ತಾಮ್ರದ ಬಾಟಲಿಯಲ್ಲಿ ನೀರು ಕುಡಿದರೆ…

ತಾಮ್ರದ ಬಾಟಲಿಯಲ್ಲಿ ನೀರು ಕುಡಿದರೆ…

ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ. ಅದರಲ್ಲೂ ಹೆತ್ತವರಿಗೆ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ವಿಪರೀತ ಚಿಂತೆ. ಅವರ ಕುಡಿಯುವ ನೀರು, ತಿನ್ನುವ ಆಹಾರ ಎಲ್ಲದರಲ್ಲೂ ವಿಶೇಷ ಮುತುವರ್ಜಿ ವಹಿಸುತ್ತಾರೆ. ಅದೇ ಎರಡು ಮೂರು ದಶಕಗಳ ಹಿಂದಕ್ಕೆ ನಾವು ಹೋದರೆ ಆಗ ಮಕ್ಕಳ ಮೇಲೆ ಪ್ರೀತಿ ಇದ್ದರೂ ಉಸಿರುಗಟ್ಟಿಸುವಂತಹ ಪ್ರೀತಿಯನ್ನು ಯಾವ ಹೆತ್ತವರೂ ಮಾಡುತ್ತಿರಲಿಲ್ಲ. ಆ ಸಮಯದಲ್ಲಿ ಮಕ್ಕಳು ಚೆನ್ನಾಗಿ ಆಟವಾಡುತ್ತಿದ್ದರು, ನೈಸರ್ಗಿಕವಾಗಿ ಸಿಗುವ ಗಾಳಿ, ಸೂರ್ಯನ ಬೆಳಕು, ನೀರು ಅವರ ಆರೋಗ್ಯವನ್ನು ವೃದ್ಧಿಸುತ್ತಿತ್ತು. ಆದರೀಗ ಮನೆ-ಶಾಲೆ-ಟ್ಯೂಷನ್ ತರಗತಿ ಮತ್ತೆ ಮನೆ ಇಷ್ಟೇ ಮಕ್ಕಳ ಬದುಕಾಗಿದೆ. ೯೦ ಶೇ. ಅಂಕಗಳನ್ನು ಪಡೆದರೂ ಮಕ್ಕಳ ಹೆತ್ತವರಿಗೆ ತೃಪ್ತಿ ಇಲ್ಲ. ಅದೇ ಹಿಂದೆ ೬೦ ಶೇ ಅಂಕಗಳನ್ನು ಪಡೆದರೂ ಅವರಿಗೆ ಮತ್ತು ಮಕ್ಕಳಿಗೆ ಖುಷಿ ಇತ್ತು. ತೃಪ್ತಿ ಇತ್ತು. 

ಶಾಲೆಗೆ ಹೋಗುವ ಮಕ್ಕಳ ಬ್ಯಾಗ್ ನಲ್ಲಿ ಈಗ ನೀರಿನ ಬಾಟಲ್ ಕಡ್ಡಾಯವಾಗಿದೆ. ಕೆಲವು ಶಾಲೆಗಳಲ್ಲಿ ವಾಟರ್ ಬೆಲ್ ಸಹಾ ಇದೆ. ಮಕ್ಕಳು ನಿಗದಿತ ಪ್ರಮಾಣದಲ್ಲಿ ನೀರು ಕುಡಿದರೆ ಮಾತ್ರ ಮುಂದೆ ಆರೋಗ್ಯವಂತರಾಗಿರುತ್ತಾರೆ ಎನ್ನುವುದು ಇದರ ಉದ್ದೇಶ. ನೀರಿನ ಬಾಟಲ್ ಗಳು ನಾನಾ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಟೀಲ್, ಪ್ಲಾಸ್ಟಿಕ್, ತಾಮ್ರ, ಗಾಜು, ಹಿತ್ತಾಳೆ ಹೀಗೆ ನಾನಾ ಬಗೆಯ ನೀರಿನ ಬಾಟಲ್ ಗಳಿವೆ. ಈಗ ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದು ಉತ್ತಮ ಎನ್ನುವ ಚಿಂತನೆ ಎಲ್ಲರಿಗೂ ಮೂಡಿದೆ. ಅದರಲ್ಲಿ ಎಷ್ಟು ಸತ್ಯ?

ಇತ್ತೀಚಿನ ವರದಿಗಳ ಪ್ರಕಾರ ತಾಮ್ರದ ಬಾಟಲಿಗಳಲ್ಲಿ ನೀರು ಕುಡಿಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆರೋಗ್ಯದ ಕಾಳಜಿಯಿಂದ ಇದು ಉತ್ತಮ ಪ್ರಯತ್ನ ಎನ್ನಬಹುದು. ತಾಮ್ರದ ಬಾಟಲಿಯಲ್ಲಿ ಸಂಗ್ರಹಿಸಿದ ನೀರನ್ನು ಅಧಿಕವಾಗಿ ಕುಡಿಯುವುದರಿಂದ ನಿಮ್ಮ ಯಕೃತ್ತಿನ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂಬ ಎಚ್ಚರಿಕೆಯನ್ನೂ ನಿರ್ಲಕ್ಷಿಸಬಾರದು. ಆದರೆ ಅಲ್ಪ ಪ್ರಮಾಣದಲ್ಲಿ ತಾಮ್ರದ ಬಾಟಲಿ ನೀರನ್ನು ಕುಡಿಯುವುದರಿಂದ ಥೈರಾಯಿಡ್ ಗ್ರಂಥಿಯ ಕಾರ್ಯಕ್ಷಮತೆ ಅಧಿಕವಾಗುತ್ತದೆ. ಅಧಿಕ ಪ್ರಮಾಣದ ತಾಮ್ರವು ದೇಹಕ್ಕೆ ಸೇರಿದರೆ ಹೈಪೋಥೈರಾಯಿಸಮ್ ಗೆ ಕಾರಣವಾಗುವ ಸಾಧ್ಯತೆ ಇದೆ. ತಾಮ್ರದ ಕೊರತೆಯು ಒಬ್ಬ ವ್ಯಕ್ತಿಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಏಕೆಂದರೆ ತಾಮ್ರವು ಕೊಲೆಸ್ಟ್ರಾಲ್ ಮತ್ತು ಟ್ರೆಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದ ರಕ್ತನಾಳಗಳ ಒಳಗೆ ರಕ್ತದ ಪರಿಚಲನೆ ಸರಾಗವಾಗಿ ನಡೆಯುತ್ತದೆ. ತಾಮ್ರದ ಅಂಶವು ರಕ್ತನಾಳಗಳ ಒಳಗೆ ರೂಪುಗೊಳ್ಳುವ ಫ್ಲೇಕ್ ಗಳನ್ನು ತೆರವು ಗೊಳಿಸುವಲ್ಲಿ ಸಹಕಾರಿಯಾಗಿದೆ. 

ಹಳೆಯ ಆಯುರ್ವೇದ ಗ್ರಂಥಗಳು ತಾಮ್ರದ ಉಪಯೋಗದ ಬಗ್ಗೆ ಅಧಿಕ ಮಾಹಿತಿ ನೀಡುತ್ತವೆ. ತಾಮ್ರದ ಪಾತ್ರೆಯಲ್ಲಿರಿಸಿದ ನೀರು ಹೊಟ್ಟೆಯ ಕಲ್ಮಶಗಳನ್ನು ನಿವಾರಣೆ ಮಾಡಿ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹಿಂದಿನವರ ನಂಬಿಕೆಯಾಗಿತ್ತು. ಹೊಟ್ಟೆಯೊಳಗಿನ ಹುಣ್ಣುಗಳು, ಸೋಂಕುಗಳು ಮತ್ತು ಇತರ ಅಜೀರ್ಣ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ತಿಳಿಸಲಾಗಿದೆ. ತಾಮ್ರದ ಬಾಟಲಿಯ ನೀರು ಹೃದಯಕ್ಕೆ ರಕ್ತದ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ಹೃದಯದ ಸ್ನಾಯುಗಳನ್ನು ಬಲಪಡಿಸುವಲ್ಲಿ ಸಹಕಾರಿಯಾಗುತ್ತದೆ. ತಾಮ್ರವು ಉರಿಯೂತ ನಿವಾರಕವಾಗಿರುವುದರಿಂದ ಸಂಧಿವಾತದಿಂದ ಬಳಲುವವರಿಗೆ ಅಲ್ಪ ಪ್ರಮಾಣದ ಪ್ರಯೋಜನ ದೊರೆಯಬಹುದು. ಆದರೆ ವಾಂತಿ, ಗ್ಯಾಸ್, ತಲೆನೋವು, ಉರಿ ಮುಂತಾದ ಸಮಸ್ಯೆಗಳನ್ನು ಹೊಂದಿರುವವರು ತಾಮ್ರದ ನೀರನ್ನು ಕುಡಿಯಬಾರದು ಎನ್ನುತ್ತಾರೆ ಆಯುರ್ವೇದ ತಜ್ಞರು.

ತಾಮ್ರದ ಬಾಟಲಿ ಶುಚಿಗೊಳಿಸುವ ಕ್ರಮ: ತಾಮ್ರದ ಬಾಟಲಿಯನ್ನು ನಿಯಮಿತವಾಗಿ ಬಳಸುವುದರಿಂದ ಅದರ ಒಳಗಿನ ಬಣ್ಣವು ಬದಲಾಗುತ್ತದೆ. ಹಾನಿಕಾರಕ ಅಂಶಗಳು ಉತ್ಪತ್ತಿಯಾಗುತ್ತವೆ. ಇದರ ನಿವಾರಣೆಗೆ ಟೊಮೆಟೋ ಹಣ್ಣಿನ ಪೇಸ್ಟ್ ತಯಾರಿಸಿ, ಇದನ್ನು ತಾಮ್ರದ ಬಾಟಲಿಯಲ್ಲಿ ಹಾಕಿ ಸುಮಾರು ೧೦-೧೫ ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಉಜ್ಜಿ ಮತ್ತು ಶುದ್ಧವಾದ ನೀರಿನಲ್ಲಿ ತೊಳೆಯಿರಿ. ಆಗ ಅದು ಮೊದಲಿನಂತೆಯೇ ಹೊಳೆಯುತ್ತವೆ ಮತ್ತು ಪರಿಶುದ್ಧವಾಗುತ್ತದೆ. ಅರ್ಧ ನಿಂಬೆ ಹಣ್ಣನ್ನು ಮತ್ತು ಉಪ್ಪು ತೆಗೆದುಕೊಂಡು ಬಾಟಲಿಯ ಒಳಗೆ ಮತ್ತು ಹೊರಗೆ ಎರಡೂ ಕಡೆಯಿಂದ ಉಜ್ಜಿರಿ. ಇದೂ ಸಹಾ ಬಾಟಲಿಯನ್ನು ಸ್ವಚ್ಛಗೊಳಿಸಿ ಫಳಫಳ ಹೊಳೆಯುವಂತೆ ಮಾಡುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ