ತಬ್ಬಲಿಯು ನೀನಾದೆ ಮಗುವೆ!

ತಬ್ಬಲಿಯು ನೀನಾದೆ ಮಗುವೆ!

ಬರಹ

'ತಬ್ಬಲಿಯು ನೀನಾದೆ ಮಗುವೆ,
ಹೆಬ್ಬುಲಿಯ ಬಾಯನ್ನು ಹೊಗುವೆ,
ಇಬ್ಬರಾ ಋಣ ತೀರಿತೆಂದು... '

ಕರ್ನಾಟಕದ ಎಲ್ಲ ಮನ ಮನೆಗಳಲ್ಲೂ ಮನೆ ಮಾಡಿರುವ 'ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ' ಕಥೆಯಿದು! ಗೋವಿನ ಹಾಡಿನ ಈ ಪುಣ್ಯಕೋಟಿಯ ಕಥೆಯನ್ನು ಕನ್ನಡನಾಡಿನಲ್ಲಿ ಕೇಳದವರಿಲ್ಲ ( ಕಡೇ ಪಕ್ಷ ಒಂದು ಸಾರಿಯಾದರೋ).

ಪ್ರತೀ ಸಾರಿಯೂ ಕೇಳುವಾಗ ಕಣ್ಣೇರು ಧಾರೆ ಧಾರೆಯಾಗಿ ಸುರಿಸುತ್ತಿದ್ದ ನನಗೆ, ( ಅಂತ್ಯ ಗೊತ್ತಿದ್ದೂ, "ಪುಣ್ಯ ಕೋಟಿ ಸಾಯುವುದಿಲ್ಲ, ಚಂಢ ವ್ಯಾಘ್ರನು ಸಾಯುತ್ತಾನೆ" ) ಇಂಥಹ ಒಂದು ಸಂಧರ್ಭವನ್ನು, ಬೇರೆ ರೂಪದಲ್ಲಿ, ನಿಜ ಜೀವನದಲ್ಲಿ ಪ್ರತ್ಯಕ್ಷವಾಗಿ, ಸಾಕ್ಷಿಯಾಗಿ ನೋಡುತ್ತೇನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಹೆಬ್ಬುಲಿಯ ಬಾಯಿನ ರೂಪದಲ್ಲಿ ಬಂದ "ಡಿ. ಐ. ಸಿ." ( ಡಿಸೆಮಿನೇಟೆಡ್ ಇಂಟ್ರಾ ವ್ಯಾಸ್ಕ್ಯುಲಾರ್ ಕೊಯಾಗ್ಯುಲೇಶನ್, "ಪ್ಲಾಸೆಂಟಾ ಅಕ್ರೀಟ" ದಿಂದಾದ ಪ್ರೆಗ್ನೆನ್ಸಿ ರಿಲೇಟೆಡ್ ಕಂಡೀಶನ್) ಚಂಢ ವ್ಯಾಘ್ರನಂತೆ ಸತ್ಯಕ್ಕೆ ತಲೆಬಾಗಿ ಮನಸ್ಸು ಬದಲಿಸಲಿಲ್ಲ ಸ್ಮಿತಾಳ ಪಾಲಿಗೆ. ಯಾವುದೇ "ದೈವ ಶಕ್ತಿ"ವಿಹೀನ, ಕಿರಿಯ ವೈದ್ಯಳಾದ ನನಗೆ, ಈ ಸಂಕಟ ಸನ್ನಿವೇಶಕ್ಕೆ "ಪ್ರತ್ಯಕ್ಷ ಸಾಕ್ಷಿಯಾಗಿದ್ದೇ" ಒಂದು ಆಕಸ್ಮಿಕ ದೌರ್ಭಾಗ್ಯದಂತಿತ್ತು. ಇಂಥಹ ಒಂದು ಅಸಹಾಯಕತೆ ಅನಿವಾರ್ಯವಾಗಿ ಅಘಾತವಾಗಿ ಆರ್ಭಟಿಸಿತ್ತು.

ಡಾಕ್ಟ್ರೇ, ಇನ್ನೂ ಎಷ್ಟು ಹೊತ್ತಾಗತ್ತೆ ಡಾ: ವಿಜಯಲಕ್ಶ್ಮಿ ಬರೋದು? ( ಕಾದು ಕಾದು ಸುಸ್ತಾಗಿದ್ದ ಸ್ಮಿತಾ) ನನ್ನನ್ನು ಕೇಳಿದಳು. ಆಗತಾನೆ ಡಾ. ವಿಜಯಲಕ್ಶ್ಮಿ (ಸೀನಿಯರ್ ಓ.ಬಿ.ಜಿ.ವೈ. ಎನ್.) ನನಗೆ ಫೋನ್ ನಲ್ಲಿ ತಿಳಿಸಿದ್ದರು, ಸಿಸೆಕ್ಶನ್ ನಲ್ಲಿ ಸ್ಟಕ್ ಆಗಿರುವುದಾಗಿಯೂ, ಬೇಕಾದರೆ ಕೆಲವು ಔಟ್ ಪೇಶಂಟ್ಸ್ ಗಳನ್ನು ರೀಸ್ಕೆಡ್ಯೂಲ್ ಮಾಡಬಹುದು ಅಂತ. ಸ್ಮಿತಾಳಿಗೆ ವಿಷಯವನ್ನು ತಿಳಿಸಿ, ವೈಟಿಂಗ್ ರೂಮ್ ನಲ್ಲಿ ಕೂರಿಸಿ, ಮುಂದಿನ ಪೇಶಂಟ್ ನ ನೋಡಲು ಒಳಗೆ ಹೋದೆ. ಹತ್ತು ನಿಮಿಷಗಳ ನಂತರ ಹೊರಗೆ ಬಂದು ಸ್ಮಿತಾಳನ್ನು ಕರೆದು "ವಿಜಯಲಕ್ಷ್ಮಿ ಮತ್ತೊಮ್ಮೆ ಫೋನಾಯಿಸಿ, ನನಗೆ ನಿಮ್ಮನ್ನು ಚೆಕ್ ಮಾಡಿ ಕೆಲವು ಲ್ಯಾಬ್ಸ್ ಆರ್ಡರ್ ಮಾಡಲು ಹೇಳಿದ್ದಾರೆ, ನಿಮಗೆ ಇದು ಒಪ್ಪಿಗೆಯಾದರೆ ಚೆಕ್ ಮಾಡುತ್ತೇನೆ " ಎಂದು ಹೇಳಿದೆ. ಸ್ಮಿತಾ ಅವಳ ಪತಿರಾಯರ ಹತ್ತಿರ ಮಾತಾಡುತ್ತಾ " ಹೇಗಿದ್ರೂ ರೊಟೀನ್ ಚೆಕ್ ಇವತ್ತು, ಇವರ ಹತ್ರ ಮಾಡಿಸೋಣ, ನೆಕ್ಸ್ಟ್ ವೀಕ್ ಹೇಗಿದ್ರೂ ಡಾ: ವಿಜಯಲಕ್ಷ್ಮಿಯನ್ನ ನೋಡ್ತೀವಲ್ಲ"? ಏನಂತೀರ? ಎಂದಳು. ಸ್ಮಿತಾ, ಗಂಡ ಸುರೇಶ್ ಹತ್ತಿರ ೫- ನಿಮಿಷ ಡಿಸ್ಕಸ್ ಮಾಡಿ, ನನ್ನ ಹತ್ತಿರ ಚೆಕ್ ಅಪ್ ಮಾಡಿಸಿಕೊಂಡಿದ್ದಳು. ಅಂದೇ ಸ್ಮಿತಾ ಳ ಪರಿಚಯ ಚೆನ್ನಾಗಿ ಆಗಿತ್ತು.

ಸ್ಮಿತಾ ಹೆಸರಿಗೆ ತಕ್ಕಂತೆ ಮೃದು ಸ್ವಭಾವದ ಸಂಯಮದ ಸುಂದರಿಯಾಗಿದ್ದಳು. ಎತ್ತರಕ್ಕೆ ಬೆಳ್ಳಗಿದ್ದು, ನೀಳ ನಾಸಿಕವನ್ನು ಹೊತ್ತ ಸ್ಮಿತಾಳಿಗೆ ನಗುಮುಖವೂ ಇತ್ತು. ಸುರೇಶ್ ಕೂಡಾ ಎತ್ತರಕ್ಕೆ ಇದ್ದರೂ, ಬಣ್ಣದಲ್ಲಿ ಮಾತ್ರ ಸ್ಮಿತಾಳಿಗೆ ಸೋತಿದ್ದರು. ಸ್ಮಿತಾ ಹೇಳಿದಂತೆ ಹೊಸದಾಗಿ ಮದುವೆಯಾಗಿದ್ದರು, ಈಗಷ್ಟೇ ೧- ವರ್ಷವಾಗಿತ್ತು ಮದುವೆಯಾಗಿ. "ಮೈಸೂರು ಅತ್ತೇಮನೆ, ನಾನೇ ಹಿರಿಯ ಸೊಸೆ, ಹಾಗಾಗಿ ಎಲ್ಲರಿಗೂ ಒಂದು ರೀತಿಯಲ್ಲಿ ತುಂಬಾ ಉತ್ಸಾಹ ನಾನು ಪ್ರೆಗ್ನಂಟ್ ಆಗಿರುವುದು" ಎಂದು ಹೇಳಿ ಸಂತೋಷವನ್ನು ವ್ಯಕ್ತಪಡಿಸಿದ್ದಳು. ಮೈಸೂರಿನ ಕೃಷ್ಣಮೂರ್ತಿಪುರಮ್ ನಲ್ಲಿದ್ದ ಒಂದು ಸಣ್ಣ ಹಾಸ್ಪಿಟಲ್ ( ನರ್ಸಿಂಗ್ ಹೋಮ್ ಅಂತ ಕರ್ನಾಟಕದಲ್ಲಿ ಕರೆಯುತ್ತಾರೆ) ನಲ್ಲಿ ನಾನು ಕಿರಿಯ ವೈದ್ಯಳಾಗಿ (ಜೂನಿಯರ್ ಡಾಕ್ಟ್ರಾಗಿ) ಕೆಲಸ ಮಾಡುತ್ತಿದ್ದಾಗ ಹೀಗೊಂದು ಪರಿಚಯ, ಪರಿಸರದ ಅವಕಾಶ ನನಗಾಗಿತ್ತು.

ಸಂಜೆ ಮತ್ತು ರಜಾ ದಿನಗಳಲ್ಲಿ ಮಾತ್ರ ಇಲ್ಲಿ ಕೆಲಸಮಾಡುತ್ತಿದ್ದ ನನಗೆ, ಇದು ಒಂದು ರೀತಿಯ ನೆಮ್ಮದಿಯ ವಾತಾವರಣವಾಗಿತ್ತು. ಬೆಳಗಿನ ವೇಳೆಯಲ್ಲಿ ಇನ್ನೂ ಹೌಸ್ ಸರ್ ಜನ್ಸಿ ಟ್ರೈನಿಂಗ್ ಮಾಡುತ್ತಿದ್ದುದರಿಂದ, ಇಲ್ಲಿ ಒಂದು ರೀತಿಯ ಮನೆಯ ವಾತಾವರಣ ಕಲ್ಪಿಸಿ, ಬರುವ ರೋಗಿಗಳೆಲ್ಲರೂ ಸ್ನೇಹಿತರಂತೆ, ಮನೆಯವರಂತೆ ಭಾಸವಾಗುತ್ತಿತ್ತು. ಈ ನರ್ಸಿಂಗ್ ಹೋಮ್ ಮನೆಗಳ ಮದ್ಯೆ ಇದ್ದಿದ್ದರಿಂದ ಬರುವ ರೋಗಿಗಳ ಮನೆಗಳೂ ಹತ್ತಿರದಲ್ಲೇ ಇದ್ದು, ನಡೆದು ಬರುವ ದೂರದಲ್ಲಿತ್ತು.

ವಾರಕ್ಕೆ ಎರಡು ದಿನ ನೋವು ತಡೆಯಲಾರದೆ ಮಾರ್ಫಿನ್ ಇನ್ಜೆಕ್ಶನ್ ಗೆ ಬರುವ ನಲವತ್ತರ ಪ್ರಾಯದ ನಾಯ್ಡು ಅವರು ಕಿಡ್ನಿಪ್ ಫ್ಫೆಲ್ಯುರ್ ನಿಂದ ಬಳಲುತ್ತಾ, ಸಾಕಮ್ಮ ನ ಹತ್ತಿರ " ನೀ ಮಾತಾಡುತ್ತಾ ಇಂಜೆಕ್ಷನ್ ಕೊಟ್ಟರೆ ನನಗೆ ನೋವೇ ಕಾಣಲ್ಲ" ಅಂತ ಹೇಳಿ ಅರ್ಧ ಗಂಟೆ ಮಾತನಾಡಿ ನಕ್ಕು ಹೋಗುತ್ತಿದ್ದರು. ಕೆಲವೊಮ್ಮೆ, "ಲೇಟಾಗಿ ಹೋದರೆ ನನ್ನ ಹೆಂಡತಿ ಬೈತಾಳೆ, ನರ್ಸ್ ಜೊತೆ ಇಷ್ಠೊತ್ತು ಮಾತ್ಯಾಕ್ರೀ ಅಂತಾಳೆ" ಅಂತಲೂ ಹೇಳಿ ಅವರೇ ನಗುವುದಕ್ಕೆ ಶುರುಮಾಡಿಬಿಡುತ್ತಿದ್ದರು. ಸಾಕಮ್ಮ ಆಗಾಗ್ಗೆ ನನ್ನ ಹತ್ತಿರ ಬಂದು ಗೊಣಗುತ್ತಿದ್ದಳು " ಏನೋ ಪಾಪ ಆ ದೇವ್ರು ಆರೋಗ್ಯ ಕೊಡಲಿಲ್ಲ ಆ ಯಪ್ಪಂಗೆ, ನಗುವ ಶಕ್ತಿನಾದ್ರೂ ಕೊಟ್ಟಿದಾನೆ ಅಂತ ನಗುತ್ತಿದ್ರೆ, ಆ ಹೆಂಗಸು ಅದುಕ್ಕೂ ಬಿಡಲ್ಲಾ". ಇದನ್ನು ಕೇಳಿ, ಕೇಳಿ ಸಾಕಮ್ಮನ ಹತ್ತಿರ ಹೇಳಿದೆ " ನಾಯ್ಡು ಅವರಿಗೆ ಅವರ ಹೆಂಡತೀನೂ ಕರೆದು ಕೊಂಡು ಬನ್ನಿ " ಅಂತ ಹೇಳು, ಆಗ ನಾಯ್ಡು ಅವರು ಇಲ್ಲೇ ಒಂದ್ ಗಂಟೆ ಇರುತ್ತಾರೆ. ಅದ್ಯಾಕೋ ಸಾಕಮ್ಮನಿಗೆ ಅದು ಸರಿ ಅಂತ ಅನ್ನಿಸಿರಲಿಲ್ಲ.

ನಾಯ್ಡು ಅವರದ್ದು ಈ ಕಥೆ ಆದರೆ, ಕೊಡಗಿನ ಅಜ್ಜಿ " ಕಾವೇರಜ್ಜಿ" ಗೆ ಆಸ್ತಮಾ ಇದ್ದು ಪ್ರತಿ ೨-ತಿಂಗಳುಗಳಿಗೆ ಉಬ್ಬಸ ಜಾಸ್ತಿಯಾಗಿ ಅಮೈನೊಫಿಲ್ಲಿನ್ ಡ್ರಿಪ್ ಹಾಕಿಸಿಕೊಳ್ಳಲು ಬಂದು ೧-೨ ದಿನ ಅಡ್ಮಿಟ್ ಆಗಿ ಹೋಗುತ್ತಿದ್ದರು. ಕಾವೇರಜ್ಜಿ ತುಂಬಾ ಸ್ಥಿತಿವಂತರಾಗಿದ್ದು (ಎಸ್ಟೇಟ್ ಓನರ್), ನನ್ನ ಹತ್ತಿರ " ನನಗೆ ದೇವ್ರು ಸ್ವಲ್ಪ ಆಸ್ಥಿ ಕಡಿಮೆ ಕೊಟ್ಟಿದ್ರೂ ಸಾಕಿತ್ತು, ಆರೋಗ್ಯ ಚೆನ್ನಾಗಿ ಕೊಟ್ಟಿದ್ರೆ ಆಗ್ತಿತ್ತು ಕಣಮ್ಮಾ, ನನ್ನ ಈ ಚಿನ್ನದ ಬಳೆ ನಿನಗೆ ಕೊಟ್ರೆ, ನಿನ್ನ ಆರೋಗ್ಯ ನನಗೆ ಬರುತ್ಯೇ ಹೇಳು?" ಎಂದು ಬೇಜಾರಿಸಿ ಕೊಳ್ಳುತ್ತಿದ್ದರು. ಅವರು ಒಂದು ಸಲ ಹೀಗೆ ಮಾತಾಡುತ್ತಿದ್ದಾಗ, ಒಂದು ತಮಾಷೆ ನಡೆಯಿತು. ನರ್ಸಿಂಗ್ ಹೋಮ್ ಮಾಲೀಕರು ಅಜ್ಜಿ ಹೇಳೋದು ಪೂರ್ತ ಸರಿಯಾಗಿ ಕೇಳಿಸಿಕೊಳ್ಳದೆ ಅಜ್ಜಿಯ ಹತ್ರ " ನೀವು ಲೇಡಿ ಡಾಕ್ಟ್ರಿಗೆ ಚಿನ್ನದ ಬಳೆ ಕೊಟ್ಟ್ರೂ ನಮ್ಮ ನರ್ಸಿಂಗ್ ಹೋಮ್ ಬಿಲ್ ಕಟ್ಟಲೇ ಬೇಕು ಅಜ್ಜೀ ." ಅಂದಿದ್ರು.

ಲೇಬರ್ ರೂಮ್, ವಾರ್ಡ್ ಎಲ್ಲಾ ಅನುಕೂಲ ಇದ್ದಿದರಿಂದ, ಲೇಬರ್ ಪೇಶಂಟ್ಸ್ ತುಂಬಾ ಬರುತ್ತಿದ್ದರು. ಹೀಗೇ ಒಂದು ಶೆಟ್ಟರ ಫ್ಯಾಮಿಲಿಯ ಹೆಣ್ಣು ಮಗಳು, ಸರಳಾನೂ ಗರ್ಭಿಣಿಯಾಗಿದ್ದಳು ಮೂರನೇ ಸಾರಿ. ಅವಳಿಗೆ ೨- ಹೆಣ್ಣು ಮಕ್ಕಳಿದ್ದು, ಈ ಸಾರಿ ಗಂಡು ಆದರೆ ಸಾಕಪ್ಪ ಅನ್ನುತ್ತಿದ್ದಳು. ಅವಳ ಗಂಡ "ಗಂಡು ಮಗುವಾಗಿದ್ದರೆ ಇರಲಿ", ಇಲ್ಲದಿದ್ದರೆ ಈ ಪ್ರೆಗ್ನನ್ಸಿ ಬೇಡ ( ವ್ಯಾಪಾರಿ ಕೆಲಸ ಮಾಡುತ್ತಿದ್ದ ಗಂಡನಿಗೆ ವಂಶಪಾರಂಪರ್ಯವಾಗಿ ಬಂದ ಈ ಉದ್ಯಮೆಯನ್ನು ಮುಂದುವರಿಸಲು) ಅನ್ನುತ್ತಿದ್ದರಂತೆ. ಪ್ರತೀಸಾರಿ ಚೆಕ್ ಅಪ್ ಗೆ ಬಂದಾಗಲೂ ಅವಳ ಗಂಡ ಡಾ: ಆಶಾ ನನ್ನು ಕೇಳುತ್ತಿದ್ದರು, "ಈಗ ಟೈಮ್ ಸರಿಯಾಗಿದೆಯಾ ಮಗು ಸೆಕ್ಸ್ ಕಂಡು ಹಿಡಿಯಲು?" ಎಂದು. ಆಗ, ಈಗಿನಷ್ಟು ಪರೀಕ್ಷೆಗಳು ಗೊತ್ತಿರಲಿಲ್ಲವಾದ್ದರಿಂದ, ಅಲ್ಟ್ರಾ ಸೌಂಡ್ ಯಿಂದ ಮಗು ಸ್ವಲ್ಪ ದೊಡ್ಡದಾದ ಮೇಲೆ ಮಗುವಿನ ಆಕಾರ ನೋಡಿ ಸ್ವಲ್ಪ ಮಟ್ಟಿಗೆ ತಿಳಿಯಬಹುದಿತ್ತು.

ಕಡೆಗೂ ಒಂದು ದಿನ ಅಲ್ಟ್ರಾಸೌಂಡ್ ಮಾಡಲು ನಿಗಧಿ ಪಡಿಸಿದರು ಡಾ: ಆಶಾ. ಸರಳಾರ ತಾಯಿ ಆಶಾರನ್ನು ತಾವೇ ಕೇಳಲಾಗದೆ, ನನ್ನ ಮೂಲಕ ಶಿಫಾರಸ್ ಮಾಡಿಸಲು ಸಾಧ್ಯವಾಗಬಹುದು ಎಂದೆಣಿಸಿ, " ಡಾ, ನೀವು ಆಶಾ ಮೇಡಮ್ ಗೆ ಒಂದು ಮಾತ್ ಹೇಳಿ " ಅಲ್ಟ್ರಾಸೌಂಡ್ ನಲ್ಲಿ ಏನೇ ತೋರಿಸಿದ್ರೂ ಪರವಾಗಿಲ್ಲ, ನಮ್ಮ ಅಳಿಯನ ಹತ್ತಿರ " ಗಂಡ್ ಮಗು ತರಹ ಕಾಣಿಸ್ತಾ ಇದೆ" ಅಂತ ಹೇಳಲಿ, ನನ್ನ ಮಗಳ ಪ್ರಾಣ ಉಳಿಯತ್ತೆ. ಡೆಲವರಿ ಆದ ಮೇಲೆ ನೋಡಿಕೊಳ್ಳೋಣ" ಎಂದರು. ನಾನು ಮನಸ್ಸಿನಲ್ಲಿ "ಈ ಶೆಟ್ರು ಎಲ್ಲಿಂದ ಎಲ್ಲಿಗೆ ಬಂದ್ರೂ, ವ್ಯಾಪಾರ-ವ್ಯವಹಾರ ನ ತರ್ತಾರಲ್ಲ" ಅಂದುಕೊಂಡೆ. "ನೀವೇ ಹೇಳಿ ನೋಡಿ ಆಶಾಗೆ ಒಂದು ಮಾತು" ಎಂದೆ. ಕಡೆಗೆ ಅಲ್ಟ್ರಾಸೌಂಡ್ ನಲ್ಲಿ ತೋರಿಸಿದ್ದೂ ಹೆಣ್ಣು ಮಗು ಡೆಲವರಿ ಆಗಿದ್ದೂ ಹೆಣ್ಣು ಮಗು.

ಹೀಗೆ ಅನೇಕಾನೇಗ ಪ್ರಸಂಗಗಳು ಬರುತ್ತಿದ್ದವು " ನಗಬೇಕೋ ಅಳಬೇಕೋ ಗೊತ್ತಾಗಿರಲಿಲ್ಲ". ನಾನು ಸ್ಮಿತಾಳನ್ನು ಮೊದಲಸಲ ಚೆಕ್ ಮಾಡಿದಾಗ, ಅವಳಿಗೆ ೩- ತಿಂಗಳಾಗಿತ್ತು. ಹಾಗಾಗಿ ಪ್ರತೀ ಸಾರಿಯೂ ಚೆಕ್ ಅಪ್ ಗೆ ಬಂದಾಗ ಡಾ: ವಿಜಯಲಕ್ಷ್ಮಿ ಜೊತೆ, ಅಥವಾ ನಾನೊಬ್ಬಳೆ (ಕೆಲವು ಸಲ) ಚೆಕ್ ಮಾಡುತ್ತಿದ್ದೆವು. ಸ್ಮಿತಾ ರೋಗಿಯಷ್ಟೇ ಅಲ್ಲಾ, ಒಬ್ಬ ಸ್ನೇಹಿತೆಯಂತಲೂ ಪರಿವರ್ತನೆ ಆಯಿತು. ಅವರ ಮನೆಯವರೆಲ್ಲಾ ನೆಂಟರಿಷ್ಟರ ಹಾಗೆ ಭಾವನೆ ಬರಿಸುತ್ತಿದ್ದರು.

ಡಾ: ವಿಜಯಲಕ್ಷ್ಮಿಗೂ ಅಷ್ಟೇ ಅವಳು ತುಂಬಾ ಪರಿಚಿತಳಾದಳು ( ಬಹಳಷ್ಟು ಪ್ರೆಗ್ನಂಟ್ ಪೇಶಂಟ್ಸ್ ಇದ್ದರೂ ). ಡಾ. ಆಶಾ, ಡಾ. ವಸುಂದರಾ ಅವರು ಮತ್ತಿತರ ಒ.ಬಿ.ಜಿ.ವೈ.ಎನ್. ಇಲ್ಲಿ ಮೆಟರ್ನಿಟಿ ಕೇರ್ ಕೊಟ್ಟು, ಡೆಲವರಿ ಮಾಡಿಸುತ್ತಿದ್ದರು. ಎಲ್ಲರಿಗೂ ಅವರದೇ ಆದ ಪೇಶಂಟ್ಸ್ ಗಳು ಸಾಕಷ್ಟಿದ್ದರು. ರಜೆ ಹೋದಾಗ ಒಬ್ಬರಿಗೊಬ್ಬರು ಕವರ್ ಮಾಡುತ್ತಿದ್ದರು. ಒಂದ್ ಸಲ ಸಾಕಮ್ಮನ ಹತ್ತಿರ ಹೇಳಿದೆ " ಸ್ಮಿತಾ, ನಾನು, ನೀನು ಇರುವಾಗಲೇ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಾರಲ್ಲ ಏನ್ ಸಮಾಚಾರ?". ಸಾಕಮ್ಮ, "ಸ್ಮಿತಾ ಮತ್ತು ಅವರ ಯಜಮಾನರು ಅವತ್ತು ಡಾ: ವಿಜಯಲಕ್ಷ್ಮಿ ನ ಕೇಳ್ ಕೊಂಡರು, ನಾನು, ನೀವು ಇರೋಹಾಗೆ ಅಪಾಯಿಂಟ್ಮೆಂಟ್ ಕೊಡಿ" ಅಂತೇಳ್ತ್ತಿದ್ದಿದ್ದು ನಂಗೆ ಕೇಳಿಸ್ತು ಮೇಡಮ್. "ಓಗ್ಲಿ ಬಿಡಿ ಚೆನ್ನಗವ್ರೆ ಮನೆ ಕಡೆ" ಅಂದ್ಲು. ಅಷ್ಟೊತ್ತಿಗೆ, ಸತೀಶ್, ನರಸಿಂಗ್ ಹೋಮ್ ಮಾಲೀಕರು ನಮ್ಮಲ್ಲಿಗೆ ನಡೆದು ಬಂದಿದ್ದರಿಂದ ನಮ್ಮಿಬ್ಬರ ಮಾತು ಅಲ್ಲಿಗೇ ನಿಂತಿತು.

ನಾಯ್ಡು ಅವರಿಗೆ ಈಚೆಗೆ ರೋಗ ಉಮ್ಮಳಿಸಿದ್ದು ವೆಲ್ಲೂರ್ ಆಸ್ಪತ್ರೆಗೆ ಮತ್ತೆ ಡಯಾಲಿಸಿಸ್ ಗೆ ಹೋಗಬೇಕಾಗಿಬಂತು. ತುಂಬಾ ಸುಸ್ತಾಗಿದ್ದರಿಂದ ಈ ಸಲ ಹೋಗುವ ಮುಂಚೆ, ನಮ್ಮನ್ನೆಲ್ಲಾ ನೋಡಿ ಹೋಗಲು ಬಂದಿದ್ದರು. ನಮ್ಮನ್ನೆಲ್ಲಾ ನೋಡಿ " ನಾನು ಈ ಸಲ ಹೋದ್ರೆ, ವಾಪಸ್ ಮೈಸೂರ್ ಗೆ ಬರೂದು ಡೆಫೆನೆಟ್ ಇಲ್ಲಮ್ಮಾ, ಅದಕ್ಕೆ ಹೇಳಿ ಹೋಗಲು ಬಂದೆ" ಎಂದರು. ನಮ್ಮೆಲ್ಲರ ಕಣ್ಣುಗಳೂ ತುಂಬಿ ಹೋಯಿತು, ನನ್ನನ್ನು ನೋಡಿ " ಮೇಡಮ್ ನೀವು ಮಾಡಿದ ಎಲ್ಲಾ ಸೇವೆಗೂ ತ್ಯಾಂಕ್ಸ್, ಆ ದೇವ್ರು ನಿಮ್ಮಂತವರನ್ನು ತುಂಬಾ ದಿನ ಬದುಕಿಸಲಿ". ಅಂದರು. ಸಾಕಮ್ಮನಿಗೆ ಒಂದು ಗಿಫ್ಟ ಇಡುತ್ತಾ ತಮಾಷೆಯಲ್ಲಿ, "ನೀ ಮುಂದಿನ ಜನ್ಮದಲ್ಲಾದರೂ ನನ್ನ ಹೆಂಡತಿಯಾಗಿ ಹುಟ್ಟು" ಅಂತ ನಕ್ಕು ಹೇಳಿದರು. ಸತೀಶ್ ಅವರು ಸಾಕಮ್ಮನ ಗಿಫ್ಟ್ ಕಡೆ ನೋಡುತ್ತಾ, ಸಾಕಮ್ಮನಿಗೆ ಹೇಳಿದರು " ಆ ಶಾಮಣ್ಣನಿಗೆ, ನಾಯ್ಡು ಅವರ ಬ್ಯಾಲನ್ಸ್ ಏನಾದರೂ ಇದ್ರೆ, ಈಗಲೇ ಬಿಲ್ಲು ತರಬೇಕಂತೆ ಅರ್ಜೆಂಟಾಗಿ" ಅಂತ ಹೇಳು ಅಂದ್ರು.

ಸಾಕಮ್ಮ ಪೇಶಂಟ್ ರೆಡಿ ಮಾಡುತ್ತಾ, ಹಾಗೇ ಮಾತಾಡುವಾಗ ಸ್ಮಿತಾಳನ್ನು, (ಬೇಕಾಗಿದ್ದ ಮಗು ಡೆಲವರಿ ಮಾಡಲು ಸಾಧ್ಯ ಅನ್ನೋತರಹ) "ನಿಮಗೆ ಗಂಡು ಮಗು ಆಗ್ಬೇಕೂಂತಲೋ, ಹೆಣ್ಣು ಮಗು ಆಗ್ಬೇಕೂಂತಲೋ?" ಅಂತ ಕೇಳಿದಳು. ಸ್ಮಿತಾ ನಕ್ಕು " ಇದು ಮೊದಲನೆಯದಲ್ವಾ, ಯಾವುದಾದ್ರೂ ಪರವಾಗಿಲ್ಲ, ಆರೋಗ್ಯವಾಗಿದ್ರೆ ಸಾಕು" ಅಂತ ತೃಪ್ತಿಯಿಂದ ಹೇಳಿದಳು. ಅಲ್ಲೇ ಇದ್ದ ಡಾ. ಆಶಾ " ಸ್ಮಿತಾಳಿಗೂ ಸರಳಾ ಗಂಡನ ಹುಚ್ಚು ಹಿಡಿಸಬೇಡ ಮಹತಾಯಿ" ಎಂದರು ನಗುತ್ತಾ. ಕಾವೇರಜ್ಜಿ ಮೊಮ್ಮಗನ ಮದುವೆಗೆ ನಮ್ಮೆಲ್ಲರನ್ನೂ ಆತ್ಮೀಯತೆಯಿಂದ ಕರೆದಿತ್ತು. ಸಾಕಮ್ಮ, ಸತೀಶ್ ಅವರ ತಾಯಿ ಇಂದಿರಮ್ಮ ನ ಜೊತೆ ಹೋಗಿ ಬಂದಳು. ಹೋಗುವ ಮುನ್ನ ಸ್ಮಿತಾಳಿಗೆ ಹೇಳಿದ್ಲು " ನಾ ವಾಪಸ್ ಬರೋವರೆಗೆ ನಿಮಗೆ ಹೆರಿಗೆ ಆಗಲ್ಲಾ". ಸ್ಮಿತಾಳಿಗೆ ದಿನ ತುಂಬುತ್ತಾ ಬಂತು. ವಾರಕ್ಕೆ ಒಂದು ಸಲ ಚೆಕಪ್ ಆಗುತ್ತಿತ್ತು. ನನ್ನ ಕೆಲಸದ ಅವಧಿಯೂ ಮುಗಿಯುತ್ತಾ ಬಂದಿತ್ತು. ಇನ್ನೆರಡು ವಾರ ಇದೇ ಅನ್ನುವಾಗ ಸ್ಮಿತಾಳಿಗೆ ಗುಡ್-ಲಕ್ ಹೇಳಿ, ಕೆಲಸ ಮುಗಿಯುತ್ತಿರುವ ವಿಷಯ ತಿಳಿಸಿದೆ. ಸ್ಮಿತಾಳಿಗೆ ಖುಷಿ ಆಗಲಿಲ್ಲ. ಅವಳ ಗಂಡ ಸುರೇಶ್ ಜೊತೆ ಬಂದು ಸತೀಶ್ ಅವರನ್ನೇ ನೇರವಾಗಿ ಕೇಳಿ ನನ್ನ ಕೆಲಸ ಇನ್ನೆರಡುವಾರ ವಿಸ್ತರಿಸುವುದರಲ್ಲಿ ಯಶಸ್ವಿಯಾಗಿದ್ದರು. (ವಿಧಿಯ ಯಾವ ಆಟವನ್ನು ನೋಡಲೋ ) ಸ್ಮಿತಳ ಹೆರಿಗೆ ಸಮಯ ಹತ್ತಿರ ಬರುತ್ತಿತ್ತು. ಹೀಗೇ ಒಂದು ದಿನ, ನೋವು ಶುರುವಾಗಿ ಸ್ಮಿತಾ ಅವಳ ಅಪ್ಪ ಅಮ್ಮನ ಜೊತೆಗೂಡಿ ಬಂದಿದ್ದಳು. ಸ್ಮಿತಾಳ ತಂದೆ ತುಂಬಾ ಸಮಾಧಾನಸ್ತರೂ, ತಾಯಿ ಸ್ವಲ್ಪ ಆತಂಕದಿಂದ( ಮೊದಲನೆ ಮಗಳ ಮೊದಲನೆ ಹೆರಿಗೆ ಕಾರಣವಿರಬಹುದೇನೋ) ಇರುವ ಹಾಗೆ ಕಾಣಿಸಿತು.

ಸ್ಮಿತಾಳನ್ನು ಬ್ರೀಫ್ ಆಗಿ ಚೆಕ್ ಮಾಡಿ ಡಾ. ವಿಜಯಲಕ್ಷ್ಮಿಯನ್ನು ಕರೆದೆ. ಅವರೂ ಚೆಕ್ ಮಾಡಿ "ಕಂಟ್ರಾಕ್ಶನ್ಸ್ ಅಷ್ಟು ಸ್ಟ್ರಾಂಗ್ ಆಗಿ ಬರುತ್ತಿಲ್ಲ, ಫಾಲ್ಸ್ ಪೈನ್ ಇರಬಹುದು, ಸ್ವಲ್ಪ ಹೊತ್ತು ಅಬ್ಸರ್ವ್ ಮಾಡಬೇಕು ಆಂತ ಡ್ರಿಪ್ ಹಾಕಿ, ರಾತ್ರೆ ಇಲ್ಲೇ ಕಳೆಯಿರಿ ಅಂತ ಅಡ್ಮಿಟ್ ಮಾಡಿದೆವು. ಡಾ. ವಿಜಯಲಕ್ಷ್ಮಿಗೆ ಇನ್ನೆರಡು ಕೇಸ್ ಇದ್ದಿದರಿಂದ ಅವರೂ ರಾತ್ರೆಯೆಲ್ಲಾ ನರಸಿಂಗ್ ಹೋಮ್ನಲ್ಲೇ ಇದ್ದು ಹೆರಿಗೆ ಮಾಡಿ, ಸ್ಮಿತಾಳನ್ನು ಮತ್ತೊಮ್ಮೆ ಚೆಕ್ ಮಾಡಿ ಬೆಳಗ್ಗೆ, " ಟ್ರೂ ಪೈನ್ಸ್ ಇನ್ನೂ ಶುರುವಾಗಿಲ್ಲ, ಪ್ರೊಗ್ರೆಸ್ಸ್ ಕೂಡಾ ಆಗ್ತಿಲ್ಲ, ಇವತ್ತು ಮನೆಗೆ ಹೋಗಿ, ಪೈನ್ಸ್ ಫ್ರೀಕ್ವೆಂಟ್ ಆಗಿ, ಸ್ಟ್ರಾಂಗ್ ಆದಾಗ ಬಾ" ಅಂತ ಡಿಸ್ಚಾರ್ಜ್ ಮಾಡಿದರು. ಸ್ಮಿತಾ " ಡಾಕ್ಟ್ರೇ, ಎಷ್ಟು ಸಲಬೇಕಾದ್ರೂ ಹೋಗ್ ಬರುತ್ತೀನಿ, ನೀವಿದ್ರೆ ಆಯ್ತು ನನ್ನ ಡೆಲವರಿ ಟೈಮ್ ಗೆ" ಅಂತ ಅಂದಿದ್ದಳು. ಸ್ಮಿತಳ ತಂದೆ, ತಾಯಿ " ಅಷ್ಟು ಸುಲಭವಾಗಿ ಆಗೋಲ್ಲ, ಮೊದಲನೆ ಹೆರಿಗೆ" ಅನ್ನುವಂತೆ "ಹೌದೇ" ಅಂತಷ್ಟೇ ಹೇಳಿದ್ದರು. ಇದಾಗಿ ೪-೫ ದಿನಗಳಾಗಿರಬಹುದು,

ಡಾ. ವಿಜಯಲಕ್ಷ್ಮಿ ಏನೋ ಫ್ಯಾಮಿಲಿ ಎಮರ್ಜೆನ್ಸಿ ಮೇಲೆ ಬೇರೇ ಊರಿಗೆ ಹೋಗಬೇಕಾಯಿತು. ೨-೩ ದಿವಸ ಬಿಟ್ಟು ಬರುವುದಾಗಿ ತಿಳಿಸಿದ್ದರು, ಆದರೆ ಎಣಿಸಿದಂತೆ ಬರಲಾಗಿರಲಿಲ್ಲ. ಇತ್ತ ಸ್ಮಿತಾಳಿಗೆ ಹೆರಿಗೆ ನೋವು ಶುರುವಾಗಿ ತೋರಿಸಲು ಬಂದಿದ್ದಳು. ಮೊದಲು ಎಚ್ಚರಿಕೆ ಕೊಟ್ಟಿದ್ದರಿಂದಲೋ ಏನೋ, ಈಸಲ ನಿಜವಾಗಿ ಜೋರಾಗಿ ಕಂಟ್ರಾಕ್ಶನ್ಸ್ ಬರುತ್ತಿತ್ತು. ಹಾಗಾಗಿ ಅಡ್ಮಿಟ್ ಮಾಡಿ ಪ್ರಾಸಸ್ ಶುರು ಮಾಡಿದೆ. ಈಸಲ ಸ್ಮಿತಾಳ ಜೊತೆ ಅವರ ಸಂಸಾರ ಎಲ್ಲಾ ಬಂದಿದ್ರು. ಸ್ಮಿತಾಳ ಕೋರಿಕೆ ಮೇರೆಗೆ, ಸತೀಶ್ ಅವರಿಂದ ಡಾ. ವಿಜಯಲಕ್ಷ್ಮಿ ಅವರ ಟೆಲೆ ನಂಬರ್ ಪಡೆದು ಫೋನಾಯಿಸಿದೆ. "ಮೇಡಮ್ ನವರು ಎಮರ್ಜೆನ್ಸಿ ನಲ್ಲಿ ಇದ್ದಾರಮ್ಮ, ಇನ್ನೂ ಊರಿಗೆ ಬಂದಿಲ್ಲ ಇನ್ನೆರಡು ಗಂಟೆ ಬಿಟ್ ಟ್ರೈ ಮಾಡಿ." ಎಂದಿತು ಧ್ವನಿಯೊಂದು. ನಿರಾಸೆಯಿಂದ, ಆದರೂ ಸ್ವಲ್ಪ ಚೈತನ್ಯ ಬರಿಸಿಕೊಂಡು ಸ್ಮಿತಾಳ ಹತ್ತಿರ ನಿಧಾನವಾಗಿ ಹೇಳಿದೆ. ಮುಖ ಪೆಚ್ಚಾಯಿತು ಸ್ಮಿತಾಳಿಗೆ. "ಇನ್ನೆರಡು ಗಂಟೆ ಬಿಟ್ಟು ಮತ್ತೆ ಕರೆಯುತ್ತೇನೆ, ಇನ್ನೂ ಈಗ ನೋವು ಶುರುವಾಗಿದೆ ಅಲ್ವಾ, ಹೇಗಿದ್ರೂ ವಸುಂದರಾ ಮೇಡಮ್ ಇಲ್ಲೇ ಇದ್ದಾರೆ, ವಿಜಯಲಕ್ಷ್ಮಿ ಬರುವವರೆಗೆ ನಿನ್ನನ್ನು ನೋಡಿಕೊಳ್ಳುತ್ತಾರೆ" ಎಂದೆ.

ಡಾಕ್ಟ್ರಿಲ್ಲಾ (ಬೇಕಾದವರು) ಅಂತ ಹೆರಿಗೆ ನೋವು ನಿಲ್ಲಿಸಕ್ಕಾಗುತ್ತಾ? ಅಥವಾ ಮುಂದೆ ಹಾಕುಕ್ಕೆ ಆಗುತ್ತಾ? ಅದೆಲ್ಲ ಆಗದ ಮಾತು ಮೆಡಿಸಿನ್ ನಲ್ಲಿ, ಎಂದುಕೊಂಡು ಇವಳಿಗೆ ಹೇಗಾದರೂ ಮಾಡಿ ಸಂತೈಸಿ ಓಲೈಸಬೇಕು ವಸುಂದರಾ ಮೇಡಮ್ ಹತ್ರ ತೋರಿಸಿಕೊಳ್ಳಲು, ಅಂತ ಸಾಕಮ್ಮನನ್ನು ಕರೆದು ಚೂ ಬಿಟ್ಟೆ. ಸಾಕಮ್ಮ " ಡಾ: ವಿಜಯಲಕ್ಷ್ಮಿ ಇದ್ದಿದ್ರೇ ಚೆನ್ನಾಗಿರ್ತಿತ್ತು, ಅಂತ ರಾಗ ತೆಗೆದಳು. ನಾನು "ಹುಷ್,! ಹಾಗೆ ಹುಷಾರ್! ಸ್ಮಿತಾಳನ್ನು ಸಂತೈಸಿ ಓಲೈಸುವುದು ಮುಖ್ಯ ಈಗ, ಪ್ರಕೃತಿಯ ಆಕ್ರಮ ಯಾರಿಗೂ, ಯಾವಾಗಲೂ, ಯೆಲ್ಲಿಯೂ ಕಾಯುವುದಿಲ್ಲ. ಸ್ಮಿತಾ ಸಮಾಧಾನವಾಗಿರುವುದು ಅವಳ ಹೆರಿಗೆಯಷ್ಟೇ ಅವಳ ಆರೋಗ್ಯಕ್ಕೆ ಬೇಕೇ ಬೇಕು. ಎಂದು ಹೇಳಿ ತುರ್ತಿನ ಅವಶ್ಯಕತೆಯ ಅರಿವು ಮಾಡಿ, ಇನ್ನೊಂದು ಸಲ ಸ್ಮಿತಾಳನ್ನು ಚೆಕ್ ಮಾಡಿ, ಡಾ. ವಿಜಯನನ್ನು ಫೋನಾಯಿಸಿದೆ. ಈಸಲ ಧ್ವನಿ ಕರ್ಕಷವಾಗಿತ್ತಲ್ಲದೇ, ನಿರುತ್ಸಾಹವಾಗಿತ್ತೂ ಕೂಡ ಅದೇ ಉತ್ತರದಿಂದ. ಛೇ, ಎಂತ ಅನ್ಯಾಯ, "ಸ್ಮಿತಾ ಕೇಳಿದ್ದು ಗಂಡು ಮಗುನೇ ಬೇಕು ಅಂತಲ್ಲ, ಆಫ್ಟರ್ ಆಲ್ ಅವಳ ಫೇವ ರೈಟ್ ಡಾಕ್ಟರ್ ಹೆರಿಗೆ ಮಾಡಲಿ ಅಂತ, ಅದನ್ನೂ ಕರುಣಿಸಲಿಲ್ಲ ಆ ದೇವ್ರು" ಅನ್ನಿಸಿತು ಮನಸ್ಸಿನಲ್ಲಿ.

ಸಾಕಮ್ಮನ ಕೂಗಿನ ದ್ವನಿ" ಮೇಡಮ್ ಕಂಟ್ರಾಕ್ಶನ್ಸ್( ನೋವು ) ಜೋರಾಗಿ ಬರುತ್ತಿದೆ" ಕೇಳಿ ಎಚ್ಚೆತ್ತು, ಸ್ಮಿತಾಳನ್ನು ಮತ್ತೆ ಪರೀಕ್ಷಿಸಿ ಎಲ್ಲ ವಿಷಯಗಳೂ ಕ್ರಮವಾಗಿರುವುದನ್ನು ಖಚಿತಪಡಿಸಿಕೊಂಡು, ವಸುಂಧರಾ ಮೇಡಮ್ ಹತ್ತಿರ ವರದಿ ಮಾಡಿದೆ. " ೨೩ ಇಯರ್ಸ್ ಒಲ್ಡ್ ಸ್ಮಿತಾ, ಪ್ರೈಮಿ ಗ್ರಾವಿಡ------ಎಟ್ಸೆಟ್ರಾ----". ವಸುಂಧರಾ ಮೇಡಮ್ ಕೆಲಸದಲ್ಲಿ ಡಾ. ವಿಜಯಲಕ್ಷ್ಮಿ ಯಷ್ಟೇ ಸರಿಸಾಟಿಯಾಗಿದ್ದರೂ, ಬಹಳ ಜನ ಒಪ್ಪುತ್ತಿದ್ದಿದ್ದು ಏಕೋ ವಿಜಯಲಕ್ಷ್ಮಿಯನ್ನ. ಡಾ. ವಸುಂಧರಂಗೆ ಬೇರೆಯವರ ಪೇಶಂಟಿಗೆ ಹೆರಿಗೆ ಮಾಡುವುದು ಹಿತಕರವಾದದ್ದಲ್ಲ, ಆದರೂ ಅನಿವಾರ್ಯವಾಗಿ ಅರ್ಪಿಸಬೇಕಾಗಿದ್ದ ಆಧ್ಯತೆಯಾಗಿತ್ತು. ಇಲ್ಲಿ ಸ್ಮಿತಾಳ ಹೆರಿಗೆ ಮಾಡಿಸುವುದು. ಇನ್ನೊಂದು ಸಾರಿ ನನ್ನ ಹತ್ತಿರ ಖಚಿತಪಡಿಸಿಕೊಂಡರು "ಡಾ. ವಿಜಯಲಕ್ಷ್ಮಿ ಈಸ್ ನಾಟ್ ಗೋಯಿಂಗ್ ಟು ಮೇಕ್ ಇಟ್" ಅನ್ನುವುದನ್ನು.

ವಸುಂಧರಾ ಮೇಡಮ್ ಸ್ಮಿತಾಳನ್ನು ಚೆಕ್ ಮಾಡಿ "ಎಲ್ಲಾ ಸರಿಯಾಗಿ ಕಾಣಿಸುತ್ತಿದೆ, ಟ್ರೂ ಪೈನ್ಸ್ ಬರುತ್ತಿದೆ, ಇವತ್ತೇ ರಾತ್ರಿ ಹೆರಿಗೆ ಆಗುತ್ತದೆ." ಎಂದು ಮನೆಯವರಿಗೆ ತಿಳಿಸಿದರು. ಎಲ್ಲರ ಕಾಯುವ ಸಮಯ( ಕೌಂಟ್ ಡೌನ್ ) ಆರಂಭವಾಯಿತು. ರಾತ್ರಿಯ ಔಟ್ ಪೇಶಂಟ್ಸ್ ಗಳನ್ನೆಲ್ಲಾ ಒಂದೊಂದಾಗಿ ನೋಡಿ ಮುಗಿಸಿ ನಾನು, ಸಾಕಮ್ಮ ಸ್ಮಿತಾಳ ಹೆರಿಗೆಗೆ ವಸುಂಧರಾ ಜೊತೆಗೂಡಿ ರೆಡಿಯಾದೆವು. ನೋವು ಜಾಸ್ತಿಯಾಗುತ್ತಿದ್ದಂತೆ, ಯೂಟೆರಸ್ ಔಟ್ಲೆಟ್ (ಗರ್ಭಕೋಶದ ಸರ್ವಿಕ್ಸ್) ಓಪನ್ ಆಗಿ ಮಗುವು ಹೊರಗೆ ಬರಲು ಅನುವು ಮಾಡಿ, ಹೆರಿಗೆ ಪ್ರಾಸಸ್ ನಾರ್ಮಲ್ ಆಗಿ ಮುಂದುವರೆಯಿತು. ನೋವು ಶುರುವಾಗಿ (ಜೋರಾಗಿ) ೫-೬ ಗಂಟೆಗಳ ನಂತರ ಸ್ಮಿತಾ ಹೆಣ್ಣು ಮಗುವಿಗೆ ಜನ್ಮವಿತ್ತಳು ಡಾ. ವಸುಂಧರಾ, ನನ್ನ, ಮತ್ತು ಸಾಕಮ್ಮನ ಸಹಾಯದಿಂದ.

ಇದುವರೆಗೆ ಎಲ್ಲವೂ ಅಡೆತಡೆಇಲ್ಲದೆ ಅಪೇಕ್ಷಿಸಿದಂತೆ ಆಯಿತು. ಮಗು ಒಂದು ಬೇಬಿ ಸ್ಮಿತಾಳಂತೆ ಬೆಳ್ಳಗೆ, ಉದ್ದಕ್ಕೆ ಮತ್ತು ಮುಖದ ಲಕ್ಷಣಗಳೆಲ್ಲಾ ಬರೆದಂತೆ ಅಮ್ಮನನ್ನು ಹೋಲುತಿತ್ತು. ನಾನು, ಸಾಕಮ್ಮಾ, ಮತ್ತು ವಸುಂಧರಾ ಮೇಡಮ್ ಒಂದು ಸಲ ನಿಟ್ಟುಸಿರು ಬಿಟ್ಟೆವು. ಸ್ಮಿತಾಳೂ ಒಂದು ನಿಟ್ಟುಸಿರು ಬಿಡುತ್ತಿರುವಂತೆ ಸ್ವಲ್ಪ ಸುಧಾರಿಸಿ ಮಗುವ ನೋಡಲು ಕಾತರಿಸುತ್ತಿರುವಂತೆ ಕಾಣಿಸಿತು. ಸಾಕಮ್ಮ, ನಾನು ಮಗುವನ್ನು ಚೆನ್ನಾಗಿ ಡ್ರೈ ಮಾಡಿ, ಸ್ಟಿಮೂಲೇಟ್ ಮಾಡಿ, ಸ್ಮಿತಾಳಿಗೆ ಮಗುವನ್ನು ತೋರಿಸಿದೆವು. ಮನೆಯವರೆಲ್ಲಾ ಮಗುವನ್ನು ನೋಡಿ ಆನಂದಿಸಿದರು. ನಾವು ಮಗುವ ಕೇರ್ ಮಾಡುವಾಗ, ಡಾ. ವಸುಂಧರ ಸ್ಮಿತಾಳ ಆಫಟರ್ ಡೆಲವರಿ ಕೇರ್ ನೋಡಿಕೊಳ್ಳುತ್ತಿದ್ದರು. ಡಾ. ವಸುಂಧರಾ ಪ್ಲಾಸೆಂಟಾ ವನ್ನು ಹೊರತೆಗೆಯಲು, ಮಾಮೂಲಿಯಂತೆ ಗರ್ಭಕೋಶ ದ ಮೇಲೆ( ಹೊರಗಿಂದ) ಸ್ವಲ್ಪ ವತ್ತಡ ಕೊಟ್ಟು ಪ್ರಯತ್ನ ಮಾಡುತ್ತಿದ್ದರು. ನಾನು ಸಹಾಯಮಾಡಲು ಮುಂದಾದೆ,

ಒಂದು ಆಶ್ಚರ್ಯವಾದ ಸಂಗತಿ ನಮಗೆ ಕಾದಿತ್ತು. ಪ್ಲಾಸೆಂಟಾ ಸೆಪರೇಟ್ ಆಗೇ ಇರಲಿಲ್ಲ ಗರ್ಭಕೋಶದಿಂದ. ನಾರ್ಮಲ್ ಆಗಿ ಹೆರಿಗೆಯಾಗಿ ೫-೧೦ ನಿಮಿಷಗಳೊಳಗೆ ಪ್ಲಾಸೆಂಟಾ ಬೇರ್ಪಡುವುದು ಸಾಮಾನ್ಯ ಮತ್ತು ಆರೋಗ್ಯಕರ. ಸ್ಥಿತಿ ಸ್ವಲ್ಪ ಆತಂಕಕ್ಕೆ ಒಳಗಾಯಿತು, ತಕ್ಷಣ ತುರ್ತು ಸ್ಥಿತಿಯನ್ನರಿತು, ಸಾಕಮ್ಮನಿಗೆ ಒ.ಆರ್. ಮತ್ತು ಅನೆಸ್ತೀಶಿಯಾಲಜಿಸ್ಟ್ ಎಲ್ಲಾ ರೆಡಿಮಾಡಿಸುವುದಕ್ಕೆ ಕಾಲ್ ಕೊಡಲು ಹೇಳಿ, ನಾನು, ವಸುಂಧರಾ ಮೇಡಮ್ ಸ್ಮಿತಾಳ ಪಕ್ಕದಲ್ಲೇ ಇದ್ದು ಎಮೆರ್ಜೆನ್ಸಿ ಕೇರ್ ಕೊಡುತ್ತಾ ಹಾಗೇ ಪ್ಲಾಸೆಂಟಾ ಹೊರತೆಗೆಯುವ ಪ್ರಯತ್ನ ಮುಂದುವರೆಸಿದೆವು. ವಸುಂಧರಾ ಮೇಡಮ್ " ಇದು ತುಂಬಾ ಅಪರೂಪದ ಪ್ಲಾಸೆಂಟಾದ ಪರಿಸ್ಥಿತಿ, ತುಂಬಾ ಆಳವಾಗಿ ಗರ್ಭಕೋಶದ ಗೋಡೆಗೆ ಹೂಳಿರುವ "ಪ್ಲಾಸೆಂಟಾ ಅಕ್ರೀಟ" ದಂತೆ ಕಾಣುತ್ತಿದೆ". ಮಾಮೂಲಾಗಿ ಸ್ವಲ್ಪ ವತ್ತಡ ಹಾಕಿ ಹೊರತೆಗೆಯುವುದು ಸಾಧ್ಯವಾಗುತ್ತಿಲ್ಲ, ಓ.ಆರ್. ಗೆ ಎನಿ ಮೊಮೆಂಟ್ ಟ್ರಾನ್ಸ್ಫರ್ ಮಾಡಬೇಕು ಎನ್ನುತ್ತಲೇ, ನಾವು ಸತೀಶ್ ಅವರ ಸಹಾಯದಿಂದ ಸ್ಮಿತಾಳನ್ನು ಓ. ಆರ್. ಗೆ ಟ್ರಾನ್ಸ್ಫರ್ ಮಾಡುವಷ್ಟರಲ್ಲೇ ಅನೆಸ್ತೀಶಿಯಾಲಜಿಸ್ಟ್ ಒ.ಆರ್. ಒಳಗೆ ಬಂದರು. ಇದೆಲ್ಲಾ ನಡೆಯುವಾಗ ಸ್ಮಿತಾಳ ಸ್ಥಿತಿ ಸ್ಟೇಬಲ್ ಆಗಿ ಇದ್ದು, ಆಗು ಹೋಗುಗಳ ಅರಿವಿಗೆ ಅಡಚಣೆ ಇರಲಿಲ್ಲ.

ವಸುಂಧರಾ ಮೇಡಮ್, ಅನೆಸ್ತೀಶಿಯಾಲಜಿಸ್ಟ್ , ಮತ್ತಿಬ್ಬರ ವೈದ್ಯರ ಒಡಗೂಡಿ, ಸ್ಮಿತಾಳ ತಂದೆ, ತಾಯಿ, ಮತ್ತು ಗಂಡ ಎಲ್ಲರ ಅನುಮತಿ ಪಡೆದು ಸರ್ಜೆರಿ ಶುರು ಮಾಡಿದರು. ಹೊರಗಡೆ ರೋಗಿಗಳನ್ನು ನಾನು ನೋಡಬೇಕಾದ್ದರಿಂದ ನಾನು ಒಳಗೆ ಹೋಗಲು ಅವಕಾಶವಿಲ್ಲದೇ, ಕಾಯುವ ಕರ್ಮ ನನ್ನ, ಸಾಕಮ್ಮಾ, ಮತ್ತು ಸ್ಮಿತಾಳಮನೆಯವರದ್ದಾಯಿತು. ನಾನು ಬೇರೆ ಒಳ ರೋಗಿಗಳನ್ನೆಲ್ಲ ಒಂದು ಸುತ್ತು ಪರೀಕ್ಷಿಸಿ, ಎಲ್ಲಾ ರೋಗಿಗಳೂ ಸ್ಟೇಬಲ್ ಆಗಿ ಇರುವುದನ್ನು ಮನದಟ್ಟು ಮಾಡಿಕೊಂಡು ಕಡೆಗೆ ಡಿಹೈಡ್ರೇಶನ್ ಇದ್ದ ಡಾ. ಬಾಲಚಂದರ್ ಪೇಶಂಟ್ ನ್ನು ಚೆಕ್ ಮಾಡಲು ಬಂದೆ. "ವಾಂತಿ ನಿಂತಿದ್ದು ಈಗ ಸ್ವಲ್ಪ ತಿನ್ನಲು ಶುರುಮಾಡಿದ್ದಾನೆ " ಎಂದು ಹುಡುಗನ ತಾಯಿ ನಿರಾತಂಕವಾಗಿ ತಿಳಿಸಿದ್ದು ಕೇಳಿ ಮನಸ್ಸಿಗೆ ಸ್ವಲ್ಪ ಹಿತವಾಯಿತು.

ಸ್ಮಿತಾಳ ಮನೆಯವರೆಲ್ಲಾ ಒ. ಆರ್. ಹೊರಗೆ ಆತಂಕವಾಗಿ ಕಾತರದಿಂದ ಕಾಯುತ್ತಿದ್ದರು. ಸ್ಮಿತಾಳ ತಂದೆ " ನಮ್ಮ ಕೈಯಲ್ಲೇನೂ ಇಲ್ಲಾ, ಎಲ್ಲಾ ದೈವೇಚ್ಚೆ" ಎನ್ನುವುದನ್ನರಿತು ಅವರೇ ಸಮಾಧಾನ ಮಾಡಿಕೊಂಡಂತ್ತಿತ್ತು. ಸ್ಮಿತಾಳ ತಾಯಿ, ಅವರ ಮೇಲಿರುವ ಜವಾಬ್ದಾರಿಯನ್ನು ಮನಸ್ಸಿನಲ್ಲಿ ಗಾಢವಾಗಿ ಯೋಚಿಸುತ್ತಿದ್ದ ಹಾಗಿತ್ತು. ಸಾಕಮ್ಮನ ಕೂಗು " ಮೇಡಮ್, ಒ. ಆರ್. ಯಿಂದ ಕಾಲ್, ತಗೊಳಿ, ಇ. ಟಿ. ಎ.--೨-ಮಿನಿಟ್ಸ್". ( ಎಸ್ಟಿಮೇಟೆಡ್ ಟೈಮ್ ಆಫ್ ಅರೈವಲ್) ನಾನು ಅನೆಸ್ತೀಶಿಯಾಲಝಿಸ್ಟ್, ಮತ್ತು ವಸುಂಧರಾ ಹತ್ತಿರ ಮಾತಾಡಿ " ಸಾಕಮ್ಮ ಹೇಳಿದಂತೆ ಇನ್ನೆರಡು ನಿಮಿಷದಲ್ಲಿ ಸ್ಮಿತಾಳನ್ನು ಒ.ಆರ್. ಯಿಂದ ವಾರ್ಡ್ ಗೆ ಟ್ರಾನ್ಸ್ಫರ್ ಮಾಡುವುದಾಗಿಯೂ, ರೆಡಿ ಮಾಡಿರಬೇಕಾದ ವ್ಯವಸ್ಥೆಗಳನ್ನೆಲ್ಲ ತಿಳಿಸುತ್ತಾ, ಪ್ಲಾಸೆಂಟಾವನ್ನು ಆಪರೇಶನ್ ಯಿಂದ ಸಂಪೂರ್ಣವಾಗಿ ಹೊರತೆಗೆದು, ರಕ್ತಸ್ರಾವವನ್ನು ಸೂಚರ್ ನಿಂದ ಕಂಟ್ರೋಲ್ ಮಾಡಬೇಕಾಗಿದ್ದ ವಿಷಯವನ್ನೂ ತಿಳಿದುಕೊಂಡೆ."

ಸ್ಮಿತಾಳಿಗೆ ಫ್ಲೋರ್ಲೋರ್ನಲ್ಲಿ ಎಲ್ಲಾ ರೆಡಿ ಮಾಡಿದೆವು ನಾನು ಸಾಕಮ್ಮ ಜೊತೆ ಗೂಡಿ. ಸ್ಮಿತಾಳ ಮನೆಯವರೆಲ್ಲಾ ಅವಳ ಬೆಡ್ ಹತ್ತಿರ ಕಾದು ನಿಂತರು. ಸ್ಮಿತಾಳನ್ನು ಹೊರಗೆ ತಂದಾಗ ಮಧ್ಯ ರಾತ್ರಿ ೧೨.೩೦ ಆಗಿತ್ತು. ಅನೆಸ್ಥೀಶಿಯಾದಿಂದ ಪೂರ್ಣ ಹೊರಗೆ ಬಂದಿಲ್ಲದ ಕಾರಣ ಸ್ಮಿತಾಳಿಗೆ ಒಂದು ತರಹ ಜೊಂಪರು ಮಂಪರು ಮತ್ತು ಡ್ರೌಸಿ ಫೀಲಿಂಗ್ ಇತ್ತು. ಮಗುವನ್ನು ಪಕ್ಕದಲ್ಲೇ ತೊಟ್ಟಿಲಲ್ಲಿ ಮಲಗಿಸಿದ್ದೆವು. ಸ್ಮಿತಾಳಿಗೆ ಬೇಕಾದಾಗ ಮಗು ನೋಡಬಹುದಾಗಿತ್ತು. ನಾನು, ಸಾಕಮ್ಮ ಪೋಸ್ಟ್ ಆಪ್ ಆರ್ಡರ್ಸ್ ಎಲ್ಲಾ ರಿವ್ಯೂ ಮಾಡಿ ಎಲ್ಲಾ ಔಷದ, ಇಂಜೆಕ್ಶನ್ಗಳನ್ನೂ ಕಾಲಕಾಲಕ್ಕೆ ಸರಿಯಾಗಿ ಕೊಡಲು ಅನುವಾದೆವು. ಆಗಾಗ್ಗೆ ವಜೈನಲ್ ಚೆಕ್ ಮಾಡಿ ಎಕ್ಸ್ಟರ್ನಲ್ ಬ್ಲೀಡಿಂಗ್ ಇದೆಯಾ ಎಂದು ನೋಡುತ್ತಿದ್ದೆವು.

ವಸುಂಧರಾ ಮೇಡಮ್, ಪರಿಸ್ಥಿತಿ ಅಷ್ಟೊಂದು ಶಾಂತವಾಗಿಲ್ಲದಿದ್ದರಿಂದ ನರಸಿಂಗ್ ಹೋಮ್ ನಲ್ಲೇ ಕಳೆಯಲು ನಿರ್ಧರಿಸಿದರು. ವಸುಂಧರಾ, ನಾನು ಮತ್ತು ಸತೀಶ್ ಎಲಾ ಸೇರಿ ಸ್ಮಿತಾಳ ಮನೆಯವರೊಂದಿಗೆ ಫ್ಯಾಮಿಲೀ ಕಾನ್ಫೆರೆನ್ಸ್ ಮಾಡಿದೆವು. ವಸುಂಧರಾ ಅವರು ಸ್ಮಿತಾಳ ಪರಿಸ್ಥಿತಿಯನ್ನು ವಿವರಿಸುತ್ತಾ, ಪ್ಲಾಸೆಂಟಾ ತುಂಬಾ ಆಳವಾಗಿ ಹೂತಿದ್ದು, ಸರ್ಜೆರಿ ಮಾಡಿ ತೆಗೆಯಬೇಕಾದ ವಿಷಯ, ಮತ್ತು ಮುಂದೆ ಬರಬಹುದಾದ ವಿಪತ್ತುಗಳು, ತಡೆಇಲ್ಲದ ರಕ್ತಸ್ರಾವ ಹಾಗೂ ಡಿ. ಐ. ಸಿ. ವಿಷಯವನ್ನು ತಿಳಿಸಿ, ಪರಿಸ್ಥಿತಿ ಅಷ್ಟೊಂದು ಸಮಾಧಾನಕರವಾಗಿಲ್ಲ".ಎಂದು ಎಚ್ಚರಿಸಿದರು. "ನಾವು ಮಾಡುವ ಪ್ರಯತ್ನವನ್ನೆಲ್ಲಾ ಮಾಡುತ್ತೇವೆ, ಇಷ್ಟರ ಮೇಲೆ ಪ್ರಕೃತಿ ಹೇಗೆ ತಿರುಗುತ್ತೋ, ನಾವೆಲ್ಲಾ ಕಾದು ನೋಡಬೇಕು " ಎಂದರು.

ಸ್ಮಿತಾ ಸ್ವಲ್ಪ ಹೊತ್ತಿನ ನಂತರ ಅನೆಸ್ತೀಶಿಯಾದಿಂದ ಹೊರಬಂದು, ಸ್ವಲ್ಪ ಮಾತನಾಡಿ, ಮಗುವನ್ನೊಮ್ಮೆ ನೋಡಿ ಸಂತೋಷದ ನಗುವನ್ನೊಮ್ಮೆ ಕೊಟ್ಟಳು. ಆದರೆ ನೋವಿಂದಾ (ಸರ್ಜರಿಯ) ಬಳಲುತ್ತಾ, ವಿಶ್ರಾಂತಿಗಾಗಿ ಮಾತು ನಿಲ್ಲಿಸಿ ಮಲಗಿದಳು. ಇದು ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡಿದ್ದರೂ, ವಸುಂಧರ ಅವರು ನನಗೆ ಸ್ಮಿತಾಳ ಬಗ್ಗೆ ವಿವರಿಸಿದ ಆಧಾರದ ಮೇಲೆ ಡಿ. ಐ. ಸಿ. ಆಗುವ ಸಂಭವ ಹೆಚ್ಚು, ಅದನ್ನು ನಿಲ್ಲಿಸಲು ಬೇಕಾಗಿರುವ ರಕ್ತದಲ್ಲಿರುವ ಕ್ಲಾಟ್ ಫ್ಯಾಕ್ಟರ್ಸ್ ಇಲ್ಲಿ ಸಿಗುವುದಿಲ್ಲಾ ಮತ್ತು ಹೆಚ್ಚಿನ ಪರೀಕ್ಷೆಗಳಿಗೆ ಇಲ್ಲಿ (ಭಾರತ) ಅವಕಾಶವಿಲ್ಲ ಎಂದಿದ್ದು ಆಗಾಗ್ಗೆ ನನ್ನ ಮೆದುಳನ್ನು ಎಚ್ಚರಿಸುತಿತ್ತು.

ಸ್ಮಿತಾಳ ಮನೆಯವರೆಲ್ಲಾ ಅವಳ ಬೆಡ್ ಅಕ್ಕಪಕ್ಕದಲ್ಲಿದ್ದು ಬೇಕಾದ ನೆರವು ನೀಡುತ್ತಿದ್ದರು. ಯಾರೂ ಸ್ಮಿತಾಳನ್ನು ಎಚ್ಚರಿಸಿ ಮಾತನಾಡಿಸುವಂತಿರಲಿಲ್ಲ, ಸ್ಮಿತಾಳಿಗೆ ಪೂರ್ಣ ವಿಶ್ರಾಂತಿ ಬೇಕಿತ್ತು. ಅವರ ಮನಗಳಲ್ಲಿರುವ ತೊಳಲಾಟವನ್ನು ಅವರ ಮುಖಗಳು ಅರುಹಿದಂತಿತ್ತು. ನಾನು ಯಾರ ಮುಖವನ್ನೂ ಒಂದು ಸೆಕೆಂಡ್ ಮೇಲೆ ನೋಡಲು ಶಕ್ತಳಾಗಿರಲಿಲ್ಲ, ಹಾಗೂ ಕಾಲಾವಕಾಶವೂ ಇರಲಿಲ್ಲ. ಸ್ಮಿತಾಳಿಗೆ ಕೇರ್ ಮಾಡುವುದೇ ನನಗೆ ಒಪ್ಪಿಸಿದ ಇಡೀ ರಾತ್ರಿಯ ಕೆಲಸವಾಗಿತ್ತು.

ನಾನು ಸ್ಮಿತಾಳ ಮೇಲಿಂದ ಕಣ್ಣು ಕೀಳಲೇ ಇಲ್ಲ. ಆದರೂ ಸರಿಯಾದ ಪ್ರತಿಫಲ ಸಿಗುವ ರೀತಿಯಲ್ಲಿ ಕಾಣಿಸಲಿಲ್ಲವಾದಾಗ "ವಿಧಿ" ಯನ್ನು ಬೈಯಲು ಹೊರಟೆ. ನಮ್ಮ ತಾಯಿ ಹೇಳುತ್ತಿದ್ದ ಗಾದೆ ನೆನಪಿಗೆ ಬಂತು " ಗಾಳಿ ಜೊತೆ ಗುದ್ದಾಡಿ ಮೈ ಕೈ ನೋವಿಸ್ಕೊಂಡ್ರಂತೆ". ವಿಧಿ ಯ ಜೊತೆ ಗುದ್ದಾಡುವ ಸಾಮರ್ಥ್ಯ ನನಗಷ್ಟೇ ಅಲ್ಲಾ, ನನ್ನ ಹಿರಿಯರಾದ ಡಾ. ವಸುಂಧರ ಮತ್ತು ಡಾ. ವಿಜಯಲಕ್ಷ್ಮಿಗೂ ಇಲ್ಲಾ ಅನ್ನುವುದು ಗೊತ್ತಿದ್ದ ವಿಷಯ. ಆದರೆ ನನಗೆ ಈ ಅಸಹಾಯಕತೆ ಸನ್ನಿವೇಶ ಬಂದಿದ್ದು ನನ್ನ ಕರ್ತವ್ಯ ದ ಆಧಾರದ ಮೇಲಾಗಿದ್ದರಿಂದ " ನಾನೇಕೆ ವೈಧ್ಯಳಾದೆ" ಎಂಬ ವ್ಯಥೆಯು ಕಾಡದೇ ಇರಲಿಲ್ಲ.

ಸ್ಮಿತಾಳ ಪಲ್ಸ್, ಬಿ. ಪಿ. ಚೆಕ್ ಮಾಡುತ್ತಿರುವಾಗ ಸ್ಮಿತಾ ಬಿಳುಚಿಕೊಳ್ಳುತಿರುವುದು ಕಣ್ಣಿಗೆ ಬಂತು. ತಕ್ಷಣ, ಬ್ಲಡ್ ಡ್ರಿಪ್ ಹೋಗುತ್ತಿರುವುದನ್ನು ಖಚಿತ ಪಡಿಸಿ ಡಾ. ವಸುಂಧರನನ್ನು ಕರೆದೆ. ಡಾ. ವಸುಂಧರಾ ಸ್ಮಿತಾಳನ್ನು ಚೆಕ್ ಮಾಡಿ, " ನಾವು ಏನಾಗಬಾರದು ಅಂತ ಕೇಳಿ ಕೊಳ್ಳುತ್ತಿದ್ದೆವೋ, ಅದು ಅನಿವಾರ್ಯವಾಗಿ, ಕ್ರೂರವಾಗಿ ಆರ್ಭಟಿಸುತ್ತಿದೆ, ಶಿ ಈಸ್ ಗೊಯಿಂಗ್ ಇನ್ ಟು ಡಿ. ಐ. ಸಿ." ಎನ್ನುತ್ತಲೇ ವಜೈನಲ್ ಚೆಕ್ ಮಾಡಿ, " ಎಕ್ಸ್ಟರ್ನಲ್ ಬ್ಲೀಡಿಂಗ್ ಇಲ್ಲ, ಶಿ ಮಸ್ಟ್ ಬಿ ಬ್ಲೀಡಿಂಗ್ ಇನ್ಟರ್ನಲಿ ". ಎಂದು ನನಗೆ ಯುಟೆರೈನ್ ಕಂಟ್ರಾಕ್ಟಿಂಗ್ ಇಂಜೆಕ್ಶನ್ ಮತ್ತೊಂದು ಡೋಸ್ ಕೊಡಲು ಹೇಳಿದರು.

ಇದಾದ ನಂತರ ನಾನು, ವಸುಂಧರಾ ಸ್ಮಿತಾಳ ಪಕ್ಕದಲ್ಲೇ ಇದ್ದು, ತುರ್ತು ಕೇರ್ ರಲ್ಲಿ ಮಘ್ನರಾಗಿದ್ದೆವು. ನಾನು ಸ್ಮಿತಾಳನ್ನು ಮೆತ್ತಗೆ ಕೂಗಿ ಮಗುವನ್ನು ಕೈಯಲ್ಲೆತ್ತಿ ತೋರಿಸಿದೆ. ಸ್ಮಿತಾ ಒಂದು ಸಲ ಕಣ್ಣು ಬಿಟ್ಟು ಮಗುವನ್ನೊಮ್ಮೆ ನೋಡಿದಳು. ಜಾಸ್ತಿ ಸಮಯ ಕಣ್ಣು ತೆಗೆದಿಡಲು ಅಸಾಧ್ಯವಾಗಿ, ನರಳುವ ಧ್ವನಿ ( ಮೋನಿಂಗ್ ) ಕೇಳಿಸಿತು. ನಾನು ಮಗುವನ್ನ ತೊಟ್ಟಿಲೊಳಗೆ ಮಲಗಿಸಿ, ಸ್ಮಿತಾಳ ಸಹಾಯಕ್ಕೆ ಮುಂದಾದರೂ ನನ್ನ ಕಿವಿಯಲ್ಲಿ " ತಬ್ಬಲಿಯು ನೀನಾದೆ ಮಗುವೆ, ಹೆಬ್ಬುಲಿಯ ಬಾಯನ್ನು ಹೊಗುವೆ " ಎಂದು ಯಾರೋ ಆರ್ಥನಾದದಿಂದ ಕೂಗುತ್ತಿರುವಂತೆ ಕೇಳಿ ಬಂತು. ಮನಸ್ಸಿನಲ್ಲಿ ಸ್ಮಿತಾಳು ಆಡಿದ ಮಾತುಗಳೆಲ್ಲಾ ಪ್ರತಿಧ್ವನಿಸತೊಡಗಿದವು. "ಇದು ಮೊದಲನೆಯ ಮಗುವಲ್ವಾ, ಯಾವುದಾದರೂ ಪರವಾಗಿಲ್ಲಾ, ಆರೋಗ್ಯವಾಗಿದ್ದರೆ ಸಾಕು". ಹೌದು ಮಗು ಆರೋಗ್ಯವಾಗೇ ಇದೆ, ಸ್ಮಿತಾಳಂತ ಸುಂದರ ಹೆಣ್ಣುಮಗು ಅನುಗ್ರಹಿಸಿದೆ ಅಂತ ಆದೇವ್ರು ಅವಳ ಪ್ರಾಣವನ್ನೇ ಬಲಿ ತೆಗೆದುಕೊಂಡಂತಿದೆ, ಇದು ಯಾವ ನ್ಯಾಯ? " ನಾನೆಷ್ಟು ಸಲ ಆದ್ರೂ ಹೋಗಿ ಬರುತ್ತೇನೆ, ನೀವಿದ್ರೆ ಸಾಕು ನನ್ನ ಡೆಲವರಿಗೆ".

ಸ್ಮಿತಾಳ ನೆಚ್ಚಿನ ವೈದ್ಯೆ ಡಾ. ವಿಜಯಲಕ್ಷ್ಮಿ ನೂ ಅವಳ ಪಾಲಿಗೆ ಕರುಣಿಸಲಿಲ್ಲ, ಆ ವಿಧಿಯ ಆಟ ಎಷ್ಟು ಕ್ರೂರವಾಗಿತ್ತು. "ನಾನೇ ಹಿರಿಯ ಸೊಸೆ, ಹಾಗಾಗಿ ನಾನು ಪ್ರೆಗ್ನಂಟ್ ಆಗಿರುವುದು ಎಲ್ಲಾರಿಗೂ ತುಂಬಾ ಉತ್ಸಾಹ". ಮಗು ಆಗಲಿ , ವಂಶ ಉದ್ದಾರ ಆಗಲಿ, ಗಂಡು ಮಗು ಆಗಲಿ, ಆದರೆ " ಆ ಗಂಡು ಮಗು ಹೆರಲು ಲೋಕದಲ್ಲಿ ಹೆಣ್ಣು ಮಕ್ಕಳು ಹುಟ್ಟುವುದು ಬೇಡವೇ? ಈ ಮಕ್ಕಳನ್ನು ಹೆರಲು ತಾಯಂದಿರು ಮಾಡುವ ತ್ಯಾಗ " ಪ್ರಾಣವಾದರೂ ಕೊಟ್ಟು ಬೇರೆ ಜೀವ ವವನ್ನು ಉಳಿಸುವ ಅಕ್ಷರಗಳಿಂದ ವಿವರಿಸಲಾರದ ತ್ಯಾಗವನ್ನೇ " ಸ್ಮಿತಾಳು ಇಲ್ಲಿ ಮಾಡಿದ್ದಳು.

ನನ್ನ ಕೈ ವಸುಂಧರಾ ಜೊತೆ ಫೈನಲ್ ಕಾರ್ಡಿಯಾಕ್ ಕೇರ್ ಮಾಡುತ್ತಿದ್ದರೂ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಅಲೆಯುತ್ತಿತ್ತು. ಸ್ಮಿತಾಳ ಮನೆಯವರ ಮುಖಗಳ ಕಡೆಗೆ, ಅದರಲ್ಲೂ ಸುರ್‍ಏಶ ರ (ಸ್ಮಿತಾಳ ಗಂಡ) ಕಡೆಗೆ ನೋಡುವುದು ಸಾಧ್ಯವೇ ಇರಲಿಲ್ಲ. ವಸುಂಧರ ಮೇಡಮ್ ಮತ್ತು ನರಸಿಂಗ್ ಹೋಮ್ ಮಾಲೀಕರು, ಡಾ. ಸತೀಶ್ ಸ್ಮಿತಾಳ ಫ್ಯಾಮಿಲಿಗೆ ವಿಷಯಗಳನ್ನು ವಿವರವಾಗಿ ಅರ್ಥವಾಗುವಂತೆ ಹೇಳುತ್ತಿದ್ದರು. ಸ್ಮಿತಾಳ ಮುಖ ಮತ್ತು ದೇಹ ಪೂರ್ಣ ಬಿಳುಚಿಕೊಂಡು, ಸ್ಮಿತಾ ದೈವಾಧೀನಳಾಗಿದ್ದಳು. ನಾನು ಅಳುವನ್ನು ತಡೆದಿಟ್ಟುಕೊಂಡು ನನಗೆ ಅಂಟಿಸಿದ್ದ ಕರ್ತವ್ಯಗಳನ್ನು ಮುಗಿಸಿ ಡಾ. ಲೌಂಜ್ ಗೆ ಹೊರಟೆ ( ಕಣ್ಣೀರು ಹರಿಸಲು).

ಸ್ಮಿತಾಳ ತಂದೆ ಎದುರು ಬಂದು ( ನನ್ನ ಮನಸ್ಸಿನ ತುಮುಲವನ್ನು ಅರ್ಥಮಾಡಿಕೊಂಡು, ರಾತ್ರಿ ಇಡೀ ಸ್ಮಿತಾಳ ಕೇರ್ ಮಾಡಿದ್ದು ನೋಡಿ, ತಮ್ಮ ದುಃಖ ಎಷ್ಟೇ ಇದ್ದರೂ, ಸೌಜನ್ಯಕ್ಕೆ ಸಾಕಾರದಂತಿದ್ದು, ನನ್ನನ್ನು ಸಮಾಧಾನ ಮಾಡಲು ಯತ್ನಿಸುತ್ತಾ) " ನೀ ಮಾಡುವ ಪ್ರಯತ್ನವೆಲ್ಲಾ ಮಾಡಿದೆಯಮ್ಮಾ, ಆದರೆ ದೈವೇಚ್ಚೇ ಹೀಗಿರುವಾಗ-------(ಕಣ್ಣಲ್ಲಿ ನೀರು ತುಂಬಿತ್ತು) ಹೋಗಿ ಸ್ವಲ್ಪ ನೀರು ಕುಡಿಯಮ್ಮಾ" ಎಂದರು. ಇಂಥಹ ಸಾವಧಾನದ, ಸಂಯಮದ, ಸೌಹಾರ್ದದ ವ್ಯಕ್ತಿಯನ್ನು ನಾನು ಇದುವರೆಗೆ ನೋಡಿಯೇ ಇರಲಿಲ್ಲ ( ಈ ತರಹ ಸಂದರ್ಭದಲ್ಲಿ), ಎಲ್ಲೋ ನಡೆದಾಡುವ ದೇವರಿರಬೇಕು ಎನ್ನಿಸಿತು ಮನದಲ್ಲಿ. ನನಗೆ ಇದುವರೆಗೆ ಕೊಟ್ಟ ಸಂತೋಷವನ್ನೆಲ್ಲಾ ಒಂದೇ ದಿನದಲ್ಲಿ ವಾಪಸ್ ತೆಗೆದುಕೊಂಡಂತಿತ್ತು ಈ ನರಸಿಂಗ್ ಹೋಮ್.

ಲೌಂಜ್ ನಲ್ಲಿ ಕುಳಿತು ಕಣ್ಣೀರು ಹರಿಸುತ್ತಿದ್ದಾಗ ವಸುಂಧರಾ ಮೇಡಮ್ ಕೂಗಿ ಹೇಳಿದ್ದು ಕೇಳಿಸಿತು " ವೇಕ್ ಅಪ್ ಗರ್ಲ್, ದಿಸ್ ಇಸ್ ಜಸ್ಟ್ ಎ ಬಿಗಿನಿಂಗ್, ಯು ಹ್ಯಾವ್ ನಾಟ್ ಸೀನ್ ದ ಡೆಪ್ತ್ ಆಫ್‌ ದ ಓಶನ್ ಯಟ್ ". ಹಾಗೆ ಸಾಕಮ್ಮಾ ಕೂಡ ಕೂಗುತ್ತಿದ್ದಿದ್ದು ಕೇಳಿಸಿತು " ಮೇಡಮ್, ನಿಮ್ಮ ತಾಯಿ ತಿಂಡಿ ಡಬ್ಬಿ ಹಿಡಿದುಕೊಂಡ್ ಹೊರಗಡೆ ಕಾಯ್ತಾ ಇದಾರೆ, ನೀವಿನ್ನೂ ಮನೆಗೆ ಹೊಗ್ಲಿಲ್ಲಾ ಅಂತಾ". ಗಡಿಯಾರದ ಕಡೆಗೆ ನೋಡಿದರೆ ಬೆಳಗ್ಗೆ ೮.೩೦ ಆಗಿತ್ತು, ಇನ್ನು ೨೦ ನಿಮಿಷಗಳಲ್ಲಿ ಕೆ. ಆರ್. ಆಸ್ಪತ್ರೆ ತಲುಪಲು ಸಿಟಿ ಬಸ್ ಗೆ ಓಡಿದೆ . "ದೇವರನ್ನು ಬೈದರೆ ಏನು ಫಲ?, ನಾನು ಆರಿಸಿದ ಉದ್ಯೋಗ ಇದು" ಮನವೆಂದಿತು ಆ ಕ್ಷಣದಲಿ.!!!

(ಟಿಪ್ಪಣಿ: ನಮ್ಮೆಲ್ಲರ ಮನ ಮೆಚ್ಚಿಸಿದ, ಕನ್ನಡದಲ್ಲೂ ನಟಿಸಿದ ಚಲನ ಚಿತ್ರ ನಟಿ, "ಸ್ಮಿತಾ ಪಾಟೀಲ್" ಹೆರಿಗೆ ಸಮಯದಲ್ಲಿ ಅಕಾಲ ಮರಣ ಹೊಂದಿದ್ದು ಡಿ. ಐ. ಸಿ. ಯಿಂದಲೇ. ಮುಂದು ವರೆದ ದೇಶಗಳಲ್ಲೂ, (ಅಮೆರಿಕಾ) ಡಿ. ಐ.ಸಿ.ಯಿಂದ ಪಾರಾಗಿ ಬದುಕುವುದು ಬಹಳ ವಿರಳ. ಡಿ ಐ. ಸಿ. ಗೆ ಒಳಗಾಗದ ಹಾಗೆ ನೋಡಿಕೊಳ್ಳುವುದೇ ಇದಕ್ಕೆ ಉತ್ತಮ ರೀತಿಯ ಟ್ರೀಟ್ಮೆಂಟ್ ಎಂದು ತಘ್ನರು ಒಪ್ಪುತ್ತಾರೆ)