ತಟ್ಟಿ ಹೋಟೆಲ್ ಚಾ
ಪ್ರವಾಸಹೋದಾಗ ಊರ ಹೊರಗಿನ ಗೂಡಂಗಡಿಯ ಅಥವಾ ತಟ್ಟಿ ಹೋಟೆಲ್‌ನ ಹೊರಗೆ ಮುರುಕು ಬೆಂಚಿನ ತುದಿಯಲ್ಲಿ ಕುಳಿತು ರಸ್ತೆ-ಬಯಲು-ಹೊಲ-ಗುಡ್ಡ ಇತ್ಯಾದಿ ನೋಡುತ್ತ ಬಿಸಿಬಿಸಿ ಚಾ ಗುಟುಕರಿಸುವುದೆಂದರೆ ನನಗೆ ಬಹಳ ಇಷ್ಟ. ಏಕೆಂದರೆ
* ನನ್ನ ಇಷ್ಟದ ಪೇಯವಾದ ಚಹಾವನ್ನು ಭಿನ್ನ ರೀತಿಯಲ್ಲಿ ಆಸ್ವಾದಿಸುವ ಅವಕಾಶ ಅದಾಗಿರುತ್ತದೆ.
* ಪ್ರಕೃತಿಗೆ ಮೈಮನ ಒಡ್ಡಿಕೊಂಡು ಪೇಯಸ್ವಾದ ಮಾಡುವ ಖುಷಿ ಅಲ್ಲಿ ಲಭ್ಯವಾಗಿರುತ್ತದೆ.
* ಪರಿಸರ ಸಂಪೂರ್ಣ ಹೊಸತಾಗಿರುತ್ತದೆ.
* ಸುತ್ತ ಕಾಣುವ ಮುಖಗಳೆಲ್ಲ ಹೊಸ ಮುಖಗಳೇ ಆಗಿರುವುದರಿಂದ ಹೊಸ ಉಲ್ಲಾಸ ಅಲ್ಲಿರುತ್ತದೆ.
* ಬಿಗುಮೊಗದ ಮಾಣಿಯ ಬದಲು ನಗುಮೊಗದ ಮಾಲೀಕ (ಮಾಲಿಕ) ಚಾ ತಂದುಕೊಡುತ್ತಾನೆ.
* ನನ್ನೂರ ಜಂಜಡ, ಮನೆಯ ಜಂಜಡಗಳನ್ನೆಲ್ಲ ಮರೆತು ನಿರಾಳವಾಗಿ ಹನಿಹನಿ ಚಾ ಗುಟುಕರಿಸಲು ಅಲ್ಲಿ ಸಾಧ್ಯವಾಗುತ್ತದೆ.
* ’ನನ್ನೂರಿಂದ ದೂರ ಇದ್ದೇನೆ, ಪ್ರವಾಸದಲ್ಲಿದ್ದೇನೆ, ಈ ಊರಿನ ಹೊರಗಿದ್ದೇನೆ, ಪ್ರಕೃತಿಯ ಮಡಿಲಿನಲ್ಲಿದ್ದೇನೆ, ಈ ಬೆಂಚಿನಮೇಲೆ ನಾನು ಕಾಲುಮೇಲೆ ಕಾಲು ಹಾಕಿಕೊಂಡು ಕೂತು ಚಾ ಕುಡಿದೇಳುವವರೆಗೂ ಈ ಪರಿಸರಕ್ಕೆ ನಾನೇ ಯಜಮಾನ, ಈ ಸುಂದರ ಪರಿಸರ ಈಗಿಲ್ಲಿ ಇರುವುದು ನನಗಾಗಿ’ ಎಂಬೆಲ್ಲ ಆಮೋದಕರ ಭಾವನೆಗಳು ಮನದಲ್ಲಿ ಉಕ್ಕುತ್ತಿರುತ್ತವೆ.
ಬಲ್ಲವರೆ ಬಲ್ಲರು ಆ ಚಹಾ ಸವಿಯ!