲನ್ನು, ಬೆಂಕಿ ಹಸಿವನ್ನು ನುಂಗಿಕೊಂಡು ಬಂದವರು.
ರೈತರು ಯಾಕೆ ಹೀಗೆ ಪ್ರತಿಭಟಿಸುತ್ತಿದ್ದಾರೆ? ಯಾಕೆಂದರೆ, ಕೃಷಿರಂಗದ ಬಿಕ್ಕಟ್ಟು ಕುದಿಬಿಂದು ತಲಪಿದೆ. ರೈತರು, ಕೃಷಿಕೆಲಸಗಾರರು ಅಸಹಾಯಕತೆಯಿಂದ, ಹತಾಶೆಯಿಂದ ಬೆಂದು ಹೋಗಿದ್ದಾರೆ. ಭಾರತ ಸರಕಾರದ ೨೦೧೫-೧೬ರ “ಆರ್ಥಿಕ ಸಮೀಕ್ಷೆ”ಯು “ಭಾರತೀಯ ಕೃಷಿರಂಗ, ಅದರ ಗತಕಾಲದ ಯಶಸ್ಸಿನ – ಮುಖ್ಯವಾಗಿ ಹಸುರುಕ್ರಾಂತಿಯ – ಬಲಿಪಶುವಾಗಿದೆ” ಎಂದು ದಾಖಲಿಸಿರುವುದು ಎಂತಹ ವಿಪರ್ಯಾಸ!
ಹಸುರುಕ್ರಾಂತಿಯ ಹೆಸರಿನಲ್ಲಿ ಭಾರತದ ಕೃಷಿರಂಗಕ್ಕೆ ೧೯೬೦ರ ದಶಕದಲ್ಲಿ ಅಧಿಕ ಇಳುವರಿ ತಳಿಗಳ, ರಾಸಾಯನಿಕ ಗೊಬ್ಬರಗಳ ಮತ್ತು ಪೀಡೆನಾಶಕಗಳ ಪ್ರವೇಶವಾಯಿತು. ಇದರಿಂದಾಗಿ ಕೃಷಿಜಮೀನಿನ ಉತ್ಪಾದಕತೆ ಹೆಚ್ಚಿತು. ಅದೇನಿದ್ದರೂ, ಇತ್ತೀಚೆಗಿನ ವರುಷಗಳಲ್ಲಿ ಎಕ್ರೆವಾರು ಇಳುವರಿ ಹೆಚ್ಚಾಗುತ್ತಿಲ್ಲ; ಆದರೆ ಕೃಷಿಯ ವೆಚ್ಚ ಏರಿಕೆಯಾಗುತ್ತಿದ್ದು, ರೈತರ ಆದಾಯ ಕುಸಿಯುತ್ತಿದೆ. ಜೊತೆಗೆ, ಅಂತರ್ಜಲ ಮಟ್ಟ ಕುಸಿತ ಮತ್ತು ಮಾಲಿನ್ಯ – ಇಂತಹ ಪರಿಸರ ವಿನಾಶಕಾರಿ ಪರಿಣಾಮಗಳಿಂದಾಗಿ ಒಟ್ಟಾರೆಯಾಗಿ ಕೃಷಿಕರು ಕಂಗಾಲು.
ರೈತರು ಮತ್ತೆಮತ್ತೆ ಆಕ್ರೋಶದಿಂದ ಪ್ರತಿಭಟಿಸುತ್ತಿರುವಾಗ, ಕೇಂದ್ರ ಸರಕಾರ ಏನು ಮಾಡುತ್ತಿದೆ? ೨೦೨೨ರ ಹೊತ್ತಿಗೆ ರೈತರ ಆದಾಯ ಇಮ್ಮಡಿಗೊಳಿಸುವ ಘೋಷಣೆ ಮಾಡುತ್ತಾ, ಅದಕ್ಕಾಗಿ ಕೆಲವು ಯೋಜನೆಗಳನ್ನು ರೂಪಿಸಿದೆ. ಆ ಮಹಾನ್ ಗುರಿ ಸಾಧಿಸಬೇಕಾದರೆ, ಕೆಲವು ಸವಾಲುಗಳನ್ನು ಎದುರಿಸಬೇಕಾಗಿದೆ.
ಮೊದಲನೆಯದಾಗಿ, ಕುಸಿಯುತ್ತಿರುವ ಉತ್ಪಾದಕತೆ ಮೇಲೆತ್ತಬೇಕಾಗಿದೆ. ೨೦೧೩ರ ಮಾಹಿತಿ ಪರಿಶೀಲಿಸಿದಾಗ, ಭಾರತದಲ್ಲಿ ಏಕದಳ ಧಾನ್ಯಗಳ ಸರಾಸರಿ ಇಳುವರಿ (ಹೆಕ್ಟೇರಿಗೆ) ಇತರ ಹಲವು ದೇಶಗಳ ಇಳುವರಿಗಿಂತ ಬಹಳ ಕಡಿಮೆ. ಉದಾಹರಣೆಗೆ, ನಮ್ಮ ದೇಶದ ಈ ಸರಾಸರಿ ಇಳುವರಿ, ಚೀನಾದ್ದಕ್ಕಿಂತ ಶೇಕಡಾ ೩೯ ಕಡಿಮೆ. ನಮ್ಮ ದೇಶದ ಭತ್ತದ ಸರಾಸರಿ ಇಳುವರಿಯಂತೂ ಶೇ.೪೬ ಕಡಿಮೆ. ಆದರೆ, ಪಂಜಾಬ್ ಮತ್ತು ಹರಿಯಾಣಗಳ ಗೋಧಿ ಮತ್ತು ಭತ್ತದ ಸರಾಸರಿ ಇಳುವರಿ ಇತರ ರಾಜ್ಯಗಳ ಸರಾಸರಿ ಇಳುವರಿಗಿಂತ ಜಾಸ್ತಿ ಎಂಬುದು ಗಮನಾರ್ಹ. ೨೦೧೮-೧೯ರ ಮುಂಗಾರು ಮತ್ತು ಹಿಂಗಾರು (ಖಾರಿಫ್ ಮತ್ತು ರಾಬಿ) ಬೆಳೆಗಳ ಫಸಲಿಗೆ ಕೇಂದ್ರ ಸರಕಾರ “ಬೆಂಬಲ ಬೆಲೆ”ಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಇದು ಏಕದಳ ಧಾನ್ಯಗಳ ಉತ್ಪಾದಕತೆ ಹೆಚ್ಚಿಸಲು ರೈತರಿಗೆ ಪ್ರೇರಣೆಯಾದೀತೆಂದು ಆಶಿಸಬಹುದಾಗಿದೆ.
ನಮ್ಮ ಕೃಷಿರಂಗದ ಎರಡನೆಯ ಸವಾಲು ಕೃಷಿ ಹಿಡುವಳಿ ಮತ್ತು ನೀರಿಗೆ ಸಂಬಂಧಿಸಿದ್ದು. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ಕುಟುಂಬದ ಕೃಷಿಜಮೀನು ಪಾಲಾದಾಗ, ತಲೆಮಾರಿನಿಂದ ತಲೆಮಾರಿಗೆ, ತಲಾ ಕೃಷಿ ಹಿಡುವಳಿಯ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಚಿಕ್ಕಚಿಕ್ಕ ಹಿಡುವಳಿಗಳಿಗೆ ಹೆಚ್ಚಿಗೆ ಹಣ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಯಾಂತ್ರೀಕರಣಕ್ಕೆ ತೊಡಕಾಗುತ್ತಿದೆ.
ಕರಾವಳಿ ಪ್ರದೇಶ ಹಾಗೂ ಉತ್ತಮ ಮಳೆಯಾಗುವ ಕೆಲವು ಪ್ರದೇಶಗಳ ಹೊರತಾಗಿ, ನಮ್ಮ ದೇಶದ ಉಳಿದೆಲ್ಲೆಡೆ ನೀರಿನ ಕೊರತೆಯ ಸಮಸ್ಯೆ ವರುಷದಿಂದ ವರುಷಕ್ಕೆ ಬಿಗಡಾಯಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಕ್ಕಿ, ಗೋಧಿ ಮತ್ತು ಸಕ್ಕರೆ ರಫ್ತು ಮಾಡುವುದು ಆತಂಕದ ಸಂಗತಿ. ಯಾಕೆಂದರೆ, ಇವನ್ನು ರಫ್ತು ಮಾಡುವುದೆಂದರೆ ನಿಜವಾಗಿ ನೀರನ್ನೇ ರಫ್ತು ಮಾಡಿದಂತೆ; ಆ ನೀರನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ, ಪ್ರಶಾಂತ್ ಗೋಸ್ವಾಮಿ ಮತ್ತು ಶಿವ ನಾರಾಯಣ್ ನಿಷಾಧ್ ೨೦೧೦ರಲ್ಲೇ ವರದಿ ನೀಡಿದ್ದರು: ಕೃಷಿ ಉತ್ಪನ್ನಗಳ ರಫ್ತಿನ ಮೂಲಕ ನಮ್ಮ ದೇಶ ೨೫ ಘನ ಕಿಮೀ ನೀರನ್ನು ರಫ್ತು ಮಾಡಿದೆ ಎಂಬುದಾಗಿ. ಇದು ನಮ್ಮ ದೇಶದಲ್ಲಿ ಲಭ್ಯವಿರುವ ಒಟ್ಟು ನೀರಿನ ಶೇಕಡಾ ಒಂದು ಭಾಗ!
ಈ ಹಿನ್ನೆಲೆಯಲ್ಲಿ, ಹನಿ ನೀರಾವರಿಗೆ ಒತ್ತು ನೀಡಲೇ ಬೇಕಾಗಿದೆ. ಸುಸ್ಥಿರ ಕೃಷಿಯ ರಾಷ್ಟ್ರೀಯ ಮಿಷನ್ ೧೩ ರಾಜ್ಯಗಳ ೬೪ ಜಿಲ್ಲೆಗಳಲ್ಲಿ ನಡೆಸಿದ ಅಧ್ಯಯನ ಗಮನಾರ್ಹ. ಹನಿ ನೀರಾವರಿ ಬಳಕೆಯಿಂದಾಗಿ, ಅಲ್ಲಿ ನೀರಿನ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ (ಮತ್ತು ಆ ಗೊಬ್ಬರಗಳ ವೆಚ್ಚ) ಕಡಿಮೆಯಾಗಿತು; ಜೊತೆಗೆ ಬೆಳೆಗಳ ಫಸಲಿನಲ್ಲಿ ಹೆಚ್ಚಳ ದಾಖಲಾಯಿತು: ಗೋಧಿಯಲ್ಲಿ ಶೇ.೨೦ ಮತ್ತು ಸೋಯಾಬೀನಿನಲ್ಲಿ ಶೇ.೪೦ ಹೆಚ್ಚಳ. ಬಹುಪಾಲು ರೈತರು ಹನಿ ನೀರಾವರಿ ಅಳವಡಿಸಲು ಕಷ್ಟಸಾಧ್ಯ – ಅದರ ಅಧಿಕ ವೆಚ್ಚದ ಕಾರಣದಿಂದಾಗಿ. ಆದ್ದರಿಂದ, ಸಣ್ಣ ಮತ್ತು ಅತಿಸಣ್ಣ ರೈತರು ಹನಿ ನೀರಾವರಿ ಅಳವಡಿಸಲು ಸಬ್ಸಿಡಿ ನೀಡುವುದು ಅತ್ಯಗತ್ಯ.
ಮೂರನೆಯದಾಗಿ, ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ. ಯಾಕೆಂದರೆ, ರೈತನಿಗೆ ಸಿಗುವುದು ಗ್ರಾಹಕ ಪಾವತಿಸುವ ಬೆಲೆಯ ಅರ್ಧ ಪಾಲು ಅಥವಾ ಅದಕ್ಕಿಂತ ಕಡಿಮೆ. ಜೊತೆಗೆ, “ಲೋಡಿಂಗ್, ಅನ್-ಲೋಡಿಂಗ್, ವೇಸ್ಟೇಜ್” ಇತ್ಯಾದಿ ಹೆಸರಿನಲ್ಲಿ ರೈತರ ಶೋಷಣೆ ಮತ್ತು ಸುಲಿಗೆ ಸ್ವಾತಂತ್ರ್ಯ ಬಂದು ೭೦ ವರುಷ ದಾಟಿದ ನಂತರವೂ ಮುಂದುವರಿದಿದೆ. ಕೇಂದ್ರ ಸರಕಾರವು ೨೦೦೩ರಲ್ಲೇ ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯಿದೆ ರೂಪಿಸಿದ್ದರೂ ಹಲವು ರಾಜ್ಯಗಳು ಅದನ್ನು ಇನ್ನೂ ಜ್ಯಾರಿ ಮಾಡಿಲ್ಲ. “ರಾಷ್ಟ್ರೀಯ ಕೃಷಿ ಮಾರುಕಟ್ಟೆ” ಎಂಬ ಕೇಂದ್ರ ಸರಕಾರದ ಇಲೆಕ್ಟ್ರಾನಿಕ್ ಮಾಧ್ಯಮದ ಮಾರುಕಟ್ಟೆ ವ್ಯವಸ್ಥೆಯಿಂದ ರೈತರಿಗೆ ಪ್ರಯೋಜನ ಆದೀತೇ? ಕಾದು ನೋಡಬೇಕಾಗಿದೆ.
ನಾಲ್ಕನೆಯದಾಗಿ, ನಮ್ಮ ದೇಶದಲ್ಲಿ ಕೃಷಿರಂಗಕ್ಕೆ ಸಂಶೋಧನೆಯ ಬೆಂಬಲ ತೀರಾ ಕಡಿಮೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೆಂದ್ರಗಳ ಎಷ್ಟು ಸಂಶೋಧನೆಗಳು ರೈತಸ್ನೇಹಿ ಆಗಿವೆಯೆಂದು ಪರಿಶೀಲಿಸಿದರೆ ನಿರಾಶೆಯಾಗುತ್ತದೆ. ಈ ಶೋಚನೀಯ ಪರಿಸ್ಥಿತಿಗೆ ಒಂದು ಕಾರಣ, ಆ ಸಂಸ್ಥೆಗಳಿಗೆ ನೀಡುವ ಅನುದಾನಗಳ ಬಹುಪಾಲು ಸಂಶೋದನೆಗಲ್ಲ; ಬದಲಾಗಿ ವೇತನ ಮತ್ತು ಭತ್ತೆಗಳಿಗೆ ವಿನಿಯೋಗ ಆಗುತ್ತಿರುವುದು. ಆದ್ದರಿಂದ, ಇನ್ನಾದರೂ ಕೃಷಿಸಂಶೋಧನೆಗಳು ರೈತರ ನೈಜ ಸಮಸ್ಯೆಗಳನ್ನು ಎತ್ತಿಕೊಳ್ಳಬೇಕಾಗಿದೆ.
ಇವೆಲ್ಲವನ್ನು ಗಮನಿಸಿದಾಗ, ಭಾರತದ ರೈತನ ಆದಾಯ ಕಳೆದ ಒಂದೆರಡು ದಶಕಗಳಲ್ಲಿ ಎಷ್ಟು ಹೆಚ್ಚಾಗಿದೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. “ಇಂಡಿಯಾ ಸ್ಪೆಂಡ್” ವಿಶ್ಲೇಷಣೆ, ಈ ಪ್ರಶ್ನೆಗೆ ಉತ್ತರ ನೀಡಿದೆ. ಅದರ ಪ್ರಕಾರ: ಹತ್ತು ವರುಷಗಳ (೨೦೦೩ರಿಂದ ೨೦೧೩) ಅಂಕೆಸಂಖ್ಯೆಗಳನ್ನು ಏರುತ್ತಿರುವ ಕೃಷಿವೆಚ್ಚಗಳಿಗೆ ಹೊಂದಾಣಿಕೆ ಮಾಡಿದರೆ, ಭಾರತದ ರೈತನ ಆದಾಯ ಈ ಅವಧಿಯಲ್ಲಿ ವರುಷಕ್ಕೆ ಕೇವಲ ಶೇ.೫ ಹೆಚ್ಚಾಗಿದೆ!
ಹಾಗಿರುವಾಗ, ೨೦೨೨ರಲ್ಲಿ, ಅಂದರೆ ಇನ್ನು ಮೂರೇ ವರುಷಗಳಲ್ಲಿ ರೈತರ ಆದಾಯ ಇಮ್ಮಡಿ ಮಾಡಬೇಕಾದರೆ ಕೇಂದ್ರ ಸರಕಾರ ಫಲಿತಾಂಶ-ನಿರ್ದೇಶಿತ ಯೋಜನೆಗಳನ್ನು ತುರ್ತಾಗಿ ಜ್ಯಾರಿ ಮಾಡಲೇ ಬೇಕಾಗಿದೆ.
(“ಸಂಪದ"ದಲ್ಲಿ ೧೧ ಜುಲಾಯಿ ೨೦೧೮ರಂದು ಪ್ರಕಟವಾದ “೪೦,೦೦೦ ಮಣ್ಣಿನ ಮಕ್ಕಳ ಮುಂಬೈ ಮುತ್ತಿಗೆ” ಲೇಖನವನ್ನೂ ಓದಿ)
ಪೋಟೋಗಳು: ೫ ಸಪ್ಟಂಬರ್ ೨೦೧೮ರಂದು ಢೆಲ್ಲಿಯಲ್ಲಿ ರೈತರ ಪ್ರತಿಭಟನಾ ಮೆರವಣಿಗೆ ಮತ್ತು ಹಾಲನ್ನು ರಸ್ತೆಗೆ ಸುರಿದು ಪ್ರತಿಭಟಿಸುತ್ತಿರುವ ರೈತರು