ತಂದೆಯ ಬೇಡಿಕೆ
ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ, ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದು ಕೊರ್ಟ್ ನ್ನು ಕೇಳಿಕೊಂಡ.
ನ್ಯಾಯದೀಶರು " ತಾವೇ ಇಷ್ಟೊಂದು ಶ್ರೀಮಂತರಿದ್ದೀರಿ, ಮತ್ತೇಕೆ ಬೇಕು ". ಎಂದರು..
ತಂದೆ, "ಇಲ್ಲಾ ಸ್ವಾಮಿ, ನನಗೆ ನನ್ನ ಮಗನ ಕಡೆಯಿಂದ, ಪ್ರತಿ ತಿಂಗಳು, ಸ್ವಲ್ಪವಾದರೂ ಹಣ ಬೇಕೇ ಬೇಕು ". ಎಂದ. ಹಠಕ್ಕೆ ಬಿದ್ದ ತಂದೆಗೆ ನ್ಯಾಯ ಕೊಡಬೇಕೆಂದು, ಆ ಮಗನನ್ನು, ಕೋರ್ಟಿಗೆ ಬರಲು ಹೇಳಿದ ಜಡ್ಜ್, ಕೇಸ್ ಮುಂದಕ್ಕೆ ಹಾಕಿದರು.
***
ಕೋರ್ಟ್ ನಿರ್ಧರಿಸಿದ, ದಿನ, ಮಗ ಬಂದು, ಕಟಕಟೆಯಲ್ಲಿ ನಿಂತುಕೊಂಡ.
ನ್ಯಾಯಾದೀಶರು, " ನಿಮ್ಮ ತಂದೆ, ನಿಮ್ಮಿಂದ ಪ್ರತಿ ತಿಂಗಳು, ಮಾಶಾಸನ ಕೇಳುತ್ತಿದ್ದಾರೆ. ಕೊಡಬೇಕಾಗುತ್ತೆ ". ಅಂದರು
ಮಗ, " ಸ್ವಾಮಿ, ಅವರಲ್ಲಿಯೇ ಧನ ಕನಕ, ಆಸ್ತಿ, ಹೇರಳವಾಗಿದೆ".
ನ್ಯಾಯಾದೀಶರು, ಮತ್ತೇಕೆ ಕೇಳುತ್ತಿದ್ದಾರೆ ಅಂತಾ ನಿನಗೇನಾದರೂ ಗೊತ್ತಾ?
ಮಗ, "ಇಲ್ಲ, ಸ್ವಾಮಿ".
ನ್ಯಾಯಾದೀಶರು "ಯಜಮಾನರೇ, ನೀವೇಕೆ ಹಠ ಹಿಡಿಯುತ್ತಿದ್ದೀರಾ?”
ತಂದೆ, "ಸ್ವಾಮಿ, ಇದು ಹಠವಲ್ಲ, ನನ್ನ ಹಕ್ಕು".
ನ್ಯಾಯಾದೀಶರು, ಹೌದೌದು, ಹೇಳಿ ಎಷ್ಟು ನಿರೀಕ್ಷಿಸುತ್ತೀರಿ?
ತಂದೆ, "ಪ್ರತಿ ತಿಂಗಳ ಎರಡನೇ ತಾರೀಕಿಗೊಮ್ಮೆ, ಅವನೇ ಬಂದು ನೂರು ರೂಪಾಯಿ ಕೊಡಬೇಕು".
ಕೋರ್ಟಿನಲ್ಲಿದ್ದ ವಕೀಲರೆಲ್ಲಾ, ಗೊಳ್ಳೆoದು ನಕ್ಕರು.
ನ್ಯಾಯಾದೀಶರು, ಸೈಲೆನ್ಸ್.... , ಸೈಲೆನ್ಸ್......!
ಮಗ, "ಸರಿ ಸ್ವಾಮಿ, ಕೊಡುತ್ತೇನೆ".
ನ್ಯಾಯಾದೀಶರು, ಕೊಡುತ್ತೇನೆಂದು ಒಪ್ಪಿಕೊಂಡಿದ್ದಾನೆ. ಮತ್ತೇನೂ, ತಕರಾರು ಇಲ್ಲವಾ.....?
ತಂದೆ, ಇಲ್ಲ ಸ್ವಾಮಿ, ಮತ್ತೇನಿಲ್ಲ, ಅಷ್ಟು ಕೊಟ್ಟರೆ ಸಾಕು.
ನ್ಯಾಯಾದೀಶರು, ತೀರ್ಪು ಬರೆದು ಓದಿ ಮುಗಿಸಿದರು, ಕೋರ್ಟ್ ಕಲಾಪದ ಮುಕ್ತಾಯವನ್ನೂ ಮಾಡಿ, ತಮ್ಮ ಖಾಸಗಿ ಕೊಠಡಿ ಒಳಗೆ ಹೋಗಿ, ಆ ಶ್ರೀಮಂತನನ್ನು ಕರೆತರಲು ಹೇಳಿದರು.
ಇವರು, ಬಂದರು. ನ್ಯಾಯಾದೀಶರು, “ಅಲ್ಲ, ನೀವೇಕೆ ಕೇವಲ ನೂರು ರೂಪಾಯಿಯನ್ನೇ ಪ್ರತಿ ತಿಂಗಳು ಕೊಡಬೇಕೆಂದು ಕೇಳಿದ್ರಿ?”
ತಂದೆ, "ಸ್ವಾಮಿ, ನನಗೆ ಅವನ ದುಡ್ಡಿನ ಅವಶ್ಯಕತೆಯೇ ಇಲ್ಲ, ನನಗೆ ಅವನೊಬ್ಬನೇ ಮಗ, ಚೆನ್ನಾಗಿ ಓದಿದ್ದಾನೆ, ದೂರದ ನಗರದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾನೆ, ನನ್ನನ್ನು ನೋಡಲು ಅವನು ಬರುವುದೇ ಇಲ್ಲ. ಆದರೆ, ನನಗೆ ಅವನನ್ನು ತಿಂಗಳಿಗೊಮ್ಮೆಯಾದರೂ ನೋಡಬೇಕೆಂಬ ಆಶೆ, ಆ ಕಾರಣಕ್ಕಾಗಿ, ಕೋರ್ಟ್ ಆದೇಶದಂತೆ ಅವನು ನೂರು ರೂಪಾಯಿ ಕೊಡಲಿಕ್ಕಾದರೂ ತಪ್ಪದೇ ಬರಬೇಕಲ್ಲ. ಅವಾಗಲಾದರೂ, ಅವನನ್ನು ಕಣ್ಣು ತುಂಬಾ ನೋಡಬಹುದೆoದು, ಕೊರ್ಟ್ ಮೂಲಕ ತಾಕೀತು ಮಾಡಿಸಿದೆ ಅಷ್ಟೇ.
***
ಅಂದೇ ಕೋರ್ಟಿಗೆ ಮೂರು ರಜೆ ಹಾಕಿದ ಜಡ್ಜ್, ತಂದೆಗೆ ಫೋನ್ ಮಾಡಿ, ನಾನು ಊರಿಗೆ ಬರುತ್ತಿದ್ದೇನೆ, ಏನಾದರೂ ತರುವುದಿದೆಯಾ? ಎಂದ.
ಅತ್ತಲಿಂದ, ಸಣ್ಣಗಿನ ಧ್ವನಿಯಲ್ಲಿ ಕೇಳಿಸಿದ್ದು, "ನೀನು ಬಾರಪ್ಪ ಸಾಕು ಬೇರೇನೂ ಬೇಕಿಲ್ಲ. ಎಷ್ಟೋ ದಿನ ಆಯ್ತು ನಿನ್ನ ನೋಡದೇ ".
ಹಿರಿಯರಿಗೆ, ಅನ್ನ ಕಿಂತಲೂ ಅಪ್ಪುಗೆ ಮುಖ್ಯ. ಚಿನ್ನಕ್ಕಿಂತಲೂ ಕಾಳಜಿ ಮುಖ್ಯ. ಅಲ್ವಾ....
(ಹಿಂದಿ ಬರಹವೊಂದರ ಆಧಾರ)
-ಎಸ್ ಎಸ್ ಅಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ