ತಕ್ಕಡಿ ಸಮಾನಾಂತರವಾಗಿಯೇ ನಿಲ್ಲಬೇಕಲ್ಲವೇ…?!

ತಕ್ಕಡಿ ಸಮಾನಾಂತರವಾಗಿಯೇ ನಿಲ್ಲಬೇಕಲ್ಲವೇ…?!

ನ್ಯಾಯವೆಂಬುದು ಎಲ್ಲರಿಗೂ ಒಂದೇ ಆಗಿರಲಿ. ನಮ್ಮ ಮನಸ್ಸಿನ ಅನುಕೂಲಕ್ಕೆ ತಕ್ಕಂತೆ ವಿರೋಧಿಗಳ ಮೇಲಿನ ದ್ವೇಷಕ್ಕೆ ತಕ್ಕಂತೆ ಬದಲಾಗುವುದು ಬೇಡ. ಟೆಲಿಕಾಂ (2 G) ಎಂಬ ಬಹುದೊಡ್ಡ ಹಗರಣವನ್ನು ವಿರೋಧಿಸಿದ ಮನಸ್ಸುಗಳು, ಕಾಮನ್‌ವೆಲ್ತ್ ಕ್ರೀಡೆಯ ಭ್ರಷ್ಟಾಚಾರವನ್ನು ವಿರೋಧಿಸಿದ್ದ ಜನಗಳು, ಕಲಿದ್ದಲು ಗಣಿ ವಂಚನೆಯನ್ನು ವಿರೋಧಿಸಿದ್ದ ವ್ಯಕ್ತಿಗಳು, ಹರ್ಷದ್ ಮೆಹ್ತಾ ಷೇರು ಮಾರುಕಟ್ಟೆ ಮೋಸವನ್ನು ವಿರೋಧಿಸಿದ್ದ ಪ್ರಜೆಗಳು, ಸತ್ಯಂ ಕಂಪ್ಯೂಟರ್ಸ್ ರಾಮರಾಜು ಅವರ ಲೆಕ್ಕಪತ್ರ ಕಳ್ಳತನ ಟೀಕಿಸಿದ್ದ ಮಹಾನುಭಾವರು...

ಹೀಗೆ ಹಿಂದೆ ನಡೆದ ಹಲವಾರು ವಂಚನೆ ಪ್ರಕರಣಗಳನ್ನು ವಿರೋಧಿಸಿ -  ಪ್ರತಿಭಟಿಸಿದ ಅನೇಕರು ಈಗ ಗೌತಮ್ ಅದಾನಿಯವರನ್ನು ಮೇಲ್ನೋಟಕ್ಕೆ ಸುಳ್ಳು ಲೆಕ್ಕಾಚಾರ ಇರುವುದು ಕಂಡು ಬಂದರೂ ಅದನ್ನು ಸಮರ್ಥಿಸುತ್ತಿರುವುದು ಆತ್ಮವಂಚಕ ಮನೋಭಾವದ ವ್ಯಾಪ್ತಿಗೆ ಬರುವುದಿಲ್ಲವೇ? ದೇಶ ಮೊದಲು ಎನ್ನುವ ಜನ, ಪಕ್ಷ ಮೊದಲು - ವ್ಯಕ್ತಿ ಮೊದಲು ಎಂದು ಮನಸ್ಸು ಬದಲಾಯಿಸಿದರೆ ಅದು ತಪ್ಪು ಎಂದು ಭಾವಿಸಬಾರದೇ?

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಯಲು ದೇವರ ಚಿತ್ರಗಳನ್ನು ಗೋಡೆಗಳಿಗೆ ಅಂಟಿಸುವ ರೀತಿಯಲ್ಲಿ ವಂಚನೆ ಪ್ರಕರಣದಲ್ಲಿ ಧರ್ಮ, ರಾಷ್ಟ್ರೀಯತೆ, ಇನ್ನೊಂದು ವಂಚನೆ ತೋರಿಸಿ ಇದನ್ನು ಮರೆಮಾಚುವುದು ನ್ಯಾಯದ ಯಾವ ಪ್ರಕಾರ ಎಂದು ಅರ್ಥಮಾಡಿಕೊಳ್ಳಬೇಕು. ನ್ಯಾಯದ ದಂಡ ಯಾವಾಗಲೂ ಒಂದೇ ರೀತಿಯಲ್ಲಿ ಇರಬೇಕಲ್ಲವೇ. ತಕ್ಕಡಿ ಸಮಾನಾಂತರವಾಗಿಯೇ ನಿಲ್ಲಬೇಕಲ್ಲವೇ?

ವರ್ಷಕ್ಕೆ ಒಂದು ಲಕ್ಷ ಕೋಟಿಯಷ್ಟು ಆರೇಳು ವರ್ಷಗಳಿಂದ ನಿರಂತರ ಲಾಭ ಬರುವ ವ್ಯವಹಾರ ಭಾರತದಲ್ಲಿ ಬಹುಶಃ ಅಷ್ಟು ಸುಲಭವಲ್ಲ. ಅದೂ‌ ಕೊರೋನಾ ಸಂದರ್ಭದಲ್ಲಿ ಇಷ್ಟು ಲಾಭ ಹೇಗೆ ಸಾಧ್ಯ. ಇಷ್ಟೊಂದು ವೇಗವಾಗಿ ಷೇರು ಬೆಲೆಗಳ ಏರಿಕೆಯ ಹಿಂದೆ ಅನುಮಾನ ಪಡುವುದು ಸಹಜವೇ ಅಲ್ಲವೇ. ಹಿಂಡ‌ನ್ ಬರ್ಗ್ ಅಥವಾ ಅದಾನಿ ಕಂಪನಿಯ  ಮತ್ತೊಂದು ಪ್ರತಿಸ್ಪರ್ಧಿ ಕಂಪನಿಯ ಯಾರೇ ಆಗಿರಲಿ, ಯಾವುದೇ ದುರುದ್ದೇಶ ಪೂರ್ವಕ ಆಪಾದನೆಗಳೇ ಆಗಿರಲಿ ಈ‌ ಸಂಸ್ಥೆ ತನಿಖೆಗೆ ಅರ್ಹ. ಅದಕ್ಕಾಗಿಯಾದರೂ ಒತ್ತಾಯ ಪೂರ್ವಕ ಆಗ್ರಹ ಎಲ್ಲರೂ ಮಾಡಬೇಕು. ಇಲ್ಲದಿದ್ದರೆ ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಎನ್ನುವ ಮಾನಸಿಕ ಭ್ರಷ್ಟರಾಗುವುದು ಸ್ಪಷ್ಟ.

ಡಿ ಕೆ ಶಿವಕುಮಾರ್ ಹಗರಣ, ಜನಾರ್ಧನ ರೆಡ್ಡಿ ಹಗರಣ, ಜಗನ್ ಮೋಹನ್ ರೆಡ್ಡಿ ಹಗರಣ, ಜಯಲಲಿತಾ ಹಗರಣ, ಸುಖರಾಂ ಹಗರಣ, ಮಧು ಕೋಡಾ ಹಗರಣ, ಕನಿಮೋಳಿ, ಎ. ರಾಜಾ, ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಎಲ್ಲರಿಗೂ ಅನ್ವಯವಾಗುವ ಕಾನೂನು ಇವರಿಗೂ ಅನ್ವಯವಾಗಬೇಕಲ್ಲವೇ?

ಮಾಧ್ಯಮಗಳಿಗೆ ಈ‌ ರೋಗ ಉಲ್ಬಣಗೊಂಡಂತೆ ಕಾಣುತ್ತಿದೆ. ಕೆಲವು ಲೆಕ್ಕ ಪರಿಶೋಧಕರು ಮತ್ತು ಆರ್ಥಿಕ ತಜ್ಞರನ್ನು ಚರ್ಚೆಗಳಿಗೆ ಆಹ್ವಾನಿಸಿ ತಾಂತ್ರಿಕ ಅಂಶಗಳ ಮೇಲೆ ವಕೀಲಿಕೆ ನಡೆಸಿ ಈ ಆರೋಪಗಳನ್ನು ಸಮರ್ಥಿಸುವ ಕೆಲಸ ಮಾಡುತ್ತಿವೆ. ಕಾವಲು ನಾಯಿ ಸಾಕು ನಾಯಿಯಾಗಿ ಮಾಲೀಕನ ಮಡಿಲಿನಲ್ಲಿ ಚಕ್ಕಂದವಾಡುತ್ತಿದೆ. ಜನರು ಹಿತಾನುಭವದಲ್ಲಿದ್ದಾರೆ. ಕೊಲೆಗಳ ಕೇಸುಗಳನ್ನೇ ವಕೀಲರು ಸಮಯ ಪ್ರಜ್ಞೆಯಿಂದ ಜಯಿಸುವಾಗ ಅದಾನಿ ಪರ ಅಂಕಿಅಂಶಗಳ ಸಮರ್ಥನೆ ಅತ್ಯಂತ ಸುಲಭ.

ಈ ಕ್ಷಣದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ನಿಯಂತ್ರಣದಲ್ಲಿದೆ ಎಂಬುದು ನಿಜ. ಆದರೆ ಈ ರೀತಿಯ ಘಟನೆಗಳನ್ನು ಸಮರ್ಥಿಸಿ ಅಥವಾ ನಿರ್ಲಕ್ಷಿಸಿದರೆ ಭಾರಿ ಬೆಲೆ ತೆರಬೇಕಾಗಬಹುದು. ಆ ಹೊಡೆತ ಬೀಳುವುದು ಸಹ ಸಾಮಾನ್ಯ ಜನರಿಗೆ ಹೊರತು ದೊಡ್ಡವರಿಗಲ್ಲ. ಇದರ ಅರ್ಥ ಗೌತಮ್ ಅದಾನಿಯವರ ಮೇಲೆ ಕಠಿಣ ಕ್ರಮ ಕೈಗೊಂಡು ಅವರ ಕಂಪನಿ ಮುಚ್ಚಿಸಬೇಕೆಂದು ಅಲ್ಲ. ಅದು ಅಪಾಯಕಾರಿ. ಈಗಾಗಲೇ ಆಡಳಿತ ವ್ಯವಸ್ಥೆ ಸಹರಾ, ಕಿಂಗ್ ಫಿಶರ್, ಮುಂತಾದ ವಿಷಯಗಳಲ್ಲಿ ತಪ್ಪು ನಿರ್ಧಾರ ಕೈಗೊಂಡು ಸಾಕಷ್ಟು ಹಾ‌ನಿ ಉಂಟುಮಾಡಿದೆ.

ಕೆಲವು ವರ್ಷಗಳ ಹಿಂದೆ ಒಬ್ಬ ಲೆಕ್ಕಪರಿಶೋಧಕರು ಹೇಳಿದ ಪ್ರಕಾರ, ಹಿಂದಿನ ಆದಾಯ ತೆರಿಗೆ ಇಲಾಖೆಯ ನಿಯಮಗಳಲ್ಲಿ ಒಂದು ಪರಿಚ್ಛೇದವಿತ್ತು. ಅದರ ಪ್ರಕಾರ " ವರ್ತಮಾನದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಕಂಪನಿ ಎಷ್ಟೇ ದಾಖಲೆ ಮತ್ತು ಅಂಕಿಅಂಶಗಳ ತಪ್ಪುಗಳನ್ನು ಮಾಡಿದ್ದರು ( ದೇಶ ದ್ರೋಹ ಅಥವಾ ಪ್ರಾಣ ಹಾನಿ ಅಥವಾ ಅರ್ಥ ವ್ಯವಸ್ಥೆಯೇ ಕುಸಿದು ಬೀಳುವ ಸಾಧ್ಯತೆ ಇರುವ ಪರಿಸ್ಥಿತಿ ಹೊರತುಪಡಿಸಿ ) ಅವರ ಮೇಲೆ ಏಕಾಏಕಿ ಇಡೀ ಕಂಪನಿಯೇ ಮುಚ್ಚುವಂತ‌ ಕಠಿಣ ಕ್ರಮ ಕೈಗೊಳ್ಳದೆ ಅವರಿಗೆ ಎಂದಿನಂತೆ ಸಾಮಾನ್ಯ ವ್ಯವಹಾರ ಮಾಡಲು ಅವಕಾಶ ನೀಡಿ ತಪ್ಪುಗಳಿಗೆ ದೊಡ್ಡ ಮಟ್ಟದ ದಂಡ ವಿಧಿಸಿ ಸರಿಪಡಿಸಿಕೊಳ್ಳುವ ಅವಕಾಶ ನೀಡಬೇಕು. ಮಾನವೀಯ ದೃಷ್ಟಿಯಿಂದ ಆರ್ಥಿಕ ಅಪರಾಧಗಳ ವಿಷಯದಲ್ಲಿ ಇದು ತನಿಖಾಧಿಕಾರಿಯ ವಿವೇಚನೆಗೆ ಒಳಪಟ್ಟಿರುತ್ತದೆ....."

ಸರಿಪಡಿಸಿಕೊಳ್ಳುವ ಸಾಧ್ಯತೆ ಇದ್ದರೂ ಒಂದೇ ಸಾರಿ ಮುಚ್ಚಿಸಿದರೆ ಲಕ್ಷಾಂತರ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಅದಾನಿಯವರು 3ನೇ ಸ್ಥಾನದಿಂದ 100 ನೇ ಸ್ಥಾನಕ್ಕೆ ಕುಸಿಯಲಿ ಅಥವಾ ಆ ಪಟ್ಟಿಯಿಂದಲೇ ಹೊರಬರಲಿ. ಅದು ದೊಡ್ಡ ವಿಷಯವೇ ಅಲ್ಲ. ಹಸಿವಿನಿಂದ ನರಳುವವರು ಇನ್ನೂ ಇರುವ ದೇಶದಲ್ಲಿ ಅದಾನಿಯವರ ಬಗ್ಗೆ ಯೋಚಿಸುವ ಅವಶ್ಯಕತೆ ಇಲ್ಲ. ಆದರೆ ಸಮಗ್ರ ಚಿಂತನೆಯ ಮೂಲಕ ಆರೋಪ ಮತ್ತು ಅಪರಾಧಗಳನ್ನು ನಿಭಾಯಿಸಬೇಕು.

ಆದರೆ ಅಧಿಕಾರಿ ವರ್ಗ ಅವರು ಅಪರಾಧ ಮಾಡುವಾಗ ನಿದ್ದೆ ಮಾಡಿ ಈಗ ದಿಢೀರನೆ ಕ್ರಮ ಕೈಗೊಂಡರೆ ಕಷ್ಟವಾಗುತ್ತದೆ. ಐಎಎಸ್‌, ಐಎಫ್ಎಸ್, ಐಪಿಎಸ್, ಐಆರ್ ಎಸ್ ಓದಿ ಅನೇಕ ಸೌಕರ್ಯಗಳ ಜೊತೆ ಲಕ್ಷಾಂತರ ಸಂಬಳ ಪಡೆದು ಈ ರೀತಿಯ ಅಪರಾಧಗಳನ್ನು ಪ್ರಾರಂಭದಲ್ಲೇ ಗುರುತಿಸದಿದ್ದರೆ ಅವರ ವಿದ್ಯೆಗೆ ಮತ್ತು ಅಧಿಕಾರಕ್ಕೆ ಯಾವ ಅರ್ಥವಿದೆ. ಆದ್ದರಿಂದ ಅದಾನಿ ಅವರ ಭ್ರಮಾತ್ಮಕ ವ್ಯವಹಾರಗಳನ್ನು ಸಮರ್ಥಿಸದೆ ಕಾನೂನಿನ ಪ್ರಕಾರ ಅವರ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಈ ರೀತಿಯ ವೇಗವಾಗಿ ಅಭಿವೃದ್ಧಿ ಹೊಂದುವ ಎಲ್ಲಾ ವ್ಯಕ್ತಿ ಮತ್ತು ಕಂಪನಿಗಳ ಮೇಲೆ ನಿರಂತರ ಹದ್ದಿನ ಕಣ್ಣಿನಿಂದ ಪರಿಶೀಲನೆ ನಡೆಸಬೇಕು. ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಬೇಕು. " ಅಪರಾಧಿಗಳನ್ನು ಹಿಡಿದು ಶಿಕ್ಷಿಸುವುದಕ್ಕಿಂತ ಅಪರಾಧಗಳನ್ನು ತಡೆಯುವುದು ಆಡಳಿತ ವ್ಯವಸ್ಥೆಯ ಪ್ರಮುಖ ಆದ್ಯತೆಯಾಗಬೇಕು '

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ