ತನ್ನನ್ನೇ ವಿವಾಹವಾಗುವ ಹುಚ್ಚು ಮದುವೆ !
ಇತ್ತೀಚಿನ ದಿನಗಳಲ್ಲಿ ಮದುವೆಯಾದ ಬಳಿಕ ಗಂಡ ಹೆಂಡತಿ ಹನಿಮೂನ್‌ಗೆಂದು ದೂರದ ಊರುಗಳಿಗೆ ತೆರಳುವುದು ಸಾಮಾನ್ಯ. ಇಬ್ಬರೂ ಜೊತೆಗೂಡಿ ಒಂದಿಷ್ಟು ಸಮಯವನ್ನು ನೆನಪಿನಲ್ಲಿ ಉಳಿಯುವಂತೆ ರೂಪಿಸಿಕೊಳ್ಳಲು ಪತಿ ಪತ್ನಿಯರು ಹನಿಮೂನ್‌ಗೆಂದು ತೆರಳುತ್ತಾರೆ. ಆದರೆ ಇಲ್ಲೊಂದು ಹುಡುಗಿ ಮದುವೆಯಾಗುತ್ತಿದ್ದು, ಹನಿಮೂನ್‌ಗೆ ಸಹ ತೆರಳುತ್ತಿದ್ದಾಳೆ. ಆದರೆ ಗಂಡ ಮಾತ್ರ ಇರೋದಿಲ್ಲವಂತೆ. ಈ ವಿಚಿತ್ರ ಮದುವೆ ನಡೆಯುತ್ತಿರುವುದು ಬೇರೆ ಯಾವುದೋ ದೇಶದಲ್ಲಿ ಅಲ್ಲ. ಭಾರತದ ಗುಜರಾತ್‌ನ ವಡೋದರದಲ್ಲಿ.
ಗುಜರಾತ್‌ನ ವಡೋದರಾದಲ್ಲಿ ಕ್ಷಮಾ ಬಿಂದು ಎಂಬವರು ಜೂನ್ ೧೧ರಂದು ತಮ್ಮನ್ನು ತಾವೇ ಮದುವೆಯಾಗಲಿದ್ದಾರೆ. ಇದೊಂದು ವಿಚಿತ್ರ ಮದುವೆಯಾದರೂ ನೀವು ನಂಬಲೇಬೇಕು. ಈ ವಿಭಿನ್ನ ವಿವಾಹದ ಮೂಲಕ ಇಡೀ ದೇಶದಲ್ಲಿ ಮೊದಲ ‘ಸೋಲೋಗಮಿ’ ಮದುವೆ ನಡೆಯಲಿದೆ. ಜೂನ್ ೧೧ರಂದು ಈ ಮದುವೆಗೆ ದಿನ ನಿಗದಿಯಾಗಿದ್ದು, ಆ ಬಳಿಕ ಅವರು ಹನಿಮೂನ್‌ಗೆ ಗೋವಾಗೆ ತೆರಳಲಿದ್ದಾರೆ.
ಸೊಲೋಗಮಿ ಮದುವೆ ಬಗ್ಗೆ ಮಾತನಾಡಿದ ಕ್ಷಮಾ ಬಿಂದು, "ಇದು ಸ್ವಯಂ-ಪ್ರೀತಿಯ ಕ್ರಿಯೆ. ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ನಾನು ವಧು ಆಗಲು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ನಿರ್ಧರಿಸಿದೆ. ಈ ಸಂಬಂಧ ಆನ್‌ಲೈನ್ ಮೂಲಕ ಅನೇಕ ವಿಷಯಗಳನ್ನು ಹುಡುಕಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ನಿದರ್ಶನಗಳು ದೊರಕಲಿಲ್ಲ. ಬಹುಶಃ ಇದು ದೇಶದಲ್ಲಿಯೇ ಮೊದಲ ಸ್ವಯಂ ಪ್ರೀತಿಯ ವಿವಾಹವಾಗಿದೆ" ಎಂದು ಹೇಳಿದ್ದಾರೆ.
"ಇತರರು ತಾವು ಪ್ರೀತಿಸುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ ಹಾಗಾಗಿ ನನ್ನನ್ನು ನಾನೇ ಮದುವೆಯಾಗುತ್ತಿದ್ದೇನೆ" ಎಂದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಅವರ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ. ಇನ್ನು ವಿವಾಹವು ಪದ್ಧತಿಯ ಪ್ರಕಾರವೇ ನಡೆಯಲಿದೆ ಎಂದು ತಿಳಿದುಬಂದಿದೆ.
ಈಗ ಬಂದ ಸುದ್ದಿ: ದೇವಸ್ಥಾನದಲ್ಲಿ ತನ್ನನ್ನು ತಾನೇ ವಿವಾಹವಾಗಬೇಕಿದ್ದ ಕ್ಷಮಾ ಬಿಂದುವಿನ ಅಸೆಗೆ ತಣ್ಣೀರು ಎರಚಲಾಗಿದೆ. ಸಂಬಂಧಿಕರ ಹಾಗೂ ದೇವಸ್ಥಾನದ ಕಮಿಟಿಯ ನಿರ್ಧಾರದಂತೆ ಆಕೆಗೆ ದೇವಾಲಯದಲ್ಲಿ ಸಂಪ್ರದಾಯ ಬದ್ಧವಾಗಿ ಮದುವೆಯಾಗಲು ಅನುಮತಿಯನ್ನು ನಿರಾಕರಿಸಲಾಗಿದೆಯಂತೆ. ದೇವಸ್ಥಾನದ ಕಮಿಟಿಯ ಪ್ರಕಾರ ಈ ರೀತಿಯ ಮದುವೆಗಳನ್ನು ತಾವು ಪ್ರೋತ್ಸಾಹಿಸುವುದಿಲ್ಲ. ಅದು ನಮ್ಮ ಸಂಪ್ರದಾಯಕ್ಕೂ ವಿರುದ್ಧವಾಗಿದೆ. ಆಕೆ ಬೇಕಾದಲ್ಲಿ ದೇವಸ್ಥಾನದ ಆವರಣದ ಹೊರಗೆ ವಿವಾಹ ಮಾಡಿಕೊಳ್ಳಲಿ ಎಂದಿದ್ದಾರೆ. ಈ ವಿರೋಧಗಳನ್ನು ಗಮನಿಸಿದ ಹುಡುಗಿ ಮದುವೆಯನ್ನು ರದ್ದು ಮಾಡಿದ್ದಾಳೆ ಎಂಬುವುದು ಲೇಟೆಸ್ಟ್ ಸುದ್ದಿ!
ಕೊನೇ ಮಾತು: ವಿದೇಶದಲ್ಲಿ ಓರ್ವ ಯುವತಿ ಸೊಲೋಗಮಿ ವಿವಾಹ ಮಾಡಿಕೊಂಡಿದ್ದಳಂತೆ. ಸುಮಾರು ಮೂರು ತಿಂಗಳವರೆಗೆ ಸಂಸಾರ (?!) ಮಾಡಿದ ಬಳಿಕ ಅವಳು ತನ್ನಿಂದಲೇ ಡೈವೋರ್ಸ್ ತೆಗೆದುಕೊಂಡಳಂತೆ. ಯಾಕಪ್ಪಾ, ಸಂಸಾರದಲ್ಲಿ ಗಲಾಟೆಯಾಯಿತಾ ಎಂದೂ ಹೇಳುವಂತಿಲ್ಲವಲ್ಲಾ, ಮತ್ತೇಕೆ ಡೈವೋರ್ಸ್ ತೆಗೆದುಕೊಂಡದ್ದು ಎಂದು ಹುಡುಕ ಹೋದರೆ ಅವಳಿಗೆ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದನಂತೆ. ಇನ್ನಾದರೂ ಸಹಜ ಮದುವೆಯಾಗುತ್ತಾಳಾ ನೋಡಬೇಕು!
***
ಇವಳು ಶಿವನನ್ನೇ ಮದುವೆಯಾಗುತ್ತಾಳಂತೆ !
ಈಗಾಗಲೇ ತನ್ನನ್ನು ತಾನೇ ವಿವಾಹವಾಗುವ ಯುವತಿಯ ಕತೆ ಓದಿದರಲ್ಲವೇ? ಇಲ್ಲಿದೆ ನೋಡಿ ಇನ್ನೊಂದು ಹೊಸ ಮದುವೆಯ ಕತೆ. ಹರ್ಮಿಂದರ್ ಕೌರ್ ಎಂಬ ಪಂಜಾಬಿ ಯುವತಿಗೆ ಏನಾಯಿತೋ ಗೊತ್ತಿಲ್ಲ, ಶಿವನನ್ನು ಮದುವೆಯಾಗಲು ಹೊರಟು ಭಾರತ- ನೇಪಾಳ ಗಡಿಯಲ್ಲಿನ ನಿಷೇದಿತ ಪ್ರದೇಶವಾದ ನಾಭಿದಂಗ್ ತಲುಪಿದ್ದಾಳೆ.
ಏನಿದು ಇವಳ ಕತೆ ಅಂತೀರಾ? ಇವಳು ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ಆಲಿಗಂಜ್ ಎಂಬ ಪ್ರಾಂತ್ಯದವಳು. ಈಕೆ ತನ್ನ ತಾಯಿಯ ಜೊತೆ ಕೈಲಾಸ ಮಾನಸ ಸರೋವರಕ್ಕೆ ಹೊರಟಿದ್ದಳು. ಈ ದಾರಿಯಲ್ಲಿ ಸಿಗುವ ಗಂಜಿ ಎಂಬ ಗ್ರಾಮದಲ್ಲಿ ವಾಸ್ತವ್ಯ ಹೂಡಲು ಬಯಸಿದಾಗ ಅಲ್ಲಿ ಜಿಲ್ಲಾಡಳಿತದ ಅನುಮತಿ ಇದ್ದರೆ ಮಾತ್ರ ಸ್ವಲ್ಪ ದಿನಗಳ ಕಾಲ ನೆಲೆಸಬಹುದು ಎಂದು ತಿಳಿಸಲಾಯಿತು. ಆ ಪ್ರಕಾರ ತಾಯಿ ಮತ್ತು ಮಗಳು ಜಿಲ್ಲಾಡಳಿತದಿಂದ ೧೫ ದಿನಗಳ ಕಾಲ ವಾಸ್ತವ್ಯದ ಅನುಮತಿಯನ್ನು ಪಡೆದಿದ್ದರು. ಸ್ವಲ್ಪ ದಿನ ಗಂಜಿ ಗ್ರಾಮದಲ್ಲಿದ್ದ (ಉತ್ತರಾಖಂಡ ರಾಜ್ಯ) ಈಕೆ ನಂತರ ನಿಷೇಧಿತ ಪ್ರದೇಶವಾದ ನಾಭಿದಂಗ್ ಹೋಗಿದ್ದಾಳೆ.
ಇವರ ವಾಸ್ತವ್ಯದ ಅವಧಿ ಮುಗಿದರೂ ಹಿಂದಿರುಗದ ಕಾರಣ ಪೋಲೀಸರು ಇವರನ್ನು ಹುಡುಕಿದಾಗ ನಾಭಿದಂಗ್ ಪ್ರದೇಶದಲ್ಲಿ ಸಿಕ್ಕಿದ್ದಾಳೆ. ಮರಳಿ ಬರುವಂತೆ ಕೇಳಿದಾಗ ತಾನು ಪಾರ್ವತಿಯ ಅವತಾರ, ಕೈಲಾಸ ಪರ್ವತಕ್ಕೆ ಹೋಗಲಿಕ್ಕಿದೆ. ಅಲ್ಲಿ ಈಶ್ವರನು ತನ್ನನ್ನು ಕಾಯುತ್ತಿದ್ದಾನೆ, ಆತನನ್ನೇ ವಿವಾಹವಾಗಲಿರುವೆ ಎಂದು ಬಡಬಡಾಯಿಸಿದ್ದಾಳೆ. ಹೆಚ್ಚಿಗೆ ಬಲವಂತ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಲೀಸರಿಗೆ ಬೆದರಿಕೆಯನ್ನೂ ಹಾಕಿದ್ದಾಳಂತೆ. ಇವಳ ಕಾಟದಿಂದ ಪೋಲೀಸರಂತೂ ಪೇಚಿಗೆ ಸಿಲುಕಿದ್ದಾರೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ