ತರಿಭೂಮಿ ಒತ್ತುವರಿ; ನಿರಾಶ್ರಿತ ಸಾವಿರಾರು ಹಕ್ಕಿಗಳಿಗೆ ‘ಪರಿಹಾರದ ಪ್ಯಾಕೇಜ್’ ಎಲ್ಲಿಂದ?

Submitted by harshavardhan … on Tue, 08/31/2010 - 15:53
ಬರಹ

ಧಾರವಾಡದ ಕೆಲಗೇರಿ ಕೆರೆಯ ದಂಡೆಯ ಮೇಲೆ ಕಂಡು ಬಂದ ಅಪರೂಪದ ಬಿಳಿ ಕತ್ತಿನ ಕೊಕ್ಕರೆ ಮರಿ.

 

ಧಾರವಾಡದ ಕೆಲಗೇರಿ ಕೆರೆ ದಂಡೆಯ ಮೇಲೆ ಇತ್ತೀಚೆಗೆ ಕಂಡುಬಂದ ಅಪರೂಪದ ಬಿಳಿ ಕತ್ತಿನ ಕೊಕ್ಕರೆ - White Necked Stork ಅಥವಾ Wooly Necked Stork. ನಾವು ಗೆಳೆಯರೆಲ್ಲ ಅಪರೂಪಕ್ಕೆ ಎಂಬಂತೆ ಇತ್ತೀಚೆಗೆ ಬೆಳಗಾಗುವ ಮೊದಲೇ ಎದ್ದು ಕೆಲಗೇರಿ ಕೆರೆ ಪರಿಸರ ನಿರೀಕ್ಷಣೆ ಮಾಡಲು ತೆರಳಿದ್ದೆವು. ಜತೆಗೆ ಛಾಯಾಪತ್ರಕರ್ತ ಮಿತ್ರರುಗಳಾದ ಕೇದಾರಣ್ಣ ಹಾಗೂ ಜೆ.ಜಿ.ರಾಜ್ ಸಹ ಇದ್ದರು.

 

ಕಾಕತಾಳಿಯವೆಂಬಂತೆ ಈ ವಿಚಿತ್ರವಾದ ಮೂರು ಕೊಕ್ಕರೆಗಳು ಜಲದರ್ಶಿನಿಪುರ ಭಾಗದ ಕೆರೆಯ ತರಿ ಭೂಮಿಯಲ್ಲಿ ಹಲವಾರು ಕಾಗೆ, ಬಿಳಿ ಕೊಕ್ಕರೆ ಹಾಗೂ ಬಿಳಿ ಮತ್ತು ನೀಲಿ ನಾಮಗೋಳಿಗಳೊಂದಿಗೆ ಭೂರಿ ಭೋಜನದಲ್ಲಿ ತೊಡಗಿದ್ದವು. ಕೇದಾರ ಅಣ್ಣ ತರಿಭೂಮಿಯ ಕೆಸರಿಗೆ ಒರಗಿಕೊಂಡೇ ಈ ಪಕ್ಷಿಗಳ ಸಮೀಪ ತೆವಳುತ್ತ ಸಾಗಿದರು. ಅದ್ಭುತ ಫೋಟೊ ಕ್ಲಕ್ಕಿಸುವ ಉಮೇದಿ ಹಾಗಿತ್ತು ಎನ್ನಿ! ಕ್ಯಾಮೆರಾ ಕೊರಳಿಗೇರಿಸಿ ತೆವಳುತ್ತ ಸಾಗಿದ ಕೇದಾರ ಅಣ್ಣ, ಹಿಂತಿರುಗಿ ನೋಡಿದರೆ ಕಳಚಿಟ್ಟ ಕ್ಯಾಮೆರಾ ಬ್ಯಾಗ್ ನ್ನು ಹಂದಿಗಳು ದೋಚುವ ಸನ್ನಾಹದಲ್ಲಿದ್ದವು..!

 

ಈ ಭೂಮಿಯ ಮೇಲೆ ಬದುಕಿರುವ ಯಾವ ಹಕ್ಕಿಯೂ ಉಪವಾಸ ಸಾಯುವುದಿಲ್ಲ ಎಂದಾದರೆ ನಮ್ಮ ಗಮನ ಸೆಳೆಯದ ಕೆರೆ-ತೊರೆ, ಗಮನದಲ್ಲಿರುವ ನದಿಗಳಲ್ಲಿ ಹಬ್ಬಿಕೊಂಡಿರುವ ‘ತರಿ ಭೂಮಿ’ಯ ಅಗಾಧವಾದ ಉತ್ಪಾದನಾ ಸಾಮರ್ಥ್ಯದ ತಿಳಿವಳಿಕೆ ನಮ್ಮ ಜ್ಞಾನಕ್ಷಿತಿಜದ ವಿಸ್ತಾರಕ್ಕೆ ನಿಲುಕದ್ದು. ಜೀವ ವಿಜ್ಞಾನಿಗಳ ದೃಷ್ಟಿಯಲ್ಲಿ ಅತ್ಯಂತ ನಾಜೂಕಾದ, ಕ್ರಿಯಾತ್ಮಕ, ಉತ್ಪನ್ನಶೀಲ, ತರಿಭೂಮಿಯನ್ನು ಕಬಳಿಸಲು ಇಂದು ಅದೆಷ್ಟು ಮಂದಿ ಹೊಂಚುಹಾಕುತ್ತಿದ್ದಾರೆ ಗೊತ್ತೆ? 

 

ನಗರಗಳನ್ನು ವಿಸ್ತರಿಸುವ ಸಂಸ್ಥೆಗಳಿಗೆ ತರಿ ಭೂಮಿಯನ್ನು ಒಡೆದು, ನೀರನ್ನು ಬಸಿದು, ಕೆರೆಯ ಅಂಗಳಗಳನ್ನು ನಿವೇಶನಗಳನ್ನಾಗಿಸುವ ಕನಸು; ಉದ್ದಿಮೆದಾರರಿಗೆ ಕೆರೆ-ಕುಂಟೆ, ಕಾಲುವೆ-ಹರಿ-ತೊರೆಗಳನ್ನು ಕಸ, ತ್ಯಾಜ್ಯ, ಹೊಲಸಿನಿಂದ ತುಂಬಿ ಧುಮ್ಮಸ್ ಬಡಿದು ಕಾರ್ಖಾನೆಗಳನ್ನು ಎಬ್ಬಿಸುವ ಅದಮ್ಯ ಬಯಕೆ. ಇನ್ನು ಕಾರ್ಖಾನೆ ಆಡಳಿತಗಾರರದ್ದು ತಮ್ಮಿಂದ ಹೊರಬಂದ ವಿಷಯುಕ್ತ ರಾಸಾಯನಿಕಗಳನ್ನು ಸದಿಲ್ಲದೇ ಕೆರೆಗಳಿಗೆ ಹರಿಸಿ ಕೈತೊಳೆದುಕೊಳ್ಳುವ ಹೊಂಚು; ಕೆರೆಯ ಸುತ್ತಲಿನ ದೊಡ್ಡಕುಳಗಳಿಗೆ ಕೆರೆಯಂಗಳದ ಮಣ್ಣನ್ನು ಮೇಲಕ್ಕೆತ್ತಿ ಇಟ್ಟಂಗಿ ರೂಪಿಸುವ ಯೋಚನೆ! ಕೆರೆಯಂಚಿನಲ್ಲಿರುವ ಶ್ರೀಮಂತರಿಗೆ ಕೆರೆಯನ್ನು ಒತ್ತುವರಿ ಮಾಡಿ ಜಮೀನನ್ನು ವಿಸ್ತರಿಸುವ ಆಸೆ!

 

 

ಶತಮಾನದ ಹೊಸ್ತಿಲಿನಲ್ಲಿರುವ ಕೆಲಗೇರಿ ಕೆರೆಯ ತರಿ ಭೂಮಿಯಲ್ಲಿ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ಛಳಿ ಕಾಯಿಸುತ್ತಿರುವ ಉಣ್ಣೆ ಕತ್ತಿನ ಕೊಕ್ಕರೆ ದಂಪತಿ. ಚಿತ್ರ: ಬಿ.ಎಂ.ಕೇದಾರನಾಥ.

 

ಈ ಎಲ್ಲ ‘ಅಭಿವೃದ್ಧಿ’ ಸದೃಷ ಬೆಳವಣಿಗೆಗಳ ಫಲ? ಏಷ್ಯಾ ಖಂಡದಲ್ಲಿ ಪ್ರತಿ ನಿಮಿಷಕ್ಕೆ ಒಂದು ಹೆಕ್ಟೇರ್ ನಷ್ಟು ‘ತರಿಭೂಮಿ’ ಕಣ್ಮರೆಯಾಗುತ್ತಿದೆ; ಕರ್ನಾಟಕದಲ್ಲಿ ವರ್ಷವೊಂದಕ್ಕೆ ೩೫ ಕೆರೆಗಳು ಕಣ್ಮುಚ್ಚುತ್ತಿವೆ. ಧಾರವಾಡ ಜಿಲ್ಲೆಯ ಕೆರೆಗಳಲ್ಲಿ ಶೇಕಡಾ ೩೧ಅಲ್ಲಿ ಅಪಾರ ಹೂಳು. ಶೇ. ೧೩ ರಷ್ಟು ಕೆರೆಗಳಲ್ಲಿ ಕೈಗಾರಿಕೆಗಳ ಕಲ್ಮಶ. ೪೭ ರಲ್ಲಿ ಇಟ್ಟಿಗೆಯ ಗೂಡುಗಳು; ೩೯ ರಲ್ಲಿ ಕೃಷಿ ಭೂಮಿಯ ಒತ್ತುವರಿ, ೩೬ ರಲ್ಲಿ ಪಕ್ಷಿಗಳ ನಿರಂತರ ಬೇಟೆ. ನೂರಾರು ಕೆರೆ-ಕುಂಟೆಗಳಲ್ಲಿ ವೈವಿಧ್ಯಮಯ ಜೀವರಾಶಿಯ ಬದಲಿಗೆ ದುರ್ವಾಸನೆ ಬೀರುವ, ಕೊಳೆತ ವಸ್ತುಗಳನ್ನು ಒಳಗೊಂಡ, ಸುತ್ತಮುತ್ತಲಿನ ಜೀವಿಗಳಿಗೆ ಮಾರಕವಾದ ನೊರೆತುಂಬಿದ ಹೊಲಸು! ನಮ್ಮ ತರಿಭೂಮಿಯ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸ್ಪಷ್ಠವಾಗಿ ನೀರ್ಕೋಳಿಗಳು ತೋರಿಸುತ್ತಿವೆ.

 

ತರಿ ಭೂಮಿಗಳ ಮಹತ್ವದ ಬಗ್ಗೆ ನಮಗಿನ್ನೂ ತಿಳಿದಿಲ್ಲ ಎಂಬುದು ವಿಷಾದನೀಯ. ತರಿಭೂಮಿ, ನೀರಾವರಿಯಿಂದ ಬೆಳೆತೆಗೆಯುವ ಜಮೀನಿಗೆ ಮಾತ್ರ ಸೀಮಿತವಾಗಿಲ್ಲ. ನೀರು-ನೆಲ ಸಂಧಿಸುವ ಎಲ್ಲ ಜಾಗಗಳನ್ನೂ ಈ ಗುಂಪಿಗೆ ಸೇರಿಸಬಹುದು. ಈ ದೃಷ್ಟಿಯಿಂದ ಕೆರೆ, ಸರೋವರ, ಜಲಾಶಯ, ಅಳಿವೆ, ಹಿನ್ನೀರಿನ ಜೌಗು ನೆಲಗಳೆಲ್ಲವೂ ತರಿಭೂಮಿಗಳೇ. ನೀರು ಮತ್ತು ನೆಲ ಈ ಎರಡೂ ಪ್ರಮುಖ ನೆಲೆಗಳೂ ನೀಡುವ ಅತ್ಯುತ್ತಮ ಪೋಷಣೆಯನ್ನು ಬಳಸಿಕೊಳ್ಳುವ ವೈವಿಧ್ಯಮಯವಾದ ಜೀವಿಪರ ಪ್ರಪಂಚವನ್ನು ನಾವು ತರಿಭೂಮಿಯಲ್ಲಿ ಕಾಣಬಹುದು. ಭರತಪುರದ ಜೌಗುನೆಲ - ವಿದೇಶದ ಅಪರೂಪದ ಕೊಕ್ಕರೆಗಳಿಗೆ ಆಸರೆ; ಕಾಜಿರಂಗಾ ರಾಷ್ಟ್ರೀಯ ಉದ್ಯಾನದ ಬದಿ ಭೂಮಿ, ಒರಿಸ್ಸಾದ ಚಿಲ್ಕಾ ಸರೋವರ, ಮದ್ರಾಸ್ ಸಮೀಪದ ತಾಡಾ ಹಿನ್ನೀರು ಪ್ರದೇಶ, ರಣ್ ಆಫ್ ಕಛ್ ನ ಜೌಗು ಬೆಂಗಾಡು, ಸುಂದರಬನ್ ಮ್ಯಾಂಗ್ರೋವ್ ಜೌಗು ಪ್ರದೇಶಗಳು ತರಿಭೂಮಿಗೆ ಹೆಸರು ವಾಸಿ.

 

೧೯೯೦ ರಿಂದ ೧೯೯೩ರ ವರೆಗೆ ಸುಮಾರು ಮೂರು ವರ್ಷಗಳ ವರೆಗೆ ನಡೆದ ಗಣತಿಯಿಂದ ೨೬ ದೇಶಗಳ ೧೩೧೯ ತರಿ ಭೂಮಿಗಳ ಸ್ಥಿತಿಗತಿಯ ಬಗ್ಗೆ ಸಾಕಷ್ಟು ನಿಖರವಾದ ಮಾಹಿತಿ ದೊರಕಿದೆ. ಯಾವುದೇ ತರಿಭೂಮಿ ೨೦,೦೦೦ ಕ್ಕೂ ಹೆಚ್ಚಿನ ಜಲಪಕ್ಷಿಗಳಿಗೆ ಆಸರೆ ಒದಗಿಸಿ ಪೋಷಿಸಿದರೆ ಅಂತಹ ತರಿಭೂಮಿಗೆ ಅಂತಾರಾಷ್ಟ್ರೀಯ ಮನ್ನಣೆ, ನೆರವು ದೊರಕುತ್ತದೆ. ಸ್ಥಳೀಯರಾದ ನಾವು ಮನಸ್ಸು ಮಾಡಬೇಕು. ಕಣ್ಮರೆ ಅಂಚಿನಲ್ಲಿರುವ ೬೪ ಪ್ರಬೇಧಗಳಿಗೆ ಸೇರಿದ ನೀರ್ಕೋಳಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ೩೧ ಪ್ರಜಾತಿಯ ನೀರ್ಕೋಳಿಗಳು ಭಾರತದ ತರಿಭೂಮಿಗಳಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಯಾವುದೇ ಒಂದು ಪ್ರಬೇಧದ ಹಕ್ಕಿ ಸಾಕಷ್ಟು ಪ್ರಮಾಣದಲ್ಲಿ ಒಂದು ಕಡೆ ಸೇರಿದಲ್ಲಿ ಅಂತಹ ತರಿಭೂಮಿಗೂ ಅಂತಾರಾಷ್ಟ್ರೀಯ ಮನ್ನಣೆ ದೊರೆಯುತ್ತದೆ. ಈ ದೃಷ್ಟಿಯಿಂದ ಏಷ್ಯಾಖಂಡದ ತರಿಭೂಮಿ ಕೈಪಿಡಿಯಲ್ಲಿರುವ ೯೪೭ ನೀರಿನಾಸರೆಗಳಲ್ಲಿ ೩೦೦ಕ್ಕೆ ಮನ್ನಣೆ ಈಗಾಗಲೇ ಪ್ರಾಪ್ತ! ಆದರೆ ಅವುಗಳಿಗೆ ಸೂಕ್ತ ರಕ್ಷಣೆ ಇಲ್ಲ ಎಂಬುದು ಕಳವಳಕಾರಿ.

 

ಆಹಾ! ಅದ್ಭುತವಾದ ಚಿತ್ರ. ಮೂವರು ಒಮ್ಡೇ ಫ್ರೇಮ್ ನಲ್ಲಿ ಬಂಧಿಯಾಗಿರುವ ಸುಂದರ ಚಿತ್ರ. ಕ್ಲಿಕ್ಕಿಸಿದವರು ಬಿ.ಎಂ.ಕೇದಾರನಾಥ.

 

ಇಂತಹ ತರಭೂಮಿ ಕೆಲಗೇರಿ ಕೆರೆಯಲ್ಲಿ ನವೀಕರಣದ ನಂತರವೂ ತುಸು ಉಳಿದುಕೊಂಡಿದೆ ಎಂಬ ಕಾರಣಕ್ಕೆ ಬಿಳಿ ಕತ್ತಿನ ಕೊಕ್ಕರೆಗಳು ನಮಗ ಕಾಣಸಿಕ್ಕವು. ನಿಂತಾಗ ಸುಮಾರು ೮೦ ಸೆಂ.ಮೀ. ನಷ್ಟು ಎತ್ತರಹೊಂದಿರುವ ಪಕ್ಷಿ ಇದು. ದೋಣಿ ತರಹ ಕಾಣುವ ತನ್ನ ದೇಹದ ಭಾರ ತಡೆಯಲು ಹಾಗೂ ನಿಂತೇ ವಿಶ್ರಮಿಸುವ ಹವ್ಯಾಸ ಮೈಗೂಡಿಸಿಕೊಂಡಿರುವುದರಿಂದ ಒಂದು ಕಾಲಿಗೆ ವಿಶ್ರಾಂತಿ ನೀಡಿ, ಮತ್ತೊಂದು ಕಾಲನ್ನು ಅದಕ್ಕೆ ಆನಿಕೆಯಾಗಿ ಕೊಟ್ಟು ನಿಲ್ಲುವ ಪರಿ ಗಮನ ಸೆಳೆಯುತ್ತದೆ. 

 

ಈ ಕೊಕ್ಕರೆ ಸ್ಥಳೀಯವಾಗಿದ್ದರೂ ಸುತ್ತಲಿನ ಹತ್ತಾರು ಕಿಲೋ ಮೀಟರ್ ದೂರದಲ್ಲಿರುವ ಕೆರೆ-ಕುಂಟೆಗಳಿಗೆ ಸತತವಾಗಿ ಪ್ರವಾಸ ಮಾಡುತ್ತಲೇ ಇರುತ್ತದೆ. ನಿಗದಿ ಕೆರೆ, ನೀರಸಾಗರ ಕೆರೆ, ಧುಮ್ಮವಾಡ ಕೆರೆ, ನವಿಲೂರು ಕೆರೆ ಹೀಗೆ ಸತತವಾಗಿ ಸಂಚರಿಸುತ್ತಲೇ ಇರುತ್ತದೆ. ಯಾವತ್ತೂ ಗುಂಪಿನಲ್ಲಿ ಮತ್ತು ಸಪತ್ನೀಕನಾಗಿ ಅದು ವಿಹಾರಕ್ಕೆ ತೆರಳುತ್ತದೆ. ಗಂಡು ಮತ್ತು ಹೆಣ್ಣು ಕೊಕ್ಕರೆಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳೇನಿಲ್ಲ. ಮೀನು, ಕಪ್ಪೆ, ಓತಿಕ್ಯಾತ, ಹಲ್ಲಿ, ಮೊಸಳೆ ಮರಿ, ನೀರು ಹಾವು, ಏಡಿ, ಕಪ್ಪೆಚಿಪ್ಪು ಹಾಗೂ ಹುಳು-ಹುಪ್ಪಡಿಗಳನ್ನು ಆಶ್ರಯಿಸಿ ಅದು ಉದರಂಭರಣ ಮಾಡುತ್ತದೆ. ಹೆಚ್ಚಾಗಿ ತರಭೂಮಿಯಲ್ಲಿ ಕಾಣಸಿಗುವ ಪ್ರಾಣಿಗಳನ್ನು ಇದು ಬೇಟೆಯಾಡಲು ಇಷ್ಟಪಡುತ್ತದೆ.

 

ಕೇದಾರ ಅಣ್ಣನ ಕ್ಯಾಮೆರಾ ಕಣ್ಣಿಗೆ ವಿಚಲಿತವಾಗಿ ಹೊರಡಲು ಅನುವಾದ ಕೊಕ್ಕರೆ.

 

ನೀರಿಗೆ ಅತ್ಯಂತ ಹತ್ತಿರದಲ್ಲಿ ಎತ್ತರವಾದ ಮರ ಅಥವಾ ಟೆಲಿಫೋನ್ ಟಾವರ್ ಗಳ ಮೇಲೆ ಅತ್ಯಂತ ಜಾಳುಜಾಳಾಗಿ ದೊಡ್ಡ ಟೊಂಗೆಗಳನ್ನು ಬಳಸಿ ಇದು ಗೂಡು ಕಟ್ಟುತ್ತದೆ. ಗೂಡು ನಡುವೆ ಬಟ್ಟಲಿನಾಕಾರದಲ್ಲಿದ್ದು, ಹುಲ್ಲು ಮತ್ತು ಹತ್ತಿಯಿಂದ ಮೆದುವಾಗಿಸಲ್ಪಟ್ಟಿರುತ್ತದೆ. ಹೆಚ್ಚು ಸಂದರ್ಭಗಳಲ್ಲಿ ಹಳ್ಳಿಗೆ ಸಮೀಪದಲ್ಲಿ ಈ ಗೂಡುಗಳು ಕಾಣಸಿಗುತ್ತವೆ. ಒಂದು ಬಾರಿಗೆ ಮೂರರಿಂದ ನಾಲ್ಕು ಬಿಳಿ ಬಣ್ಣದ ‘ಓವಲ್ ಶೇಪ್’ ಮೊಟ್ಟೆಗಳನ್ನು ಹೆಣ್ಣು ಕೊಕ್ಕರೆ ಹಾಕಿ, ಕಾವು ಕೊಡುತ್ತದೆ. ಆದರೆ ಹತ್ತರಲ್ಲಿ ಒಂದು ಮರಿ ಬದುಕುಳಿದು ಪ್ರೌಢಾವಸ್ಥೆಗೆ ತಲುಪುತ್ತದೆ.

 

ಹಿಮಾಲಯದ ಪರ್ವತ ಶ್ರೇಣಿಯ ೧,೦೦೦ ಮೀಟರ್ ಎತ್ತರ ಪ್ರದೇಶದಿಂದ ಹಿಡಿದು, ಕ್ವಚಿತ್ತಾಗಿ ಪಾಕಿಸ್ತಾನ ಹಾಗೂ, ನೇಪಾಳ, ಬಾಂಗ್ಲಾದೇಶ, ಶ್ರೀ ಲಂಕಾ, ಮಯನ್ಮಾರ್ ಹಾಗೂ ಭಾರತದ ಹಲವೆಡೆ ಈ ಕೊಕ್ಕರೆಗಳು ಕಾಣಸಿಗುತ್ತವೆ. ಆದರೆ ತರಿಭೂಮಿಯ ನಿರಂತರ ಒತ್ತುವರಿ, ದೊಡ್ಡ ಮರಗಳು ಇನ್ನಿಲ್ಲವಾಗುವಿಕೆ ಹಾಗೂ ಟೆಲಫೋನ್ ಟಾವರ್ ಗಳ ರೇಡಿಯೇಶನ್ ಸಮಸ್ಯೆಯಿಂದಾಗಿ ಅವುಗಳ ಬದುಕು ದುಸ್ಥರವಾಗಿದೆ. ಇತ್ತ ಕೆಲಗೇರಿ ಕೆರೆಯಲ್ಲಿ ಜನರ ಉಪಟಳ, ಹಾಗೆಯೇ ಸತ್ತ ಪ್ರಾಣಿಗಳ ಮಾಂಸದ ರುಚಿ ನೋಡಿರುವ ನಾಯಿಗಳ ಕಾಟವೂ ಇದೀಗ ಈ ಹಕ್ಕಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

 

ಕೆಲಗೇರಿ ಕೆರೆಯ ತರಿಭೂಮಿಯಲ್ಲಿ ಸ್ವಚ್ಛಂದವಾಗಿ ಉದರಂಭರಣದಲ್ಲಿ ತೊಡಗಿದ್ದ ಕೊಕ್ಕರೆಗಳಿಗೆ ನಾಯಿ ಕಾಟ ಬೇರೆ..ಕ್ಲಿಕ್ಕಿಸಿದವರು: ಕೇದಾರನಾಥ.

 

ಶತಮಾನದ ಹೊಸ್ತಿಲಿನಲ್ಲಿರುವ, ತನ್ನಿಮಿತ್ತ ಜಿಲ್ಲಾಡಳಿತದಿಂದ ಸಿಂಗರಿಸಿ ಕೊಳ್ಳುತ್ತಿರುವ, ಕೆಲಗೇರಿ ಕೆರೆ ತನ್ನಯ ತರಿಭೂಮಿ ಯನ್ನು ಸೌಂದರ್ಯೀಕರಣದ ಹೆಸರಿನಲ್ಲಿ ಕಳೆದುಕೊಳ್ಳದಿರಲಿ. ಕೆರೆಯ ಸೌಂದರ್ಯ ಇಮ್ಮಡಿಯಾಗುವುದು ಈ ಹಕ್ಕಿಗಳಿಂದ ಹೊರತು ಮಾನವ ನಿರ್ಮಿತ ಕಾಂಕ್ರೀಟ್ ಕಟ್ಟಡಗಳಿಂದಲ್ಲ..ಎಂಬ ನಂಬಿಕೆ ಹಕ್ಕಿ ಪ್ರೇಮಿಗಳದ್ದು...ಕಾದು ನೋಡೋಣ.