ತಂಪೆರೆದ ಮಳೆ

ತಂಪೆರೆದ ಮಳೆ

ಕವನ

ಬಿಸಿಲಿನ ಬೇಗೆಗೆ ಬಸವಳಿದೀಜಗ

ಕಸಿವಿಸಿಗೊಳ್ಳುತ ಕುಳಿತಿರಲು

ನಸುಕಲಿ ಬಿರಿದಿಹ ಕುಸುಮವು ಮುದುಡಿದೆ

ವಸುಧೆಯು ದಾಹದೆ ನೊಂದಿರಲು

 

ಮುತ್ತಿದ ಬೇಸಿಗೆ ಕುತ್ತನು ತಂದಿದೆ

ಕತ್ತಲಿನಲ್ಲಿದೆ ಧರೆ ಜೀವಿ

ಶಿಸ್ತನು ಕಾಯದೆ ಹೊತ್ತಿಗೆ ಸುರಿಯದೆ

ಬತ್ತಿದೆ ಸುತ್ತಲ ಕೆರೆ ಬಾವಿ

 

ಹಕ್ಕಿಯು ಕುಳಿತಿದೆ ಕೊಕ್ಕನು ತೆರೆದಿದೆ

ರೆಕ್ಕೆಯು ಸೋತಿದೆ ದಾಹದಲಿ

ದಕ್ಕಿದ ಕಾಳನು ಮುಕ್ಕಲಿಕಾಗದು

ದಕ್ಕದೆ ಜಲಹನಿ ಸನಿಹದಲಿ

 

ಜಗದಲಿ ಜೀವಿಯ ಮುಗಿಯದ ನೋವಿಗೆ

ಸಿಗುವುದೆ ಶೀಘ್ರದೆ ಪರಿಹಾರ?

ಮುಗಿಲಿದು ಬಂದಿತು ಗಗನದ ಬಯಲಿಗೆ

ಹಗಲಲಿ ಇರುಳಿನ ಅವತಾರ

 

ತುಂತುರು ಮಳೆಹನಿ ಬಂತದೊ ಭೂಮಿಗೆ

ನಂತರ ಸುರಿಯಿತು ಜೋರಾಗಿ

ತಂತದು ಜೀವಿಗೆ ಸಂತಸ ಸಂಭ್ರಮ

ಚಿಂತೆಯ ಕಳೆಯಿತು ಸೊಗಸಾಗಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್