ತಂತ್ರಜ್ಞಾನಗಳ ಸುಳಿಯಲ್ಲಿ ಮಾನವ

ತಂತ್ರಜ್ಞಾನಗಳ ಸುಳಿಯಲ್ಲಿ ಮಾನವ

ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ನೋಡುತ್ತಾ ನೋಡುತ್ತಾ ಒಂದು ದಿನ ಮಾನವ ವಿಮಾನವನ್ನು ನಿರ್ಮಾಣ ಮಾಡಿ ಹಾರಲು ಕಲಿತ. ಚಂದ್ರನನ್ನು ‘ಚಂದಮಾಮಾ ಬಾ ಬಾ’ ಎನ್ನುತ್ತಾ ಅವನಿನ್ನು ಇಲ್ಲಿಗೆ ಬರಲಾರ ಎಂದು ಇವನೇ ಚಂದ್ರಲೋಕಕ್ಕೆ ಹೋದ. ದೂರದ ವ್ಯಕ್ತಿಗಳ ಸಂಪರ್ಕಕ್ಕಾಗಿ ದೂರವಾಣಿ ಕಂಡು ಹಿಡಿದ. ದೂರವಾಣಿ ಕಂಡು ಹಿಡಿದ ಅಲೆಕ್ಸಾಂಡರ್ ಗ್ರಹಾಂ ಬೆಲ್ ಎಂಬ ವ್ಯಕ್ತಿ ತಾನು ಕಂಡು ಹಿಡಿದ ಸಾಧನದಿಂದ ಮೊದಲ ಬಾರಿ ‘ಹಲೋ’ ಎಂದು ಹೇಳಿದಾಗ ಮುಂದೊಂದು ದಿನ ದೂರವಾಣಿ ಎಂಬ ಸಾಧನ ವಯರ್ ಲೆಸ್ ಆದ ಮೊಬೈಲ್ ಆಗಿ ಬದಲಾಗುತ್ತದೆ ಎಂಬ ಕಲ್ಪನೆ ಇತ್ತೇ? ಒಂದಿಡೀ ಕೋಣೆಯನ್ನು ಆವರಿಸಿಕೊಂಡಿದ್ದ ಗಣಕ ಯಂತ್ರ (ಕಂಪ್ಯೂಟರ್) ಸಾಧನವು ಬರ ಬರುತ್ತಾ ಡೆಸ್ಕ್ ಟಾಪ್, ಲಾಪ್ ಟಾಪ್, ಪಾಮ್ ಟಾಪ್ ಹೀಗೆ ಆಕಾರದಲ್ಲಿ ಕಿರಿದಾಗುತ್ತಾ ಕಾರ್ಯ ಕ್ಷಮತೆಯಲ್ಲಿ ಹಿರಿದಾಗುತ್ತಾ ಹೋದದ್ದು ಬದಲಾಗುತ್ತಿರುವ ತಂತ್ರಜ್ಞಾನದ ಫಲವೇ ಅಲ್ಲವೇ?

ತಂತ್ರಜ್ಞಾನಗಳು ಬದಲಾಗುತ್ತಾ ನಾವೂ ಬದಲಾಗಿದ್ದೇವೆ ಅಥವಾ ಅನಿವಾರ್ಯವಾಗಿ ಬದಲಾಗಬೇಕಾಗಿದೆ. ಹಿಂದೊಮ್ಮೆ ಮುದ್ರಣಾಲಯದಲ್ಲಿ ಅಚ್ಚು ಮೊಳೆ ಜೋಡಿಸುತ್ತಿದ್ದ ಕಾರ್ಮಿಕರು ಗಣಕ ಯಂತ್ರ ಆಧಾರಿಕ ಮುದ್ರಣ ವ್ಯವಸ್ಥೆ ಬಂದಾಗ ಕೆಲಸ ಕಳೆದುಕೊಂಡದ್ದು ನೆನಪಿದೆಯಲ್ಲವೇ? ಜಗತ್ತೇ ಹೀಗೆ. ಎಲ್ಲರೂ ನಡೆಯುವಾಗ ನೀವೂ ನಡೆಯಬೇಕು. ಓಡುವಾಗ ಓಡಬೇಕು. ನಾವು ತೆವಳುತ್ತಲೇ ಇರುತ್ತೇವೆ ಎಂದರೆ ನೀವು ಹಿಂದೆಯೇ ಉಳಿದು ಬಿಡುತ್ತೀರಿ. ಜಗತ್ತು ನಿಮ್ಮಿಂದ ಬಹಳ ಮುಂದೆ ಚಲಿಸಿಬಿಡುತ್ತದೆ. 

೯೦ ರ ದಶಕದಲ್ಲಿ ಅಂಬೆಗಾಲಿಕ್ಕುತ್ತಾ ಬಂದ ಮೊಬೈಲ್ ಈಗ ಸರ್ವಂತರಯಾಮಿಯಾಗಿದೆ. ಯಾರ ಹತ್ತಿರ ಮೊಬೈಲ್ ಇಲ್ಲ ಹೇಳಿ? ಅದೂ ಸ್ಮಾರ್ಟ್ ಫೋನ್ ಆಗಿರಲೇ ಬೇಕು. ವಾಟ್ಸಾಪ್, ಫೇಸ್ಬುಕ್ ಎಲ್ಲವೂ ಇರಲೇ ಬೇಕು. ಇಂಟರ್ನೆಟ್ ಸಂಪರ್ಕವಂತೂ ಅತ್ಯಗತ್ಯ. ಒಂದು ಕ್ಷಣ ಫೋನ್ ಸಂಪರ್ಕವಿಲ್ಲದೇ ಹೋದರೆ ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುತ್ತೇವೆ. ನಾವು ತಂತ್ರಜ್ಞಾನದ ಸುಳಿಯಲ್ಲಿ ಸಿಕ್ಕಿ ಬಿದ್ದು ಅದರ ದಾಸರಾಗಿ ಹೋಗಿದ್ದೇವೆ. ಹಿರಿಯರಷ್ಟೇ ಅಲ್ಲ, ಮಕ್ಕಳೂ ಮೊಬೈಲ್ ಚಟಕ್ಕೆ ಬಿದ್ದಿದ್ದಾರೆ. ಊಟ ಮಾಡಿಸಲು ಸುಲಭ ವ್ಯವಸ್ಥೆ ಎಂದರೆ ಮೊಬೈಲ್ ಮಕ್ಕಳಿಗೆ ತೋರಿಸುವುದು. ಮೊದಲಿಗೆ ಅರ್ಧ ಗಂಟೆ ನೋಡುತ್ತಿದ್ದ ಮಗು ಕ್ರಮೇಣ ದಿನವಿಡೀ ಮೊಬೈಲ್ ನೋಡುತ್ತಾ ಇರುತ್ತೆ. ಯಾವುದು ಅಗತ್ಯವೋ ಅದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಬಿಡುತ್ತೆ. 

ಆದರೆ ನಾವು ಸಾರಾಸಗಟಾಗಿ ತಂತ್ರಜ್ಞಾನವನ್ನು ಬಿಡಲಾಗದು. ಹಲವಾರು ತಂತ್ರಜ್ಞಾನಗಳು ನಮ್ಮನ್ನು ಇಂದು ಆಧುನಿಕ ಜಗತ್ತಿನೊಡನೆ ಸಂಪರ್ಕ ಬೆಳೆಸುವಂತೆ ಮಾಡಿದೆ. ಒಂದು ಸಮಯದಲ್ಲಿ ಮಕ್ಕಳಿಗೆ ರಿಮೋಟ್ ಮೂಲಕ ಹಾರಾಟ ಮಾಡುವ ಹೆಲಿಕಾಪ್ಟರ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದವು. ಕ್ರಮೇಣ ‘ದ್ರೋಣ್’ ಎಂಬ ಸಾಧನ ಮುನ್ನೆಲೆಗೆ ಬಂತು. ಈಗಂತೂ ಮದುವೆ ಸಮಾರಂಭದಿಂದ ಹಿಡಿದು, ರಕ್ಷಣಾ ವ್ಯವಸ್ಥೆಯ ತನಕ ದ್ರೋಣ್ ಅಗತ್ಯವಾಗಿದೆ. ನೂರಾರು ನಮೂನೆಯ ದ್ರೋಣ್ ಗಳು ಮಾರುಕಟ್ಟೆಯಲ್ಲಿವೆ. ಅದರ ಹಾವಳಿ ಎಷ್ಟು ಜೋರಾಯಿತೆಂದರೆ ಈಗ ಸರಕಾರವೇ ಅದಕ್ಕೆ ಕಡಿವಾಣ ಹಾಕಿದೆ. ದ್ರೋಣ್ ಬಳಕೆದಾರರು ಅವುಗಳನ್ನು ನೊಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. 

ದೂರವಾಣಿಗಳು ಮೊದಲು ವಯರ್ ನಲ್ಲಿ ಬಂಧಿತವಾಗಿದ್ದವು. ಎಲ್ಲಿಗೂ ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ. ಕ್ರಮೇಣ ಮೊಬೈಲ್ ಫೋನ್ ಬಂದವು. ಮೊದಲಿಗೆ ದೊಡ್ಡ ಗಾತ್ರದಲ್ಲಿದ್ದ, ತೂಕದಲ್ಲಿ ಭಾರವಾಗಿದ್ದ ಫೋನ್ ಗಳು ನಿಧಾನವಾಗಿ ಸಣ್ಣ ಗಾತ್ರದಲ್ಲಿ ಬರಲು ಪ್ರಾರಂಭಿಸಿದವು. ಮೊದಲು ಹೊರ ಹೋಗುವ ಕರೆಗಳು ದುಬಾರಿ, ಅದರಲ್ಲಿ ಒಳಬರುವ ಕರೆಗಳಿಗೂ ದರವಿತ್ತು. ನಿಧಾನವಾಗಿ ಒಳಬರುವ ಕರೆಗಳು ಉಚಿತವಾದವು. ಸ್ಥಿರ ದೂರವಾಣಿಗಳು ನಿಧಾನವಾಗಿ ಜನರಿಂದ ದೂರ ಸರಿಯಲಾರಂಭಿಸಿದವು. ಯಾವಾಗ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವೋ, ತಂತ್ರಜ್ಞಾನದ ಪರಿಭಾಷೆಯೇ ಬದಲಾಗತೊಡಗಿತು. ಹೊಸ ಹೊಸ ಆಪ್ ಗಳು, ಹೊಸ ಹೊಸ ವಿನ್ಯಾಸಗಳು ಬಂದುವು. ಯುವ ಸಮೂಹ ತಕ್ಷಣವೇ ಅವುಗಳತ್ತ ಒಲವು ತೋರಿತು. ಆಂಡ್ರಾಯ್ಡ್, ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಗಳು ಚಾಲ್ತಿಗೆ ಬಂದುವು. ಸಾವಿರಾರು ಆಟಗಳು ಹುಟ್ಟಿಕೊಂಡವು. ಕೆಲವಂತೂ ಜೀವಹಾನಿಯಾಗುವಷ್ಟು ಮುಂದುವರೆದವು. ಚೀನಾ ದೇಶವಂತೂ ಹಲವಾರು ಆಪ್ ಗಳನ್ನು ತಯಾರು ಮಾಡಿ ನಮ್ಮ ಕಡೆಗೆ ತೂರಿ ಬಿಟ್ಟವು. ಕೆಲವು ಆಪ್ ಗಳು ನಮ್ಮ ಖಾಸಗಿ ದಾಖಲೆಗಳನ್ನೂ ಕದಿಯಲು ಪ್ರಾರಂಭಿಸಿದವು. ಸೈಬರ್ ಕ್ರೈಂ ಎಂಬ ಹೊಸ ವಿಭಾಗವೇ ಪ್ರಾರಂಭವಾಯಿತು. ದಿನಕ್ಕೆ ನೂರಾರು ದೂರುಗಳು ದಾಖಲಾದವು. ಈಗಲೂ ಮುಂದೇನು ಕಾದಿದೆಯೋ ಎಂಬ ಕುತೂಹಲಭರಿತ ಗಾಭರಿ ಎಲ್ಲರಲ್ಲೂ ಇದೆ.

ಕರೆನ್ಸಿ ನೋಟುಗಳ ಬದಲಾಗಿ ಪ್ಲಾಸ್ಟಿಕ್ ಕಾರ್ಡ್ ಗಳೆಂಬ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳು ಬ್ಯಾಂಕ್ ಗಳಲ್ಲಿ ಚಾಲ್ತಿಗೆ ಬಂದವು. ಮುದ್ರಿತ ನೋಟುಗಳ ಸಂಖ್ಯೆ ಕಮ್ಮಿಯಾಗುತ್ತಾ ಹೋಯಿತು. ಈ ಕಾರ್ಡ್ ಗಳಿಗೆ ಪಿನ್ (ನಿಗೂಢ ಸಂಖ್ಯೆ) ಸಂಖ್ಯೆ ಅಳವಡಿಕೆಯಾಯಿತು. ಎಟಿಎಂ ಮೆಶೀನ್ ಗಳು ಎಲ್ಲೆಡೆ ಕಂಡು ಬರಲಾರಂಬಿಸಿದವು. ನಿಧಾನವಾಗಿ ಅಂತರ್ಜಾಲವನ್ನು ದುರ್ಬಳಕೆ ಮಾಡಿ ನಮ್ಮ ಹಣವನ್ನು ಲಪಟಾಯಿಸುವ ಜನರು ಹುಟ್ಟಿಕೊಂಡರು. ಕಾರ್ಡ್ ಸಂಖ್ಯೆ ಕೊಡಿ, ಸಿವಿವಿ ಸಂಖ್ಯೆ ಕೊಡಿ, ಓಟಿಪಿ ಕೊಡಿ ಎಂದು ಕರೆಗಳು ಬರಲು ಪ್ರಾರಂಭವಾಯಿತು. ಜನರೂ ಇವರ ಮಾತನ್ನು ನಂಬಿದರು ಹಣ ಕಳೆದುಕೊಂಡರು. ಹಲವಾರು ಸಣ್ಣ ಪುಟ್ಟ ಬಡದೇಶಗಳಿಗೆ ಇದೇ ಹಣ ತರುವ ದಂಧೆಯಾಯಿತು. ಯಾವುದೇ ದೂರು ನೀಡಿದರೂ ವಿಚಾರಣೆ ಎಲ್ಲಿಂದ ಪ್ರಾರಂಭಿಸಬೇಕು ಎಂಬುದನ್ನು ಅರಿಯಲು ನಮ್ಮ ಪೋಲೀಸರು ಅಸಮರ್ಥರಾದರು. ಪೋಲೀಸರು ರಂಗೋಲಿ ಕೆಳಗೆ ನುಸುಳಿದರೆ, ಕಾಳದಂಧೆ ಕೋರರು ಫ್ಲೋರ್ ಕೆಳಗೇ ನುಸುಳಿದರು. 

ತಂತ್ರಜ್ಞಾನಗಳು ಈಗಿನ ಯುಗಕ್ಕೆ ಅತ್ಯಗತ್ಯ. ಆದರೆ ಒಂದು ದಿನ ಈ ತಂತ್ರಜ್ಞಾನಗಳು ಕೈಕೊಟ್ಟರೆ ನಮ್ಮ ಗತಿ ಹರೋಹರವಾಗುತ್ತದೆ. ಇದು ಈಗಾಗಲೇ ಅಂತರ್ಜಾಲ ಇಲ್ಲದ, ಸಿಗದ ಸಮಯದಲ್ಲಿ ನಮ್ಮ ಗಮನಕ್ಕೆ ಬಂದಿರುತ್ತದೆ. ಬ್ಯಾಂಕ್, ಅಂಚೆ ಕಚೇರಿಗೆ ಹೋದರೆ ನಿಮಗೆ ರೆಡಿ ಮೇಡ್ ಉತ್ತರ ಸಿಗುತ್ತದೆ. ‘ ಸರ್ವರ್ ಇಲ್ಲ'. ಗ್ರಾಹಕರ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಒಂದು ನಿಮಿಷದ ಕೆಲಸ ಒಂದು ಗಂಟೆಯಾದರೂ ಮುಗಿಯುವುದಿಲ್ಲ.

ಅಂತರ್ಜಾಲದ ಬಳಕೆ ಹೆಚ್ಚಿದಂತೆ ವೈರಸ್ ದಾಳಿಯಿಡಲು ಪ್ರಾರಂಭವಾಯಿತು. ಅದಕ್ಕೆ ಪ್ರತಿ ವೈರಸ್ (ಆಂಟಿ ವೈರಸ್) ತಯಾರು ಮಾಡಿದರು. ವೈರಸ್ ಸೃಷ್ಟಿ ಮಾಡಿದವನೇ ಆಂಟಿ ವೈರಸ್ ತಯಾರು ಮಾಡುತ್ತಾನೆ ಎಂಬುದು ಎಲ್ಲೆಡೆಯಲ್ಲಿರುವ ಮಾತು. ಮದ್ಯದಂಗಡಿ ಇಟ್ಟವನೇ ಕ್ಯಾನ್ಸರ್ ಆಸ್ಪತ್ರೆ ತೆರೆದಂತೆ ಈ ದಂಧೆ. ನಾವು ನಿಧಾನವಾಗಿ ಈ ಸೌಕರ್ಯಗಳಿಗೆ ಒಗ್ಗಿ ಹೋದೆವು. ಒಂದು ರೀತಿಯಲ್ಲಿ ದಾಸರೇ ಆಗಿಹೋದೆವು.

ಮೊಬೈಲ್ ಈಗ ಕೈಗಡಿಯಾರದ ರೂಪದಲ್ಲೂ ಬರುತ್ತಿದೆ. ಸ್ಮಾರ್ಟ್ ವಾಚ್ ಗಳು ಎಂಬ ಹೆಸರಿಂದ ಈಗಾಗಲೇ ಮಾರುಕಟ್ಟೆಯಲ್ಲಿವೆ. ಇದರಲ್ಲಿ ಅಂತರ್ಜಾಲ, ವೈಫೈ, ಬ್ಲೂಟೂತ್, ಸಿಮ್ ಸಂಪರ್ಕ, ಮಾತನಾಡುವ ಸೌಲಭ್ಯವೂ ಇದೆ. ಕೆಲವು ವಾಚ್ ಗಳು ನಿಮ್ಮ ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಬಣ್ಣವನ್ನೂ ಬದಲಾಯಿಸುತ್ತವೆಯಂತೆ. ವಿವಿಧ ನಮೂನೆಯ ಹೆಲ್ಮೆಟ್ ಗಳು ಬರಲಾರಂಬಿಸಿವೆ. ನಿಮ್ಮ ಹಿಂದೆ ಏನಾಗುತ್ತಿದೆ, ಬದಿಗಳಲ್ಲಿ ಏನಿದೆ ಎಂದೆಲ್ಲಾ ಅದು ಧ್ವನಿಯ ಮೂಲಕ ತಿಳಿಸುತ್ತದೆ. ಕ್ಯಾಮರಾ, ಬ್ಲೂಟೂತ್ ಸಂಪರ್ಕ ಹೊಂದಿರುವ ಹೆಲ್ಮೆಟ್ ಗಳೂ ಲಭ್ಯ. 

ಹೀಗೆ ಚಲನ ಚಿತ್ರಗಳನ್ನು ನೋಡುವಂತಹ, ತ್ರೀಡೀ ಸೌಲಭ್ಯ ಇರುವ ಕನ್ನಡಕಗಳು, ನಿಮ್ಮ ಕೈಯಲ್ಲೇ ಬಿಪಿ, ಶುಗರ್ ನೋಡುವ ಮಾಪಕಗಳು, ಆಟದ ಸಾಮಾನುಗಳು ಮಾರುಕಟ್ಟೆಗೆ ಬರುತ್ತಿವೆ. ಎಲ್ಲವೂ ವಿವಿಧ ತಂತ್ರಜ್ಞಾನ ಆಧರಿತವೇ. ಇದರಿಂದ ನಮಗೆ ಉಪಯೋಗ ಬಹಳಷ್ಟಿದೆ. ಆದರೆ ಕ್ರಮೇಣ ಅದಕ್ಕೇ ಹೊಂದಿಕೊಂಡರೆ ಮುಂದೊಂದು ದಿನ ಕಷ್ಟವೂ ಬರಬಹುದು. ೨ಜಿಯಿಂದ ಪ್ರಾರಂಭವಾದ ಇಂಟರ್ನೆಟ್ ವೇಗವು ಈಗ ೪ಜಿ ದಾಟಿ ೫ಜಿ ಗೆ ಹಾರಲು ಸಿದ್ದವಾಗಿ ನಿಂತಿದೆ. ಕಾಲ ಕಾಲಕ್ಕೆ ನಾವೂ ಬದಲಾಗಬೇಕಾದದ್ದು ಅನಿವಾರ್ಯ. ಸೈಬರ್ ಕಳ್ಳರೂ ಈ ತಂತ್ರಜ್ಞಾನದ ದುರುಪಯೋಗವನ್ನು ಮಾಡಲು ಸಿದ್ಧರಾಗಿಯೇ ಇರುತ್ತಾರೆ. ನಮ್ಮ ಜಾಗ್ರತೆಯಲ್ಲಿ ನಾವಿರುವುದು ಒಳ್ಳೆಯದು. 

ಚಿತ್ರ : ಅಂತರ್ಜಾಲ ತಾಣ