ತಲೆನೋವಿಗೆ ಆಯುರ್ವೇದ ಔಷಧಿ
ತಲೆನೋವು. ತಲೆ ಸಿಡಿದು ಹೋಗುವಂತಹ ತಲೆನೋವು. ತಡೆಯಲಾಗದ ತಲೆನೋವಿನಿಂದ ಬಳಲಿ ಬೆಂಡಾಗುವವರು ನೂರಾರು ಜನ. ಅವರಲ್ಲೊಬ್ಬರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನ ವಿಜ್ನಾನಿ ಸುಭಾಷ್ ಜಾಕೋಬ್. ಕಳೆದ 30 ವರುಷಗಳಿಂದ ತಲೆನೋವಿನ ಸಂಕಟದಿಂದ ಬಸವಳಿದಿದ್ದ ಜಾಕೋಬ್ಗೆ ಈಗ ಅದರಿಂದ ಬಿಡುಗಡೆ.
"ಆಯುರ್ವೇದ ಚಿಕಿತ್ಸೆ ಮಾಡಿದ ನಂತರ ನನ್ನ ತಲೆನೋವು ನೂರಕ್ಕೆ 90 ಭಾಗ ವಾಸಿಯಾಗಿದೆ” ಎನ್ನುತ್ತಾರೆ ಜಾಕೋಬ್. ಈ ಚಿಕಿತ್ಸೆಯನ್ನು 2002ರಲ್ಲಿ ರೂಪಿಸಿದವರು ಬಲೇಂದು ಪ್ರಕಾಶ್. ಅವರು ಉತ್ತರಾಂಚಲದ ಡೆಹ್ರಾಡೂನಿನ ವಿಸಿಪಿಸಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರು. ಪ್ರಾಚೀನ ಆಯುರ್ವೇದ ಪಠ್ಯಗಳಲ್ಲಿ ದಾಖಲಿಸಿರುವ ಐದು ಮೂಲಿಕಾ-ಖನಿಜ ಔಷಧಿಗಳ ಮಿಶ್ರಣವನ್ನು ಪ್ರಕಾಶ್ ಚಿಕಿತ್ಸೆಗೆ ಬಳಸಿದ್ದು. ಇದು ಕೇವಲ 120 ದಿನಗಳಲ್ಲಿ ತಲೆನೋವನ್ನು ಗುಣಪಡಿಸುತ್ತದೆ ಎನ್ನುತ್ತಾರೆ ಪ್ರಕಾಶ್.
ನಮ್ಮ ದೇಶದ ಹಲವಾರು ಆಯುರ್ವೇದ ಪಂಡಿತರನ್ನು ಈ ಚಿಕಿತ್ಸೆ ನೀಡುವುದರಲ್ಲಿ ತರಬೇತುಗೊಳಿಸಿದ್ದಾರೆ ಪ್ರಕಾಶ್. ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ತಲೆನೋವು (ಮೈಗ್ರೇನ್) ರೋಗದಿಂದ ಬಳಲುತ್ತಿದ್ದ 400 ರೋಗಿಗಳಿಗೆ ಆ ಪಂಡಿತರು ಚಿಕಿತ್ಸೆ ನೀಡಿದ್ದಾರೆ. ಈ ಪ್ರಯೋಗದ ಫಲಿತಾಂಶಗಳನ್ನು ಅಂತರರಾಷ್ಟ್ರೀಯ ತಲೆನೋವು ಸೊಸೈಟಿಯ 13ನೇ ಸಮಾವೇಶದಲ್ಲಿ ಸ್ಟಾಕ್ಹೋಮಿನಲ್ಲಿ ಪ್ರಕಟಿಸಲಾಯಿತು.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಜಾಗತಿಕ ಆರೋಗ್ಯ ಸಂಸ್ಥೆಯ "ಪಾರಂಪರಿಕ ಔಷಧಿಗಳ ಪರೀಕ್ಷೆಯ ಮಾರ್ಗದರ್ಶಿ ಸೂತ್ರಗಳ"ನ್ನು ಅನುಸರಿಸಿ ಈ ಪ್ರಯೋಗ ನಡೆಸಲಾಗಿತ್ತು. ಜಾ.ಆ. ಸಂಸ್ಥೆಯ ಅನುಸಾರ ವರುಷಗಟ್ಟಲೆ ನೋವಿನ ಜೀವನಕ್ಕೆ(ರೋಗದಿಂದಾಗಿ ನಷ್ಟವಾದ ಕೆಲಸದ ದಿನಗಳು) ಕಾರಣವಾಗಿರುವ ರೋಗಗಳಲ್ಲಿ ತೀವ್ರ ತಲೆನೋವಿಗೆ 19ನೇ ಸ್ಥಾನ.
ಈ ಆಯುರ್ವೇದ ಚಿಕಿತ್ಸಾ ಪ್ರಯೋಗ ನಡೆಸಿದ್ದು ಮೇ 2005ರಿಂದ ಮಾರ್ಚ್ 2007 ಅವಧಿಯಲ್ಲಿ. ಚಿಕಿತ್ಸೆ ಪಡೆದವರಿಗೆ ಪಥ್ಯ ಮಾಡಲು ಮತ್ತು ಜೀವನಕ್ರಮವನ್ನೇ ಬದಲಾಯಿಸಲು ಸೂಚಿಸಲಾಯಿತು: ಕಾಫಿ, ಮೆಣಸು, ಈರುಳ್ಳಿ ಮತ್ತು ಕೆಂಪುಮಾಂಸ ತಿನ್ನಬಾರದೆಂಬ ನಿಯಮ. ಅವರು ಸೇವಿಸಿದ ಔಷಧಿಗಳು: ನಾರಿಕೇಳ ಲವಣ, ಸೂತಶೇಖರ ರಸ, ಸೀತಾಫಲಾದಿ, ರಸನಾದಿ ವಟಿ, ಗೋದಂತಿ ಮಿಶ್ರಣ - ಇವೆಲ್ಲ ಶುಂಠಿ, ಅರಿಶಿನ, ಕರಿದ ತೆಂಗಿನಕಾಯಿ, ದತ್ತೂರ, ಬಿದಿರು ಮತ್ತು ಬೆಳ್ಳಿಯ ಆಕ್ಸೈಡ್, ತಾಮ್ರದ ಆಕ್ಸೈಡ್, ಗಂಧಕ ಹಾಗೂ ಜಿಪ್ಸಂನ ಮಿಶ್ರಣಗಳಿಂದ ತಯಾರಿಸಿದವು.
ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸಕರಾದ ವೈದ್ಯರ ಅನುಸಾರ ಈ ಚಿಕಿತ್ಸೆಗೆ ಆಧಾರವಾದ ತತ್ವ ಇದು: ಹೊಟ್ಟೆಯಲ್ಲಿ ಆಮ್ಲ ಮತ್ತು ಕ್ಷಾರದ ಸಮತೋಲನ ತಪ್ಪಿದಾಗ ತಲೆನೋವು ಉಂಟಾಗುತ್ತದೆ. ಇದರಿಂದಾಗಿ ಪಿತ್ತ ಜಾಸ್ತಿಯಾಗಿ, ದೇಹದ ಕೆಲಸಕಾರ್ಯಗಳಿಗೆ ಬಾಧೆ. (ವಾತ, ಪಿತ್ತ, ಕಫ - ಇವು ಆಯುರ್ವೇದದ ಮೂರು ಮೂಲ ತತ್ವಗಳು.) “ಈ ಔಷಧಿ ಆಮ್ಲ ಮತ್ತು ಕ್ಷಾರದ ಸಮತೋಲನ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ" ಎನ್ನುತ್ತಾರೆ ಎಸ್. ರಾಘವೇಂದ್ರ ಬಾಬು. ಈ ಚಿಕಿತ್ಸಾ ಪ್ರಯೋಗ ಸಂಯೋಜಿಸಿದ ಬಾಬು ಬೆಂಗಳೂರಿನ ಪದಾವ್ ಸ್ಪೆಷಾಲಿಟಿ ಆಯುರ್ವೇದ ಚಿಕಿತ್ಸಾ ಕೇಂದ್ರದ ನಿರ್ದೇಶಕರು.
ಚಿಕಿತ್ಸೆ ಫಲಕಾರಿ ಆಗಬೇಕಾದರೆ ಜೀವನಕ್ರಮದ ಬದಲಾವಣೆಯೂ ಅಗತ್ಯ ಎಂಬುದು ಪರಿಣತರ ಅಭಿಪ್ರಾಯ. ತೀವ್ರ ತಲೆನೋವಿನ ರೋಗಕ್ಕೆ ವಂಶವಾಹಕಗಳು (ಜೀನ್ಸ್) ಮೂಲ ಕಾರಣ. ಮಾನಸಿಕ ಒತ್ತಡ, ವಾತಾವರಣದ ಬದಲಾವಣೆ, ಆಹಾರ - ಇವೂ ತಲೆನೋವು ಸಿಡಿಯಲು ಕಾರಣ. ಊಟಗಳ ನಡುವೆ ದೀರ್ಘ ಬಿಡುವಿನಂತಹ ಅಶಿಸ್ತಿನ ಆಹಾರಕ್ರಮಗಳೂ ತಲೆನೋವಿಗೆ ಕಾರಣ ಎಂದು ಆಯುರ್ವೇದ ಮತ್ತು ಆಲೋಪಥಿ ಇವೆರಡೂ ಚಿಕಿತ್ಸಾ ಪದ್ಧತಿಗಳು ಸೂಚಿಸುತ್ತವೆ.
ವಿವಿಧ ಚಿಕಿತ್ಸಾ ಕೇಂದ್ರಗಳಿಂದ ರೋಗಿಗಳ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಲಾಯಿತು. ಇದು ಆಯುರ್ವೇದ ಸಂಶೋಧನೆಯಲ್ಲಿ ಬಳಸಲಾದ ವಿನೂತನ ವಿಧಾನ. ಚಿಕಿತ್ಸೆಯು ಪರಿಣಾಮದ ಬಗ್ಗೆ ರೋಗಿಗಳ ಪ್ರತಿಕ್ರಿಯೆ ಹೀಗಿದೆ: ಉತ್ತಮ (30.54%), ಚೆನ್ನಾಗಿದೆ (16.26%), ಗಮನಾರ್ಹವಲ್ಲ (10.84%), ಬದಲಾವಣೆ ಇಲ್ಲ(31%), ಕಳಪೆ (11.33%).
ಆಯುರ್ವೇದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಯಾಕೆ? ಅಧ್ಯಯನಗಳ ಅನುಸಾರ ದೀರ್ಘ ಕಾಲ ತೀವ್ರ ತಲೆನೋವಿಗಾಗಿ ಆಲೋಪಥಿ ಚಿಕಿತ್ಸೆ ಪಡೆಯುವವರು ಔಷಧಿಗಳ ಮೇಲೆ ಅವಲಂಬನೆ ಬೆಳೆಸಿಕೊಳ್ಳುತ್ತಾರೆ. ಈ ಔಷಧಿಗಳ ಅತಿಬಳಕೆಯಿಂದಾಗಿಯೇ ತಲೆನೋವು ಉಂಟಾದ ಪ್ರಕರಣಗಳೂ ಇವೆ; ಅಂತಹ ರೋಗಿಗಳಿಗೆ ಇದಕ್ಕಾಗಿ ಪುನಃ ಬೇರೆ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ ಆಯುರ್ವೇದ ಚಿಕಿತ್ಸೆಯಿಂದಾಗಿ ಅಡ್ಡಪರಿಣಾಮ ತೀರಾ ಕಡಿಮೆ. ಜೊತೆಗೆ ಆಯುರ್ವೇದ ಚಿಕಿತ್ಸೆಯ ಅವಧಿ 120 ದಿನಗಳು. ಹಾಗಾಗಿ ವೆಚ್ಚವೂ ಕಡಿಮೆ. ಅಂದರೆ ರೂ.8,000ದಿಂದ ರೂ.12,000 ತನಕ ವೆಚ್ಚ. ಆಲೋಪಥಿಯಲ್ಲಿ ಒಂದು ತಿಂಗಳಿನ ಔಷಧಿಗೆ ರೂ.200 ವೆಚ್ಚವಾದರೂ ಅದು ಜೀವಮಾನವಿಡೀ ಮಾಡಬೇಕಾದ ವೆಚ್ಚ.
ತೀವ್ರ ತಲೆನೊವಿನ ಔಷಧಿಗಳ ಜಾಗತಿಕ ಮಾರುಕಟ್ಟೆ ಮೌಲ್ಯ 3.4 ಬಿಲಿಯನ್ ಡಾಲರುಗಳು! ಭಾರತದ ಆಯುರ್ವೇದ ಔಷಧಿ ಕಂಪೆನಿಗಳು ಈ ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭಿಸಿವೆ. ಮುಂಬೈಯ ಇಪ್ಕಾ ಲ್ಯಾಬೋರೇಟರೀಸ್ ಇತ್ಯಾದಿ.
ಈ ಆಯುರ್ವೇದ ಔಷಧಿಗಳ ತಯಾರಿಕೆಗೆ ಅಗತ್ಯವಾದ ಔಷಧೀಯ ಸಸ್ಯಗಳ ಕೃಷಿಗೆ ಉತ್ತಮ ಅವಕಾಶವಿದೆ. ಆದರೆ, ಅವನ್ನು ಖರೀದಿಸುವ ವಿಶ್ವಾಸಾರ್ಹ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡ ನಂತರವೇ ಕೃಷಿಕರು ಬೆಳೆ ಬೆಳೆಸಲು ಮುಂದಾಗಬೇಕು.