ತರಕಾರಿ ಬೆಳೆಗೆ ಶಾಕ್ ಕೊಡುವ ಕೀಟ
ಇದೇನು ಹೊಸ ಕೀಟವೆಂದುಕೊಂಡಿರಾ? ತೋಟದ ನಡುವೆ ಅಂಗಿ ಹಾಕದೆ ಹೋದಾಗ ಮೈಗೆ ಏನೋ ಶಾಕ್ ತಗುಲಿದಂತ ಅನುಭವ ಸಾಮಾನ್ಯವಾಗಿ ಎಲ್ಲಾ ಕೃಷಿಕರಿಗೂ ಆಗಿರುತ್ತದೆ. ಮಾವು, ಕೊಕ್ಕೋ ಬೆಳೆಗಳ ಎಲೆಯ ಅಡಿ ಭಾಗದಲ್ಲಿ ಈ ಕೀಟ ಇರುತ್ತದೆ. ಕೆಲವು ಹಸುರು, ಮತ್ತೆ ಕೆಲವು ಹಳದಿ ಬಣ್ಣದಲ್ಲಿರುತ್ತದೆ.
ಇದು ತರಕಾರಿ ಬೆಳೆಗೆ ತೊಂದರೆ ಮಾಡುತ್ತದೆ. ಹೀರೆ, ಹಾಗಲ ಕಾಯಿ, ಪಡುವಲಕಾಯಿ, ಸೌತೆ ಮುಂತಾದ ತರಕಾರಿ ಬೆಳೆಗಳಿಗೆ ಇದರ ತೊಂದರೆ ಹೆಚ್ಚು. ಇದು ಎಲೆಯ ಹರಿತ್ತು ತಿನ್ನುವ ಕೀಟ. ಹರಿತ್ತು ತಿಂದ ಕಾರಣ ಗಿಡದ ಬೆಳವಣಿಗೆ ಕುಂಠಿತವಾಗಿ ಎಲೆ ಒಣಗಲು ಪ್ರಾರಂಭವಾಗುತ್ತದೆ. ಕ್ರಮೇಣ ಬಳ್ಳಿಗಳು ಸಾಯುತ್ತವೆ. ಇಳುವರಿಯೂ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗುತ್ತದೆ.
ಮೊದಲಿಗೆ ಸಣ್ಣ ಗಾತ್ರದಲ್ಲಿ ಕಾಣಿಸಿಕೊಳ್ಳುವ ಈ ಕೀಟ ಎಲೆ ಭಕ್ಷಣೆ ಮಾಡಿದಂತೆಲ್ಲಾ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಅಲ್ಲೇ ಮೊಟ್ಟೆಗಳನ್ನೂ ಇಡುತ್ತದೆ. ಮೊಟ್ಟೆಗಳು ಎಲೆಯ ಅಡಿ ಭಾಗದಲ್ಲಿ ಇರುವ ಕಾರಣ ಬೇಗ ಗಮನಕ್ಕೆ ಬರುವುದಿಲ್ಲ.
ಇದರ ನಿಯಂತ್ರಣ ಪ್ರಾರಂಭದ ಹಂತದಲ್ಲಿ ಸುಲಭ. ಸಾಮಾನ್ಯವಾಗಿ ಸಾವಯವ ಕೃಷಿ ಮಾಡುವವರು ಯಾವುದೇ ಕೀಟನಾಶಕ ಬಳಕೆ ಮಾಡುವುದಿಲ್ಲ. ಅಲ್ಲಿ ಇದರ ಉಪಟಳ ಹೆಚ್ಚು. ಇದಕ್ಕೆ ಯಾವುದೇ ಕೀಟನಾಶಕ ಹೊಂದುತ್ತದೆ. ಬಾಧಿತ ಸಸ್ಯವನ್ನು ಸುಟ್ಟು ನಾಶ ಮಾಡದೆ ಇದ್ದಲ್ಲಿ ಇದು ಮಣ್ಣಿನಲ್ಲಿ ಅಥವಾ ಇನ್ಯಾವುದೇ ಸಸ್ಯದಲ್ಲಿ ಆಶ್ರಯ ಪಡೆದು ಮತ್ತೆ ಬೆಳೆಗೆ ತೊಂದರೆ ಕೊಡುತ್ತದೆ.
ಚಿತ್ರಗಳ ವಿವರ:
೧. ಶಾಕ್ ಕೀಟ
೨. ಕೀಟ ಬಾಧೆಯಿಂದ ಹಾಳಾದ ಹಾಗಲ ಕಾಯಿ
೩. ಕೀಟ ಬಾಧೆಯಿಂದ ಹಾಳಾದ ಬಳ್ಳಿ