ತರವಲ್ಲ ತಗಿ ನಿನ್ನ ತಂಬೂರಿ

ತರವಲ್ಲ ತಗಿ ನಿನ್ನ ತಂಬೂರಿ

ಬರಹ
ಈ‌ ಕೆಳಗಿನ ರಚನೆ ಸಂತ ಶಿಶುನಾಳ ಶರೀಫರದ್ದು.

ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೆ ಬಾರಿಸದಿರೋ ತಂಬೂರಿ

ಸರಸ ಸಂಗೀತದ ಕುರುಹುಗಳರಿಯದೆ
ಕರದೊಳು ಹಿಡಿಯಬ್ಯಾಡ ತಂಬೂರಿ

ಮಧ್ಯದೊಳೇಳು ನಾದದ ತಂಬೂರಿ ಅದ
ತಿದ್ದಿ ನುಡಿಸಬೇಕೋ ತಂಬೂರಿ
ಸಿದ್ಧ ಸಾಧಕರ ಸುವಿದ್ಯೊಕ್ಕೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ

ಬಾಳ ಬಲ್ಲವರಿಗೆ ತಂಬೂರಿ ದೇವ
ಬಾಳಾಕ್ಷ ರಚಿಸಿದ ತಂಬೂರಿ
ಬಿತ್ತೀಸ ರಾಗದ ಬಗೆಯನು ತಿಳಿಯದ
ಕತ್ತೆಗಿನ್ನ್ಯಾತಕ್ಕ ತಂಬೂರಿ

ಅಸಮ ಸುಮ್ಯಾಳಕ್ಕ ತಂಬೂರಿ ಇದು
ಹಸನಾಗಿ ಆಡುವ ತಂಬೂರಿ
ಶಿಶುನಾಳಧೀಶನು ಓದ್ವ ಪುರಾಣದಿ
ಹಸನಾಗಿ ಬಾರಿಸೋ ತಂಬೂರಿ