ತಂಬಾಕು ತ್ಯಜಿಸಿ ಆರೋಗ್ಯವಂತರಾಗಿ ಬದುಕಿರಿ
ಬಹಳ ವರ್ಷಗಳ ಹಿಂದೆ ಆರೋಗ್ಯ ಸಂಬಂಧಿ ಜಾಹೀರಾತೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಹೆಸರು ‘Second hand smoke kills’. ಆ ಚಿತ್ರದಲ್ಲಿ ಇದ್ದದ್ದು ತಲೆಯ ಮೇಲೆ ಕೈಯಿಟ್ಟು ಚಿಂತಾಕ್ರಾಂತವಾಗಿ ನಿಂತಿದ್ದ ಓರ್ವ ಕುದುರೆ ಸವಾರ ಹಾಗೂ ಸತ್ತು ಬಿದ್ದಿದ್ದ ಕುದುರೆ. ಈ ಒಂದು ಚಿತ್ರ ಆ ಸಮಯದಲ್ಲಿ ಬಹಳ ಸುದ್ದಿ ಮಾಡಿತ್ತು. ಧೂಮಪಾನಿಯಾಗಿದ್ದ ಆ ಕುದುರೆ ಸವಾರ ಸೇದಿ ಹೊರಬಿಟ್ಟ ತಂಬಾಕಿನ ಹೊಗೆಯಿಂದ ಪಾಪದ ಕುದುರೆ ಸತ್ತು ಹೋಗಿತ್ತು. ಇದು ಧೂಮಪಾನದ ಅಪಾಯವನ್ನು ಬೆಟ್ಟು ಮಾಡುತ್ತದೆ. ಧೂಮಪಾನ ಮಾಡುವವನು ಅವನ ಸ್ವಯಂಕೃತ ಅಪರಾಧಕ್ಕೆ ಬಲಿಯಾಗುತ್ತಾನೆ. ಸಮಯ ಕಳೆದಂತೆ ಅವನ ದೇಹವು ದುರ್ಬಲವಾಗಿ ಕ್ಯಾನ್ಸರ್, ಉಸಿರಾಟದ ತೊಂದರೆಗಳು, ಹೃದಯಾಘಾತಗಳಿಗೆ ಗುರಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಆ ಧೂಮಪಾನಿ ಸೇದಿ ಹೊರಬಿಟ್ಟ ಹೊಗೆಯನ್ನು ಸೇವಿಸಿದ (ಅನಿವಾರ್ಯವಾಗಿ) ಯಾರೇ ಅಮಾಯಕರೂ ಇದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಖಂಡಿತವಾಗಿಯೂ ಇದೆ. ಈ ಕಾರಣದಿಂದ ಈಗ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ನಿಷೇದಿಸಲಾಗಿದೆ. ಆದರೆ ಮಕ್ಕಳು, ಹಿರಿಯರು ಇರುವ ಮನೆಯಲ್ಲಿ ಧೂಮಪಾನ ಮಾಡಿದರೆ ಇವರೆಲ್ಲರ ಆರೋಗ್ಯವೂ ಅಪಾಯಕ್ಕೆ ಸಿಲುಕುವುದಲ್ಲವೇ? ಧೂಮಪಾನಿಗಳು ಇನ್ನಾದರೂ ಜಾಗೃತರಾಗಬೇಕಾಗಿದೆ. ಧೂಮಪಾನ ತ್ಯಜಿಸುವುದು ತಮ್ಮ ಮೊದಲನೆಯ ಆದ್ಯತೆಯನ್ನಾಗಿ ಮಾಡಿಕೊಳ್ಳಿ. ನೀವು ಬೀಡಿ, ಸಿಗರೇಟು ಸೇದದೇ ಇದ್ದ ಪಕ್ಷದಲ್ಲಿ ನಿಮ್ಮ ಬಂಧು ಮಿತ್ರರೂ ಅಪಾಯಕ್ಕೆ ಗುರಿಯಾಗಲಾರರು. ಬೇರೆಯವರಿಗೆ ರೋಗ ಹರಡಿ ನೀವು ಯಾಕೆ ಅವರ ಶಾಪಕ್ಕೆ ತುತ್ತಾಗುತ್ತೀರಿ?
ಇಷ್ಟೆಲ್ಲಾ ಏಕೆ ಹೇಳಿದೆ ಗೊತ್ತಾ? ಇಂದು ಮೇ ೩೧, ವಿಶ್ವ ತಂಬಾಕು ರಹಿತ ದಿನ (World No Tobacco Day). ವಿಶ್ವದಾದ್ಯಂತ ಈ ದಿನವನ್ನು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಈ ದಿನದಂದು ನನಗೊಂದು ನಮ್ಮದೇ ಮನೆಯ ಅಂದರೆ ನನ್ನ ತಂದೆಯವರ ಕಥೆ ನೆನಪಾಗುತ್ತದೆ. ಸುಮಾರು ನಾಲ್ಕೈದು ದಶಕಗಳ ಸಿಗರೇಟು ಸೇವನೆಯನ್ನು ನನ್ನ ತಂದೆಯವರು ತ್ಯಜಿಸಿದ್ದು ಒಂದು ರೀತಿಯ ಪವಾಡವೇ ಆಗಿದೆ ನಮಗೆಲ್ಲಾ. ನನಗೆ ಈಗ ನಲವತ್ತೈದು ವರ್ಷ. ನಾನು ಹುಟ್ಟಿದಂದಿನಿಂದ ನನ್ನ ತಂದೆ ಧೂಮಪಾನ ಮಾಡುವುದನ್ನು ನೋಡುತ್ತಾ ಬೆಳೆದೆ. ಅಮ್ಮ ಆಗಾಗ ‘ಅದನ್ನು ಬಿಟ್ಟುಬಿಡಿ, ಯಾಕೆ ಹಣವನ್ನು ಉರಿಸಿ ಬಿಸಾಕುತ್ತೀರಾ? ಆರೋಗ್ಯವನ್ನೇಕೆ ಕೆಡಿಸಿಕೊಳ್ಳುತ್ತೀರಾ?’ ಎಂದು ಹೇಳುತ್ತಿದ್ದ ನುಡಿಗಳನ್ನು ಅವರು ಕೇಳಿಸಿಯೇ ಕೊಳ್ಳುತ್ತಿರಲಿಲ್ಲ.
ಮೊದಮೊದಲು ಬೀಡಿಯನ್ನು ಸೇದುತ್ತಿದ್ದ ನನ್ನ ತಂದೆ ಕ್ರಮೇಣ ಅದನ್ನು ಬಿಟ್ಟು ಸಿಗರೇಟ್ ಸೇದಲು ಶುರು ಮಾಡಿದರು. ದಿನಕ್ಕೊಂದು ಪ್ಯಾಕೆಟ್ ಇದ್ದದ್ದು ಕ್ರಮೇಣ ೨, ೩ ಪ್ಯಾಕೇಟ್ ಗಳಿಗೆ ಏರಿಕೆಯಾಯಿತು. ಕ್ರಮೇಣ ಆರೋಗ್ಯವೂ ಕೆಡಲು ಪ್ರಾರಂಭವಾಯಿತು. ಆದರೂ ಅವರ ಸಿಗರೇಟು ಸೇವನೆ ನಿರಂತರವಾಗಿ ನಡೆಯುತ್ತಲೇ ಇತ್ತು. ಈ ಹಿಂದೆ ನಾಲ್ಕು ವರ್ಷಗಳ ಹಿಂದೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿತು. ಕೆಮ್ಮೂ ಬರತೊಡಗಿತು. ಆದರೂ ಹಠಕ್ಕೆ ಬಿದ್ದು ಸಿಗರೇಟು ಸೇದುತ್ತಿದ್ದರು. ಕೊನೆಗೊಮ್ಮೆ ಸಿಗರೇಟು ಎಳೆಯಲೂ ಆಗದ ಸ್ಥಿತಿಗೆ ತಲುಪಿದರು. ನಮ್ಮ ಕುಟುಂಬ ವೈದ್ಯರು ಅವರನ್ನು ಪರೀಕ್ಷಿಸಿ ಶ್ವಾಸಕೋಶವು ತುಂಬಾನೇ ಸೋಂಕಿಗೆ ಒಳಗಾಗಿದೆ ಎಂದರು. ಕಡೆಗೊಂದು ದಿನ ನಾನು ಮತ್ತು ನನ್ನ ತಮ್ಮ ಸೇರಿ ಮಂಗಳೂರಿನ ಆಸ್ಪತ್ರೆಗೆ ಅವರನ್ನು ದಾಖಲು ಮಾಡಿದೆವು. ಅಲ್ಲಿ ನುರಿತ ವೈದ್ಯರು ಅವರ ಎಕ್ಸ್ ರೇ, ಸ್ಕ್ಯಾನಿಂಗ್ ಮತ್ತಿತರ ಪರೀಕ್ಷೆಗಳನ್ನು ಮಾಡಿಸಿ ಶ್ವಾಸಕೋಶ ತುಂಬಾನೇ ಹಾಳಾಗಿದೆ. ಇನ್ನು ಇವರು ಸಿಗರೇಟು ಸೇದಿದರೆ, ಜೀವಕ್ಕೇ ಅಪಾಯವಿದೆ ಎಂದು ಹೇಳಿದರು. ಈ ಮಾತು ನನ್ನ ತಂದೆಯವರ ಕಿವಿಗೂ ಬಿತ್ತು ಎಂದು ಕಾಣಿಸುತ್ತದೆ. ಆ ಸಂದರ್ಭದಲ್ಲೇ ಅವರು ಮನದಲ್ಲೇ ‘ಇನ್ನು ಸಿಗರೇಟು ಸೇದುವುದಿಲ್ಲ’ ಎಂದು ನಿರ್ಧಾರ ಮಾಡಿದರು ಎಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ಬಳಿಕ ನಮಗೆ ತಿಳಿಸಿದರು. ನನ್ನ ಅಪ್ಪ ಸಿಗರೇಟು ತ್ಯಜಿಸಿ ಈಗ ನಾಲ್ಕು ವರ್ಷಗಳೇ ಆಗಿಹೋಗಿವೆ. ಆರೋಗ್ಯವೂ ಬಹಳಷ್ಟು ಸುಧಾರಣೆ ಕಂಡಿದೆ. ಮೈಯಲ್ಲಿ ನಿಕೋಟಿನ್ (ಸಿಗರೇಟ್ ಮೂಲಕ) ಅಂಶ ಇಲ್ಲದಿರುವುದರಿಂದ ಧೈರ್ಯ ಸ್ವಲ್ಪ ಕಮ್ಮಿ ಆಗಿದೆ ಎಂದು ನನಗೆ ಅನಿಸುತ್ತೆ. ಏಕೆಂದರೆ ನೀವು ಸೇದುವ ಸಿಗರೇಟು ನಿಮಗೆ ಅಲ್ಪ ಸ್ವಲ್ಪ ಕಿಕ್ (ನಿಕೋಟಿನ್ ಇರುವುದರಿಂದ) ಸಹಾ ಕೊಡುತ್ತದೆ. ಇದರಿಂದ ಸ್ವಲ್ಪ ಹುಚ್ಚು ಧೈರ್ಯವೂ ಬರುತ್ತದೆ. ನನ್ನ ಅಪ್ಪನವರಿಗೆ ಮಧುಮೇಹವೂ ಸ್ವಲ್ಪ ಇರುವುದರಿಂದ ಆಹಾರ ಸೇವನೆಯಲ್ಲೂ ಎಚ್ಚರಿಕೆಯನ್ನು ಈಗ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಅಪ್ಪ ಎಂದಿಗೂ ಧೂಮಪಾನ ಬಿಡುವುದಿಲ್ಲ ಎಂದು ನಂಬಿದ್ದ ನಮಗೆ ಅವರು ಸಿಗರೇಟು ತ್ಯಜಿಸಿದ್ದು ಒಂದು ರೀತಿಯಲ್ಲಿ ಅಚ್ಚರಿ ಭರಿತ ಸಂತೋಷದ ಸಂಗತಿಯಾಗಿದೆ. ಇದಕ್ಕೆ ಕಾರಣ ಅವರ ಮನಸ್ಸಿಗೆ ಹಿಡಿದ ಜೀವದ ಭಯವೇ ಕಾರಣ ಎಂದು ನಾನು ಆಗಾಗ ಅಂದುಕೊಳ್ಳುವುದಿದೆ.
ಇದು ನಮ್ಮ ಮನೆಯ ಕಥೆ. ಧೃಢ ನಿರ್ಧಾರದಿಂದ ಧೂಮಪಾನ ತ್ಯಜಿಸಿದವರ ಕಥೆಗಳು ಹಲವಾರು ಇವೆ. ಈ ಧೂಮಪಾನ ನಿಮ್ಮ ದೇಹವನ್ನು ಭೀಕರ ರೋಗದೆಡೆಗೆ ದೂಡಿ ಜೀವವನ್ನು ಕಸಿಯುವ ಮೊದಲು ಎಚ್ಚರವಾಗಿ. ತಂಬಾಕು ರಹಿತ ದಿನವಾದ ಇಂದು ಯಾರೆಲ್ಲಾ ಧೂಮಪಾನ ಮಾಡುತೀರೋ ಅವರು ಅದನ್ನು ತ್ಯಜಿಸುವ ಪ್ರತಿಜ್ಞೆ ಮಾಡಬೇಕಾಗಿದೆ. ನಿಮ್ಮ ಜೊತೆ, ನಿಮ್ಮ ಮನೆ ಮಂದಿಯವರ ಆರೋಗ್ಯವನ್ನೂ ಉಳಿಸಬೇಕಾಗಿದೆ. ‘ತಂಬಾಕು ತ್ಯಜಿಸಲು ಬದ್ಧರಾಗಿ' (Commit to Quit)' ಎಂಬುವುದು ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಘೋಷವಾಕ್ಯವಾಗಿದೆ.
ನಾವು ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಈ ಚಟಕ್ಕೆ ತುತ್ತಾಗುವ ಬಹುತೇಕ ಮಂದಿ ಯುವಕರೇ ಆಗಿದ್ದಾರೆ. ಕಾಲೇಜು ಕಲಿಯುವ ಸಮಯದಲ್ಲೇ ಫ್ರೆಂಡ್ಸ್, ಪಾರ್ಟಿ, ಫ್ಯಾಷನ್ ಅಂದುಕೊಂಡು ಸಿಗರೇಟ್ ಸೇವನೆಗೆ ದಾಸರಾಗುವ ಯುವಜನತೆ ಕ್ರಮೇಣ ಇದರ ಚಟಕ್ಕೆ ಸಿಲುಕುತ್ತಾರೆ. ಹಲವಾರು ಮಂದಿ ಸಿಗರೇಟು ಕಿಕ್ ಸಾಕಾಗದೇ ಮಾದಕ ದ್ರವ್ಯ ಅಥವಾ ಡ್ರಗ್ಸ್ ಕಡೆಗೆ ಮುಖ ಮಾಡುತ್ತಾರೆ. ಇದರಿಂದ ನಿಮ್ಮ ಆರೋಗ್ಯವೂ ಹಾಳು, ಹಣವೂ ಹಾಳು. ಜಾಗತಿಕವಾಗಿ ಧೂಮಪಾನದ ಕಾರಣಗಳಿಂದಾಗಿ ಪ್ರತೀ ವರ್ಷ ೭೦ ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ನಾನು ಮೊದಲೇ ಹೇಳಿದಂತೆ ಈ ೭೦ ಲಕ್ಷ ಮಂದಿಯಲ್ಲಿ ಸುಮಾರು ೧೦ ಲಕ್ಷ ಮಂದಿ ತಾವು ಧೂಮಪಾನ ಮಾಡದೇ ಇದ್ದರೂ ಧೂಮಪಾನಿಗಳ ಸಂಪರ್ಕ ಅಂದರೆ ಅವರು ಸೇದಿ ಹೊರಬಿಟ್ಟ ಹೊಗೆಯ ಕಾರಣಗಳಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಇದು ಅಮಾಯಕರ ಸಾವು ಎಂದೇ ತಿಳಿದುಕೊಳ್ಳಬೇಕಾಗುತ್ತದೆ. ನಿಮ್ಮ ಧೂಮಪಾನದ ಚಟದ ಕಾರಣದಿಂದ ಇನ್ನೊಬ್ಬರು ಸಾಯುವುದು ನಿಮಗೆ ಸಹ್ಯವಾಗುವುದೇ? ಈ ಕುರಿತಾಗಿ ದಯವಿಟ್ಟು ಯೋಚಿಸಿ,
ಈಗ ಕೋವಿಡ್ ಸಮಯದಲ್ಲಿ ಧೂಮಪಾನಿಗಳು ಇನ್ನಷ್ಟು ಜಾಗರೂಕರಾಗಿರಲೇ ಬೇಕು. ಏಕೆಂದರೆ ಕೊರೋನಾ ಆಗಿರಲಿ, ಧೂಮಪಾನವಾಗಿರಲಿ ಸೋಂಕು ತಗಲುವುದು ಶ್ವಾಸಕೋಶಕ್ಕೇ. ನೀವು ಧೂಮಪಾನ ಮಾಡುವವರಾಗಿದ್ದರೆ, ನಿಮ್ಮ ಶ್ವಾಸಕೋಶ ಈಗಾಗಲೇ ದುರ್ಬಲವಾಗಿರುತ್ತದೆ. ಆದುದರಿಂದ ನಿಮಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆಯೂ ಅಧಿಕ, ಆ ಸೋಂಕಿನಿಂದ ಹೊರ ಬರುವುದೂ ಕಷ್ಟ. ನೀವು ಸೇದುವ ಸಿಗರೇಟಿನಲ್ಲಿರುವ ತಂಬಾಕು ನಿಧಾನವಾಗಿ ನಿಮ್ಮ ಬಾಯಿ, ಗಂಟಲು, ಮಿದುಳು, ಅನ್ನನಾಳ, ಶಾಸಕೋಶ, ಪಿತ್ತಕೋಶ, ಮೂತ್ರಪಿಂಡ, ಹೃದಯ, ಸ್ತನ ಇತ್ಯಾದಿ ಅಂಗಗಳಿಗೆ ಬಾಧೆ ಕೊಡುವ ಸಾಧ್ಯತೆ ಇದ್ದೇ ಇರುತ್ತದೆ. ಇವುಗಳಿಂದ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆ, ಕುರುಡುತನ ಹೀಗೆ ಹಲವಾರು ಕಾಯಿಲೆಗಳು ಬರುತ್ತದೆ.
ನೀವು ಧೂಮಪಾನ ಮಾಡುವಿರಾದರೆ ಇಂದೇ ಅದನ್ನು ತ್ಯಜಿಸಿ, ಸ್ವಲ್ಪ ದಿನ ಕಷ್ಟವಾಗುತ್ತದೆ. ನಿಮ್ಮ ಮನೆಯವರ ಜೊತೆ ಬೆರೆಯಿರಿ, ಗೆಳೆಯ-ಗೆಳತಿಯರ ಜೊತೆ ಚಾಟ್ ಮಾಡಿ, ಲಾಕ್ ಡೌನ್ ಸಮಯವಾದುದರಿಂದ ಹೊರ ಹೋಗುವುದು ಕಷ್ಟ. ಮನೆಯಲ್ಲೇ ಒಳ್ಳೆಯ ಸಿನೆಮಾ ನೋಡಿ. ಹಿತ ಮಿತವಾದ ಆರೋಗ್ಯದಾಯಕ ಅಡುಗೆ ಮಾಡಿ, ಊಟ ಮಾಡಿ. ನಿಮ್ಮನ್ನು ನೀವು ಹಲವಾರು ಕೆಲಸಗಳಲ್ಲಿ ತೊಡಗಿಸಿರಿ. ಮನೆಯ ಎದುರಿನ ಕೈತೋಟದಲ್ಲಿ ಸ್ವಲ್ಪ ಸಮಯ ಕಳೆಯಿರಿ. ಇದರಿಂದ ನಿಮಗೆ ಧೂಮಪಾನ ಮಾಡಬೇಕೆಂಬ ಆಸೆ ನಿಧಾನವಾಗಿ ದೂರವಾಗುತ್ತದೆ. ಇನ್ನೂ ಕಷ್ಟ ಎಂದು ಅನಿಸಿದರೆ ನಿಮ್ಮ ಕುಟುಂಬದ ವೈದ್ಯರ ಅಥವಾ ಮಾನಸಿಕ ತಜ್ಞರ ಸಲಹೆ ಪಡೆಯಿರಿ. ಫೇಸ್ ಬುಕ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ‘ತಂಬಾಕು ತ್ಯಜಿಸಿ' ಎಂಬ ಸವಾಲು ಇದ್ದರೆ ಅದನ್ನು ಸ್ವೀಕರಿಸಿ. ತಂಬಾಕು ತ್ಯಜಿಸಿ ಸವಾಲನ್ನು ಗೆಲ್ಲಿ. ಇದರಿಂದಾಗಿ ನಿಮ್ಮ ಆತ್ಮ ವಿಶ್ವಾಸವೂ ಹೆಚ್ಚುತ್ತದೆ. ನಿಮ್ಮ ಮನೆಯಲ್ಲೂ ಸದಾ ಆರೋಗ್ಯದಾಯಕ ನೆಮ್ಮದಿಯ ವಾತಾವರಣ ಇರುತ್ತದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ