ತಾಪಮಾನ ಏರುತ್ತಿದೆ ಎಂದು ಹಳ್ಳಿಮನೆ ಬದಲಿಸದಿರಿ

ತಾಪಮಾನ ಏರುತ್ತಿದೆ ಎಂದು ಹಳ್ಳಿಮನೆ ಬದಲಿಸದಿರಿ

ಕಳೆದ ಒಂದು ತಿಂಗಳಿಂದ ಕರಾವಳಿ ಭಾಗದಲ್ಲಿ ಸೊಗಸಾದ ಮಳೆ ಬರುತ್ತಿದೆ. ಮಳೆ ಬರುತ್ತಿರುವ ಸಮಯದಲ್ಲಿ ತಂಪಾದ ವಾತಾವರಣ ಇದ್ದರೂ, ಒಂದು ಅರ್ಧ ದಿನ ಮಳೆ ನಿಂತು ಬಿಸಿಲು ಬಂದರೆ ಸೆಖೆಯಾಗಲು ಶುರುವಾಗುತ್ತದೆ. ಇದು ವಾತಾವರಣ ಬಿಸಿಯೇರುತ್ತಿರುವ ಪರಿಣಾಮ. ಇತ್ತೀಚೆಗೆ ಪ್ರತೀ ವರ್ಷ ಮಾರ್ಚ್ ತಿಂಗಳಿಗೇ ಭಾರೀ ಬಿಸಿಲಿನ ಝಳ ಕಾಣಿಸಿಕೊಳ್ಳುತ್ತಿದೆ. ಎಪ್ರಿಲ್ ಕೊನೆಗೆ ಮೇ ತಿಂಗಳಲ್ಲಿ  ಕಂಡುಬರುವ ಬಿಸಿ ವಾತಾವರಣ ಉಂಟಾಗಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಹೊರಗೆ ಹೋದರೆ ಒಲೆಯ ಮುಂದೆ ನಿಂತುಕೊಂಡಂತೆ ಅನುಭವವಾಗುತ್ತದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು,ಇದು ಕೃಷಿಯ ಮೇಲೆ ಜನ-ಜಾನುವಾರುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ. 

ಕೃಷಿಗೆ ಬಿಸಿಲು ಬೇಕು. ಆದರೆ ಪ್ರತೀಯೊಂದು ಬೆಳೆಗೂ ಇಷ್ಟೇ ತಾಪಮಾನ ಇದ್ದರೆ ಅದು ಅನುಕೂಲಕರ ಎಂದು ಇದೆ. ಅದಕ್ಕಿಂತ ಹೆಚ್ಚಾದರೆ ಬೆಳೆಗೆ ಹಾನಿಯಾಗುತ್ತದೆ. ನಮ್ಮ ರಾಜ್ಯದಲ್ಲಿ ಕರಾವಳಿಯ ಭಾಗದಲ್ಲಿ ಬೆಳೆಸಲ್ಪಡುವ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಗೋಡಂಬಿ, ಭತ್ತ ಮುಂತಾದ ಬೆಳೆಗಳಿಗೆ ಅನುಕೂಲಕರ ತಾಪಮಾನ ಸುಮಾರು ೩೫ ಡಿಗ್ರಿ ಸೆಲ್ಸಿಯಸ್‌ನಷ್ಟು. ಅದಕ್ಕಿಂತ ಹೆಚ್ಚಾದಾಗ ಹೂಗೊಂಚಲು ಒಣಗುವಿಕೆ, ಮಿಡಿ ಉದುರುವಿಕೆ ಜಾಸ್ತಿಯಾಗುವುದು, ಎಲೆ ಒಣಗುವುದು, ಸಸ್ಯ ಬಾಡುವುದು ಮೇಲು ನೋಟಕ್ಕೆ ಕಂಡು ಬರುವ ತೊಂದರೆಗಳಾದರೆ, ನೀರು ಆವಿಯಾಗುವಿಕೆ ನಮಗೆ ಗೊತ್ತಿಲ್ಲದಂತೆ ಆಗುವ ಅತೀ ದೊಡ್ಡ ಸಮಸ್ಯೆ. ಶಿವರಾತ್ರಿ ಕಳೆದರೆ ಸಾಕು ನೀರು ಕಾಣು ಕಾಣುತ್ತಿದ್ದಂತೆ ಆರಲಾರಂಭಿಸುತ್ತದೆ ಎನ್ನುತ್ತಾರೆ ನಮ್ಮ ಹಿರಿಯರು. ಕಾರಣ ಶಿವರಾತ್ರಿಯ ನಂತರ ಬಿಸಿಲಿನ ಝಳ ಏರಿಕೆಯಾಗಿ ಆವಿಯಾಗುವಿಕೆಯ ಪ್ರಮಾಣ ಬಹಳ ಹೆಚ್ಚಳವಾಗುತ್ತದೆ. ನೆಲದ ಮೇಲೆ ಬಿಸಿಲು ಬಿದ್ದು ನೆಲ ಒಣಗುತ್ತದೆ. ಮೇಲು ಭಾಗದ ನೆಲ ಒಣಗಿದಂತೆ ಕೆಳಭಾಗದ ತೇವಾಂಶ ಆ ಒಣ ಭಾಗಕ್ಕೆ ಬರುತ್ತದೆ. ಆ ಭಾಗವೂ ಮತ್ತೆ ಒಣಗಿ ಆವೀಕರಣ ಆಗುತ್ತಾ ನೆಲ ಬಿಸಿಯಾಗಲಾರಂಭಿಸುತ್ತದೆ. ಒಂದು ಚದರ ಅಡಿಯಲ್ಲಿ (೪೦ ಡಿಗ್ರಿ) ಪೂರ್ಣ ಬಿಸಿಲಿಗೆ ಒಂದು ಅಷ್ಟೇ ಅಗಲದ ಪಾತ್ರೆಯಲ್ಲಿ ೧ ಲೀ ನೀರು ಹಾಕಿಟ್ಟರೆ ಅದರಲ್ಲಿ ೪೦೦ ಮಿಲಿ. ಲೀಟರಿನಷ್ಟು ನೀರು ಆವೀಕರಣ ಆಗುತ್ತದೆ. ಹಾಗಾದರೆ  ನಾವು ನೀರಾವರಿ ಮಾಡುವ ಹೊಲದಿಂದ ಎಷ್ಟು ಪ್ರಮಾಣದಲ್ಲಿ ನೀರು ಆವೀಕರಣ ಆಗುವುದಿಲ್ಲ.? 

ಅಧಿಕ ತಾಪಮಾನ ಇರುವಾಗ ಸಸ್ಯಗಳ ಬೆಳವಣಿಗೆ ಹೆಚ್ಚು. ತಾಪಮಾನ ಕಡಿಮೆ ಇರುವಾಗ ನಿಧಾನ. ನಿಧಾನಗತಿಯ ಬೆಳವಣಿಗೆ ಎಲ್ಲಾ ದೃಷ್ಟಿಯಲ್ಲೂ ಉತ್ತಮ. ಬೆಳವಣಿಗೆ ಹೆಚ್ಚಾದರೆ ಅದನ್ನು ಸರಿದೂಗಿಸಲು ಸ್ವಲ್ಪ ವಿರಾಮವೂ ಬೇಕು. ಚಳಿಗಾಲ ಮರಮಟ್ಟುಗಳಿಗೆ ವಿರಾಮದ ಕಾಲ ಎಂದು ಹೇಳಲಾಗುತ್ತದೆ. ಹೆಚ್ಚು ಬೆಳವಣಿಗೆ ಆಗಬೇಕಾದರೆ ಹೆಚ್ಚು ಹೆಚ್ಚು ಆಹಾರದ ಅವಶ್ಯಕತೆ ಬೀಳುತ್ತದೆ. ಅಷ್ಟು ಪ್ರಮಾಣದಲ್ಲಿ ಕೊಡಲು ಅಸಾಧ್ಯವಾದರೆ ಸಸ್ಯ ಬೆಳವಣಿಗೆ ಕುಂಠಿತವಾಗಿ, ಇದರಿಂದ ದೀರ್ಘಾವಧಿಯ ದುಷ್ಪರಿಣಾಮ ಉಂಟಾಗುತ್ತದೆ. ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಸಸ್ಯಗಳು ಹೆಚ್ಚು ಹೆಚ್ಚು ಪೋಷಕಗಳನ್ನು ಬಯಸುತ್ತವೆ. ಅ ಸಮಯದಲ್ಲಿ ಪೊಷಕಗಳನ್ನು ಒದಗಿಸಲು ರೈತರು ಹಿಂಜರಿಯುತ್ತಾರೆ. ಇದು ಬೆಳೆಯ ಫಸಲಿನ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಇದನ್ನು ತಾಪಮಾನ ಕಡಿಮೆ ಇರುವ ಸಮಯದಲ್ಲಿ ಕಾಯಿಕಚ್ಚುವ ಪ್ರಮಾಣ ಮತ್ತು ಹೆಚ್ಚು ಇರುವಾಗ ಕಾಯಿಕಚ್ಚುವಿಕೆಯನ್ನೂ ತುಲನೆ ಮಾಡಿ ಗಮನಿಸಬಹುದು. ತಾಪಮಾನ ಕಡಿಮೆ ಇರುವ ಪ್ರದೇಶಗಳಲ್ಲಿ  ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಹೆಚ್ಚು ಇರುವಲ್ಲಿ ಅಪಕ್ವ ಬೆಳವಣಿಗೆ ಉಂಟಾಗುತ್ತದೆ. ಧೀರ್ಘಾವಧಿ ಬೆಳೆಗಳ (ಮರಮಟ್ಟುಗಳ) ಆಯುಷ್ಯ ಕಡಿಮೆ. 

ಇದು ಸಸ್ಯಗಳ ವಿಚಾರದಲ್ಲಿ ಆದರೆ, ಮನುಷ್ಯ, ಪಶು ಮುಂತಾದವುಗಳಿಗೂ ಅಧಿಕ ತಾಪಮಾನ ಉತ್ತಮವಲ್ಲ.ಅಧಿಕ ತಾಪಮಾನದ ಸಮಯದಲ್ಲಿ ಶರೀರದಲ್ಲಿ ಅವಯವಗಳ ಚಟುವಟಿಕೆ ವೇಗವಾಗಿರುತ್ತದೆ.ಇದರಿಂದ ಮನುಷ್ಯನ- ಪಶುಗಳ ಆಯುಷ್ಯ ಕಡಿಮೆಯಾಗುತ್ತದೆ. ತಾಪಮಾನ ಹೆಚ್ಚಾದಂತೆ ಭೂಮಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಮನುಷ್ಯನ ಬಳಕೆಗೇ ನೀರು ಕೊರತೆಯಾಗುತ್ತದೆ. ಪಶುಗಳಿಗೆ ಮೇವಿನ ಕೊರತೆ ಉಂಟಾಗಿ ಅವು ಸಾಯುವ ಸಾಧ್ಯತೆಯೂ ಇದೆ. ತಣ್ಣಗಿನ ತಾಪಮಾನ ಇರುವಲ್ಲಿ ಜನ ಜಾನುವಾರುಗಳ ಬದುಕುವ ಅವಧಿ ಹೆಚ್ಚು ಇರುತ್ತದೆ. ಅವುಗಳ ಹಾಲೂಡುವಿಕೆಯೂ ಹೆಚ್ಚು ಇರುತ್ತದೆ. ಇದು ಸಸ್ಯಗಳಂತೆ ಎಂದರೂ ತಪ್ಪಲ್ಲ. ಆದ ಕಾರಣ ತಾಪಮಾನದ ಎರಿಕೆ ಎಲ್ಲಾ ವರ್ಗಕ್ಕೂ ತೊಂದರೆದಾಯಕ.

ತಾಪಮಾನದ ಏರಿಕೆಗೆ ಕಾರಣಗಳಾಗಿ ಎಲ್ಲರೂ ಹೇಳುವುದು ಅರಣ್ಯ ನಾಶ ಎಂಬ ವಿಚಾರವನ್ನು . ಇದು ಸ್ವಲ್ಪ ಮಟ್ಟಿಗೆ  ಸರಿಯಾದರೂ ಅದೊಂದೇ ಇದಕ್ಕೆ ಕಾರಣ ಅಲ್ಲವೇ ಅಲ್ಲ. ಅರಣ್ಯನಾಶ ಆಗಿದ್ದರೂ ಸಹ ಭೂ ಹೊದಿಕೆ ಬೇರೆ ವಿಧಾನದಲ್ಲಿ ಆಗಿದೆ. ಕೃಷಿಗಾಗಿ ಅರಣ್ಯ ನಾಶ ಆಗಿದ್ದರೆ, ಅದರ ಬದಲಿಗೆ ಬೆಳೆಗಳ ಮೂಲಕ ಹಸುರು ಹೊದಿಕೆ ಆಗಿದೆ. ನೆಲದ ಮೇಲೆ ಹೊದಿಕೆಗೆ ಇದು ಅನುಕೂಲ ಮಾಡಿಕೊಟ್ಟಿದೆ. ನಿಜವಾಗಿಯೂ ಅದದ್ದೆಂದರೆ ಕಾಂಕ್ರೀಟು ಕಟ್ಟಡಗಳು ಮತ್ತು ಅದಕ್ಕೆ ಬಳಕೆಯಾಗುತ್ತಿರುವ ವಿವಿಧ ನಮೂನೆಯ ಸಿಂಥೆಟಿಕ್ ಪೈಂಟ್‌ಗಳು. ಈಗ ಚಾಲನೆಯಲ್ಲಿರುವ ಸಿಂಥೆಟಿಕ್ ಪೈಂಟ್‌ಗಳು ಬಿಸಿಯನ್ನು ಹೀರಿಕೊಳ್ಳುವುದರ ಬದಲಿಗೆ ಅದನ್ನು ವಿಕರ್ಷಣೆ ಮಾಡುತ್ತಿವೆ. ಈ ಕಾರಣದಿಂದ ವಾತಾವರಣ ಬಿಸಿಯಾಗಿದೆ ಎಂದರೆ ತಪ್ಪಾಗಲಾರದು. ಎಲ್ಲಿ ನೊಡಿದರಲ್ಲಿ, ಅದು ಹಳ್ಳಿ ಇರಲಿ, ಪಟ್ಟಣ ಇರಲಿ ಎಲ್ಲೆಲ್ಲೂ ಕಾಂಕ್ರೀಟು ಕಟ್ಟಡಗಳು. ಅದಕ್ಕೆ ವಿವಿಧ ನಮೂನೆಯ ಪೈಂಟ್‌ಗಳು. ಈ ಕಟ್ಟಡಗಳ ಬದಿಯಲ್ಲಿ ಹೋಗುವಾಗಲೇ ಬಿಸಿಯ ಅನುಭವವಾಗುತ್ತದೆ. ಒಟ್ಟಾರೆಯಾಗಿ ನೊಡಿದರೆ ಕಳೆದ ೨೫-೩೦ ವರ್ಷಗಳಿಂದ ನೆಲದ ಮೇಲೆ ಹಸುರು ಹೊದಿಕೆಯಂತೆ  ಕಾಂಕ್ರೀಟು ಕಟ್ಟಡಗಳ ಹೊದಿಕೆ ಬಂದಿದೆ. ಇದುವೇ ತಾಪಮಾನ ಹೆಚ್ಚಳಕ್ಕೆ ಕಾರಣ. ಇದನ್ನು  ಕೆಲವೇ ವರ್ಷಗಳಲ್ಲಿ ತಜ್ಞರು ಗಮನಿಸಿ ಇದರ ಬಗ್ಗೆ ಅಧ್ಯಯನ ಮಾಡಲಿದ್ದಾರೆ. 

ಅಭಿವೃದ್ದಿ ಆಗಬೇಕಾದರೆ ಇಂತದ್ದು ಇರಬೇಕು. ಆ ಬಗ್ಗೆ ಟೀಕೆ ಸಲ್ಲದು. ಆದರೆ ಅಭಿವೃದ್ದಿ ಒಂದು ಕಡೆ ಆಗುತ್ತಿದ್ದರೆ ಮತ್ತೊಂದು ಕಡೆ ಅದನ್ನು ಸರಿದೂಗಿಸುವ ಪ್ರಯತ್ನಗಳನ್ನು ಮಾಡಬೇಕು. ಕೆಲವು ಉದ್ದಿಮೆಗಳ ಕಟ್ಟಡಗಳು ಆವರಿಸಿರುವಷ್ಟು ಜಾಗದಷ್ಟಾದರೂ ಅವರು ಮರಮಟ್ಟು ಬೆಳೆಸಿದ್ದರೆ ತುಂಬಾ ಅನುಕೂಲವಾಗುತ್ತಿತ್ತು. ಗ್ರೀನ್‌ಬೆಲ್ಟ್ ಇದು ಬರೇ ಸುಂದರವಾದ ಹೆಸರು ಮಾತ್ರ. 

ಉಳಿದವರ ಮಾತು ನಮಗೆ ಬೇಡ. ಕೃಷಿಕರಾದ ನಾವು ಸಾಧ್ಯವಾದಷ್ಟು ನಮ್ಮ ಮನೆ ಹೊಲವನ್ನು ತಾಪಮಾನ ಏರಿಕೆಗೆ ಅನುಕೂಲವಾಗುವಂತೆ ನಿರ್ಮಿಸಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಕಾಂಕ್ರೀಟಿನ ಮನೆ ಕಟ್ಟಡಗಳನ್ನು ಕಟ್ಟುವಾಗ ಸಾಧ್ಯವಾದಷ್ಟು ಬಿಸಿಲಿನ ಝಳ ಕಡಿಮೆ ಇರುವ ಭಾಗದಲ್ಲೇ ಸ್ಥಳ ಆಯ್ಕೆ ಮಾಡಿಕೊಂದು ನಿರ್ಮಿಸಿದರೆ ತಾಪಮಾನ ಏರಿಕೆಗೆ ನಮ್ಮ ಕೊಡುಗೆ  ಕಡಿಮೆಯಾಗಬಹುದು. ಸಾಧ್ಯವಾದಷ್ಟು ಮರಮಟ್ಟಿನ ಬೆಳೆಗಳನ್ನು ಬೆಳೆಸುವುದು,ಭೂಮಿಯ ಮೇಲೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ಮೇಲುಹಾಸಲು ಹೊದಿಸುವುದು ಮುಂತಾದವುಗಳನ್ನು ಮಾಡುವುದು ಉತ್ತಮ. ಕರಾವಳಿ ಮಲೆನಾಡಿನ ಅಡಿಕೆ, ಕಾಫಿ ಬೆಳೆಗಳು ತಾಪಮಾನದ ಉರಿ ತಣಿಸಲು ಸಹಕಾರಿಯಾದ ಬೆಳೆಗಳು. ಈಗ ಇರುವುದರಲ್ಲಿ ಕೃಷಿಕರ ಹೊಲ ಇರುವ ಪ್ರದೇಶದಲ್ಲಿ  ಮಾತ್ರವೇ ತಾಪಮಾನ ಅಷ್ಟು ವಿಪರೀತವಾಗಿ ಏರಿಕೆಯಾಗದೇ ಇರುವುದು. ಆದರೆ ಈಗ ಕೃಷಿಕರು ಬಟ್ಟ ಬಯಲಿನಲ್ಲಿ ತಮ್ಮ ವಾಸದ ಮನೆ ನಿರ್ಮಿಸಲು ಪ್ರಾರಂಭಿಸಿದ್ದಾರೆ. ಹಿಂದೆ ಇವರು ಹೊಲದೊಳಗೆ ಮನೆ ಮಾಡಿಕೊಂಡಿದ್ದರು. ಈಗ ಪರಿಸ್ಥಿಯನ್ನು ಸ್ವಲ್ಪ ಬದಲಿಸಿ ರಸ್ತೆ ಬದಿಗೆ ಬಂದು ತಂಪಿನ ಅವಕಾಶವನ್ನು ಕಳೆದುಕೊಂಡಿದ್ದಾರೆ. ದಯವಿಟ್ಟು ಹೊಲದಲ್ಲೇ ಮನೆ ಮಾಡಿ. ತಾವೂ ತಮ್ಮ ಮಕ್ಕಳೂ ನೈಸರ್ಗಿಕ ತಂಪನ್ನು ಅನುಭವಿಸಿ ಬದುಕುವುದು ಉತ್ತಮ. ನಾಗರೀಕತೆ, ಶಿಕ್ಷಣ, ಮತ್ತು ಇನ್ನಿತರ ಅನುಕೂಲಕ್ಕಾಗಿ ಹಳ್ಳಿ ಮನೆಯ ವಾಸಕ್ಕೆ ವಿದಾಯ ಹೇಳಬೇಡಿ. ಹಳ್ಳಿಯ ಸ್ವಾವಲಂಬಿ ಬದುಕನ್ನು ಯಾವ ಐಷಾರಾಮೀ ಬಂಗಲೆಯಲ್ಲೂ ಅನುಭವಿಸಲು ಸಾಧ್ಯವಿಲ್ಲ. 

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ