ತಪ್ಪು ಯಾರದು? - ಕಥೆ
ಜೋರಾಗಿ ಮಳೆ ಬೀಳುತ್ತಿತ್ತು. ರೈಲ್ವೆ ನಿಲ್ದಾಣದ ಕೊನೆಯಲ್ಲಿ ಸಂಜಯ್ ಮಳೆಯಲ್ಲಿ ನೆನೆಯುತ್ತ ನಿಂತಿದ್ದಾನೆ. ಮಳೆಯ ರಭಸದಲ್ಲಿ ಅವನ ಕಣ್ಣಿಂದ ಹರಿಯುತ್ತಿರುವ ನೀರು ಯಾರಿಗೂ ಕಾಣುತ್ತಿಲ್ಲ. ಎಷ್ಟು ಹೊತ್ತಿನಿಂದ ಹಾಗೆ ಮಳೆಯಲ್ಲಿ ನೆನೆಯುತ್ತ ನಿಂತಿದ್ದಾನೋ ಗೊತ್ತಿಲ್ಲ. ಪಕ್ಕದಲ್ಲಿ ಬಂದ ರೈಲಿನ ಸದ್ದಿನಿಂದ ಎಚ್ಚೆತ್ತ ಸಂಜಯ್ ತನ್ನ ಕಣ್ಣ ಮುಂದೆ ಹಾಗು ಹೋಗುತ್ತಿದ್ದ ರೈಲಿನ ಒಂದೊಂದೇ ಬೋಗಿಗಳನ್ನು ನೋಡುತ್ತಾ ಎರಡು ವರ್ಷ ಹಿಂದಕ್ಕೆ ಹೋದ.
ಸಂಜಯ್, ಕುಮಾರ್ ಮತ್ತು ಮಿಥಿಲ ಮೂವರು ಒಂದೇ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಸಂಜಯ್ ಕೆಲವು ತಿಂಗಳುಗಳ ಹಿಂದಷ್ಟೇ ಆ ಕೆಲಸಕ್ಕೆ ಸೇರಿದ್ದ. ಅವನು ಕೆಲಸಕ್ಕೆ ಸೇರಿದ ತಕ್ಷಣ ಅವನಿಗೆ ಪರಿಚಯವಾದ ವ್ಯಕ್ತಿ ಕುಮಾರ್. ಅಪ್ಪ ಅಮ್ಮ ಇಲ್ಲದೆ ಬೆಳೆದಿದ್ದ ಸಂಜಯ್ ಗೆ ಸ್ನೇಹಿತರೆಂದರೆ ಪ್ರಾಣ. ಯಾವುದೇ ವ್ಯಕ್ತಿಯನ್ನು ಪರಿಚಯವಾದ ಕೆಲ ಸಮಯದಲ್ಲೇ ಬಹಳ ಹಚ್ಚಿಕೊಂಡು ಬಿಡುತ್ತಿದ್ದ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಂಜಯ್ ಗೆ ಸಹಾಯ ಮಾಡಿದ ವ್ಯಕ್ತಿ ಕುಮಾರ್. ಅತೀ ಕಡಿಮೆ ಸಮಯದಲ್ಲೇ ಸಂಜಯ್ ಹಾಗೂ ಕುಮಾರ್ ನೆಚ್ಚಿನ ಸ್ನೇಹಿತರಾಗಿಬಿಟ್ಟಿದ್ದರು. ಮಿಥಿಲ - ಕುಮಾರ್ ನ ಮೂಲಕ ಪರಿಚಯವಾದ ಹುಡುಗಿ ಮಿಥಿಲ. ನೋಡಲು ಅಷ್ಟೇನೂ ಅಂದವಾಗಿರದಿದ್ದರೂ ಅದೇನೋ ಆಕರ್ಷಣೆ ಸೆಳೆತ ಅವಳ ಕಣ್ಣುಗಳಲ್ಲಿತ್ತು. ಸಂಜಯ್ ಗೆ ಮೊದಲಿಂದಲೂ ಹುಡುಗರೇ ಸ್ನೇಹಿತರು. ಮಿಥಿಲ ಸಂಜಯ್ ನ ಮೊದಲ ಸ್ನೇಹಿತೆ. ಹಾಗಾಗಿ ಸಂಜಯ್ ಮೊದಲ ಭೇಟಿಯಲ್ಲಿ ಅವಳೊಡನೆ ಅಷ್ಟಾಗಿ ಮಾತಾಡಲಿಲ್ಲ. ಮೊದಲ ಕೆಲವು ತಿಂಗಳುಗಳು ಹೀಗೆ ಏನು ವಿಶೇಷವಿಲ್ಲದೆ ನಡೆದು ಹೋಯಿತು.
ಹೀಗಿರಲು ಒಂದು ದಿನ ಆಫೀಸಿಗೆ ಹೊಸ ಬಟ್ಟೆ ತೊಟ್ಟು ಬಂದಿದ್ದ ಸಂಜಯ್ ಗೆ ಮಿಥಿಲ ಎದುರು ಸಿಕ್ಕಿ ಸಂಜಯ್ ನೀವು ಈ ಬಟ್ಟೆಯಲ್ಲಿ ತುಂಬಾ ಚೆನ್ನಾಗಿ ಇದ್ದೀರಾ ಅಂದಳು. ಸಂಜಯ್ ಸುಮ್ಮನೆ ನಕ್ಕು ಧನ್ಯವಾದ ಹೇಳಿ ಹೊರಡಲನುವಾದಾಗ, ಸಂಜಯ್ ಇಂದು ನಮ್ಮ ಜೊತೆ ಊಟ ಮಾಡಿ ಬನ್ನಿ ಎಂದು ಕರೆದಳು ಮಿಥಿಲ. ಇಲ್ಲ ಮಿಥಿಲ ನಾನು ಆಚೆ ಹೋಗುತ್ತೇನೆ ಎಂದಾಗ, ಸಂಜಯ್ ಯಾವಾಗಲು ಆಚೆ ಹೋಗುತ್ತಿರ ಇವತ್ತು ನಮ್ಮ ಜೊತೆ ತಿನ್ನಲೇಬೇಕು ಎಂದಾಗ ಇಲ್ಲವೆನ್ನಲಾಗಲಿಲ್ಲ. ಸರಿ ಬರುತ್ತೇನೆ ಎಂದು ಹೊರಟು ಹೋದ. ಊಟದ ಸಮಯದಲ್ಲಿ ಮಿಥಿಲಳೇ ಬಂದು ಸಂಜಯ್ ನನ್ನು ಊಟಕ್ಕೆ ಕರೆದಳು. ಊಟದ ಹಾಲಿನಲ್ಲಿ ಇವರಿಬ್ಬರೇ ಇದ್ದರು. ಎಲ್ಲಿ ಹೋದರು ಎಲ್ಲ ಎಂದು ಸಂಜಯ್ ಕೇಳಿದಾಗ ಎಲ್ಲರೂ ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದಾರೆ ಎಂದಳು ಮಿಥಿಲ. ತಾನು ತಂದಿದ್ದ ಊಟದಲ್ಲೇ ಸ್ವಲ್ಪ ಸಂಜಯ್ ಗೆ ಕೊಟ್ಟಾಗ ಅವನು ಮುಜುಗರದಿಂದಲೇ ತಿನ್ನುತ್ತಿದ್ದನ್ನು ನೋಡಿ ಮಿಥಿಲ ಯಾಕೆ ಸಂಕೋಚ ಸಂಜಯ್ ಆರಾಮಾಗಿ ತಿನ್ನಿ ಎಂದು ಹೇಳುತ್ತಿದ್ದಳು ಅಷ್ಟರಲ್ಲಿ ಅಲ್ಲಿಗೆ ಕುಮಾರ್ ಬಂದು ಸೀದಾ ಮಿಥಿಲ ಪಕ್ಕದಲ್ಲಿ ಕುಳಿತು ಅವಳು ತಿನ್ನುತ್ತಿದ್ದ ಡಬ್ಬಿಗೆ ಕೈ ಹಾಕಿ ತಾನು ತಿನ್ನಲು ಶುರು ಮಾಡಿದ. ಕುಮಾರ್ ಆಗಮನ ಸಂಜಯ್ ಗೆ ಸ್ವಲ್ಪ ಹಾಯೆನಿಸಿ ಮೂವರು ತಿಂದು ಅಲ್ಲಿನ ಹೊರಡಬೇಕಾದರೆ ಸಂಜಯ್ ಗೆ ಮಿಥಿಲ ನಿಮ್ಮ ನಗು ಚೆನ್ನಾಗಿದೆ ಎಂದಳು. ಕೂಡಲೇ ಕುಮಾರ್ ಏನಮ್ಮ ನಮ್ ಹುಡುಗಂಗೆ ಲೈನಾ ಎಂದು ಚುಡಾಯಿಸಿದ. ಅವಳು ಅವನ ಬೆನ್ನ ಮೇಲೆ ಸಣ್ಣನೆ ಏಟು ಕೊಟ್ಟು ಹೊರಟು ಹೋದಳು. ಸಂಜಯ್ ಆ ಅನಿರೀಕ್ಷಿತ ಮಾತಿನಿಂದ ಕಸಿವಿಸಿಗೊಂಡು ಹೊರಟು ಹೋದ.
ಅಂದು ಫೆಬ್ರವರಿ ೧೪ ಪ್ರೇಮಿಗಳ ದಿನಾಚರಣೆ. ಎಂದಿನಂತೆ ಸಂಜಯ್ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಹಿಂದಿನಿಂದ ಬಂದ ಮಿಥಿಲ ಅವನ ಕೈ ಹಿಡಿದು ಸಂಜಯ್ ಐ ಲವ್ ಯೂ ಎಂದಳು. ಸಂಜಯ್ ಗೆ ಕ್ಷಣ ಕಾಲ ಏನು ಹೇಳಬೇಕು ಎಂದು ಗೊತ್ತಾಗದೆ ಅವಳ ಕೈ ಇಂದ ತನ್ನ ಕೈ ಬಿಡಿಸಿಕೊಂಡು ಅವಳ ಮುಖವನ್ನೇ ನೋಡುತ್ತಾ ನಿಂತುಬಿಟ್ಟ. ಕ್ಷಣ ಕಾಲ ಸುಮ್ಮನೆ ಇದ್ದ ಮಿಥಿಲ ಜೋರಾಗಿ ನಗಲು ಶುರು ಮಾಡಿದಳು. ಅವಳ ನಗುವಿಗೆ ಕುಮಾರ್ ಕೂಡ ಜೊತೆಯಾದ. ಏನಪ್ಪಾ ಹೆದರಿದೆಯ ಅವಳ ಮಾತು ಕೇಳಿ ಎಂದು ಮತ್ತೆ ನಗಲು ಶುರು ಮಾಡಿ ಅಲ್ಲಿಂದ ಹೊರಟು ಹೋದರು. ಆದರೆ ಮಿಥಿಲ ಹೇಳಿದ ಮಾತು ಸಂಜಯ್ ನ ಮನದ ಮೂಲೆಯಲ್ಲಿ ಏನೋ ಒಂದು ಸಂಚಲನ ಉಂಟು ಮಾಡಿಬಿಟ್ಟಿತ್ತು.
ಅಂದಿನಿಂದ ಸಂಜಯ್ ಬದಲಾಗತೊಡಗಿದ. ಹೆಚ್ಚು ಹೆಚ್ಚು ಮಿಥಿಲಳ ಸಂಗ ಬಯಸತೊಡಗಿದ. ಮೊದಮೊದಲು ಅವಳೊಡನೆ ಊಟ ಮಾಡಲು ಹಿಂದುಮುಂದು ನೋಡುತ್ತಿದ್ದವ ಈಗ ಪ್ರತಿದಿನ ಅವಳೊಡನೆ ಊಟ ಮಾಡಬೇಕೆಂದು ಬಯಸುತ್ತಾನೆ. ಸದಾ ಕಾಲ ಅವಳೊಡನೆ ಮಾತನಾಡಲು ಬಯಸುತ್ತಾನೆ. ಜೊತೆಜೊತೆಗೆ ಅವನ ಮನಸಿನಲ್ಲಿ ಕುಮಾರ್ ಬಗ್ಗೆ ದ್ವೇಷದ ಹೊಗೆ ಆವರಿಸಲು ಶುರುವಾಯಿತು. ಮಿಥಿಲಳ ಜೊತೆ ಕುಮಾರ್ ಬಹಳ ಸಲಿಗೆಯಿಂದಿರುತ್ತಿದ್ದ. ಆ ಸಲಿಗೆ ಸಂಜಯ್ ಗೆ ಸಹಿಸಲು ಆಗುತ್ತಿರಲಿಲ್ಲ. ಕುಮಾರ್ ಮಿಥಿಲಳ ಬಳಿ ಹೋದರೆ ಸಾಕು ಚಡಪಡಿಸುತ್ತಿದ್ದ. ಒಂದು ದಿನ ಅವಳನ್ನು ನೋಡದಿದ್ದರೆ ಏನೋ ಕಳೆದುಕೊಂಡವನಂತೆ ಒದ್ದಾಡುತ್ತಿದ್ದ. ಇದರ ಬಗ್ಗೆ ಕುಮಾರ್ ಗಾಗಲಿ ಮಿಥಿಲ ಗಾಗಲಿ ಯಾವುದೇ ಸುಳಿವಿರಲಿಲ್ಲ.
ಹೀಗಿರಲು ಒಂದು ದಿನ ಜೋರಾಗಿ ಮಳೆ ಸುರಿಯುತ್ತಿರಲು ಮಿಥಿಲಳ ಬಳಿ ಬಂದ ಸಂಜಯ್ ಬಾ ಮಿಥಿಲ ಮನೆಗೆ ಡ್ರಾಪ್ ಮಾಡ್ತೀನಿ ಎಂದ. ಮಿಥಿಲ ಗೆ ಆಶ್ಚರ್ಯವಾಗಿ ಬೇಡ ಸಂಜಯ್ ನಾನು ಬಸ್ಸಿನಲ್ಲಿ ಹೋಗುತ್ತೇನೆ ಎಂದು ನಕ್ಕು ಹೊರಟು ಹೋದಳು. ಸಂಜಯ್ ಏನು ಮಾತಾಡದೆ ಆಚೆ ಬಂದು ತನ್ನ ಗಾಡಿಯಲ್ಲಿ ಹೋಗುತ್ತಿದ್ದಾಗ ಸಿಗ್ನಲ್ ನಲ್ಲಿ ತನ್ನ ಗಾಡಿ ನಿಲ್ಲಿಸಿಕೊಂಡು ಹಸಿರು ದೀಪಕ್ಕೆ ಕಾಯುತ್ತ ಅಕ್ಕಪಕ್ಕದಲ್ಲಿ ನೋಡುತ್ತಿರಬೇಕಾದರೆ ಅಲ್ಲಿ ಮುಂದೆ ಬೈಕಿನಲ್ಲಿ ಮಿಥಿಲ ಕುಮಾರ್ ನೊಂದಿಗೆ ಕೂತಿರುವುದು ಕಂಡು ಕುದ್ದು ಹೋದನು. ಅಂದಿನಿಂದ ಕುಮಾರ್ ಜೊತೆ ಮಾತು ನಿಲ್ಲಿಸಿಬಿಟ್ಟನು. ಕುಮಾರ್ ಎಷ್ಟೋ ಬಾರಿ ಕೇಳಿದರು ಸರಿಯಾದ ಉತ್ತರ ನೀಡದೆ ತಪ್ಪಿಸಿಕೊಂಡು ಬಿಡುತ್ತಿದ್ದನು. ಅಂದು ಮಿಥಿಲ ಹುಟ್ಟಿದ ಹಬ್ಬ. ಸಂಜಯ್ ಅಂದು ವಿಶೇಷವಾಗಿ ಸಿದ್ಧವಾಗಿ ಉತ್ಸಾಹದಿಂದ ಕೆಲಸಕ್ಕೆ ಬಂದನು. ಘಂಟೆ ಹನ್ನೊಂದಾದರೂ ಮಿಥಿಲ ಇನ್ನೂ ಕೆಲಸಕ್ಕೆ ಬಂದಿರಲಿಲ್ಲ. ಇವನು ಕುಳಿತಲ್ಲೇ ಚಡಪಡಿಸುತ್ತಿದ್ದನು. ಕಡೆಗೆ ಹನ್ನೆರಡು ಘಂಟೆಗೆ ಸರಿಯಾಗಿ ಬಂದ ಮಿಥಿಲಳ ನೋಡಿ ಸಂಜಯ್ ಸಂತೋಶಭರಿತನಾಗಿಬಿಟ್ಟ. ಸೀದಾ ಮಿಥಿಲ ಬಳಿ ಹೋಗಿ ತಾನು ತಂದಿದ್ದ ಉಡುಗೊರೆಯನ್ನು ಅವಳಿಗೆ ಕೊಟ್ಟಿ ಮಿಥಿಲ ಐ ಲವ್ ಯು ಎಂದುಬಿಟ್ಟ.
ಮುಂದುವರಿಯುವುದು....