ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 2)

ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 2)

ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಗಳು
ಶಾಶ್ವತವಾಗಿ ಉದುರಿ ಹೋದ ತಲೆಗೂದಲು ಮರು ಬೆಳೆಸಲಿಕ್ಕಾಗಿ ಗಂಡು-ಹೆಣ್ಣೆಂಬ ಭೇದವಿಲ್ಲದೆ ನಾವು ಏನು ಮಾಡಲಿಕ್ಕೂ ತಯಾರು, ಅಲ್ಲವೇ? ಇಂತಹ ಆಸೆಯಿರುವವರೆಲ್ಲ ಎರಡು ಸತ್ಯಾಂಶಗಳನ್ನು ತಿಳಿದಿರಬೇಕು:

1)ಆರೋಗ್ಯವಂತ ತಲೆಗೂದಲಿಗೆ ಪೌಷ್ಠಿಕ ಆಹಾರ ಅಗತ್ಯ; ಆದರೆ ನಿರ್ದಿಷ್ಟ ಆಹಾರ ಅಥವಾ ವಿಟಮಿನ್‌ಗಳಿಂದಾಗಿ ತಲೆಗೂದಲು ಮರುಬೆಳೆಯುವುದಿಲ್ಲ.
2) ವಂಶಪಾರಂಪರ್ಯ ಗುಣದಿಂದಾಗಿ ತಲೆ ಬೋಳಾಗಲು ಶುರುವಾದರೆ, ಯಾವುದೇ ಔಷಧಿ ಅಥವಾ ಪ್ರಸಾಧನಕ್ಕೆ ಅದನ್ನು ತಡೆದು, ಪುನಃ ತಲೆಗೂದಲು ಬೆಳೆಯುವಂತೆ ಮಾಡಲು ಸಾಧ್ಯವಿಲ್ಲ.

ಆದ್ದರಿಂದ ಯಾವುದೇ ಉತ್ಪನ್ನದ ಬಗ್ಗೆ “ಇದು ತಲೆಗೂದಲನ್ನು ಸೊಂಪಾಗಿ ಬೆಳೆಸುತ್ತದೆ” ಅಥವಾ “ಇದು ತಲೆ ಬೋಳಾಗುವುದನ್ನು ತಡೆಯುತ್ತದೆ” ಎಂಬ ಪ್ರಚಾರ ಘೋಷಣೆಗಳನ್ನು ನಂಬಬೇಡಿ. ತಲೆಬೋಳಾಗುವುದನ್ನು ತಡೆಗಟ್ಟ ಬಲ್ಲ ಅಥವಾ ಬೋಳು ತಲೆಯಲ್ಲಿ ಕೂದಲು ಮೂಡಿಸಬಲ್ಲ ಯಾವುದೇ ಔಷಧಿ ಇಲ್ಲ.

ಆದರೆ, “ಬೋಳುತಲೆ ನಿರೋಧಿ ಔಷಧಿಗಳು” ಎಂಬ ಹೆಸರಿನಲ್ಲಿ ಕೆಲವು ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇವು ದುಬಾರಿ ಹಾಗೂ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ಬಹಳ ಪ್ರಚಾರ ಪಡೆದ ಇಂತಹ ಒಂದು ವೈದ್ಯಕೀಯ ಔಷಧಿ “ಮಿನೊಕ್ಸಿಡಿಲ್". ಅತಿ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಇದನ್ನು ತಯಾರಿಸಲಾಯಿತು. ಆದರೆ ಇದರ ಅನಿರೀಕ್ಷಿತ ಅಡ್ಡ ಪರಿಣಾಮ: ರೋಮಗಳ ಬೆಳವಣಿಗೆಗೆ ಪ್ರಚೋದನೆ (ಕೆಲವೊಮ್ಮೆ ಅನಪೇಕ್ಷಿತ ದೇಹ-ಭಾಗಗಳಲ್ಲಿ). ಇದರ ಇತರ ಅಡ್ದ ಪರಿಣಾಮಗಳು: ತುರಿಸುವಿಕೆ, ಚುಚ್ಚುವಿಕೆ, ತಲೆನೋವು, ಮಂಪರು ಮತ್ತು ಕೆಲವರಲ್ಲಿ ಹೃದಯ ಬಡಿತದ ಏರುಪೇರು ಇತ್ಯಾದಿ.

“ಫಿನಾಸ್ಟಿರೈಡ್" ಎಂಬ ಔಷಧಿಯೂ ಬಳಕೆಯಲ್ಲಿದೆ. ಇದರಿಂದ ವಿಪರೀತ ಅಡ್ದ ಪರಿಣಾಮಗಳು ಉಂಟಾಗುತ್ತವೆ: ನಪುಂಸಕತ್ವ, ಕಡಿಮೆ ವೀರ್ಯ ಉತ್ಪಾದನೆ ಇತ್ಯಾದಿ. ಇದರ ಪರಿಣಾಮ, ಡೋಸ್, ದೀರ್ಘ ಕಾಲದ ಸುರಕ್ಷಿತತೆ - ಇವನ್ನು ಪರೀಕ್ಷಿಸಲು ಕೆಲವು ಅಧ್ಯಯನಗಳು ನಡೆದಿವೆ.

ತಲೆಗೂದಲು ಉದುರುವುದನ್ನು ತಡೆಯಲು ಕೆಲವು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸಲಾಗುತ್ತಿದೆ. ತಲೆಗೂದಲಿನ ನಾಟಿ, ಬೋಳು ತಲೆಯ ತುಂಡು ಚರ್ಮ ಕತ್ತರಿಸಿ ತೆಗೆಯುವುದು, ಕೂದಲಿರುವ ಚರ್ಮದ ತುಂಡಿನ ಕಸಿ ಮಾಡುವುದು ಹಾಗೂ ಅಂಗಾಂಶ ವಿಸ್ತರಣೆ ವಿಧಾನಗಳು.

ಇವೆಲ್ಲವೂ ದುಬಾರಿ ವಿಧಾನಗಳು. ಪತ್ರಿಕೆ, ಟಿವಿ ಚಾನೆಲುಗಳು ಮತ್ತು ಮಹಾನಗರಗಳ ಜಾಹೀರಾತು ಫಲಕಗಳಲ್ಲಿ ಈ ವಿಧಾನಗಳ ಜಾಹೀರಾತುಗಳು ಇದ್ದೇ ಇರುತ್ತವೆ. ಅದಲ್ಲದೆ, ಇವನ್ನು ಬಳಸುವವರು ಶಸ್ತ್ರಚಿಕಿತ್ಸೆಯ ನೋವು ಮತ್ತು ಅಪಾಯ ಎದುರಿಸಲು ತಯಾರಿರಬೇಕು. ಮಾತ್ರವಲ್ಲ, ಶಸ್ತ್ರಚಿಕಿತ್ಸೆ ಯಶಸ್ವಿ ಆಗದಿರಲೂ ಬಹುದು. ಆದ್ದರಿಂದ, ಜಾಹೀರಾತುಗಳಿಗೆ ಮರುಳಾಗದೆ, ಅನುಭವಿ ಸರ್ಜನರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ತೀರಾ ಅಗತ್ಯ.

ವಿಗ್ ಪ್ರಿಯರಿಗಾಗಿ
ಪ್ರಾಚೀನ ಕಾಲಯ ದೇಶದ ರಾಜ ಮೌಸೊಲಸನು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ. ಕೊನೆಗೆ ಅವನಿಗೊಂದು ಉಪಾಯ ಹೊಳೆಯಿತು. ಗಂಡಸರು ತಮ್ಮ ತಲೆಗೂದಲನ್ನು ಬಹಳ ಇಷ್ಟ ಪಡುತ್ತಾರೆ ಎಂದವನು ತಿಳಿದಿದ್ದ. ಅದಕ್ಕಾಗಿ ಅವನು ಗಂಡಸರೆಲ್ಲರ ತಲೆ ಬೋಳಿಸಬೇಕೆಂದು ರಾಜಾಜ್ನೆ ಹೊರಡಿಸಿದ. ಅನಂತರ ಅವರವರ ತಲೆಗೂದಲಿನಿಂದ ಮಾಡಿದ ವಿಗ್‌ಗಳನ್ನು ಅವರವರಿಗೇ ಶುಲ್ಕ ಪಡೆದು ಮಾರುವ ವ್ಯವಸ್ಥೆ ಮಾಡಿದ. ಈ ರೀತಿ ರಾಜಭಂಡಾರ ತುಂಬಿಸಿಕೊಂಡ.

ಈಗ ಹಾಗಿಲ್ಲ. ತಲೆಗೂದಲು ಕಳೆದುಕೊಂಡ ಹಲವರು ಅನಿವಾರ್ಯವಾಗಿ ವಿಗ್ ಧರಿಸುತ್ತಾರೆ. ವಿಗ್ ಅನ್ನು ತಯಾರಿಸುವ ವಿಧಾನ ಮತ್ತು ಅದಕ್ಕೆ ಬಳಸಿದ ಫೈಬರುಗಳನ್ನು ಆಧರಿಸಿ ಅದರ ಬೆಲೆ ನಿಗದಿಪಡಿಸಲಾಗುತ್ತದೆ.

ತಿರುಪತಿ ಶ್ರೀ ವೆಂಕಟೇಶವರ ದೇವಸ್ಥಾನದಲ್ಲಿ ದಿನದ 24 ಗಂಟೆಗಳೂ ಕೇಶಮುಂಡನ ನಡೆಯುತ್ತದೆ. ಅಲ್ಲಿ ಸಂಗ್ರಹವಾದ ಟನ್‌ಗಟ್ಟಲೆ ಕೂದಲಿನ ಮಾರಾಟದಿಂದ ತಿರುಪತಿ-ತಿರುಮಲ ದೇವಸ್ಥಾನ ಮಂಡಲಿಗೆ ಕೋಟಿಗಟ್ಟಲೆ ರೂಪಾಯಿ ಆದಾಯ ಬರುತ್ತದೆ. ಈ ಕೂದಲನ್ನು ಹೈದರಾಬಾದಿನ ಮತ್ತು ಚೆನ್ನೈಯ ಎರಡು ಕಂಪೆನಿಗಳು ಖರೀದಿಸುತ್ತವೆ. ಅದನ್ನು ಸಂಸ್ಕರಿಸಿ ವಿಗ್ ತಯಾರಿಸುತ್ತವೆ. ಇಂತಹ ಸಾವಿರಾರು ವಿಗ್‌ಗಳು ಭಾರತದಿಂದ ರಫ್ತಾಗುತ್ತಿವೆ!

ವಿಗ್ ಧರಿಸಿದಾಗ ತಲೆಯ ಮೇಲ್ಮೈಯಲ್ಲಿ ಶಾಖ ಉತ್ಪನ್ನವಾಗುತ್ತದೆ. ಇದರಿಂದಾಗಿ ಹೆಚ್ಚು ಬೆವರುತ್ತದೆ ಮತ್ತು ಚರ್ಮದ ಮೇಲ್ಪದರ ಹೆಚ್ಚು ಕಿತ್ತು ಹೋಗುತ್ತದೆ. ಇದನ್ನು ತಡೆಯಲು ಕೆಲವು ಸೂಚನೆಗಳು ಇಲ್ಲಿವೆ:
ತಲೆಯ ಹೊಟ್ಟು, ತುರಿಕೆ ಮತ್ತು ಸೋಂಕು ತಡೆಯಲಿಕ್ಕಾಗಿ ತಲೆಯ ಚರ್ಮವನ್ನು ದಿನವೂ ಚೆನ್ನಾಗಿ ತೊಳೆಯಿರಿ.
ವಿಗ್ ಧರಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. (ರಾತ್ರಿ ವಿಗ್ ಹಾಕಿ ಕೊಳ್ಳಬೇಡಿ.)
ತಲೆಯಲ್ಲಿ ಇರುವಷ್ಟು ಕೂದಲುಗಳನ್ನು ರಾತ್ರಿ ಚೆನ್ನಾಗಿ ತೊಳೆಯಿರಿ.
ವಿಗ್ ಮತ್ತು ತಲೆಯ ಚರ್ಮವನ್ನು ಯಾವಾಗಲೂ ಶುಚಿಯಾಗಿ ಇಟ್ಟುಕೊಳ್ಳಿರಿ.  

ಬೋಳುತಲೆ - ಕೆಲವರ ಭಾಗ್ಯ
ಅಂತಿಮವಾಗಿ, ಬೋಳು ತಲೆಯನ್ನೇ ಇಷ್ಟ ಪಡುವುದು ಅತ್ಯುತ್ತಮ ಪರಿಹಾರ. ಕನ್ನಡಿಯಲ್ಲಿ ನಮ್ಮ ಬೋಳು ತಲೆ ಮಿರಮಿರನೆ ಮಿಂಚಿದಾಗ ಒಮ್ಮೆ ತಲೆಬಿಸಿ ಆಗಬಹುದು. ಆಗ, ಎಷ್ಟು ಜನರಿಗೆ ಹಾಯಾಗಿ ತಮ್ಮ ಬೋಳು ತಲೆ ಸವರಿಕೊಳ್ಳುವ ಭಾಗ್ಯ ಇದೆ ಅಂತ ಯೋಚಿಸಿದರೆ …. ಆದ್ದರಿಂದ “ಬೋಳು ತಲೆ ನಮ್ಮ ಭಾಗ್ಯ” ಅಂದುಕೊಳ್ಳುವುದೇ ಸರಿ. ಯಾಕೆಂದರೆ ಇದು ನಮ್ಮ ಹಳೆಯ ತಲೆಮಾರಿನವರಿಂದ ಹೆತ್ತವರ ಮೂಲಕ ನಮಗೆ ದೊರೆಯುವ ವಂಶಪಾರಂಪರ್ಯ ಬಳುವಳಿ. ಇನ್ನೊಮ್ಮೆ ನಿಮ್ಮ ಬೋಳುತಲೆ ಕಂಡು ಮುದ್ದು ಮಗುವೊಂದು “ಅಜ್ಜಾ” ಎಂದು ಪ್ರೀತಿಯಿಂದ ಕರೆದಾಗ ನೀವು ಕೋಪಿಸಿಕೊಳ್ಳಬೇಕಾಗಿಲ್ಲ; ಬದಲಾಗಿ, ಆ ಮಗುವಿನ ಪ್ರೀತಿಯ ಕರೆಗೆ ನಿಮ್ಮ ಬೋಳು ತಲೆಯೇ ಕಾರಣ ಎಂದು ಮತ್ತೊಮ್ಮೆ ನೀವು ಖುಷಿಯಿಂದ ತಲೆ ಸವರಿಕೊಳ್ಳಬಹುದು, ಅಲ್ಲವೇ?

ಫೋಟೋ 2: ಸಾಲಾಗಿ ಜೋಡಿಸಿಟ್ಟ ವಿಗ್‌ಗಳು