ತತ್ವಜ್ಞನ ಪದಗಳು
ಕರೆಯದೇ ಹೋಗಿ, ಇರುವ ಮಾನವ ಕಳೆದು
ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ
ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥
* * *
ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು
ಕಾಯುವ ಬದಲು, ನೆಮ್ಮದಿಯ ಕಾವಲುಗಾರ
ನಾಗಿರುವುದೇ ಲೇಸೆಂದ ತತ್ವಜ್ಞ॥
* * *
ಜ್ಞಾನಿಯಾಗಿ ಶ್ರಮದಲಿ ಗ್ರಂಥಗಳ ಬರೆದು
ತಣಿವುದಕಿಂತ, ಇತರೇ ಗ್ರಂಥಗಳ ಓದುಗನಾಗಿ
ಮೆರೆವುದೇ ಲೇಸೆಂದ ತತ್ವಜ್ಞ॥
* * *
ಕಛೇರಿಯ ಮುಖ್ಯಸ್ಥನಾಗಿ ಸ್ವಯಂ ಬಂದಿ
ಆಗುವ ಬದಲು, ಜವಾನನಾಗಿ ಕುರ್ಚಿಲಿ ಕೂತು
ನಿದ್ದೆ ಹೊಡಿವುದೇ ಲೇಸೆಂದ ತತ್ವಜ್ಞ॥
* * *
ಇನ್ನೊಬ್ಬರನು ಕಾಡೀ ಬೇಡಿ ಸ್ವರ್ಗವ
ಕಾಣುವ ಬದಲು, ಕಾಸಿಲ್ಲದ ಕೈಲಾಸದಲಿ
ವಿಹರಿಸುವುದೇ ಲೇಸೆಂದ ತತ್ವಜ್ಞ ॥
* * *
ಸ್ವಂತ ನಾಯಿಯ ಸಾಕಿ ಬೆಲೆ, ಶ್ರಮವನು
ತೆರುವ ಬದಲು ಬೀದಿ ನಾಯಿಗೆ ತುತ್ತು
ಅನ್ನ ಹಾಕುವುದೇ ಲೇಸೆಂದ ತತ್ವಜ್ಞ॥
* * *
ಬಣ್ಣ ಹಚ್ಚಿ ಶ್ರಮ ಸ್ಪರ್ಧೆಯಲಿ ಬೀಗಿ ದೊಡ್ಡ
ನಟನಾಗುವ ಬದಲು ಪ್ರೇಕ್ಷಕನಾಗಿ ನೋಡಿ
ಆನಂದಿಸುವುದೇ ಲೇಸೆಂದ ತತ್ವಜ್ಞ॥
* * *
ಗಾಯಕನಾಗಿ ಸದಾ ಒಂದೇ ಪ್ರಾಕಾರದಲಿ
ಹಾಡುವುದಕಿಂತ ಶ್ರೋತೃವಾಗಿ ಭಿನ್ನ ಪ್ರಾಕಾರಗಳ
ಕೇಳುವುದೇ ಲೇಸೆಂದ ತತ್ವಜ್ಞ॥
* * *
ಬಿಗುಮಾನದಿ ಇನ್ನೊಬ್ಬರ ಕಾರಲಿ ತಗ್ಗಿ ಬಗ್ಗಿ
ಕೂರುವುದಕಿಂತ ತನ್ನ ಬಾಡಿಗೇ ಕಾರಿನಲಿ
ಹಾರಾಡುವುದೇ ಲೇಸೆಂದ ತತ್ವಜ್ಞ॥
* * *
ಹವಾನಿಯಂತ್ರಣದಲಿ ಕೂತು ಬವಣೆ
ಪಡುವದಕಿಂತ ಪಕೃತಿಯ ಮಂದ ಗಾಳಿಯಲಿ
ತೇಲುವುದೇ ಲೇಸೆಂದ ತತ್ವಜ್ಞ॥
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ