ತರಂಗಾಂತರ ಹೆಚ್ಚಾದರೂ ಬಿಸಿ ಮಾಡಬಲ್ಲ ಅವಗೆಂಪು

ತರಂಗಾಂತರ ಹೆಚ್ಚಾದರೂ ಬಿಸಿ ಮಾಡಬಲ್ಲ ಅವಗೆಂಪು

ನೇರಳಾತೀತ ಕಿರಣಗಳ ಬಗ್ಗೆ ಹಿಂದೆ ತಿಳಿದೆವು. ಬೆಳಕು ಒಂದು ಗಾಜಿನ ಪಟ್ಟಕದ (glass prism) ಮೂಲಕ ಹಾಯಿಸಿದಾಗ ಅದು ಏಳು ಬಣ್ಣಗಳಾಗಿ ಒಡೆಯುತ್ತದೆ. ಇದು ಬೆಳಕಿನ ವರ್ಣ ವಿಭಜನೆ (dispersion of light). ನಾವು ಇದನ್ನು ಬಾಯಿ ಪಾಠ ಮಾಡಿ ಪರೀಕ್ಷೆಯಲ್ಲಿ ಬರೆದು ಒಳ್ಳೆಯ ಅಂಕ ಪಡೆಯುತ್ತೇವೆ. ಇನ್ನೂ ಹೆಚ್ಚೆಂದರೆ ವರ್ಣ ಪಟಲ (spectrum) ಅನ್ನು ಮೂಡಿಸಿ ಅಥವಾ ಕಾಮನಬಿಲ್ಲಿಗೆ ಅದನ್ನು ಅನ್ವಯಿಸಿ ನಾವೇ ಪ್ರಾಜ್ಞರೆಂದು ಬೀಗುತ್ತೇವೆ. ಆದರೆ ಇದಕ್ಕಿಂತ ಭಿನ್ನವಾಗಿ ಯೋಚಿಸಿದರೆ ನಾವು ಅವರನ್ನು ವಿಜ್ಞಾನಿ ಎನ್ನುತ್ತೇವೆ. ಏಕೆ ಎಂದು ಕೇಳಿದಿರಾ? ಮೊನ್ನೆ ಯುವಿ ಕಿರಣಗಳ ಸಂಶೋಧನೆ ಹೇಗಾಯಿತು ಹೇಳಿ? ಪ್ರತಿ ಬಣ್ಣದ ಪಟ್ಟಿಯ ಬಳಿ ಫೋಟೋ ಫಿಲ್ಮ ನ್ನು ಇಟ್ಟು ಬದಲಾವಣೆ ಗಮನಿಸಿದ. ಅವನು ಅಲ್ಲಿಗೆ ಬಿಡಲಿಲ್ಲ. ನೇರಳೆಯಿಂದ ಕೆಳಗಿಟ್ಟು ಅಲ್ಲಿ ಶಕ್ತಿಶಾಲಿ ಕಿರಣ ಪುಂಜವನ್ನು ಗುರುತಿಸಿ ಅದನ್ನ UV ಎಂದು ಕರೆದ. ಇವನಿಗಿಂತ ಒಂದು ವರ್ಷ ಮುಂಚೆ ಸರ್ ಫ್ರೆಡ್ರಿಕ್ ವಿಲಿಯಂ ಹರ್ಷೆಲ್ ಮಾಡಿದ ಪ್ರಯೋಗಗಳನ್ನು ನೋಡಿ. ಇದನ್ನು ಬರೇ ಹರ್ಷೆಲ್ ಎಂದು ಓದದೇ ಪೂರ್ಣ ಹೆಸರಿನೊಂದಿಗೆ ಓದಿ. ಏಕೆಂದರೆ ಹರ್ಷೆಲ್ ಹೆಸರಿನ ಹಲವು ವಿಜ್ಞಾನಿಗಳಿದ್ದಾರೆ.

ಸರ್ ಫ್ರೆಡ್ರಿಕ್ ವಿಲಿಯಂ ಹರ್ಷೆಲ್ ಬೆಳಕಿನ ವರ್ಣಪಟಲದಲ್ಲಿನ ಪ್ರತಿ ಬಣ್ಣದ ಪಟ್ಟಿಯಲ್ಲಿ ಉಷ್ಣತಾಮಾಪಕವನ್ನಿಟ್ಟ. ಆ ಉಷ್ಣತಾ ಮಾಪಕದ ಬುರುಡೆಯನ್ನು ಕಪ್ಪು ಬಣ್ಣದಿಂದ ಮುಚ್ಚಿದ್ದ ಏಕೆಂದರೆ ಕಪ್ಪು ಬಣ್ಣ ಶಾಖವನ್ನು ಬೇಗನೇ ಹೀರಿಕೊಳ್ಳುತ್ತವೆ. ಆತನ ಅಚ್ಚರಿ ಎಂಬಂತೆ ತರಂಗಾಂತರ ಹೆಚ್ಚುತ್ತಿರುವಂತೆ ಬಣ್ದ ಶಾಖೋತ್ಪತ್ತಿ ಪ್ರಮಾಣ ಹೆಚ್ಚುತ್ತಾ ಹೋಗುತ್ತಿತ್ತು. ಅದು ನೀಲಿಯಿಂದ ಕೆಂಪಿಗೆ ಗಣನೀಯವಾಗಿ ಹೆಚ್ಚುವುದು ಕಂಡು ಬಂತು. ಈಗ ಹರ್ಷೆಲ್ ಕೆಂಪಿನಿಂದಾಚೆಗೆ ಉಷ್ಣತಾಮಪಕವೊಂದನ್ನಿಟ್ಟ. ಆಗ ಅಲ್ಲಿ ಉಷ್ಣತೆ ತೀವ್ರವಾಗಿ ಏರಿದ್ದನ್ನು ಗಮನಿಸಿದ. ಅಂದರೆ ಕೆಂಪಿನಿಂದಾಚೆಗೆ ಹೆಚ್ಚು ಶಾಖ ಶಕ್ತಿಯನ್ನು ಹೊಂದಿರುವ ಕಿರಣಗಳ ಪುಂಜವೊಂದಿದೆ ಎಂದು ಹೇಳಿದ. ಇವುಗಳನ್ನು ಉಷ್ಣ ವಿಕಿರಣ (calorific radiations) ಎಂದು ಕರೆದ. ಆದರೆ ನಂತರ ಲ್ಯಾಟಿನ್ ನಿಂದ Infra Red ಶಬ್ದವನ್ನು ಹೆಕ್ಕಲಾಯಿತು ಮತ್ತು ಕೊನೆಗೆ ಅದೇ ಹೆಸರು ಸ್ಥಿರವಾಯಿತು. ಹೀಗೆ ಅವಗೆಂಪು ಕಿರಣಗಳ ಆವಿಷ್ಕಾರವಾಯಿತು. ಈ ಅವಗೆಂಪು (Infra Red) ಕಿರಣಗಳ ತರಂಗಾಂತರ ಕೆಂಪಿಗಿಂತ ಅಂದರೆ 620 ಯಿಂದ 750 nm ಗಿಂತ ಜಾಸ್ತಿ ಅಂದರೆ 780 nm ನಿಂದ 1 ಮಿಲಿ ಮೀಟರ್ ತನಕ.

ಬಿಸಿಲಿನಲ್ಲಿ ನಿಮ್ಮ ಕಾರನ್ನು ನಿಲ್ಲಿಸಿ ಕಳ್ಳರು ಅದರೊಳಗಿನ ವಸ್ತುಗಳನ್ನು ದೋಚಬಾರದೆಂದು ಎಲ್ಲ ಕಿಟಕಿ ಗಾಜುಗಳನ್ನು ಭದ್ರ ಪಡಿಸುತ್ತೀರಿ. ಕೆಲಸ ಮುಗಿದ ಮೇಲೆ ಬಂದು ನೋಡಿದರೆ ಅಬ್ಬಾ ಬಿಸಿಯೇ!! ಹೀಗಾದದ್ದು ಹೇಗೆ ಎಂಬ ಯೋಚನೆ ಬರುತ್ತದೆ. ಯಾಕೆ ಹೀಗೆ ಎಂಬ ಪ್ರಶ್ನೆ ಮೂಡುತ್ತದೆ. ಅದೇ ನನ್ನಂತಹನೊಬ್ಬ ಅದು ಹಸಿರು ಮನೆಯ ಪರಿಣಾಮ (greenhouse effect) ಎಂದು ನಿಮ್ಮ ಬಾಯಿ ಮುಚ್ಚಿಸುತ್ತಾನೆ. ಅದು ಹೇಗೆ? ಎಂದು ಕೇಳುತ್ತೀರಿ. ನೋಡಿ ಈ ಉಷ್ಣ ವಿಕಿರಣಗಳಿವೆಯಲ್ಲ ಅವುಗಳನ್ನು ಗಾಜು ತಡೆಯುತ್ತದೆ ಎನ್ನುತ್ತಾರೆ. ಆದರೆ ಕಾರಿನ ಒಳಗೆ ಈ ಉಷ್ಣ ವಿಕಿರಣಗಳು ಪ್ರವೇಶ ಪಡೆದದ್ದಾದರೂ ಹೇಗೆ? ಎಂಬ ಪ್ರಶ್ನೆಯನ್ನು ಅವರಿಗೆ ನೀವು ಮರಳಿಸಿದ್ದೀರಾ? ಈಗಲಾದರೂ ಕೇಳಿ. 

(ಉತ್ತರ ಮುಂದಿನವಾರ......)

-ದಿವಾಕರ ಶೆಟ್ಟಿ ಎಚ್, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ