ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 1)

ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 1)

ನಮ್ಮ ದೇಶದಲ್ಲಿ ಕ್ಯಾನ್ಸರಿಗೆ ಬಲಿಯಾಗುವವರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಲೇ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರ ಇದಕ್ಕೆ ಆಧಾರ: ಅದರ ಅನುಸಾರ ಕ್ಯಾನ್ಸರಿನಿಂದಾದ ಸಾವುಗಳ ಸಂಖ್ಯೆ: 2018ರಲ್ಲಿ 7.33 ಲಕ್ಷ, 2019ರಲ್ಲಿ 7.51 ಲಕ್ಷ ಮತ್ತು     2020ರಲ್ಲಿ 7.70 ಲಕ್ಷ.

ಜಾಗತಿಕ ಆರೋಗ್ಯ ಸಂಸ್ಥೆಯ (ಡಬ್ಲ್ಯೂ.ಎಚ್.ಓ.) ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಏಜೆನ್ಸಿ ಅನುಸಾರ 2022ರಲ್ಲಿ ಭಾರತದಲ್ಲಿ ದಾಖಲಾದ ಹೊಸ ಕ್ಯಾನ್ಸರ್ ರೋಗಿಗಳ ಸಂಖ್ಯೆ 14.1 ಲಕ್ಷ ಮತ್ತು ಸಾವುಗಳ ಸಂಖ್ಯೆ 9.1 ಲಕ್ಷ. ಅದೇ ಏಜೆನ್ಸಿಯ ವರದಿಗಳು ಈ ಸಂಗತಿಗಳನ್ನೂ ಬಹಿರಂಗ ಪಡಿಸಿವೆ: ಭಾರತದಲ್ಲಿ ಹೊಸ ರೋಗಿ ಮಹಿಳೆಯರಲ್ಲಿ ಅತ್ಯಧಿಕ ಪ್ರಕರಣಗಳು: ಸ್ತನ ಕ್ಯಾನ್ಸರ್ (ಶೇ.27) ಮತ್ತು ಗರ್ಭಕೋಶದ ಕ್ಯಾನ್ಸರ್ (ಶೇ. 18). ಹಾಗೆಯೇ, ಹೊಸ ರೋಗಿ ಪುರುಷರಲ್ಲಿ ಅತ್ಯಧಿಕ ಪ್ರಕರಣಗಳು: ತುಟಿಯ ಕ್ಯಾನ್ಸರ್ (ಶೇ. 15.6) ಮತ್ತು ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರ್ (ಶೇ. 8.5).

ಪುರುಷರಲ್ಲಿ ಉಲ್ಲೇಖಿತ ಕ್ಯಾನ್ಸರುಗಳಿಗೆ ಕಾರಣ ತಂಬಾಕು ಬಳಕೆ (ಸಿಗರೇಟು, ಬೀಡಿ, ಸಿಗಾರ್, ನಶ್ಯ ಚಟ) ಮತ್ತು ಗುಟ್ಕಾ ಸೇವನೆ ಚಟ ಎಂಬುದು ಸ್ಪಷ್ಟ. ಅಂಕೆಸಂಖ್ಯೆಗಳು ಈ ಭಯಂಕರ ಚಟಗಳಿಂದ ಆಗುತ್ತಿರುವ ಅನಾಹುತಗಳನ್ನು ದಾಖಲಿಸುತ್ತಿದ್ದಂತೆ ಬಳಕೆದಾರರ ಸಂಘಟನೆಗಳೂ ಆರೋಗ್ಯ ಸಂಸ್ಥೆಗಳೂ ಸರಕಾರದ ಮೇಲೆ ಇವುಗಳ ನಿಷೇಧಕ್ಕಾಗಿ ಒತ್ತಡ ಹೇರಿದವು. ಅದರಿಂದಾಗಿ  ಭಾರತ ಸರಕಾರವು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಪ್ಯಾಕೆಟುಗಳಲ್ಲಿ “ಇವುಗಳ ಸೇವನೆ ಆರೋಗ್ಯಕ್ಕೆ ಹಾನಿಕರ” ಎಂಬ ಚಿತ್ರಸಹಿತ ಜಾಹೀರಾತು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿತು. ಹಾಗೆಯೇ, ಭಾರತ ಸರಕಾರವು ಗುಟ್ಕಾ ಮತ್ತು ಇತರ ಜಗಿಯುವ ತಂಬಾಕು ಉತ್ಪನ್ನಗಳ ಮಾರಾಟವನ್ನು 2012ರಿಂದ ದೇಶದ ಉದ್ದಗಲದಲ್ಲಿ ನಿಷೇಧಿಸಿತು. ಭಾರತದ ಆಹಾರ ಸುರಕ್ಷತಾ ಮತ್ತು ಮಾನಕ ಪ್ರಾಧಿಕಾರವು 01-8-2011ರಿಂದ ಯಾವುದೇ ಆಹಾರ ಉತ್ಪನ್ನದಲ್ಲಿ ತಂಬಾಕು ಮತ್ತು ನಿಕೊಟಿನಿನ ಬಳಕೆಯನ್ನು ಪ್ರತಿಬಂಧಿಸಿದೆ.

ಇಷ್ಟೆಲ್ಲ ಆದರೂ, ನಮ್ಮ ದೇಶದಲ್ಲಿ ವರುಷದಿಂದ ವರುಷಕ್ಕೆ ಹೊಸ ಕ್ಯಾನ್ಸರ್ ರೋಗಿಗಳ ಸಂಖ್ಯೆ ಮತ್ತು ಕ್ಯಾನ್ಸರಿನಿಂದ ಸಾವಿಗೆ ಬಲಿಯಾಗುವವರ ಸಂಖ್ಯೆ ಜಾಸ್ತಿಯಾಗುತ್ತಿರಲು ಕಾರಣವೇನು? ನಾವು ಸೇವಿಸುವ ಆಹಾರದಲ್ಲಿರುವ ಕ್ಯಾನ್ಸರ್-ಕಾರಕ ಅಂಶಗಳು ಒಂದು ಕಾರಣವಾದರೆ, ಇನ್ನೊಂದು ಕಾರಣ ಈ ಮೇಲಿನ ಪಾರಾದಲ್ಲಿ ತಿಳಿಸಿದ “ರಕ್ಕಸ ಚಟಗಳು”

ಹರೀಶ್ ಭಾಯಿಯ ನರಕ ಯಾತನೆ
ತಂಬಾಕು ಬಳಕೆ ಮತ್ತು ಗುಟ್ಕಾ ಸೇವನೆಯ ಚಟ ಎಂತಹ ರಕ್ಕಸ ಚಟ ಎಂದು ಅರ್ಥವಾಗಬೇಕಾದರೆ ಹರೀಶ್ ಭಾಯಿಯ ಪ್ರಕರಣದ ವಿವರ ತಿಳಿದರೆ ಸಾಕು. ಆತ ಅಹಮದಾಬಾದಿನ ಒಬ್ಬ ಬಡಗಿ. 1988ರ ಒಂದು ದಿನ ಗೆಳೆಯರೊಂದಿಗೆ ಮಾತಾಡುತ್ತಾ ಅವರು “ತುಳಸಿ” ಬ್ರಾಡ್ ಗುಟ್ಕಾ ಬಾಯಿಗಿಟ್ಟರು. ಹಾಗೆ ಅಂಟಿಕೊಂಡಿತು ಅವರಿಗೆ ಗುಟ್ಕಾ ತಿನ್ನುವ ಚಟ. (ಅಡಿಕೆಯಿಂದ ತಯಾರಿಸುವ ಜಗಿದು ತಿನ್ನುವ ಉತ್ಪನ್ನ ಪಾನ್ ಮಸಾಲಾ ಮತ್ತು ಇದರಲ್ಲಿ ತಂಬಾಕು ಇಲ್ಲ. ಇದಕ್ಕೆ ತಂಬಾಕು ಸೇರಿಸಿ ತಯಾರಿಸುವ ಜಗಿದು ತಿನ್ನುವ ತಂಬಾಕಿನ ಉತ್ಪನ್ನವೇ ಗುಟ್ಕಾ.)

ಹರೀಶ್ ಭಾಯಿ ದಿನಕ್ಕೆ ಒಂದೆರಡು ಪ್ಯಾಕೆಟ್ ಗುಟ್ಕಾ ತಿನ್ನಲು ಶುರು ಮಾಡಿದ್ದು. ಆದರೆ ಕೆಲವೇ ತಿಂಗಳುಗಳಲ್ಲಿ ಅದು ದಿನಕ್ಕೆ 10ರಿಂದ 15 ಪ್ಯಾಕೆಟ್ ಗುಟ್ಕಾ ತಿನ್ನಲೇ ಬೇಕಾದ ಚಟವಾಗಿ ಬೆಳೆಯಿತು. ಹರೀಶ್ ಭಾಯಿಗೆ ಮುಂದಿನ 12 ವರುಷಗಳ ಉದ್ದಕ್ಕೂ ಆ ರಕ್ಕಸ ಚಟವನ್ನು ಬಿಡಲು ಸಾಧ್ಯವಾಗಲೇ ಇಲ್ಲ. ಈ ಅವಧಿಯಲ್ಲಿ ಗುಟ್ಕಾ ಪ್ರೇರಿತ ಕ್ಯಾನ್ಸರ್ ಅವರ ಬಾಯಿಯಲ್ಲಿ ಸದ್ದಿಲ್ಲದೆ ಹೊಂಚು ಹಾಕುತ್ತಿತ್ತು.

ಅದು ಸ್ಫೋಟಿಸಿದ್ದು 1999ರಲ್ಲಿ. ಅವರ ಬಾಯಿಯಲ್ಲಿ ಬೆಂಕಿಯಂತೆ ನೋವಿನ ಬೊಬ್ಬೆಗಳು ಮೂಡಿ ಹರೀಶ್ ಬಾಯಿಗೆ ಬಾಯಿ ತೆರೆಯಲಿಕ್ಕೂ ಸಾಧ್ಯವಾಗಲಿಲ್ಲ. ನೋವು ಸಹಿಸಲಾಗದೆ ವೈದ್ಯರಿಗೆ ತೋರಿಸಿದರು. ಆಗಲೇ ಅವರಿಗೆ ಕಾದು ಕೂತಿದ್ದ ಗಂಡಾಂತರದ ಅರಿವಾದದ್ದು. ಅವರ ಕ್ಯಾನ್ಸರ್ ಜೋರಾಗಿ ಮೂರನೆಯ ಹಂತ ತಲಪಿತ್ತು. ಅದೇ ವರುಷ ಅಕ್ಟೋಬರ್ 2ರಂದು ಹರೀಶ್ ಭಾಯಿಯ ಪ್ರಾಣ ಉಳಿಸಲಿಕ್ಕಾಗಿ ಅವರ ನಾಲಗೆಯ ಮುಕ್ಕಾಲು ಭಾಗವನ್ನು ಶಸ್ತ್ರಚಿಕಿತ್ಸೆ ಮಾಡಿ ತುಂಡರಿಸಿ ತೆಗೆಯಬೇಕಾಯಿತು.

ಜೀವಭಯದಿಂದ ತತ್ತರಿಸಿದ ಹರೀಶ್ ಭಾಯಿ ಅಂದಿನಿಂದ ಗುಟ್ಕಾ ತಿನ್ನುವುದನ್ನು ನಿಲ್ಲಿಸಿದರು. ಆದರೆ ಕಾಲ ಮಿಂಚಿತ್ತು. ಕ್ಯಾನ್ಸರಿನ ಕೋಶಗಳು ಅಕ್ಟೋಪಸಿನ ಬಾಹುಗಳಂತೆ ಅವರ ಬಾಯಿ ಕಬಳಿಸತೊಡಗಿದವು. ಅನಂತರ ಎರಡು ತಿಂಗಳು ಹರೀಶ್ ಭಾಯಿ ವಿಕಿರಣ ಚಿಕಿತ್ಸೆ ಪಡೆದರು. ಬಳಿಕ ಎರಡನೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಾಯಿಯ ಬಲಬದಿಯಲ್ಲಿದ್ದ ಕ್ಯಾನ್ಯರ್ ಗಡ್ಡೆಯನ್ನು ತೆಗೆಸಿದರು.

ಇಷ್ಟಾದರೂ ಅವರ ನರಕ ಯಾತನೆ ಮುಗಿಯಲಿಲ್ಲ. ಅವರು ಬಾಯಿ ತೆರೆದು ಯಾವುದೇ ಆಹಾರ ತಿನ್ನುವಂತಿರಲಿಲ್ಲ. ಹಾಗಾಗಿ ಮೂಗಿನಿಂದ ಒಂದು ನಳಿಕೆ ತೂರಿಸಿ, ಅದರ ಮೂಲಕ ದ್ರವ ಆಹಾರ ಸೇವಿಸತೊಡಗಿದರು. ಆದರೆ ಇದರಿಂದಾಗಿ ನ್ಯುಮೋನಿಯಾ ರೋಗ ತಗಲಿತು. ಆದ್ದರಿಂದ, ಆಹಾರ ಹಾಕಲಿಕ್ಕಾಗಿ, ನೇರವಾಗಿ ಅವರ ಹೊಟ್ಟೆಗೇ ಒಂದು ಟ್ಯೂಬ್ ಜೋಡಿಸಲಾಯಿತು!

ಕೆಲವೇ ತಿಂಗಳುಗಳಲ್ಲಿ ಹರೀಶ್ ಭಾಯಿ ಅವರ ಬಾಯಿಯಲ್ಲಿ ಇನ್ನೊಂದು ಕ್ಯಾನ್ಸರ್ ಗಡ್ಡೆ ಮೂಡಿತು. ಅವರು ತನ್ನ ಕೊನೆಯ ದಿನಗಳನ್ನು ಎಣಿಸತೊಡಗಿದರು. ಯಾಕೆಂದರೆ ಇದನ್ನು ಶಸ್ತ್ರಕ್ರಿಯೆ ಮಾಡಿ ತೆಗೆಯುವಂತಿರಲಿಲ್ಲ. ಇದರ ಕೆಳಗೆ ಮೆದುಳಿಗೆ ಜೋಡಿಸಲ್ಪಟ್ಟ ಒಂದು ಮುಖ್ಯ ನರವಿತ್ತು. ಇದಕ್ಕೆ ಕೊಂಚ ಹಾನಿಯಾದರೂ ಹರೀಶ್ ಬಾಯಿಗೆ ಶಾಶ್ವತ ಅಂಗವಿಕಲತೆ ಖಂಡಿತ. ಕೆಲವೇ ದಿನಗಳಲ್ಲಿ ಆ ಗಡ್ಡೆ ಒಡೆದು ಹರೀಶ್ ಭಾಯಿ ಚಿತ್ರಹಿಂಸೆ ಅನುಭವಿಸತೊಡಗಿದರು. ಕೊನೆಗೂ ಅವರಿಗೆ ಯಮಯಾತನೆಯಿಂದ ಮುಕ್ತಿ ಸಿಕ್ಕಿತು - ಜನವರಿ 2001ರಲ್ಲಿ ಅವರ ಮಿಣುಕು ಪ್ರಾಣವನ್ನು ಕ್ಯಾನ್ಸರ್ ಹೊಸಕಿ ಹಾಕಿದಾಗ.

ಹೀಗೆ ತಂಬಾಕಿನಿಂದ ಉಂಟಾದ ಕ್ಯಾನ್ಸರಿಗೆ ಪ್ರಾಣದಂಡ ನೀಡುವ ಮುನ್ನ ಹರೀಶ್ ಭಾಯಿ ಔಷಧಿಗಾಗಿ ಮಾಡುತ್ತಿದ್ದ ವೆಚ್ಚವೆಷ್ಟು ಗೊತ್ತೇ? ತಿಂಗಳಿಗೆ ಸುಮಾರು 3,000 ರೂಪಾಯಿಗಳು (1999ರಲ್ಲಿ). ವಿಶೇಷ ಆಹಾರದ ವೆಚ್ಚ ಬೇರೆ. ತನ್ನ ಕೊನೆಯ ದಿನಗಳಲ್ಲಿ, ಅಳಿದುಳಿದ ನಾಲಗೆಯಿಂದ ಸಂಕಟದ ಧ್ವನಿ ಹೊರಡಿಸುತ್ತಾ ಹರೀಶ್ ಭಾಯಿ ಹತಾಶರಾಗಿ ಹೇಳುತ್ತಿದ್ದರು, “ನನಗೆ ಯಾರೂ ಕೆಲಸ ಕೊಡುವುದಿಲ್ಲ. ಯಾಕೆಂದರೆ ನಾನು ಕೆಲಸ ಮಾಡಬಲ್ಲನೇ ಮತ್ತು ಕೆಲಸ ಮುಗಿಸುವ ತನಕ ಜೀವದಿಂದಿರುವೆನೇ ಎಂಬುದೇ ಜನರ ಸಂಶಯ.”

ಕುಟುಂಬದ ಏಕೈಕ ಅನ್ನದಾತ ಹರೀಶ್ ಭಾಯಿ ಗುಟ್ಕಾದ ಚಟಕ್ಕೆ ಬಲಿಯಾದಾಗಲೇ ಅವರ ಪತ್ನಿ ಜೋತ್ಸ್ನಾ ಬೆನ್ (ಆಗ ವಯಸ್ಸು 35 ವರುಷ) ಅವರ ಕಣ್ಣೀರು ಬತ್ತಿತ್ತು. ಅವರು ಮತ್ತು ಇಬ್ಬರು ಗಂಡು ಮಕ್ಕಳು (10 ಮತ್ತು 12 ವರುಷ ವಯಸ್ಸಿನ) ತಂಬಾಕಿಗೆ ರಾಶಿರಾಶಿ ಶಾಪ ಹಾಕಿದರು. ಆದರೆ ಕಾಲ ಮಿಂಚಿತ್ತು.

ರಕ್ಕಸ ಚಟದ ಜಾಲ
ಹರೀಶ ಬಾಯಿಯ ಜೀವ ತೆಗೆದದ್ದು ಗುಟ್ಕಾದಲ್ಲಿರುವ ತಂಬಾಕು. ಕ್ಯಾನ್ಸರಿನ ಆಲ್ ಇಂಡಿಯಾ ಇನ್-ಸ್ಟಿಟ್ಯೂಬ್ ಆಫ್ ಮೆಡಿಕಲ್ ಸೈನ್ಸಿನ ರೋಟರಿ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥರ ಅಭಿಪ್ರಾಯ ಹೀಗಿದೆ: ಗುಟ್ಕಾ ತಿನ್ನುವುದರಿಂದ ಬಾಯಿ, ಹಿಂಬಾಯಿ, ಶ್ವಾಸನಾಳದ ಮೇಲ್ಭಾಗ, ಕೆನ್ನೆ, ತುಟಿ ಮತ್ತು ಅನ್ನನಾಳದಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯುತ್ತವೆ. ಮಾತ್ರವಲ್ಲ, ಬ್ಲಾಡರ್ ಮತ್ತು ಪ್ಯಾಂಕ್ರಿಯಾಸ್-ಗಳಲ್ಲೂ ಕ್ಯಾನ್ಸರ್ ಉಂಟಾಗಲು ಗುಟ್ಕಾದಲ್ಲಿರುವ ತಂಬಾಕು ಕಾರಣ.

ಪ್ರಾಣ ಹಿಂಡುವ ಕ್ಯಾನ್ಸರಿನಿಂದಾಗಿ ಅರೆಜೀವವಾಗಿದ್ದ ಹರೀಶ್ ಭಾಯಿ ಹೀಗೆಂದಿದ್ದರು: “ನಾನು ಗುಟ್ಕಾ ತಿನ್ನಲು ಶುರು ಮಾಡಿದಾಗ, ಕ್ಯಾನ್ಸರಿನ ಮಾತಂತಿರಲಿ, ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ; ನನಗೆ ಅದನ್ನು ಯಾರೂ ತಿಳಿಸಲೂ ಇಲ್ಲ.”

ಅದನ್ನೆಲ್ಲ ತಿಳಿಸುವ ಮಾತಂತಿರಲಿ. “ತುಳಸಿ” ಬ್ರಾಂಡಿನ ಗುಟ್ಕಾದ ಉತ್ಪಾದಕರಿಂದ ಈಗಲೂ ಅದು ಐ.ಎಸ್.ಓ. 9002 ಪಡೆದಿರುವ ಉತ್ಪನ್ನ ಎಂದು ಪ್ರಚಾರ. ಆ ಮೂಲಕ ಅದು ಸಂಪೂರ್ಣ ಸುರಕ್ಷಿತ ಎಂಬ ಭ್ರಾಂತಿ ಹುಟ್ಟಿಸುವ ಹುನ್ನಾರ.

ತದನಂತರ ಭಾರತ ಸರಕಾರ ದೇಶದ ಉದ್ದಗಲದಲ್ಲಿ ಗುಟ್ಕಾ ಮತ್ತು ಇತರ ಜಗಿಯುವ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಮಾಡಿದೆಯಲ್ಲಾ ಎಂದು ಕೇಳುತ್ತೀರಾ? ದುಡ್ಡಿನ ದುರಾಸೆಗೆ ಬಿದ್ದವರಿಗೆ ಇಂತಹ ನಿಷೇಧಗಳಿಂದ ಹೇಗೆ ನುಣುಚಿಕೊಳ್ಳಬೇಕೆಂದು ಗೊತ್ತಿದೆ. ಹಳ್ಳಿಹಳ್ಳಿಗಳಲ್ಲಿ, ಬೀದಿಬೀದಿಗಳಲ್ಲಿರುವ ಗೂಡಂಗಡಿಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ ರಾಜಾರೋಷವಾಗಿ ಗುಟ್ಕಾ ಮಾರುತ್ತಿದ್ದಾರೆ! “ನಾವು ಮಾರುವುದು ಗುಟ್ಕಾ ಅಲ್ಲ, ಪಾನ್ ಮಸಾಲಾ” ಎನ್ನುತ್ತಾ ಪಾನ್ ಮಸಾಲಾದ ಪ್ಯಾಕೇಟಿನೊಂದಿಗೆ ತಂಬಾಕು ಹುಡಿಯ ಪ್ಯಾಕೆಟನ್ನೂ ಖರೀದಿದಾರರ ಕೈಗಿಡುತ್ತಾರೆ!
(ಮುಂದುವರಿಯುತ್ತದೆ)

ಫೋಟೋ: ಕ್ಯಾನ್ಸರ್ ರೋಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ….. ಕೃಪೆ: ಗೆಟ್ಟಿ ಇಮೇಜಸ್