ತನ್ನನ್ನೇ ಹೊಗಳುವ ಡೋಲಣ್ಣ ಕರಡಿ ಗೊಂಬೆ

Submitted by addoor on Sat, 09/12/2020 - 22:32

ಡೋಲಣ್ಣ ಕರಡಿ ಗೊಂಬೆಯ ಚಟ ತನ್ನನ್ನೇ ತಾನು ಹೊಗಳುವುದು. "ನನ್ನ ಮೃದುವಾದ ರೋಮ ನೋಡಿದಿರಾ? ಹೇಗೆ ಹೊಳೆಯುತ್ತಿದೆ ನೋಡಿ” ಎಂದು ಇತರ ಗೊಂಬೆಗಳೊಂದಿಗೆ ಹೇಳುತ್ತಲೇ ಇರುತ್ತಿತ್ತು ಡೋಲಣ್ಣ ಕರಡಿ ಗೊಂಬೆ.

“ಈ ಮನೆಯಲ್ಲಿ ನಾನೇ ಅತಿ ಬುದ್ಧಿವಂತ ಗೊಂಬೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ” ಎಂದು ತನ್ನ ಬಗ್ಗೆ ಮಾತನಾಡುವುದೆಂದರೆ ಡೋಲಣ್ಣ ಕರಡಿ ಗೊಂಬೆಗೆ ಖುಷಿಯೋ ಖುಷಿ. ಆಗೆಲ್ಲ ಇತರ ಗೊಂಬೆಗಳು ತನ್ನ ಬೆನ್ನ ಹಿಂದೆ ನಗುತ್ತಿವೆ ಎಂಬುದು ಡೋಲಣ್ಣ ಕರಡಿ ಗೊಂಬೆಗೆ ಗೊತ್ತಿರಲಿಲ್ಲ.

"ತಾನು ಭಾರೀ ಬುದ್ಧಿವಂತ ಎನ್ನುತ್ತದೆ ಆ ಡೋಲಣ್ಣ ಕರಡಿ. ಆದರೆ ಬೇರೆಯವರಿಗೆಲ್ಲ ಅವನ ಸಹವಾಸ ಸಾಕಾಗಿ ಹೋಗಿದೆ ಅನ್ನೋದನ್ನು ತಿಳಿಯುವಷ್ಟು ಬುದ್ಧಿವಂತಿಕೆ ಅವನಿಗಿಲ್ಲ” ಎಂದು ಗುರುಗುಟ್ಟಿತು ಬಿಳಿ ನಾಯಿ ಗೊಂಬೆ. "ಸದ್ಯದಲ್ಲೇ ಅವನು ಪಾಠ ಕಲಿಯುತ್ತಾನೆ, ನೋಡುತ್ತಿರು” ಎಂದಿತು ಮುದ್ದು ಮಂಗ ಗೊಂಬೆ. ಹಾಗೇ ಆಯಿತು!

ಬೇಸಗೆಯ ಒಂದು ದಿನ. ಗೊಂಬೆಕೋಣೆಯಲ್ಲಿ ಗೊಂಬೆಗಳೆಲ್ಲ ಒಟ್ಟು ಸೇರಿ ಹರಟುತ್ತಿದ್ದವು. “ನಾವೀಗ ಹೊರಗೆ ಸುತ್ತಾಡಲು ಹೋದರೆ ಚೆನ್ನಾಗಿರುತ್ತಿತ್ತು” ಎಂದಿತು ಪುಟ್ಟಿ (ಹುಡುಗಿ) ಗೊಂಬೆ. “ಹತ್ತಿರದ ಕಾಡಿಗೆ ಹೋದರೆ ಒಳ್ಳೆಯ ಸುತ್ತಾಟವಾಗುತ್ತದೆ” ಎಂದು ದನಿಗೂಡಿಸಿತು ಹಳೆಯ ಕರಡಿ ಗೊಂಬೆ. “ಆಟದ ಕಾರಿನಲ್ಲಿ ಸುತ್ತಾಡಿದರೆ ಬಹಳ ಮಜ” ಎಂದಿತು ಮೊಲ ಗೊಂಬೆ.

“ಆದರೆ ನಮ್ಮಲ್ಲಿ ಯಾರೂ ಆಟದ ಕಾರು ಓಡಿಸುವಷ್ಟು ಜಾಣರಲ್ಲ” ಎಂದು ಬೇಸರದಿಂದ ಹೇಳಿತು ಪುಟ್ಟಿ ಗೊಂಬೆ. “ನಾನಿದ್ದೇನಲ್ಲ! ನಾನು ಆಟದ ಕಾರು ಓಡಿಸಬಲ್ಲೆ. ಅಷ್ಟೇ ಅಲ್ಲ, ನಮ್ಮ ಸುತ್ತಾಟಕ್ಕೆ ಕಾಡಿನಲ್ಲಿ ಒಳ್ಳೆಯ ಜಾಗ ಯಾವುದೆಂದೂ ನನಗೆ ಗೊತ್ತು" ಎಂದಿತು ಡೋಲಣ್ಣ ಕರಡಿ ಗೊಂಬೆ.

“ನೀನು ಆಟದ ಕಾರು ಓಡಿಸುವುದನ್ನು ನಾವ್ಯಾರೂ ನೋಡಿಲ್ಲ” ಎಂದು ಸಂಶಯ ವ್ಯಕ್ತಪಡಿಸಿತು ಮೊಲ ಗೊಂಬೆ. “ಯಾಕೆಂದರೆ ರಾತ್ರಿಯ ಹೊತ್ತಿನಲ್ಲಿ, ನೀವೆಲ್ಲ ಮಲಗಿರುವಾಗ ನಾನು ಕಾರು ಓಡಿಸುತ್ತೇನೆ. ನಿಜ ಹೇಳಬೇಕೆಂದರೆ, ನಾನು ಬಹಳ ಒಳ್ಳೆಯ ಡ್ರೈವರ್” ಎಂದಿತು ಡೋಲಣ್ಣ ಕರಡಿ ಗೊಂಬೆ.

“ವಾಹ್, ಹಾಗಾದರೆ ನಾವು ಆಟದ ಕಾರಿನಲ್ಲಿ ಹೋಗೋಣ" ಎಂದು ಕೂಗಿತು ಪುಟ್ಟಿ ಗೊಂಬೆ. ಕೂಡಲೇ ಎಲ್ಲ ಗೊಂಬೆಗಳೂ ಹೊರಟು ಆಟದ ಕಾರಿನ ಹತ್ತಿರ ಬಂದು ನಿಂತವು.

ಡೋಲಣ್ಣ ಕರಡಿ ಗೊಂಬೆ ಆಟದ ಕಾರನ್ನು ಹತ್ತಿ ಕುಳಿತು ಕಾರನ್ನು ಚಾಲೂ ಮಾಡಿತು. ಸತ್ಯ ಏನೆಂದರೆ, ಡೋಲಣ್ಣ ಕರಡಿ ಗೊಂಬೆ ಯಾವತ್ತೂ ಕಾರನ್ನು ಚಲಾಯಿಸಿರಲೇ ಇಲ್ಲ. ಹಾಗಾಗಿ ಆತನಿಗೆ ಭಯವಾಗಿತ್ತು. ಆದರೆ ಡೋಲಣ್ಣ ಕರಡಿ ಗೊಂಬೆಗೆ ಎಲ್ಲರೆದುರು ಜಂಭದಿಂದ ಮೆರೆಯಬೇಕಾಗಿತ್ತು. ಆದ್ದರಿಂದ ತನಗೆ ಡ್ರೈವಿಂಗ್ ಗೊತ್ತಿರುವಂತೆ ನಟಿಸಿದ.

ಎಲ್ಲ ಗೊಂಬೆಗಳೂ ಕಾರಿನಲ್ಲಿ ಕುಳಿತುಕೊಂಡ ನಂತರ ಆಟದ ಕಾರು ಹೊರಟಿತು. ಡೋಲಣ್ಣ ಕರಡಿ ಗೊಂಬೆ “ಕೀಮ್ ಕೀಮ್” ಎಂದು ಹಾರ್ನ್ ಹೊಡೆಯುತ್ತಾ ಕಾಡಿನ ಹಾದಿಯಲ್ಲಿ ಕಾರನ್ನು ಓಡಿಸಿತು. ಎಲ್ಲರೂ ಖುಷಿಯಿಂದ ಹಾಡ ತೊಡಗಿದರು.

ಸ್ವಲ್ಪ ದೂರ ಹೋದಾಗ ಪುಟ್ಟಿ ಗೊಂಬೆ ಅಚಾನಕ್ ಕೇಳಿತು, “ಹೇ ಡೋಲಣ್ಣ, ನಾವು ಕಾಡಿಗೆ ತಿರುಗಬೇಕಾದ ಹಾದಿ ದಾಟಿ ಮುಂದೆ ಬಂದೆವಲ್ಲವೇ?” ಡೋಲಣ್ಣ ಕರಡಿ ಗೊಂಬೆ ಉದ್ಧಟತನದಿಂದ ಉತ್ತರಿಸಿತು, "ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನನಗೆ ಗೊತ್ತಿದೆ. ಅದರ ಬಗ್ಗೆ ನೀನು ತಲೆಕೆಡಿಸಿಕೊಳ್ಳಬೇಡ.”

ಡೋಲಣ್ಣ ಕರಡಿ ಗೊಂಬೆ ಆಟದ ಕಾರನ್ನು ಜೋರಾಗಿ ಓಡಿಸತೊಡಗಿತು. “ಹೇ, ನಿಧಾನವಾಗಿ ಕಾರು ಓಡಿಸು” ಎಂದು ಹಳೆಯ ಕರಡಿ ಗೊಂಬೆ ಕೂಗಿತು. “ನನಗೆ ಹಿಂದಿನ ಸೀಟಿನಲ್ಲಿ ಕುಳಿತು ಯಾರೂ ಹಾಗೆಹೀಗೆ ಎಂದು ಹೇಳುವುದು ಬೇಕಾಗಿಲ್ಲ" ಎಂದು ಕಿರುಚಿದ ಡೋಲಣ್ಣ ಕರಡಿ ಗೊಂಬೆ ಆಟದ ಕಾರನ್ನು ಇನ್ನೂ ಜೋರಾಗಿ ಓಡಿಸಿತು.

ಕಾರಿನ ವೇಗಕ್ಕೆ ಎಲ್ಲರಿಗೂ ಗಾಬರಿಯಾಗ ತೊಡಗಿತ್ತು. ಆದರೆ ಡೋಲಣ್ಣ ಕರಡಿ ಗೊಂಬೆಗೆ ಇದ್ಯಾವುದರ ಪರಿವೆಯೇ ಇಲ್ಲ. ಅದು, "ನನ್ನ ಡ್ರೈವಿಂಗ್ ನೋಡಿದಿರಾ? ನನ್ನಂತಹ ಡ್ರೈವರನ್ನು ನೀವು ಕಂಡಿರಲಿಕ್ಕಿಲ್ಲ" ಎನ್ನುತ್ತಾ ತನ್ನ ಕೈಗಳನ್ನು ಸ್ಟಿಯರಿಂಗ್ ವೀಲಿನಿಂದ ತೆಗೆಯಿತು! ಆಗಲೇ ಹಾದಿಯಲ್ಲೊಂದು ತಿರುವು ಬಂತು. ತಕ್ಷಣವೇ ಆಟದ ಕಾರು ಸರಸರನೆ ತಿರುಗಿ ಹಾದಿಯಿಂದ ಕೆಳಕ್ಕಿಳಿದು, ಮುಂದಕ್ಕೆ ನುಗ್ಗಿ, ಮರವೊಂದಕ್ಕೆ ಢಿಕ್ಕಿ ಹೊಡೆದು, ಎಲ್ಲರನ್ನೂ ಪಕ್ಕದ ಹೊಂಡಕ್ಕೆ ಬೀಳಿಸಿತು.

ಎಲ್ಲರಿಗೂ ತಲೆ ತಿರುಗಿದಂತಾಯಿತು. ಅದೃಷ್ಟವಶಾತ್ ಯಾರಿಗೂ ಏಟಾಗಲಿಲ್ಲ. “ನೀನೊಬ್ಬ ತಲೆಕೆಟ್ಟ ಕರಡಿ. ನಿನ್ನಿಂದಾಗಿ ನಮ್ಮೆಲ್ಲರಿಗೂ ಭಾರೀ ಏಟಾಗುತ್ತಿತ್ತು” ಎಂದು ಮೊಲ ಗೊಂಬೆ ರೇಗಿತು.

ಆಟದ ಕಾರು ನಜ್ಜುಗುಜ್ಜಾಗಿತ್ತು. "ನಾವೆಲ್ಲರೂ ಇನ್ನು ಮನೆಗೆ ನಡೆದೇ ಹೋಗಬೇಕು. ನಾವೀಗ ಎಲ್ಲಿದ್ದೇವೆ?" ಎಂದು ಕೇಳಿತು ಪುಟ್ಟಿ ಗೊಂಬೆ. ಎಲ್ಲರೂ ಡೋಲಣ್ಣ ಕರಡಿ ಗೊಂಬೆಯತ್ತ ನೋಡಿದರು. “ನನ್ನನ್ನು ಕೇಳಬೇಡಿ" ಎಂದಿತು ಡೋಲಣ್ಣ ಕರಡಿ. “ಆಗ ನೀನೇ ಹೇಳಿದೆ, ನಾವು ಎಲ್ಲಿಗೆ ಹೋಗುತ್ತಿದ್ದೇವೆಂದು ನನಗೆ ಗೊತ್ತಿದೆ ಅಂತ" ಎಂದು ಹಳೆಯ ಕರಡಿ ಗೊಂಬೆ ಆಕ್ಷೇಪಿಸಿತು.

"ನಾನು ನಾಟಕ ಮಾಡುತ್ತಿದ್ದೆ. ನನಗೆ ಕಾರು ಡ್ರೈವ್ ಮಾಡಲು ಗೊತ್ತೇ ಇಲ್ಲ. ಮತ್ತು ನಾವೀಗ ಎಲ್ಲಿದ್ದೇವೆ ಅನ್ನೋದು ನನಗೆ ಗೊತ್ತಿಲ್ಲ” ಎಂದು ನಡುಗುವ ಧ್ವನಿಯಲ್ಲಿ ಹೇಳಿತು ಡೋಲಣ್ಣ ಕರಡಿ. ಹಾಗೆ ಹೇಳುತ್ತಾ ಅದು ಅಳತೊಡಗಿತು. ಬೇರೆ ಗೊಂಬೆಗಳಿಗೆಲ್ಲ ಬಹಳ ಸಿಟ್ಟು ಬಂತು. “ಯಾವಾಗಲೂ ಹೊಗಳಿಕೊಳ್ಳುವ ತಲೆಕೆಟ್ಟ ಡೋಲಣ್ಣ ಕರಡಿ, ನಿನ್ನ ಕೆಟ್ಟ ಚಟದಿಂದಾಗಿ ನಮಗೆಲ್ಲರಿಗೂ ಎಷ್ಟು ತೊಂದರೆಯಾಯಿತು ನೋಡು” ಎಂದು ಎಲ್ಲರೂ ಅದನ್ನು ತರಾಟೆಗೆ ತೆಗೆದುಕೊಂಡರು.

ಆಗಲೇ ಕತ್ತಲಾಗಿತ್ತು. ದಾರಿ ತಪ್ಪಿದ್ದ ಗೊಂಬೆಗಳು ಕಾಳರಾತ್ರಿಯ ಗಾಢಕಪ್ಪು ನೆರಳಿನಲ್ಲಿ ಹೆದರಿಕೆಯಿಂದ ರಾತ್ರಿಯೆಲ್ಲ ನಡೆದವು. ಅವರು ಯಾರೂ ಹೀಗೆ ಕತ್ತಲಿನಲ್ಲಿ ನಡೆದಿರಲೇ ಇಲ್ಲ. ಇನ್ನೇನು ಬೆಳಗಾಗುತ್ತದೆ ಎನ್ನುವಾಗ, ಅವುಗಳಿಗೆ ತಮ್ಮ ಮನೆ ಕಂಡಿತು. ಅವೆಲ್ಲವೂ ಗೊಂಬೆಕೋಣೆಗೆ ಮೆಲ್ಲನೆ ಕಾಲಿಟ್ಟವು.

ಅಬ್ಬ, ಮನೆ ಸೇರಿದಾಗ ಎಷ್ಟು ಸುರಕ್ಷಿತ ಅನಿಸಿತು! ಅದೃಷ್ಟವಶಾತ್, ಅವರ ಮನೆಯ ಮಾಲೀಕಳು ಅವರೆಲ್ಲ ನಿನ್ನೆ ಸಂಜೆಯಿಂದ ಕಾಣೆಯಾದದ್ದನ್ನು ಗಮನಿಸಿರಲಿಲ್ಲ. ಆದರೆ, ತನ್ನ ಆಟದ ಕಾರಿಗೆ ಏನಾಯಿತೆಂದು ಅವಳಿಗೆ ಕೊನೆಗೂ ತಿಳಿಯಲಿಲ್ಲ.

ಡೋಲಣ್ಣ ಕರಡಿ ಗೊಂಬೆಗಂತೂ ತನ್ನಿಂದಾಗಿ ಇತರ ಗೊಂಬೆಗಳಿಗೆಲ್ಲ ತೊಂದರೆ ಆದದ್ದಕ್ಕಾಗಿ ಪಶ್ಚಾತ್ತಾಪವಾಗಿತ್ತು. ಕೆಲವೇ ದಿನಗಳಲ್ಲಿ ಇತರ ಗೊಂಬೆಗಳು ಡೋಲಣ್ಣ ಕರಡಿ ಗೊಂಬೆಯನ್ನು ಕ್ಷಮಿಸಿದವು. ಇದಾದ ನಂತರ ಡೋಲಣ್ಣ ಕರಡಿ ತನ್ನನ್ನು ತಾನು ಯಾವತ್ತೂ ಹೊಗಳಿಕೊಳ್ಳಲಿಲ್ಲ.

ಚಿತ್ರಕೃಪೆ: "ದ ನರ್ಸರಿ ಕಲೆಕ್ಷನ್ ಪುಸ್ತಕ"