ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 1)

ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 1)

ಬೋಳು ತಲೆಯ ವ್ಯಕ್ತಿಗಳು ತಮ್ಮ ನುಣುಪಾದ ತಲೆಯನ್ನು ಕೈಯಿಂದ ಸವರಿಕೊಳ್ಳುವಾಗ, ಅದೆಷ್ಟು ಹಿತವಾದ ಅನುಭವ ಎಂದು ನಮಗನಿಸಬಹುದು. ಆದರೆ ಅವರ ಸಮಸ್ಯೆ ಅವರಿಗೇ ಗೊತ್ತು.

ಆ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಲ್ಲಿ ತಲೆ ಬೋಳಾಗದೆ ಇರಲಿಕ್ಕಾಗಿ ವಿಧವಿಧದ ತೈಲಗಳನ್ನು ಅಥವಾ ಪ್ರಾಣಿಗಳ ಕೊಬ್ಬನ್ನು ಗಂಡಸರು ತಲೆಗೆ ಉಜ್ಜಿಕೊಳ್ಳುತ್ತಿದ್ದರು. ಈಗಂತೂ ನೂರಾರು ಪ್ರಸಾಧನಗಳು ಲಭ್ಯವಿವೆ. ಕ್ರೀಂಗಳು, ಹಾರ್ಮೋನುಗಳು, ವಿಟಮಿನ್‌ಗಳು ಇತ್ಯಾದಿ. ಬೋಳುತಲೆಯ ಸಮಸ್ಯೆಗೆ ಪರಿಹಾರವಾಗಿ ವಿಗ್ ಮತ್ತು ತಲೆಗೂದಲು ನಾಟಿ ಶಸ್ತ್ರಕ್ರಿಯಾ ವಿಧಾನಗಳೂ ಬಳಕೆಯಲ್ಲಿವೆ.

ಕಾರಣವೇನು?
ತಲೆಗೂದಲಿನಲ್ಲಿರುವುದು ಕೆರಾಟಿನ್ ಎಂಬ ಪ್ರೊಟೀನ್. ನಮ್ಮ ಉಗುರು ಮತ್ತು ಚರ್ಮದ ಹೊರಪದರದಲ್ಲಿ ಇರುವುದೂ ಇದೇ ಪ್ರೊಟೀನ್. ಚರ್ಮದ ಕೋಶಗಳಂತೆ ತಲೆಗೂದಲು ಕೂಡ ಬೆಳೆಯುತ್ತದೆ ಮತ್ತು ಕ್ರಮೇಣ ಉದುರಿ ಹೋಗುತ್ತದೆ. ಪ್ರತಿದಿನ 50ರಿಂದ 100 ತಲೆಗೂದಲು ಉದುರುವುದು ಸಾಮಾನ್ಯ ಸಂಗತಿ.
15ರಿಂದ 30 ವರುಷಗಳ ವಯಸ್ಸಿನ ವರೆಗೆ: ತಲೆಗೂದಲು ಸೊಂಪಾಗಿ ಬೆಳೆಯುತ್ತದೆ.
40ರಿಂದ 50 ವರುಷಗಳ ವಯಸ್ಸಿನ ವರೆಗೆ: ತಲೆಗೂದಲಿನ ಬೆಳವಣಿಗೆ ನಿಧಾನವಾಗುತ್ತದೆ.
ಅನಂತರ ಗಂಡಸರು ಮತ್ತು ಹೆಂಗಸರಲ್ಲಿ ಸುಮಾರು 50 ವರುಷಗಳ ವಯಸ್ಸಿನಲ್ಲಿ ತಲೆಗೂದಲು ಉದುರಲು ಶುರುವಾಗಿ, 70ನೆಯ ವಯಸ್ಸಿನಲ್ಲಿ ಉದುರುವಿಕೆ ಹೆಚ್ಚಾಗುತ್ತದೆ. ಈ ರೀತಿ ತಲೆಗೂದಲು ಉದುರುವುದು ನಮ್ಮನಮ್ಮ ಜೀನ್‌ಗಳು ಮತ್ತು ಹಾರ್ಮೋನುಗಳಿಂದ ನಿರ್ಧರಿತವಾಗುತ್ತದೆ.

ಇದು ವಂಶಪಾರಂಪರ್ಯ
ಭಾಗಶಃ ಅಥವಾ ಎಲ್ಲ ತಲೆಗೂದಲು ಉದುರಿದಾಗ “ತಲೆ  ಬೋಳಾಯಿತು” ಅನ್ನುತ್ತೇವೆ. ಹೆತ್ತವರ ತಲೆಬೋಳಾಗಿದ್ದರೆ ಅವರ ಶೇಕಡಾ 50 ಮಕ್ಕಳೂ ಈ ಗುಣವನ್ನು ವಂಶಪಾರಂಪರ್ಯವಾಗಿ ಪಡೆಯುತ್ತಾರೆ.

ಗಂಡಸರ ತಲೆ ಬೋಳಾಗುವಿಕೆ ಮುಂತಲೆಯಿಂದ ಶುರುವಾಗುತ್ತದೆ. ಹಣೆಯ ಮೇಲ್ಭಾಗದ ಕೂದಲುಗಳು ಹೆಚ್ಚೆಚ್ಚು ಉದುರುತ್ತ, ಕೊನೆಗೆ ನೆತ್ತಿ ಬೋಳಾಗುತ್ತದೆ (ಚಿತ್ರ 2 ನೋಡಿ.) ಹೆಂಗಸರಿಗೆ ವಯಸ್ಸಾದಾಗ ತಲೆಯ ಎಲ್ಲ ಭಾಗಗಳಿಂದಲೂ ತಲೆಗೂದಲು ಉದುರುತ್ತದೆ.

ಇದಕ್ಕೆ ಜೀನ್‌ಗಳ ಮೂಲಕ ಹೆತ್ತವರಿಂದ ಮಕ್ಕಳಿಗೆ ದಾಟಿ ಬರುವ ಗುಣ ಪ್ರಮುಖ ಕಾರಣವಾದರೂ, ನಮ್ಮ ಆಹಾರ ಇದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಈ ಸತ್ಯಾಂಶಕ್ಕೆ ಜಪಾನೀಯರು ಉತ್ತಮ ನಿದರ್ಶನ. ಸಂಶೋಧಕರು ನಡೆಸಿದ ಅಧ್ಯಯನದ ಅನುಸಾರ ಎರಡನೆಯ ಜಾಗತಿಕ ಯುದ್ಧದ ವರೆಗೆ ಜಪಾನೀಯರು ದಟ್ಟವಾದ ಮತ್ತು ಆರೋಗ್ಯಯುತ ತಲೆಗೂದಲು ಹೊಂದಿದ್ದರು. ಅನಂತರ ಅವರು ಪ್ರಾಣಿಗಳ ಕೊಬ್ಬು ಸೇವಿಸಲು ಆರಂಭಿಸಿದರು. ಈ ಆಹಾರ ಬದಲಾವಣೆಯಿಂದಾಗಿ ಅವರ ಎತ್ತರ ಗಣನೀಯವಾಗಿ ಅಧಿಕವಾದರೂ, ಜಪಾನಿನ ಹೆಚ್ಚೆಚ್ಚು ಗಂಡಸರ ತಲೆಗೂದಲು ಉದುರತೊಡಗಿತು.

ಇತರ ಕಾರಣಗಳು
ತಲೆಗೂದಲು ಉದುರಲು ಇತರ ಕಾರಣಗಳೂ ಇವೆ. ಜ್ವರ, ಒಮ್ಮೆಲೇ ಕಠಿಣ ಪಥ್ಯ ಸೇವನೆ, ಶರೀರದಲ್ಲಿ ಕಬ್ಬಿಣಾಂಶದ ಕೊರತೆ, ಎಕ್ಸ್‌ರೇಗೆ ತಲೆಯೊಡ್ಡುವುದು, ಹಾರ್ಮೋನುಗಳ ಅಸಮತೋಲನದ ಪರಿಣಾಮವಾಗಿ ಅಥವಾ ಹೆರಿಗೆಯ ಬಳಿಕ ತಲೆಗೂದಲು ಉದುರಬಹುದು.

ಶಿಲೀಂಧ್ರದ ಸೋಂಕು, ಸಿಫಿಲಿಸ್ ಅಥವಾ ಇತರ ರೋಗಗಳಿಂದಾಗಿ ತಲೆಯಲ್ಲಿ ಕೆಲವೆಡೆ ತಲೆಗೂದಲು ಉದುರಿ ಬೋಳಾಗಬಹುದು. ಇಂತಹ ಸಂದರ್ಭಗಳಲ್ಲಿ, ತಲೆಗೂದಲಿನ ಬೇರುಕೋಶಗಳಿಗೆ ಹಾನಿಯಾಗಿರದಿದ್ದರೆ ತಲೆಗೂದಲು ಪುನಃ ಮೂಡಿ ಬರುತ್ತದೆ.

ಕೆಲವು ಸಂಶೋಧಕರ ಅನುಸಾರ, ತಲೆಬುರುಡೆಗೆ ಸಾಕಷ್ಟು ರಕ್ತಚಲನೆ ಆಗದಿರುವುದೇ ತಲೆಗೂದಲು ಉದುರಲು ಕಾರಣ.

ತಲೆಗೂದಲಿನ ಜೋಪಾನ
ನಿಮ್ಮ ತಲೆಗೂದಲನ್ನು ನೀವೇ ಜೋಪಾನ ಮಾಡಬೇಕು. ಅದಕ್ಕಾಗಿ ಇವು ನೆನಪಿರಲಿ:
ಸಮತೋಲನ ಆಹಾರ ತಿಂದು, ಚೆನ್ನಾಗಿ ನಿದ್ದೆ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ.
ದಿನವೂ ಸ್ನಾನ ಮಾಡಿ ತಲೆಯನ್ನು ಶುಚಿಯಾಗಿಟ್ಟುಕೊಳ್ಳಿ.
ಅಜ್ಜಿಮದ್ದಿನ ತೈಲಗಳನ್ನು ವಾರಕ್ಕೊಮ್ಮೆಯಾದರೂ ತಲೆಗೆ ಉಜ್ಜಿಕೊಂಡು, ಒಂದು ತಾಸು ಬಿಟ್ಟು ಸ್ನಾನ ಮಾಡುವುದರಿಂದ ತಲೆಯ ಚರ್ಮ ಹಾಗೂ ತಲೆಗೂದಲು ಆರೋಗ್ಯವಾಗಿರಲು ಸಹಾಯ.
ಯಾವತ್ತೂ ರಭಸದಿಂದ ತಲೆ ಬಾಚಬೇಡಿ. ತಲೆಗೂದಲು ಒದ್ದೆಯಾಗಿರುವಾಗ ತಲೆಬಾಚಬೇಡಿ.
ಉರಿಬಿಸಿಲಿನಿಂದಾಗಿಯೂ ತಲೆಗೂದಲು ಉದುರಬಹುದು. ಬಿಸಿಲಿನಲ್ಲಿ ಹೋಗುವಾಗ ಟೊಪ್ಪಿ ಅಥವಾ ಕೊಡೆ ಬಳಸಿ.
ನಿಮ್ಮ ತಲೆಗೂದಲಿನ ಬಗ್ಗೆ ಕರುಣೆ ಇರಲಿ. ಬಣ್ಣ ಹಾಕುವುದು, ಬಿಗಿಯಾಗಿ ಜಡೆ ಕಟ್ಟುವುದು - ಇಂತಹ ಕಠಿಣ “ಶಿಕ್ಷೆ"ಗಳಿಂದ ನಾಜೂಕಿನ ತಲೆಗೂದಲಿಗೆ ಹಾನಿ ಮಾಡಬೇಡಿ.

ಚಿತ್ರ: ಗಂಡಸಿನ ತಲೆ ಬೋಳಾಗುವ ಹಂತಗಳು … ಕೃಪೆ: “ಇನ್-ಸೈಟ್" ದ್ವೈಮಾಸಿಕ