ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?
(ಇ-ಲೋಕ-69)(07/4/2008)
ಕಂಪ್ಯೂಟರೀಕರಣಗೊಂಡ ಬ್ಯಾಂಕುಗಳ ವ್ಯವಹಾರ ಪಾರದರ್ಶಕವಾಗಿರುತ್ತವೆ,ಸಾಲದ ಮೇಲಿನ ಬಡ್ಡಿ ಲೆಕ್ಕಾಚಾರ ಸರಿಯಿರುತ್ತದೆ ಎಂಬ ತಿಳುವಳಿಕೆ ಹೊಂದಿದ ಬ್ಯಾಂಕು ಗ್ರಾಹಕರು ನೀವಾಗಿದ್ದರೆ,ಎಚ್ಚೆತ್ತು ಕೊಳ್ಳಿ.ಸರಿಯಾಗಿ ಅಭಿವೃದ್ಧಿ ಪಡಿಸದ ತಂತ್ರಾಂಶ ಕಾರಣ,ಬ್ಯಾಂಕು ಸಾಲದ ಮೇಲೆ ಬೀಳುತ್ತಿರುವ ಬಡ್ಡಿಯೇ ತಪ್ಪಾಗಿರಬಹುದು!
ಉಡುಪಿ ಜಿಲ್ಲೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಬ್ಯಾಂಕಿನಲ್ಲಿ ಮನೆ ಕಟ್ಟಲು ಸಾಲ ತೆಗೆದು ಕೊಂಡ ಈ ಬರಹಗಾರನ ಅನುಭವವನ್ನೇ ಕೇಳಿ.ಸಾಲ ತೆಗೆದುಕೊಂಡದ್ದು ಮೂರು ವರ್ಷಗಳ ಕೆಳಗೆ.ಮಾಸಿಕ ಕಂತಿಗಿಂತ ಹೆಚ್ಚೇ ಕಟ್ಟಿ ಸಾಲದಿಂದ ಮುಕ್ತನಾಗುವ ಕನಸು ಕಾಣುತ್ತಾ,ಸಾಮರ್ಥ್ಯಕ್ಕನುಸಾರವಾಗಿ ತಿಂಗಳೂ ತಿಂಗಳೂ ಕಂತು ಕಟ್ಟುತ್ತಾ ಬಂದೆ.ಆದಾಯಕರ ಪಾವತಿಸಲು ಲೆಕ್ಕ ಕೊಡಬೇಕಿದ್ದರಿಂದ ಇತ್ತೀಚೆಗೆ ಸಾಲದ ವಿವರಗಳನ್ನು ಪಡೆದುಕೊಂಡಾಗ,ಪಾವತಿಯಾದ ಬಡ್ಡಿಯ ಮೊತ್ತ ಲೆಕ್ಕಕ್ಕಿಂತ ಹೆಚ್ಚೆನಿಸಿತು.ವಿಚಾರಿಸಿದಾಗ,"ಹಾಗಾಗಲು ಸಾಧ್ಯವಿಲ್ಲ,ಬಡ್ಡಿ ಲೆಕ್ಕಗಳೆಲ್ಲಾ ಕಂಪ್ಯೂಟರೇ ಮಾಡುವುದು",ಎಂಬ ಹಾರಿಕೆಯ ಉತ್ತರ ಸಿಕ್ಕಿತು.ಯಾಕಾದರೂ ಇರಲಿ ಎಂದು ಒಂದು ತಿಂಗಳ ಬಡ್ಡಿಯನ್ನು ಲೆಕ್ಕ ಹಾಕಿ ನೋಡಿದಾಗ,ನಿಜವಾಗಿ ತೆರಬೇಕಾದ್ದಕ್ಕಿಂತ ಒಂದು ಸಾವಿರದಷ್ಟು ಹೆಚ್ಚು ಬಡ್ಡಿ ವಿಧಿಸಿದ್ದು ಕಂಡು ಬಂತು.ಬ್ಯಾಂಕ್ ಅಧಿಕಾರಿಯನ್ನು ಭೇಟಿಯಾಗಿ ವಿಚಾರಿಸಿದಾಗ ಎಲ್ಲವೂ ಸರಿಯಾಗಿದೆ ಎಂಬ ನಿಲುವು.ಬಡ್ಡಿ ಲೆಕ್ಕ ಹಾಕುವ ವಿಧಾನ ತೋರಿಸಿ ಎಂದು ಪಟ್ಟು ಹಿಡಿದಾಗಲಷ್ಟೇ,"ಏನೋ ತಪ್ಪು ಸಂಭವಿಸಿದ್ದ್ದು ಹೌದು...ಏನದು ತಪ್ಪು ನೋಡುತ್ತೇವೆ..",ಎಂಬ ಸಮಜಾಯಿಷಿಕೆ.ಕೊನೆಗೂ ಬಂತು ನೋಡಿ ತಪ್ಪು ಲೆಕ್ಕಕ್ಕೆ ಕಾರಣ-ಅದು ತಂತ್ರಾಂಶದಲ್ಲಿನ ತಪ್ಪು!ನಿಗದಿತ ಮಾಸಿಕ ಕಂತಿನ ಪ್ರಕಾರ ಪಾವತಿಸಿದಾಗ ಎಷ್ಟು ಸಾಲದ ಮೊತ್ತ ಉಳಿಯುತ್ತದೆಯೋ,ಅದರ ಪ್ರಕಾರವೇ ತಂತ್ರಾಂಶವು ಪ್ರತಿ ತಿಂಗಳೂ ಬಡ್ಡಿ ಲೆಕ್ಕ ಹಾಕುತ್ತದೆ. ಯಾವನಾದರೂ ಸಾಲಗಾರ ಅಧಿಕ ಮರುಪಾವತಿ ಮಾಡಿದ್ದರೆ,ಅವನ ಖಾತೆಯ ಲೆಕ್ಕಾಚಾರಗಳೆಲ್ಲಾ ತಪ್ಪು ತಪ್ಪು!ಬ್ಯಾಂಕಿನವರಿಗೆ ತಂತ್ರಾಂಶ ತಪ್ಪು ಲೆಕ್ಕಾಚಾರ ಹಾಕುತ್ತಿರುವುದು ಗೊತ್ತಿಲ್ಲವೇ?ಗೊತ್ತಿದೆಯಂತೆ. ಆ ಬಗ್ಗೆ ಪ್ರಧಾನ ಕಚೇರಿಗೆ ಅವರು ವರದಿ ಕೊಟ್ಟಿದ್ದಾರಂತೆ.ಹಾಗಿದ್ದರೂ ಗ್ರಾಹಕನ ಖಾತೆಯ ಲೆಕ್ಕಗಳನ್ನು ಅವರು ತನಿಖೆಗೇಕೆ ಒಳಪಡಿಸುವುದಿಲ್ಲ?ಗ್ರಾಹಕನು ಹೇಳಿದಾಗಲೂ ಹಾರಿಕೆಯ ಉತ್ತರ ನೀಡುವುದೇಕೆ?ಅನಿವಾರ್ಯವಾದಾಗ ಮಾತ್ರಾ ಗುಟ್ಟು ಬಿಟ್ಟು ಕೊಡುವುದೇಕೆ? ತಪ್ಪುಗಳನ್ನು ಸರಿ ಪಡಿಸುವ ಭರವಸೆಗಳು ನಿಜವಾಗಿಯೂ ಕಾರ್ಯಗತವಾಗುತ್ತವೆಯೇ?ಸಮಯವೇ ಹೇಳಬೇಕು.
ಕಾರು ಕಳ್ಳನನ್ನು ಹಿಡಿಯಲು ಅಂತರ್ಜಾಲ ತಾಣದ ಬಳಕೆ
ಕೆನಡಾದ ಶಾನ್ಗೆ ತನ್ನ ನಿಸ್ಸಾನ್ ಕಾರನ್ನು ಮಾರಬೇಕಿತ್ತು.ಜಪಾನಿ ಮೋಡೆಲ್ ಈ ಕಾರು ಅಲ್ಲಿನ ಇತರ ಕಾರುಗಳಂತಲ್ಲದೆ ಬಲಬದಿ ಚಾಲಕನ ಸೀಟು ಹೊಂದಿರುವಂತದ್ದು.ಕಾರು ಖರೀದಿಸಲು ಬಂದ ವ್ಯಕ್ತಿ ಪರೀಕ್ಷಾರ್ಥ ಚಾಲನೆ ಮಾಡಲು ಕಾರು ತೆಗೆದು ಕೊಂಡು ಹೋದ.ಹಾಗೆ ಹೋದ ಕಾರಿಗೆ ಶಾನ್ ಕಾದದ್ದೇ ಬಂತು-ಕಾರು ವಾಪಸ್ಸು ಬರಲೇ ಇಲ್ಲ!’ಖರೀದಿಸಲು’ ಬಂದಾತ ಕೈಕೊಟ್ಟದ್ದು ಗೊತ್ತಾದಾಗ ತಡವಾಯಿತು.ಮಾಲಕ ಸುಮ್ಮನಿರಲಿಲ್ಲ.ಪೊಲೀಸ್ ದೂರು ನೀಡಿ ಸುಮ್ಮನಿರಲಿಲ್ಲ.ಅಂತರ್ಜಾಲ ತಾಣ Beyond.caದಲ್ಲಿ ತನ್ನ ಕಳುವಾದ ಕಾರಿನ ವಿವರಗಳನ್ನು ಪ್ರಕಟಿಸಿ,ತಾಣದ ಬಳಕೆದಾರರ ಸಹಾಯ ಕೋರಿದ.ಅಮೆರಿಕಾದಲ್ಲಿ ಅಪರೂಪವಾದ ಬಲಬದಿಯ ಕಾರು ಚಾಲಕನ ಸೀಟು,ಜತೆಗೆ ಕದ್ದವನ ಕೈಯಲ್ಲಿ ಬೆರಳುಗಳು ಮೊಂಡಾಗಿರುವ ಸುಳಿವುಗಳು ಬಹಳ ಗಮನಾರ್ಹವಾಗಿದ್ದುವು.ಕಾರಿನ ಬಗೆಗಿನ ತಾಣವಾದ್ದರಿಂದ ಅದರ ಬಳಕೆದಾರರು ಕಳ್ಳನ ಪತ್ತೆಗೆ ನೆರವು ನೀಡಬಹುದು ಎಂಬ ಶಾನ್ನ ಲೆಕ್ಕಾಚಾರ ತಪ್ಪಾಗಲಿಲ್ಲ.ಜೇಮ್ಸ್ ಎಂಬ ಈ ತಾಣದ ಬಳಕೆದಾರ ಕಾರಿನಲ್ಲಿ ಸಾಗುತ್ತಿರುವಾಗ ನಿಸ್ಸಾನ್ ಕಾರೊಂದು ಎದುರಾಯಿತು.ಕಾರು ಚಾಲಕನ ಕೈಬೆರಳನ್ನು ನೋಡಿ,ಅದು ಕಳವಾದ ಕಾರೇ ಎಂದು ಖಚಿತ ಪಡಿಸಲು,ಜೇಮ್ಸ್ ತನ್ನ ಕೈಬೀಸಿದ.ಕಾರು ಚಾಲಕ ಕೈಬೀಸಿ ಪ್ರತಿಕ್ರಿಯಿಸಿದಾಗ,ಮೊಡು ಬೆರಳುಗಳು ಕಂಡಿತು.ಜೇಮ್ಸ್ "ಕಳವಿನ ಕಾರು ಚಲೋದಾಗಿದೆ", ಎಂದು ಕೂಗಿದಾಗ,ಕಳ್ಳ ಪ್ರತಿಭಟಿಸಿದ-"ಕಾರು ಕದ್ದದ್ದಲ್ಲ",ಎಂಬ ಮರುನುಡಿ ಬಂತು.ಆದರೆ ಕಾರು ನೂರು ಮೈಲು ವೇಗದಲ್ಲಿ ಓಡತೊಡಗಿತು.ಜೇಮ್ಸ್ ಕಾರು ಬೆನ್ನಟ್ಟುವ ಸಾಹಸಕ್ಕಿಳಿಯದೆ,ಪೊಲೀಸರಿಗೆ ಸುದ್ದಿ ಮುಟ್ಟಿಸಿದ.ಪೊಲೀಸರು ಕಾರು ಅಡ್ಡಹಾಕಲು ಯಶಸ್ವಿಯಾದರು.ಚಾಲಕನ ಬಂಧನದ ವಿಡಿಯೋ ಕ್ಲಿಪ್ಪಿಂಗ್ ಯುಟ್ಯೂಬ್ ತಾಣದಲ್ಲಿ ಸಾರ್ವಜನಿಕವೂ ಆಗಿದೆ.
ರಸ್ತೆ ಸಾರಿಗೆ ಸಂಕೇತ ನೀಡಲು ಎಲ್ ಇ ಡಿ ಬಳಕೆ
ಲಂಡನ್ನಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಟ್ರಾಫಿಕ್ ದೀಪಗಳನ್ನು ಕ್ರಮಕ್ರಮವಾಗಿ ಈಗಿನ ಬಲ್ಬ್ಗಳಿಂದ ಎಲ್ ಇ ಡಿ ದೀಪಗಳಿಗೆ ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.ಎಲ್ ಇ ಡಿ ಬೆಳಕು ಬೀರುವ ಅರೆವಾಹಕಗಳಿಂದ ತಯಾರಿಸಿದ ಡಯೋಡುಗಳು.ಚೈನಾದಂತಹ ದೇಶವೂ ಎಲ್ ಇ ಡಿ ಬಳಕೆಗೆ ಭಾರೀ ಮಟ್ಟದಲ್ಲಿ ಕೈಯಿಕ್ಕಿದೆ.ಚೀನಾದಿಂದ ಬರುತ್ತಿರುವ ಎಲ್ ಇ ಡಿ ಟಾರ್ಚುಗಳನ್ನು ನೀವೂ ಖರೀದಿಸಿರಬಹುದು.ಆದರೆ ನಾವ್ಯಾಕೋ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿಯೇ ಇಲ್ಲ.ಇಲೆಕ್ಟ್ರಾನಿಕ್ಸ್ನಲ್ಲಿ "ಮೂರ್"ನ ನಿಯಮ ಇರುವಂತೆ ಎಲ್ ಇ ಡಿ ಬಗ್ಗೆ ಹೈಟ್ಸ್ ನಿಯಮವಿದೆ.ಅದರ ಪ್ರಕಾರ ವರ್ಷದಿಂದ ವರ್ಷಕ್ಕೆ ಎಲ್ ಇ ಡಿ ದೀಪಗಳ ಪ್ರಕಾಶವಿ ಇಪ್ಪತ್ತು ಪಟ್ಟು ಅಧಿಕವಾಗಲಿದೆ, ಜತೆಗೆ ಪ್ರತಿ ಲ್ಯುಮೆನ್ ಪ್ರಕಾಶಕ್ಕೆ ತಗಲುವ ಖರ್ಚು ಹತ್ತು ಪಟ್ಟು ಇಳಿಯಲಿದೆ!
ಪಾವತಿ ಸಮಸ್ಯೆ:ಅಂತರ್ಜಾಲ ಬಂದ್?
ಅಂತರ್ಜಾಲ ಸೇವೆ ನೀಡುವ ಐಎಸ್ಪಿ ಮತ್ತು ನ್ಯೂಮೆಕ್ಸಿಕೋನ ನವಜೋದ ಟ್ರಾಯ್ ನಡುವಣ ವಿವಾದದ ಕಾರಣ ನವಜೋ ದೇಶಕ್ಕೆ ಅಂತರ್ಜಾಲ ಸಂಪರ್ಕ ಬಂದಾಗುವ ಭೀತಿ ತಲೆದೋರಿದೆ.ಅಂತರ್ಜಾಲ ಸೇವೆಗೆ ವಿಧಿಸಿದ ಶುಲ್ಕ ಹೆಚ್ಚಾಗಿದೆ ಎಂದು ತಕರಾರು ಒಡ್ಡಿ ದೂರಸಂಪರ್ಕ ಪ್ರಾಧಿಕಾರ ಎರಡು ಮಿಲಿಯನ್ ಡಾಲರು ಪಾವತಿ ತಡೆ ಹಿಡಿದಿತ್ತು. ಈ ಹಣ ತನ್ನ ಕೈಸೇರದಿದ್ದರೆ,ತಾನು ನೀಡಬೇಕಾಗಿರುವ ಉಪಗ್ರಹ ಸೇವೆ ಸಂಬಂಧಿ ಶುಲ್ಕ ಪಾವತಿಸಲಸಾಧ್ಯ.ಹಾಗಾಗಿ ಉಪಗ್ರಹ ಸೇವೆ ಲಭ್ಯವಾಗದೆ,ಅಂತರ್ಜಾಲ ಸಂಪರ್ಕವು ಸೋಮವಾರದ ನಂತರ ಸಿಗದು ಎಂದು ಸೇವಾದಾತೃ ಎಚ್ಚರಿಸಿದೆ.ಇಪ್ಪತ್ತೇಳು ಸಾವಿರ ಜನಸಂಖ್ಯೆಯುಳ್ಳ ನವಜೋ ನಾಗರಿಕರು ಅಂತರ್ಜಾಲ ಸೇವೆ ಪಡೆಯುತ್ತಾರೋ ಎನ್ನುವುದು ಈ ಲೇಖನವನ್ನು ನೀವು ಓದುವ ವೇಳೆಗೆ ಗೊತ್ತಾದೀತು.
*ಅಶೋಕ್ಕುಮಾರ್ ಎ