ತನಗಾಗಿ ಏನೋ ಬಯಸಿದ್ದಳು

ತನಗಾಗಿ ಏನೋ ಬಯಸಿದ್ದಳು

ಕವನ

ನವಮಾಸ ಗರ್ಭದಲಿ ಹೊತ್ತು ಸಲಹಿದಳು

ಜೀವವನೆ ಮುಡಿಪಿಟ್ಟು ಆ ಮಗುವಿಗೆ ಜನ್ಮ ತೆತ್ತಳು 

ಅಂಗೈಯಲಿ ತುತ್ತನಿಟ್ಟು ಆಗಸವ ತೋರಿದಳು 

ಮುದ್ದುಗುಮ್ಮನ ಕಥೆಯ ಪೇಳಿ ಅಪ್ಪುಗೆಯನು ಪಡೆದಳು 

ತನ್ನೊಲವ ಬಳ್ಳಿಯಿಂದ, ತನಗಾಗಿ ಏನೋ ಬಯಸಿದ್ದಳು..//

 

ಅಂಗಾಲಿಗೆ ಮುತ್ತನಿಟ್ಟು, ನಗುವ ಮೊಗಕೊಂದು ದೃಷ್ಟಿಬೊಟ್ಟು 

ಅಳುವ ಕಂದನ ಆಲಂಗಿಸಿ, ಹುಡುಕಾಟಕೊಂದು ಸಣ್ಣ ಪೆಟ್ಟು 

ಮಣ್ಣಾಡಿ ಮಿಂದೆದ್ದು ಬಂದ ಆ ಗಲ್ಲಕೆ ತಾಯ ಮುತ್ತು 

ಅಪಾರ ಪ್ರೀತಿ ತೋರಿ ಬೆಳೆಸಿದಳು ಎದೆಹಾಲನಿತ್ತು 

ಸಣ್ಣ ಸ್ವಾರ್ಥವ ಹೊಂದಿ, ತನಗಾಗಿ ಏನೋ ಬಯಸಿದ್ದಳು..//

 

ಯೌವನಕ್ಕೆ ಕಾಲಿಟ್ಟ ಆಕೆಯ ಆ ಮುದ್ದು ಪೋರ 

ಮನದರಸಿಯ ವರಿಸಿದ, ತಾಯ ಪ್ರೀತಿಯಲಿ ಮುಳುಗೆದ್ದ ಕುವರ 

ಯಜಮಾನನ ಪಟ್ಟದಲಿ ಸಾಗುತ್ತಿತ್ತು ಅವನ ಸಂಸಾರ ಸಾಗರ 

ದಿನ ಕಳೆದಂತೆ ಅವನಿಗೆ ತಾಯ ಪ್ರೀತಿಯೇಕೋ ಭಾರ

ನೊಂದ ಮನವು ಮರುಗಿದ್ದರೂ, ತನಗಾಗಿ ಏನೋ ಬಯಸಿದ್ದಳು..//

 

ತುತ್ತು ಕೊಟ್ಟವಳಿಗಿಂತ ಹೆಚ್ಚಾಯಿತೀಗ ಮಡದಿಯ ಪ್ರೇಮ

ಮುಪ್ಪಾದ ತಾಯಿ ಮುದುಡಿದಳು ಕಂಡು ಬದಲಾದ ಮಗನ

ನಿರಂತರವಾಯಿತು ಆ ಸಂಸಾರದಲಿ ಮಾತಿನ ಕದನ

ಮಗನ ನಂಬಿ ಬದುಕಿದ್ದ ಜೀವಕೆ, ಕೊನೆಗೆ ಸಿಕ್ಕಿದ್ದು ವೃದ್ಧಾಶ್ರಮ 

ಅಳುವ ನುಂಗಿ ಬದುಕಿದ್ದರೂ, ತನಗಾಗಿ ಏನೋ ಬಯಸಿದ್ದಳು..

ನಡುನೀರಲ್ಲಿ ಕೈಬಿಟ್ಟ ಮಗನಿಗಾಗಿ ತನ್ನುಸಿರನು ತೇಲಿಬಿಟ್ಟಳು..//

- ಭಾರತಿ ಗೌಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್