ತತ್ತ್ವ ಮನನ

ತತ್ತ್ವ ಮನನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಎಂ.ಪ್ರಭಾಕರ ಜೋಶಿ
ಪ್ರಕಾಶಕರು
ಆಕೃತಿ ಆಶಯ ಪಬ್ಲಿಕೇಷನ್ಸ್, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು.
ಪುಸ್ತಕದ ಬೆಲೆ
ರೂ.೧೮೦.೦೦, ಮುದ್ರಣ: ೨೦೧೬

ಧರ್ಮ, ತತ್ತ್ವ ದರ್ಶನ ಹಾಗೂ ಪುರಾಣ ಈ ವಿಚಾರಗಳನ್ನು ಒಳಗೊಂಡ ಮಾಹಿತಿಯನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ ಈ ಕೃತಿಯ ಲೇಖಕರಾದ ಡಾ. ಎಂ.ಪ್ರಭಾಕರ ಜೋಶಿಯವರು. ಇವರು ನಿವೃತ್ತ ಪ್ರಾಂಶುಪಾಲರು, ಹಿರಿಯ ಸಂಸ್ಕೃತಿ ತಜ್ಞ, ಅಗ್ರಪಂಕ್ತಿಯ ಅರ್ಥದಾರಿ, ಕಲಾವಿಮರ್ಶಕ, ಸಂಶೋಧಕ, ಕವಿ, ಅಂಕಣಕಾರ, ಕಲಾ ಕಾರ್ಯಕರ್ತ ಹಾಗೂ ನಾಡಿನ ಬಹುಶ್ರುತ ವಿಧ್ವಾಂಸರಲ್ಲೊಬ್ಬರು. ಇವರು ಈ ಪುಸ್ತಕದಲ್ಲಿ ಭಾರತೀಯ ದರ್ಶನ ಶಾಸ್ತ್ರ, ಚಿಂತನ ವಿಧಾನ, ಪುರಾಣ ವಿಚಾರಗಳನ್ನು ಪಂಥೀಯ ಅತಿವಾದಗಳಿಲ್ಲದ, ಒಂದು ಉದಾರ ಗ್ರಹಿಕೆಯಿಂದ ನೋಡುವ, ಅರ್ಥೈಸುವಿಕೆಗೆ ಪ್ರಚೋದಿಸುವ, ಚರ್ಚೆಗಳನ್ನು ಪ್ರೇರಿಸುವ ಬರಹಗಳಿವೆ.

ಇವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ಧರ್ಮ, ತತ್ತ್ವಶಾಸ್ತ್ರ ದರ್ಶನ, ಪುರಾಣ ಈ ವಿಷಯಗಳನ್ನು ಕುರಿತು ನಾನು ವಿವಿಧ ಸಂದರ್ಭಗಳಲ್ಲಿ ಬರೆದಿರುವ ಕೆಲವು ಲೇಖನಗಳು ಕಿಂಚಿತ್ ಪರಿಷ್ಕಾರಗಳೊಂದಿಗೆ ಹೀಗೆ ಸಂಕಲಿತವಾಗಿ ಪ್ರಕಾಶಿತವಾಗುತ್ತಿವೆ.ತತ್ತ್ವಗಳ ಮನನದ ಯತ್ನ -ತತ್ತ್ವ ಮನನ - ತತ್ತ್ವ ನಮನ - ಕೂಡ ಹೌದು. ಮನನ ಪೂರ್ವಕ ನಮನವು ಫಲಪ್ರದ.”

ಪುಟನೋಟದಲ್ಲಿ ೧೭ ಅಧ್ಯಾಯಗಳಿವೆ. ಭಾರತೀಯ ತತ್ತ್ವಶಾಸ್ತ್ರ ಸಂಕ್ಷೇಪ, ಬೋಧಿ: ಮರ, ನೆರಳು, ಆಕಾಶ, ಶೈವ ದರ್ಶನಗಳು, ಆಚಾರ್ಯ ಶಂಕರರು ಮತ್ತು ಅದ್ವೈತ, ಪರಶುರಾಮ, ನಂಬಿಕೆ, ಸಂಪ್ರದಾಯಗಳಿಲ್ಲದ ದೇಶಗಳು ಇವೆಯೇ? ನಮ್ಮ ನಡುವಿನ ರಾಮ, ಶಂಕರ ಪರಿಣಾಮ ಹೀಗೆ ೧೭ ಉಪಯುಕ್ತ ಅಧ್ಯಾಯಗಳಿವೆ. ಹಳೆಯ,ಹೊಸದಾದ ವಿಚಾರಗಳನ್ನು ಸುಂದರವಾಗಿ ಪ್ರಸ್ತುತ ಪಡಿಸಿದ್ದಾರೆ ಲೇಖಕರು. 

ಶಂಕರ ಪರಿಣಾಮ ಎಂಬ ಅಧ್ಯಾಯದಲ್ಲಿ ‘ಅದ್ವೈತದ ಆನೆ' ಎಂಬ ಬರಹವಿದೆ. ಅದರಲ್ಲಿ ಹೇಳುತ್ತಾರೆ “ಅದ್ವೈತಿಯೊಬ್ಬ ಪ್ರವಚನ ಮಾಡಿ- ಜಗತ್ತೆಲ್ಲಾ ಮಿಥ್ಯೆ, ಮಾಯೆ. ಬ್ರಹ್ಮವೊಂದೇ ಸತ್ಯ ಎಂದೆಲ್ಲಾ ದೀರ್ಘವಾಗಿ ವಿವರಿಸಿದ. ಪ್ರವಚನ ಮುಗಿಸಿ ಬೀದಿಯಲ್ಲಿ ಬರುತ್ತಿದ್ದಂತೆ ದೇವಸ್ಥಾನದ ಆನೆ ಆತನನ್ನು ಓಡಿಸಿಕೊಂಡು ಬಂತು. ಆತ ಓಡಲು ಶುರು ಮಾಡಿದ. ಪ್ರವಚನ ಕೇಳಿದವನೊಬ್ಬ ಪ್ರಶ್ನೆ ಮಾಡಿದ. ಏನಯ್ಯಾ, ಜಗತ್ತು ಸುಳ್ಳು ಮಾಯೆ ಅನ್ನುತ್ತಿ. ಬ್ರಹ್ಮವೆನ್ನುತ್ತಿ, ಆನೆ ಬಂದರೆ ಓಡುತ್ತೀ. ಅದೂ ದೇವರ ಆನೆ ಅದು. ಬ್ರಹ್ಮಕ್ಕೆ ಬ್ರಹ್ಮದ ಭಯವೇ? ‘ಅಯ್ಯಾ ನಿನಗೆ ನನ್ನ ಪ್ರವಚನ ಅರ್ಥವಾಗಲಿಲ್ಲ. ಅಜ್ಞಾನ ಹೋಗಲಿಲ್ಲ. ಜಗತ್ತೇ ಸುಳ್ಳು. ಆ ಅನೆಯೂ ಸುಳ್ಳು. ನಾನು ಓಡಿದ್ದೂ. ಈಗ ನಾನು ಉತ್ತರ ಕೊಟ್ಟದ್ದು. ನೀನು ಕೇಳಿದ್ದು ಎಲ್ಲವೂ ಸುಳ್ಳು. ಮಾಯೆ. ಗಜೋಪಿ ಮಿಥ್ಯಾ, ಪಲಾಯನೋಪಿ ಮಿಥ್ಯಾ’ ಎಂದು ಗುರು ಉತ್ತರಿಸಿದ.”

ಸುಮಾರು ೧೯೦ ಪುಟಗಳ ಈ ಪುಸ್ತಕವನ್ನು ಜೋಶಿಯವರು ಪಂಡಿತ ರತ್ನಂ ಲಕ್ಷ್ಮೀಪುರಂ ದಿ. ಶ್ರೀನಿವಾಸಾಚಾರ್ಯ ಮೈಸೂರು, ವಿದ್ಯಾಲಂಕಾರ ದಿ. ಎಸ್.ಕೆ. ರಾಮಚಂದ್ರ ರಾವ್ ಹಾಗೂ ದರ್ಶನ ಚಂದ್ರ ಬನ್ನಂಜೆ ಗೋವಿಂದಾಚಾರ್ಯ ಇವರಿಗೆ ಅರ್ಪಿಸಿದ್ದಾರೆ.