ತಂದೆಯ ಪ್ರೀತಿಯ ಮಾತು ...
೧೯೯೭ ನೇ ಇಸವಿ, ಮೇ ತಿಂಗಳಲ್ಲಿ SSLC ಪರೀಕ್ಷೆ ಫಲಿತಾಂಶಗಳ ಪ್ರಕಟ ಅಂತ ತಿಳಿದಾಗ :
ಶಾಲೆಯ ಮೇಸ್ಟ್ರುಗಳ ಕಾತುರ, ಎಷ್ಟು ಶೇಕಡಾವಾರು ಫಲಿತಾಂಶ ಬರಬಹುದೆಂದೂ, ಹೆಡ್ ಮೇಸ್ಟ್ರರ ಮುಖದಲ್ಲಿ ಎಂದೂ ನೋಡದ ಭಯದ ಸಂತೋಷ, ಎಷ್ಟು ವಿಧ್ಯಾರ್ಥಿಗಳು ಪಾಸ್ ಆಗಬಹುದೆಂದೂ, ಹೆತ್ತವರ ಆಲೋಚನೆಯಲ್ಲಿ ಯಥಾಸ್ಥಿತಿ .. ಮಕ್ಕಳಿಗೆ ಮುಂದೇನು ಮಾಡಬೇಕೆಂದೂ. ನಾವೆಲ್ಲಾ (ವಿಧ್ಯಾರ್ಥಿಗಳು) ಆಟಪಾಟಗಳಲ್ಲಿ ನಿರ್ಮಗ್ನವಾಗಿದ್ರೂ... ಏನೊ ಆತಂಕ ಏನಾಗಬಹುದೋ?... ನಾವು ಬರೆದಿರುವ ಪರೀಕ್ಷೆಗಳ ಫಲಿತಾಂಶ ಅನ್ನುವ ಚಿಂತೆ...! ಯಾರು ಫಸ್ಟೋ... ಯಾವನಿಗೆ ಲಾಸ್ಟೋ .. ಅವಳಿಗೆಷ್ಟು ಆಂಕಗಳೋ.... ಇವನಿಗೆಷ್ಟು ಮಾರ್ಕ್ ಗಳೋ ... ಅಂತ ತಿಳಿಕೊಳ್ಳುವ ಆತುರ.
ಈಗೇ ನಮ್ಮೂರಿನ ಹಿರಿಯರು, ಸುತ್ತಮುತ್ತ ಹಳ್ಳಿಗಳ ವಿಧ್ಯಾರ್ಥಿ ತಾಯಿತಂದೆಯರು, ಸ್ನೇಹಿತರು, ಮೇಸ್ಟ್ರುಗಳು.. ಎಲ್ಲರಲ್ಲೂ ಇದೆ ಆಲೋಚನೆ, ಇದೆ ಚಿಂತೆ. ಈ ಚಿಂತೆಗಳಿಗೆ ಕೊನೆಯಾಡಲು ಒಂದು ದಿವಸ ಮುಂಚೆಯೇ ಸುದ್ಧಿ ಹಬ್ಬತೊಡಗಿತು. ನಾಳೆ SSLC ಪರೀಕ್ಷಾ ಫಲಿತಾಂಶ ಪ್ರಕಟಕೊಳ್ಳಲಿದೆ ಎಂದು. ಪರೀಕ್ಷೆ ಬರೆದಿರುವ ನಮಗೆಲ್ಲ ಕಾಲಲ್ಲಿ, ಕೈಯಲ್ಲಿ, ಮೈಯಲ್ಲಾ ಬೆವರು ಆರಂಭವಾಯಿತು, ನನ್ನ ಸ್ನೇಹಿತರೆಲ್ಲರು ಚಿಂತೆ ಮಾಡಲು ಪ್ರಾರಂಭಸಿದರು. ಕಡಿಮೆ ಅಂಕಗಳು ಬಂದರೆ ಏನು ಮಾಡಬೇಕು? ಜಾಸ್ತಿ ಮಾರ್ಕಗಳು ಬಂದರೆ ಎಲ್ಲಿ ಓದಬೇಕು? ಏನು ಓದಬೇಕು? ತಾಯಿತಂದೆಯರಿಗೆ ಹೇಗೆ ತಿಳಿಸುವುದು? ಪಾಸ್ ಆದರೆ ಎಲ್ಲಿ ಓದಕ್ಕೆ ಕೇಳಬೇಕು?....
ಹೀಗೇ ಚರ್ಚಿಸುವಾಗ, ಸ್ನೇಹಿತನೊಬ್ಬ(ಸಂಕೋಚ ವಿಲ್ಲದೆ ಹೇಳಿದ) -- ನನ್ನ ಹತ್ತಿರ ಕೂಡಿಟ್ಟುರುವ ಹಣ ರೂ. ೨೦೦ ಇದೆ. ನಾನು ಫೇಲು ಆದರೆ.. ಹಾಗೆ, ಬಸ್ ಹತ್ತಿ ಹೋಗಿಬಿಡ್ತೀನಿ.... ಇಲ್ಲ ಅಂದರೆ ನಮ್ಮ ತಂದೆ ಸಾಯಿಸ್ತಾರೆ! ಇನ್ನೊಬ್ಬ ಸ್ನೇಹಿತ (ಧೈರ್ಯದಿಂದ) ನಾನು ಪ್ರಿಪರೇಟರಿ exam ನಲ್ಲಿ, ಜಸ್ಟ್ ಪಾಸ್ ಮಾರ್ಕ್ ಬಂದಿದೆ. ನಾನು ಪಾಸಾಗ್ತೀನ... ಫೇಲು ಆಗಿತಿನಾ.... ಏನೇ ಆಗಲಿ...ನಾನು ತಂದೆತಾಯಿ ಜೊತೆ ಇದ್ದುಬಿಡಿತಿನೀ.
ಎಲ್ಲರು ಒಟ್ಟಿಗೆ (ನನ್ನ ಮೌನವನ್ನು ಮುರಿಯಲು) ನನ್ನನ್ನ ಕೇಳಿದರು- ಏನೋ ಏನು ಮಾತಾಡ್ತಾ ಇಲ್ಲ? ನೀನು ಬಿಡಪ್ಪಾ.. ಪ್ರೀಪರೆಟರಿ ಎಕ್ಸಾಮ್ ಅಲ್ಲೇ ಕ್ಲಾಸ್ಗೆ ಎರಡೆನೆಯವನು..ನೀನು ಎಲ್ಲಿ ಓದಬೇಕು ಅಂತ ಆಲೋಚನೆ ಮಾಡ್ತಾ ಇರಬಹುದು. ನೀನ್ಯಾಕೆ ಫಲಿತಾಂಶದ ಬಗ್ಗೆ ಚಿಂತೆಮಾಡಬೇಕು..ಅಲ್ವಾ?
ನನ್ನ ಸ್ನೇಹಿತರ ಮಾತುಗಳು ಮತ್ತು ಅವರು ಚರ್ಚಿಸುವ ಅಂಶಗಳು ನನ್ನಲ್ಲಿ ಆತಂಕ ಉಂಟುಮಾಡಿತು. ಆದರೆ ನನ್ನಲ್ಲಿ ನನಗಿರುವ ಅಪಾರ ನಂಬಿಕೆ, ಅದು ನಾನು ಚೆನ್ನಾಗಿ ಎಕ್ಸಾಮ್ ಬರಿದಿದ್ದೇನೆ ಎಂದು. ನಾನು ನನ್ನ ಸ್ನೇಹಿತರಿಗೆ ಹೇಳಿದೆ- ಹೌದು ನಾನು ತುಂಬಾ ಚೆನ್ನಾಗಿ ಪರೀಕ್ಷೆ ಬರಿದಿದ್ದೇನೆ, ನನ್ನ ಲೆಕ್ಕದಲ್ಲಿ ಹೈ ಫಸ್ಟ್ ಕ್ಲಾಸ್.....ಇಲ್ಲ ಫಸ್ಟ್ ಕ್ಲಾಸ್ ಬರಲೇಬೇಕು ಅಂತ. ಅಷ್ಟರಲ್ಲಿ ನಮ್ಮ ಗಣಿತ ಮೇಸ್ಟ್ರು ನಾವು ಕುಳಿತಿರುವ ಹಾದಿಯಲ್ಲಿ ಹೊರಟಿದ್ದರು. ನಾವೆಲ್ಲರು ಮೆಲಮೆಲ್ಲಗೆ ಕಾಣೆಯಾಗಲು ಪ್ರಯತ್ನಿಸುತ್ತಿದ್ದೆವು. ಆದರೆ ನಾನು ಮಾತ್ರ ಬಚ್ಚಿಟ್ಟುಕೊಳ್ಳಲು ಯತ್ನಿನಿಸಲಿಲ್ಲ. ಏಕೆಂದರೆ ಅವರು ನನ್ನ favourite ಮೇಸ್ಟ್ರು ಹಾಗೂ ಗಣಿತ ಅಂದ್ರೆ ಪ್ರಾಣ.... ನನಗೆ ಗಣಿತದಲ್ಲಿ ೯೦ ಕ್ಕಿಂತ ಕಮ್ಮಿ ಅಂಕಗಳು ಬಂದರೆ ಸಹಿಸುತ್ತಿರಲಿಲ್ಲ, ಹಠದಿಂದ ಆದ್ರೂ ಮುಂದಿನ ಎಕ್ಸಾಮ್ ಅಲ್ಲಿ ಎಲ್ಲರಿಗಿಂತ ಜಾಸ್ತಿ ಹಾಗೂ ಕ್ಲಾಸ್ಗೆ ಫಸ್ಟ್ ಬರುತಿದ್ದೆ, ಹಾಗಾಗಿ ಅವರೆಂದರೆ ನನಗಿಸ್ಟ.
ನಮ್ಮ ಮೇಸ್ಟ್ರು ನನ್ನನ್ನು ನೋಡಿ ಕರೆದು ನುಡಿದರು... ಏನೋ ಮಂಜು..... ಹೈ ಫಸ್ಟ್ ಕ್ಲಾಸ್ ಬರ್ಥಿಯಲ್ಲಾ? ಗಣಿತದಲ್ಲಿ ೯೦ ರ ಮೇಲೆ ಬರುತ್ತಲ್ಲಾ. ನನ್ನ ಮೇಸ್ಟ್ರುರ ಮಾತುಗಳು ನನ್ನ ಮುಖದಲ್ಲಿ ಮುಗಳ್ನಗೆ ತೋರಿಸಿತು, ಕೈಕಟ್ಟಿ ನಿಂತಿರುವ ನನ್ನಲ್ಲಿ ನಡುಕ ಶುರುವಾಯಿತು. ಅದೇ ಹಾದಿಯಲ್ಲಿ ನಮ್ಮೂರಿನ ಹಿರಿಯರೊಬ್ಬರು ಹೋಗ್ತಾ... ನಮ್ಮ ಮೇಸ್ಟ್ರುನ್ನು-- ಏನು ಸಾರ್ ನಾಳೆ SSLC ರಿಸಲ್ಟ್ ಅಂತೆ? ನಮ್ಮೂರ ಶಾಲೆ, ಹೋಬಳಿಗೆ ಫಸ್ಟ್ ಬರುತ್ತಾ? ಮಕ್ಕಳೆಲ್ಲ ಪರವಗಿಲ್ಲವಾ ಅಂತ ಕೇಳಿ ನಿಂತರು ನಮ್ಮ ಹತ್ತಿರ.
ಮೇಸ್ಟ್ರು - (ನನ್ನ ಭುಜದ ಮೇಲೆ ಕೈ ಹಾಕಿ) ಹಿರಿಯರೇ, ನಮ್ಮ ಶಾಲೆಯ ಫಲಿತಾಂಶ ತುಂಬಾ ಚೆನ್ನಾಗಿರುತ್ತೆ. ಎಲ್ಲರೂ ಪರೀಕ್ಷೆಯಲ್ಲಿ ಒಳ್ಳೆಯ ರೀತಿಯಲ್ಲಿ ಉತ್ತಿರ್ಣರಾಗುತ್ತಾರೆ ಎಂದು ಹೇಳ್ತಾ ಮುಂದುವರೆಸಿದರು .. ಈ ನನ್ನ ವಿದ್ಯಾರ್ಥಿಯು ಪ್ರಿಪರೇಟರಿ ಎಕ್ಷಮ್ ಅಲ್ಲಿ ಕ್ಲಾಸ್ ಗೆ ಟಾಪ್ ೨ ಹಾಗೂ ನಾಳೆ ಪ್ರಕಟಗೊಳ್ಳುವ ಫಲಿತಾಂಶದಲ್ಲಿ ಹೈ ಫಸ್ಟ್ ಕ್ಲಾಸ್ ಬಂದೇ ಬರ್ತಾನೆ ಎಂದು ಮಾತು ಮುಗಿಸಿ, ಅವರಿಬ್ಬರೂ ಮುನ್ನೆಡೆದರು. ಸ್ವಲ್ಪ ದೂರದಲ್ಲಿ ಮರೆಯಾಗಿರುವ ನನ್ನ ಸ್ನೇಹಿತರು, ಮೆಲ್ಲಗೆ ಕಾಣಲಾರಂಬಿಸಿದರು ಮತ್ತು ನನ್ನ ಹತ್ತಿರಕ್ಕೆ ನಡೆಯಲಾರಂಬಿಸಿದರು. ನಾವೆಲ್ಲರು ಒಟ್ಟಿಗೆ ಮುಂದೆ ದಾರಿಯಲ್ಲಿ ನಮ್ಮ ನಮ್ಮ ಮನೆಗಳಿಗೆ ಹೊರಡಲಾರಂಬಿಸಿದೆವು.ಎಲ್ಲರಲ್ಲೂ ಮೌನ . ಆತಂಕ ! ಏನೊ ಒಂದು ಗೊತ್ತಾಗುತ್ತೆ ಅದೇನೆಂದು?... ಮುಂದೇನೆಂದು? ಹಲವು ಪ್ರಶ್ನೆಗಳಿಗೆ ಉತ್ತರಗಳಿಲ್ಲದ ಕುತೂಹಲ.... ಹೀಗೇ, ಇದೆ ಭಾವನೆಗಳಲ್ಲಿ ಸಂಜೆಯಾಗ ತೊಡಗಿತು.
ಅಸ್ತಮಿಸುವ ಸೂರ್ಯನ ಸಂಜೆಯನ್ನು ನೋಡ್ತಾ, ನಾಳೆಯ ಮುಂಜಾನೆ ಉದಯಿಸುವ ಸೂರ್ಯನ ಕಾಂತಿಗೋಸ್ಕರ.
ಮಾತಲ್ಲಿ ಮೌನ, ತಿಂಡಿಯಲ್ಲಿ ಹಸಿವು, ನೀರಲ್ಲಿ ಬಾಯಾರಿಕೆ, ಕನಸಿನ ನನಸಿಗೋಸ್ಕರ.
ತಾಯಿಯ ಪ್ರೀತಿ, ತಂದೆಯ ಭೀತಿ, ಸ್ನೇಹಿತರ ಇಚ್ಛೆ, ತಂಗಿಯ ಆಸೆಗೋಸ್ಕರ.
ಕಣ್ಣು ತೆರೆದು ನಿದ್ದೆ ಮಾಡ್ತಾ, ನಾಳಿನ ಸಿಹಿ ಸುದ್ದಿಗಾಗಿ ಎದುರು ನೋಡ್ತಾ, ರಾತ್ರಿಯ ಕತ್ತಲು, ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟುರಲ್ಲಿ ಬೆಳಕಾಗಿ ಬಿಡ್ತು. ನನ್ನಲ್ಲಿ ನನಗೆ ಗೊತ್ತಿಲ್ಲದೇ ಇರುವ ಭಯ, ಎಲ್ಲರೂ ನನ್ನ ಮೇಲೆ ಇಟ್ಟ ನಂಬಿಕೆ ಏನಾಗಬಹುದೆಂಬ ಆತಂಕ, ಫಲಿತಾಂಶ ಅತಿಬೇಗ ತಿಳಿಯಬೇಕೆಂಬ ಆಸೆಯೊಂದಿಗೆ ನಿದ್ದೆ ಎದ್ದು ಇಚ್ಛೆಯ ದೇವರಿಗೆ ನಮಸ್ಕಾರ ಮಾಡಿ, ಅಮ್ಮ ಮಾಡಿದ ಕಾಫೀ ಕುಡಿದು ಶಾಲೆಯ ಮುಂಬಾಗದಲ್ಲಿ ಫಲಿತಾಂಶಕ್ಕಾಗಿ ಕಾದು ಕುಳಿತಿರುವ ವಿದ್ಯಾರ್ಥಿಗಳಲ್ಲಿ ನಾನು ಒಬ್ಬನಾಗಿ ಕಾತುರದಿಂದ ಕಾದೆ. ನಾನು ಮತ್ತು ನನ್ನ ಸಹಪಾಠಿಗಳು ಎದುರು ನೋಡುತಿರುವ ಕ್ಷಣ ಬಂದೇ ಬಿಡ್ತು. ನನ್ನ ಗಣಿತದ ಮೇಸ್ಟ್ರೆ ನಮ್ಮ ಶಾಲೆಯ ಫಲಿತಾಂಶವನ್ನು ನಾಮಫಲಕದಲ್ಲಿ ಅಂಟಿಸಿದರು. ಆದರೆ ಅವರ ಮುಖದಲ್ಲಿ ಯಾವುದೇ ಆನಂದವಿರಲಿಲ್ಲ ಯಾರನ್ನು ಮಾತನಾಡಿಸಲಿಲ್ಲ. ಕೇವಲ ಫಲಿತಾಂಶವನ್ನು ಪ್ರಕಟಿಸಿ ಶಾಲೆಯಿಂದ ನಿರ್ಗಮಿಸಿದರು.
ನಮ್ಮಲ್ಲಿ (ವಿದ್ಯಾರ್ಥಿಗಳಲ್ಲಿ) ನಮಗೆ ಪೈಪೋಟಿ, ಪ್ರಕಟಿಸಿದ ಫಲಿತಾಂಶವನ್ನು ನೋಡಲು. ಕೆಲವರಲ್ಲಿ ಸಂತೋಷ.. ಅವರೆಂದೂ ಕಾಣದ ಸಂತೋಷ.. ಇನ್ನು ಕೆಲವರಲ್ಲಿ ಯಾವುದೇ ಭಾವನೆಯಿಲ್ಲದೆ.. ಇಷ್ಟೇ, ಇದು ಗೊತ್ತಿರುವಷ್ಟೇ ಎನ್ನುತ್ತಾ... ಒಬ್ಬರಲ್ಲಿ ಇನ್ನೊಬ್ಬರು ನೀನು ಏನು? ನಿನಗೆಷ್ಟು ಅಂಕಗಳು ಅನ್ನುತ್ತಾ ಅಂಕಗಳನ್ನು ಬರೆದುಕೊಳ್ಳುತ್ತಾ.. ಯಾರಿಗೂ ಕೇಳದಷ್ಟು ಶಬ್ದ ಮಾಡುತ್ತಿದ್ದರು. ನಾನು ಪ್ರಕಟಗೊಂಡ ಫಲಿತಾಂಶವನ್ನು ನೋಡಲು ಅತಿ ಹತ್ತಿರ ನಿಂತು ಕಂಡಾಗ -- ನನ್ನಲ್ಲಿ ನನಗೆ ಅಸೂಯೆ, ಓದಿನ ಮೇಲೆ ಕೋಪ, ಕೆಂಡವನ್ನು ಆರಿಸುವಷ್ಟು ಕಣ್ಣೀರು, ಹಿಮಪರ್ವತವನ್ನು ಕರಗಿಸುವಷ್ಟು ಅಳುವಿನ ಶಬ್ದ, ನನ್ನಿಂದ ಏನೂ ಸಾಧ್ಯವಿಲ್ಲ ಅನ್ನುವಷ್ಟು ಅಧೈರ್ಯ... ಇದಕ್ಕೆ ಕಾರಣ ಏನಾಗಿರಬಹುದು? ಹೌದು, ನಾನು ಪಡೆದ ಅಂಕಗಳು ಕೇವಲ ೩೫೮ ಅಂದರೆ ಸೆಕೆಂಡ್ ಕ್ಲಾಸ್.
ಎಲ್ಲರೂ ಹೇಳುವ ಹಾಗೆ SSLC results, ನನ್ನ ಜೀವನದಲ್ಲೂ ಮರೆಯದ ತಿರುವು ತೋರಿಸಿತು. ನನ್ನ ಮುಖವು ನನಗೇ ಹೊಸತು. ನಾನು ಪಡೆದ ಅಂಕಗಳೂ ಹೊಸತೇ... ನನ್ನ ಮೇಲೆ ಇಟ್ಟಿರುವ ಎಲ್ಲರ ನಂಬಿಕೆ ಹುಸಿಯಾಯಿತು. ನನ್ನ ಮುಖವು ಹೇಗೆ ತೋರಿಸಲಿ...ನಾನು ಬದುಕಬೇಕೇ? ಇಲ್ಲ ಅಂಧ್ರೆ ಏನು ಮಾಡಬೇಕು? ನನ್ನನ್ನು ಕಷ್ಟಪಟ್ಟು ಓದಿಸಿ, ಓದಿಗಾಗಿ ನನ್ನಿಂದ ಏನೂ ಕೆಲಸ ಮಾಡಿಸದಿರಾ ಓದು, ಓದಿ... ನನ್ನ ಮಗ ದೊಡ್ಡ ವ್ಯಕ್ತಿಯಾಗ್ತಾನೆ. ಅವನನ್ನು ಎಲ್ಲರೂ ಹೊಗಳುತಿರುವುದನ್ನು ಬಯಯಸುವ ನನ್ನ ಪ್ರೀತಿಯ ಹೆತ್ತವರಿಗೆ ನಾನೇನು ಹೇಳಲಿ...ನಾನೇನು ಮಾಡಲಿ?
ತಂದೆಯು ಯಾವುತ್ತು ನಮ್ಮ ಶಾಲೆಗೆ ಬಂದು ನನ್ನ ಮಗ ಚೆನ್ನಾಗಿ ಓದುತ್ತಿದ್ದಾನಾ, ಓದಿಲ್ಲ ಅಂದ್ರೇ ನಾಲ್ಕು ಒದೆ ಕೊಟ್ಟು ಆದ್ರೂ ಓದಿಸಿ ಅಂತ ನಮ್ಮ ಶಾಲೆಯಲ್ಲಿ ವಿಚಾರಿಸಿದವರಲ್ಲ. ನನ್ನನ್ನು ಯಾವ ದಿವಸವು ಎಷ್ಟು ಓದಿದಿಯಾ, ಹೇಗೆ ಓದುತ್ತಾ ಇದಿಯಾ... ಅಂತ ಪ್ರಶ್ನೆ ಮಾಡಿದವರಲ್ಲ. ಆದರೆ ನನಗೆ ಬೇಕಾದ ಪುಸ್ತಕ, ಪೆನ್, ಶಾಲೆಯ ಶುಲ್ಕ, ಸಮವಸ್ತ್ರ... ಹೀಗೆ ಎಲ್ಲವೂ ಯಾವಾಗ ಬೇಕೆಂದರೆ ಅವಾಗ ಕೊಡಿಸುತ್ತಿದ್ದರು. ಇಷ್ಟು ಇಷ್ಟ ಪಡುವ ನನ್ನ ತಂದೆಗೆ ನಾನೇಗೆ ೨ ನೇ ಕ್ಲಾಸಲ್ಲಿ ಪಾಸು ಆಗಿದ್ದಿನೇ ಅಂತ ಹೇಳಲಿ... ನನ್ನಲ್ಲಿ ಏನೇನೋ ಯೋಚನೆ, ನನ್ನ ತಲೆಯಲ್ಲಿ ಇನ್ನೊಂದು ಆಲೋಚನೆ ಮಾಡದೇ ಇರುವಷ್ಟು ಸಮಾಲೋಚನೆ.
ನನ್ನ ಸ್ನೇಹಿತರು ಕೆಲವರು ಜಸ್ಟ್ ಪಾಸ್ ಆಗಬಹುದು ಅನ್ನುವವರೆಲ್ಲ ಫಸ್ಟ್ ಕ್ಲಾಸ್ ಬಂದಿದ್ದರೆ...! ಇನ್ನು ಕೆಲವರು ಫಸ್ಟ್ ಕ್ಲಾಸ್ ಬಂದರೂ ಕೆಲಸಕ್ಕೆ ಹೋಗಬೇಕು ಅಂತಿದ್ರೇ.. ನನ್ನ ಕಣ್ಣಲ್ಲಿ ನಿಲ್ಲದ ಕಣ್ಣೀರು ನನಗೆ ನಾನೇ ಏಕಾಂಗಿ ಅನ್ನುತ್ತಾ, ಜೀವನ ವ್ಯರ್ಥ ಎಂದು. ಜೀವನ ಮುಗಿಸೋಣ ಅನ್ನುವ ಆಲೋಚನೆಯಲ್ಲಿ ನನ್ನ ನಡಿಗೆ ಒಬ್ಬಂಟಿಗನಾಗಿ ಮುನ್ನೆಡೆದೆ. ದೂರದಲ್ಲಿ ನನ್ನ ತಂದೆ ನನ್ನನ್ನು ನೋಡಲು ಕಾತುರದಿಂದ ಹುಡುಕುತ್ತಿದ್ದಾರೆ. ತಂದೆಯನ್ನು ನೋಡಿದ ನನಗೆ ಮೈಯಲ್ಲ ಜುಮ್ಮುನೆಸ್ತುತ್ತು, ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರು ಬರ್ತಿತ್ತು. ಗಟ್ಟಿಯಾಗಿ ತಂದೆಯನ್ನು ತಬ್ಬಿಕೊಂಡು ತಲೆಯಲ್ಲಿನ ಯೋಚನೆಗಳನ್ನು ಕಣ್ಣೀರಾಗಿ ಗಳಗಳ ಅಂತ ಅಳಬೇಕು ಅನ್ನಿಸಿತು...
ತಂದೆಯು ಹತ್ತಿರ ಬಂದ ತಕ್ಷಣ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ನನ್ನನ್ನು ಕ್ಷಮಿಸು ತಂದೆ.. ಕ್ಷಮಿಸು... ನಾನು ಕೇವಲ ಸೆಕೆಂಡ್ ಕ್ಲಾಸಲ್ಲಿ ಪಾಸ್ ಆಗಿದ್ದೇನೆ... ಎಂದು ನನ್ನಲ್ಲಿನ ಭಾರವನ್ನು ಇಳಿಸಿಕೊಂಡೆ...ತಂದೆಯು ನನ್ನ ತಲೆಯನ್ನು ಸವರುತ್ತಾ... ಏನೋ ಮಗ, ನೀನು ಫಸ್ಟ್ ಕ್ಲಾಸ್ ಬರಬೇಕಾಂತ ನಾನೆಂದು ಹೇಳಿಲ್ಲ. ಸೆಕೆಂಡ್ ಕ್ಲಾಸ್ ಬಂದ್ರೆ ನಾನು ನಿನಗೆ ಬಡಿದು ಬೈತೀನಿ ಅಂತ ಹೇಗೆ ತಿಳಿದುಕೊಂಡೇ ಮೂರ್ಖ.. ನೀನು ಎಂದಿಗೂ ನನ್ನ ಪ್ರೀತಿಯ ಮಗ, ನೀನು ಯಾವಾತ್ತೋ ಒಂದು ದಿವಸ ದೊಡ್ಡ ವ್ಯಕ್ತಿಯಾಗುವೇ ಬಾ .. ಮನೆಗೆ ಹೋಗೋಣ ಅಂತ ಕೈ ಹಿಡಿದರು. ನನ್ನಲ್ಲಿ ನಿಲ್ಲದ ಅಳು, ಮರೆಯಾಗದ ಕಣ್ಣೀರು ಅಪ್ಪನ ಜೊತೆ ನಡೆ .... ನಡೆಯಿತು ಮನೆಯವರೆಗೆ.
ಮನೆಯಲ್ಲಿ ಹೆಜ್ಜೆ ಇಟ್ಟ ತಕ್ಷಣ ನನ್ನಲ್ಲಿ ನಾನೇ ಮರೆತೆ, ನಾನು ಫಲಿತಾಂಶ ನೋಡಿದೆಂಬ ವಿಷಯ ಮಾಯವಾಯ್ತು. ಅಷ್ಟರಲ್ಲಿ ಅಮ್ಮನ ಅಕ್ಕರೆಯ ಧ್ವನಿ ಕೇಳಿಸಿತು.. ಬಾರೋ ಮಗ ಬೆಳಬೆಳಗ್ಗೆ ಬಿಸಿಬಿಸಿ ಮುದ್ದೆ ತಿನ್ನುವಂತೆ.... ಫಸ್ಟ್ ಮುದ್ದೆ ನಿನಗಾಗಿ ಎಂದು ಕೂಗಿದರು. ಅಮ್ಮನಿಗೆ ಫಸ್ಟ್ ಕ್ಲಾಸ್ ಫಸ್ಟಾ, ಇಲ್ಲವಾ ಸೆಕೆಂಡ್ ಕ್ಲಾಸ್ ಫಸ್ಟಾ ಅಂತ ಕೂಡ ತಿಳಿಕೊಳ್ಳಕ್ಕೆ ಇಷ್ಟ ಇಲ್ಲ. ಕೇವಲ ನನ್ನ ಮಗ ಫಸ್ಟ್ ಮುದ್ದೆ ತಿಂದನಾ, ಇಲ್ಲವಾ ಅಂತ ತಿಳಿದುಕೊಳ್ಳಕ್ಕೆ ಇಷ್ಟಪಡ್ತಾರೆ.
ಕೈ ಕಾಲು ಮುಖ ತೊಳೆದು ಮುದ್ದೆ ತಿನ್ನು ಬಾರೋ ಅಂತ ಅಪ್ಪ ಆಜ್ಞೆ ಮಾಡಿಯಾಯಿತು. ಅವರು ಹೇಳಿದ ಹಾಗೇ ಶಿಸ್ತಿನಿಂದ ಅಪ್ಪನೊಂದಿಗೆ ಮುದ್ದೆ ತಿನ್ನಲು ಕುಳಿತೆ.
ಆಗ ತಂದೆ ನುಡಿದ ಮಾತುಗಳು ನನಗೆ ಮುತ್ತುಗಳಾಗಿ ನನ್ನ ಭವಿಷ್ಯ ಪ್ರಜ್ವಲಿಸುತ್ತಿತ್ತು. ಅದೇನೆಂದರೆ.. ನೋಡೋ ಮಗ ಅಮ್ಮ ಮಾಡಿರುವ ಬಿಸಿಬಿಸಿ ಮುದ್ದೆ (ದೊಡ್ಡದು) ಪೂರ್ತಿ ತಿಂದುಬಿಡಬೇಕು.. ನೀನು ಏನೂ ಏನ್ನನ್ನೂ ಆಲೋಚನೆ ಮಾಡಬಾರದು. ನೀನು ಎಷ್ಟು ಚೆನ್ನಾಗಿ ಓದಿದ್ದೀಯ ಅಂತಾ ನಿನಗೆ ಗೊತ್ತು.... ನನಗೆ ಗೊತ್ತು.. ನಿನ್ನ ಸ್ನೇಹಿತರು ಸೇರಿ ನಿಮ್ಮ ಮೇಸ್ಟ್ರುಗಳಿರಿಗೆಲ್ಲರಿಗೂ ಗೊತ್ತು. ನೀನು ಸೆಕೆಂಡ್ ಕ್ಲಾಸ್ ಬಂದಿದ್ದಿಯಾ ಅಂತ ನಿರಾಶೆಪಡಬಾರದು. ಇದು ಕೇವಲ SSLC ಫಲಿತಾಂಶ ಮಾತ್ರ. ನಿನ್ನಲ್ಲಿ ಛಲ ಇದೆ... ಏನೋ ಸಾಧನೆ ಮಾಡಬೇಕೆಂಬ ಹಂಬಲ ಇದೆ, ನಿನ್ನನ್ನು ಮುಂದೆ ಓದಿಸಿ ದೊಡ್ದವ್ಯಕ್ತಿಮಾಡಬೇಕೆಂಬ ಮಹತ್ವಾಕಾಂಕ್ಷೆ ನಮಗಿದೆ. ನಿನ್ನಿಂದ ಸಾದ್ಯ. ಓದು ಮಗ ಓದು... ಈ ಫಲಿತಾಂಶವು ನಿನಗೆ ಒಂದು ಪಾಠ ಕಲಿಸಿಕೊಟ್ಟಿದೆ ಎಂದು ಬಯಸಿ, ಮುಂದಿನ ಓದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವುದರಲ್ಲಿ ಯೋಚನಾಯುಕ್ತ ನಾಗಿರು.
ಅಪ್ಪನ ಮಾತುಗಳಿಗೆ ಮತ್ತೊಮ್ಮೆ ಕಣ್ಣಲ್ಲಿ ಕಣ್ಣೀರು ... ಆದರೆ ಅದು ನನ್ನ ಭವಿಷ್ಯದ ಪ್ರಜ್ವಲ ದ್ವೀಪವನ್ನು ನೋಡಿ.. ನನ್ನಲ್ಲಿ ನನಗೆ ಆಂಜನೇಯನ ಶಕ್ತಿ, ಸಮುದ್ರವನ್ನು ಛೇದಿಸುವ ಯುಕ್ತಿ, ನನ್ನಲ್ಲಿ ನನಗೆ ತಿಳಿಯದ ಧೃಡಸಂಕಲ್ಪ, ಮುಖದಲ್ಲಿ ಸಂತಸ, ಒಂದು ದೊಡ್ಡ ಮುದ್ದೆಯನ್ನು ಗಬಗಬ ಅಂತ ನುಂಗಿ ಮುಂದೆ ಹೇಗೇ ಓದಬೇಕು? ಏನು ಓದಬೇಕು ಅಂತ ಇನ್ನೊಂದು ಆಲೋಚನೆಯಲ್ಲಿ ಮಗ್ನನಾದೆ.
Comments
ಕಷ್ಟಗಳನ್ನು ಸಹಿಸಿಕೊಂಡು,ಮೌನವಾಗಿ
ಪರೀಕ್ಷೆಯ ಆತಂಕ-ತಂದೆ,ತಾಯಿಯ
ಸುಂದರ ಅನುಭವ! 45 ವರ್ಷಗಳ
In reply to ಸುಂದರ ಅನುಭವ! 45 ವರ್ಷಗಳ by kavinagaraj
ಆತ್ಮೀಯ ಮಂಜುನಾಥರೆ,