ತರಗೆಲೆಗಳು
ಕವನ
ತರಗೆಲೆಗಳು ನಾವು
ತರಗೆಲೆಗಳು
ಗಾಳಿ ಬೀಸುವವರೆಗಷ್ಟೇ
ತೂಕ ಉಳಿಸಿಕೊಳ್ಳುವವರು
ತರಗೆಲೆಗಳು ನಾವು
ತರಗೆಲೆಗಳು
ಆಧಾರವಿದ್ದರಷ್ಟೆ
ಉಳಿಯುವವರು
ಮಳೆರಾಯನ
ಸೆಳೆತಕ್ಕೆ ಸಿಕ್ಕದಿದ್ದರೂ
ನಿಂತಲ್ಲೆ ಕೊಳೆತು
ನಾರುವ ನಾವು
ತರಗೆಲೆಗಳು
ಸದ್ದ ಮಾಡುತ್ತ
ಕಾಲಿಟ್ಟವರಿಗೆ
ಭೀತಿಯನುಂಟು
ಮಾಡುತ್ತ
ರೋಧನವೋ, ಘರ್ಜನೆಯೋ,
ತಿಳಿಯದೆ
ಸದ್ದಾಗಿಸುವ
ನಾವು
ತರಗೆಲೆಗಳು
ಹಾವು, ಚೇಳು, ಹೆಬ್ಬಾವಿಗೆ
ಸಂದ ನೀಡಿ
ತನ್ನನ್ನೇ ತಾನು
ರಕ್ಷಿಸಿಕೊಳ್ಳುವ
ಜಾಯಮಾನದ
ನಾವು
ತರಗೆಲೆಗಳು.