ತರಲೇ ಅಧ್ಯಕ್ಷರು...!
ಒಂದು ಊರು. ಊರಲ್ಲಿ ಒಬ್ಬ ಪುಂಡ. ಅವನಿಗೆ ಹೇಳಿ ಮಾಡಿಸಿದಂತ ಒಬ್ಬ ಲಫಂಗ.ಇವರ ಅಟ್ಟಹಾಸ ಊರವರಿಗೇನೂ ಪರಿಣಾಮ ಬೀರೊದಿಲ್ಲ. ಬೀರೋದೆಲ್ಲ ಊರಿನ ಗೌಡನಿಗೆ. ಗೌಡನ ಮಗಳ ಮೇಲೆ. ಹೌದು. ಇದು ‘ಅಧ್ಯಕ್ಷ’ ಚಿತ್ರದ ಅರ್ಧ ಲೈನ್. ಇನ್ನರ್ಧ ಲೈನ್ ಮುಂದೆ ಇದೆ ಓದಿ...
ಅಧ್ಯಕ್ಷ ಉಂಡಾಡಿ ಗುಂಡ. ಕೆಲಸ ಇಲ್ಲ. ಉಪಾಧ್ಯಕ್ಷನೂ ಇದ್ದಾನೆ. ಈತ ಪಕ್ಕಾ ಚಾಲು. ಅಧ್ಯಕ್ಷರಿಗಿಂತಲೂ ಒಂದು ಕೈ ಮೇಲೂ. ಆದರೆ, ಇವರ ಸಂಘದ ಹೆಸರು ‘ಚಿಂತೆ ಇಲ್ಲದ ತುಂಡ ಹೈಕಳ ಸಂಘ’ ಅಂತ. ಇವ್ರಿವರೆ ಕಟ್ಟಿಕೊಂಡ ಸಂಘ ಇದು. ಊರು ತುಂಬಾ ಸಾಲಾ ಮಾಡಿಕೊಂಡು ತಿರ್ಗೋ ಈ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ, ಕಾಣಿಸಿಕೊಂಡವ್ರು ಕಾಮಿಡಿ ಹೀರೋ ಶರಣ್ ಮತ್ತು ಚಿಕ್ಕಣ್ಣ...ಇವರಿಗೊಬ್ಬ ವಿಲನ್ ಕೂಡ ಇದ್ದಾನೆ. ಆತನೇ ಊರ ಗೌಡ. ಇದನ್ನ ರವಿಶಂಕರ್ ನಿಭಾಯಿಸಿದ್ದಾರೆ....
ಅಧ್ಯಕ್ಷ ಚಿತ್ರಕ್ಕೆ ಡೈಲಾಗೇ ಜೀವಾಳ. ನಿರ್ದೇಶಕ ನಂದಕಿಶೋರ್ ಅವರ ಚಿತ್ರಕಥೆನೇ ಶಕ್ತಿ. ಎರಡೂ ಸೇರಿದ್ರೆ ಇನ್ನೇನೂ ಆಗಬೇಕು. ಒಳ್ಳೆ ಕಾಮಿಡಿ ಕನ್ನಡ ಚಿತ್ರವೇ ಹೊರಹೊಮ್ಮಿದೆ.ಎಲ್ಲೂ ಪೋಲಿ ಅನಿಸದೇ ಇರೋ ಡೈಲಾಗಳಿವೆ. ತುಂಡ್ ಹೈಕ್ಳು ಅಂತಿರಾ..? ಪೊಲೀ ಜೋಕ್ಸ್ ಇಲ್ಲವೇ ಅಂತಿರೇನೋ. ಅದು ಇವೆ. ಎಲ್ಲೋ ಒಂದು ಕಡೆ ಚಿಕ್ಕಣ್ಣ ಮತ್ತು ಶರಣ್ ಮಧ್ಯೆದ ಸಂಭಾಷಣೆಯಲ್ಲಿ ಒಂದು ಪೋಲಿ ಡೈಲಾಗ್ ಬರುತ್ತದೆ. ಇಷ್ಟು ಬಿಟ್ಟರೇ, ಎಲ್ಲವೂ ಫ್ಯಾಮಿಲಿ..ಫ್ಯಾಮಿಲಿ ಫೀಲ್....
ಚಿತ್ರದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅನಿಸೋದು, ಖಳನಾಯಕ ನಟ ರವಿಶಂಕರ್ ಅವರ ಅಭಿನಯ. ಊರ ಗೌಡನಾಗಿ ಕಾಣಿಸಿಕೊಂಡು ಅಬ್ಬರಿಸಿದ್ದಾರೆ. ಕಣ್ಣೋಟದಲ್ಲಿಯೇ ಕೆಕ್ಕರಿಸಿದ್ದಾರೆ. ಕಂಚಿನ ಕಂಠವೇ ಇರೋದ್ರಿಂದ ರವಿಶಂಕರ್ ಮತ್ತಷ್ಟು ಗರ್ಜಿಸಿದ್ದಾರೆ. ಆದ್ರೂ, ಈ ಪಾತ್ರಕ್ಕೂ ಹಾಸ್ಯದ ಟಚ್ ಇದೆ. ಹಾಗಂತ ಹೇಳಿದ್ರೆ ನಂಬಲೇಬೇಕು. ಅದನ್ನೂ ಅಷ್ಟೇ ಸಮರ್ಥವಾಗಿಯೇ ರವಿಶಂಕರ್ ನಿಭಾಯಿಸಿದ್ದಾರೆ. ಅದನ್ನ ನೋಡಲು ನೀವೂ ಥಿಯೇಟರ್ಗೆ ಹೋದ್ರೇನೆ ಒಳ್ಳೆಯದು.
ಗೌಡನ ಬಗ್ಗೆ ಹೇಳಿದ್ಮೆಲೆ, ಗೌಡನ ಮಗಳ ಬಗ್ಗೆ ಹೇಳದೆ ಇದ್ದರೇ ಹೇಗೆ...? ಹೌದು..! ಯುವ ನಟಿ ರಕ್ಷಾ ಕನ್ನಡಕ್ಕೆ ಈ ಮೂಲಕ ಬಂದಿದ್ದಾರೆ. ಎಲ್ಲೂ ಮೊದಲ ಸಿನಿಮಾ ಅನಿಸದೇ ಇರೋವಷ್ಟು ಕರಾರುವಕ್ಕಾಗಿ ಅಭಿನಯವನ್ನ ತೆಗೆಸಿದ್ದಾರೆ ನಿರ್ದೇಶಕ ನಂದ್ ಕಿಶೋರ್. ನಂದ್ ಕಿಶೋರ್ಗೆ ಇದು ಮೊದಲ ರೀಮೇಕ್ ಚಿತ್ರ. ಆದ್ರೂ, ‘ವಿಕ್ಟರಿ’ಯಂತಹ ಸ್ವಮೇಕ್ ಚಿತ್ರದಂತೇನೆ, ಅಧ್ಯಕ್ಷರನ್ನೂ ತಮ್ಮದಾಗಿಸಿದ್ದಾರೆ ನಂದ್ ಕಿಶೋರ್...
ಮೂಲ ಚಿತ್ರದ ಹೆಸ್ರು ತಮಿಳಿನ ‘ವರುತಪಡಾತ್ ವಾಲಿಬರ್ ಸಂಗಂ’ಅಂತ. 2013 ತೆರೆಗೆ ಬಂದಿತ್ತು. ನಿರ್ದೇಶಕ ಪೋನ್ ರಾಮ್ ಇದನ್ನ ಡೈರೆಕ್ಟ ಮಾಡಿದ್ದರು. ಇದೇ ಚಿತ್ರದ ಕಥೆಯ ಮೂಲ ಎಳೆಯನ್ನೇ ತೆಗೆದುಕೊಂಡು, ನಿರ್ದೇಶಕ ನಂದಕಿಶೋರ್,‘ಅಧ್ಯಕ್ಷ’ ಸಿನಿಮಾ ಮಾಡಿದ್ದಾರೆ. ಕನ್ನಡದ ಪ್ರೇಕ್ಷಕರನ್ನ ಗಮನದಲ್ಲಿಟ್ಟುಕೊಂಡೇ ಅಧ್ಯಕ್ಷ ಮಾಡಿದ್ದಾರೆ ನಂದಕಿಶೋರ್.
ಚಿತ್ರದಲ್ಲಿ ನಿಮ್ಮನ್ನ ಇನ್ನಷ್ಟು ಸೆಳೆಯೋದು ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ. ಮಾಡಿರೋ ಅಷ್ಟೂ ಹಾಡುಗಳು ಇಷ್ಟವಾಗುತ್ತವೆ. ಅದರಲ್ಲೂ ಯೋಗರಾಜ್ ಭಟ್ಟರು ಬರೆದ ‘ಓಪನ್ ಹೇರು ಹಾಡು’ ಮನಸ್ಸಿನಲ್ಲಿ ಉಳಿಯುತ್ತದೆ. ಇತರ ಹಾಡುಗಳು ಸೂಪರ್ ಆಗಿವೆ. ಕ್ಯಾಮೆರಾಮನ್ ಸುಧಾಕರ್ ಕ್ಯಾಮೆರಾ ಕೈಚಳಕದಲ್ಲಿ ‘ಅಧ್ಯಕ್ಷರ’ ಹಳ್ಳಿ ಸೊಗಡನ್ನ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅಧ್ಯಕ್ಷ ಒಮ್ಮೆ ನೋಡಬಹುದಾದ ಸಿನಿಮಾ ಅಂದ್ರು ತಪ್ಪಿಲ್ಲ. ಟ್ರೈ ಮಾಡಿ...
-ರೇವನ್ ಪಿ.ಜೇವೂರ್