ತಂದೆಯ ಮೂರು ಸೂತ್ರಗಳು

ತಂದೆಯ ಮೂರು ಸೂತ್ರಗಳು

ಒಂದಾನೊಂದು ಕಾಲದಲ್ಲಿ, ಶ್ರೀಮಂತನೊಬ್ಬ ಅವನ ಇಬ್ಬರು ಮಗಂದಿರೊಂದಿಗೆ ದೂರದ ಹಳ್ಳಿಯಲ್ಲಿ ವಾಸಿಸುತ್ತಿದ್ದ.  ಅವನು ರೋಗದಿಂದ ಬಳಲುತ್ತಿದ್ದ. ಸಾಯುವ ಮುಂಚೆ ಅವನು ಇಬ್ಬರು ಮಗಂದಿರನ್ನೂ ಹತ್ತಿರ ಕರೆದ.

ತನ್ನ ಸಂಪತ್ತನ್ನು ಅವರಿಗೆ ಕೊಡುತ್ತಾ, ಆ ಸಂಪತ್ತನ್ನು ಜೋಪಾನವಾಗಿ ಇಡಲಿಕ್ಕಾಗಿ ಮೂರು ಸೂತ್ರಗಳನ್ನು ಶ್ರೀಮಂತ ಹೇಳಿದ: “ನನ್ನ ಪ್ರೀತಿಯ ಮಗಂದಿರೇ, ಜೀವಮಾನವಿಡೀ ನನ್ನ ಹಾಗೆ ಶ್ರೀಮಂತಿಕೆಯಲ್ಲಿಯೇ ಬದುಕಬೇಕು ಎಂದಾದರೆ, ನಾನು ಈಗ ಹೇಳುವ ಮೂರು ಸೂತ್ರಗಳನ್ನು ನೀವು ಪಾಲಿಸ ಬೇಕು.”

“ಒಂದನೆಯ ಸೂತ್ರ: ದೊಡ್ಡ ದೀಪವನ್ನು ಉರಿಸುತ್ತಾ ರಾತ್ರಿಯ ಊಟ ಮಾಡಬೇಕು. ಎರಡನೆಯ ಸೂತ್ರ: ಪ್ರಾಣಿಗಳ ಹಲ್ಲುಗಳಿಂದ ನಿಮ್ಮ ಮನೆ ಸುತ್ತುವರಿಯುವಂತೆ ಮಾಡಬೇಕು. ಮೂರನೆಯ ಸೂತ್ರ: ನಾನು ನಿಮಗೆ ಕೆಲವು ಹುಣಿಸೆ ಬೀಜಗಳನ್ನು ಕೊಡುತ್ತೇನೆ. ಅವು ದೀರ್ಘ ಕಾಲ ತಿನ್ನಲು ಸಿಗುವಂತೆ ಅವನ್ನು ಬಳಸುವುದು ಹೇಗೆಂದು ನೀವು ತಿಳಿದುಕೊಳ್ಳಬೇಕು.”

“ನೀವು ಹೇಳಿದ ಹಾಗೆಯೇ ಮಾಡುತ್ತೇವೆ” ಎಂದರು ಇಬ್ಬರು ಮಗಂದಿರು. ಶ್ರೀಮಂತ ಇಬ್ಬರು ಮಗಂದಿರಿಗೆ ತನ್ನ ಸಂಪತ್ತನ್ನು ಸಮಾನವಾಗಿ ಹಂಚಿ ಕೊನೆಯುಸಿರೆಳೆದ.

ಕಿರಿಯ ಮಗ ಹಳ್ಳಿಯಲ್ಲಿ ತಂದೆಯ ಮನೆಯಲ್ಲೇ ವಾಸಿಸ ತೊಡಗಿದ. ಅವನ ಅಣ್ಣ ತನ್ನ ಪಾಲಿನ ಸಂಪತ್ತನ್ನು ಒಯ್ದು, ಪಟ್ಟಣದಲ್ಲಿ ಹೊಸ ಮನೆ ಕಟ್ಟಿ, ಅಲ್ಲಿ ವಾಸ ಮಾಡ ತೊಡಗಿದ.

ಕಿರಿಯ ಮಗ ಸರಳ ಮನುಷ್ಯ. ಆದರೆ ಅವನು ಬುದ್ಧಿವಂತನಲ್ಲ. ರಾತ್ರಿ ಊಟ ಮಾಡುವ ಮುಂಚೆ ತನ್ನ ಸೇವಕನಿಗೆ ದೊಡ್ಡ ದೀಪವನ್ನು ಉರಿಸಲು ಹೇಳುತ್ತಿದ್ದ. ತನ್ನ ಮನೆಗೆ ಆನೆಗಳ ದಂತದ ಬೇಲಿ ಮಾಡಿಸಿದ.

ಅದಲ್ಲದೆ, ಪ್ರತಿ ದಿನ ಹುಣಿಸೆ ಬೀಜಗಳನ್ನು ಹುರಿದು ತಿನ್ನುತ್ತಿದ್ದ. ಇದರಿಂದಾಗಿ ಏನಾಯಿತು? ಕೆಲವೇ ದಿನಗಳಲ್ಲಿ ಅವನ ಮನೆಯಲ್ಲಿದ್ದ ಎಣ್ಣೆಯೆಲ್ಲ ಮುಗಿಯಿತು. ಒಬ್ಬ ಕಳ್ಳ ಅವನ ಮನೆಯ ದಂತದ ಬೇಲಿ ಕದ್ದೊಯ್ದ. ಹುಣಿಸೆ ಬೀಜಗಳೆಲ್ಲ  ಖಾಲಿಯಾದವು. ಅವನು ತೀರಾ ಬಡವನಾದ.

ಅದೊಂದು ದಿನ ಕಿರಿಯ ಮಗ ತನ್ನ ಅಣ್ಣನ ನೆನಪು ಮಾಡಿಕೊಂಡ. ತನ್ನ ಅಣ್ಣನೂ ತನ್ನಂತೆಯೇ ಬಡವನಾಗಿರಬೇಕು ಎಂದು ಅವನು ಯೋಚಿಸಿದ. ಯಾಕೆಂದರೆ, ಅವರ ತಂದೆ ತನ್ನ ಸಂಪತ್ತನ್ನು ಇಬ್ಬರಿಗೂ ಸಮಾನವಾಗಿ ಹಂಚಿದ್ದ. ಅಣ್ಣನನ್ನು ಭೇಟಿಯಾಗಲಿಕ್ಕಾಗಿ ತಮ್ಮ ನಗರಕ್ಕೆ ಹೊರಟ.

ಅಲ್ಲಿ ಅಣ್ಣನ ಮನೆಯೊಳಗೆ ಹೋದಾಗ, ಆ ದೊಡ್ಡ ಮನೆಯನ್ನು ಮತ್ತು ಅಲ್ಲಿ ಹಲವರು ವಾಸ ಮಾಡುತ್ತಿರುವುದನ್ನು ಕಂಡು ತಮ್ಮನಿಗೆ ಆಶ್ಚರ್ಯವಾಯಿತು.

“ಅದು ಹೇಗೆ ನೀನು ಇನ್ನೂ ಶ್ರೀಮಂತನಾಗಿಯೇ ಇದ್ದಿ? ನಮ್ಮ ತಂದೆ ಹೇಳಿದ ಎಲ್ಲ ಸೂತ್ರಗಳನ್ನು ನಾನು ಪಾಲಿಸಿದೆ. ಆದರೆ ನಾನು ದಿನದಿಂದ ದಿನಕ್ಕೆ ಬಡವನಾದೆ” ಎಂದು ತಮ್ಮ ದುಃಖಿಸಿದ.

"ನಾನು ನಗರಕ್ಕೆ ಬರುತ್ತಿದ್ದಾಗ, ನಮ್ಮ ತಂದೆ ಹೇಳಿದ ಮೂರು ಸೂತ್ರಗಳ ಅರ್ಥವೇನೆಂದು ಯೋಚಿಸಿದೆ. ಮೊದಲನೆಯದು, ದೊಡ್ಡ ದೀಪವನ್ನು ಉರಿಸುತ್ತಾ ರಾತ್ರಿಯ ಊಟ ಮಾಡಬೇಕು. ಅಂದರೆ ಸೂರ್ಯ ಮುಳುಗುವ ಮುಂಚೆ ರಾತ್ರಿಯ ಊಟ ಮಾಡಬೇಕು. ಇದರಿಂದಾಗಿ ಎಣ್ಣೆ ಉಳಿಯುತ್ತದೆ.”

“ಎರಡನೆಯ ಸೂತ್ರ, ಪ್ರಾಣಿಗಳ ಹಲ್ಲುಗಳಿಂದ ನಮ್ಮ ಮನೆ ಸುತ್ತುವರಿಯುವಂತೆ ಮಾಡಬೇಕು. ಕಳ್ಳರಿಂದ ಮನೆಯನ್ನು ರಕ್ಷಿಸಲಿಕ್ಕಾಗಿ ನಾಯಿಗಳನ್ನು ಸಾಕಲು ನಾನು ನಿರ್ಧರಿಸಿದೆ."

“ಮೂರನೆಯ ಸೂತ್ರ, ದೀರ್ಘ ಕಾಲ ತಿನ್ನಲು ಸಿಗುವಂತೆ ಹುಣಿಸೆ ಬೀಜಗಳನ್ನು ಬಳಸುವುದು ಹೇಗೆಂದು ತಿಳಿದುಕೊಳ್ಳುವುದು.  ನಗರಕ್ಕೆ ಬಂದ ನಂತರ, ತಿನ್ನಲಿಕ್ಕಾಗಿ ಕೆಲವು ಹುಣಿಸೆ ಬೀಜಗಳನ್ನು ಹುರಿದೆ. ಉಳಿದವನ್ನು ನನ್ನ ಮನೆಯ ಸುತ್ತಲೂ ಬಿತ್ತಿದೆ. ಅವು ಬೇಗನೇ ಹುಣಿಸೆ ಮರಗಳಾಗಿ ಬೆಳೆದವು. ಈಗ ಪ್ರತಿ ವರುಷವೂ ಮಾರಾಟಕ್ಕಾಗಿ ನಾನು ಅವುಗಳಿಂದ ಹುಣಿಸೆ ಹಣ್ಣು ಕೊಯ್ಯುತ್ತೇನೆ. ನಮ್ಮ ತಂದೆಯ ಸೂತ್ರಗಳನ್ನು ನಾನು ಹೇಗೆ ಪಾಲಿಸಿದೆ ಎಂದು ನೋಡಿದೆಯಾ? ನಿಜ ಹೇಳಬೇಕೆಂದರೆ, ನಾನೀಗ ಶಾಶ್ವತವಾಗಿ ಶ್ರೀಮಂತನಾಗಿದ್ದೇನೆ” ಎಂದು ಅಣ್ಣ ಸಂತೋಷದಿಂದ ಹೇಳಿದ.

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ: ರೀಡ್ ಮಿ ಎ ಸ್ಟೋರಿ
ಚಿತ್ರಕಾರ: ಟೀರಾಪುನ್ ಲೊಪೈಬೂನ್