ತಾಯವ್ವನ ತಳಮಳ
ತಾಯವ್ವ ತಳಮಳಸಿ ತರಗುಟ್ಟಿದ್ದಾಳೆ
ಗುಡುಗು ಮಿಂಚಿನ ಸೆಳಕಿಗೆ
ಬಿಡದೆ ಬೀಳುವ ಮಳೆರಾಯನ ಅಬ್ಬರಕೆ
ಬಿಡದೆ ಸುರಿಯುವ ಮಳೆಗೆ
ಮಣ್ಣಹೆಂಡಿಗೋಡೆ ನೆನೆದು ಬಿದ್ದು
ಹರನಾಳಿಗೆಯ ನೀರು
ಮನೆಯೊಳಗೆ ಹೊಕ್ಕು ತಾಯವ್ವನ
ಮನೆಯೀಗ ತುಂಬಿದ ಕೆರೆ….!!
ವಾರವಾಯ್ತಿ ಒಲೆಗಿಲ್ಲಾ ಒಣಕಟ್ಟಿಗೆ
ತುತ್ತು ಕೂಳು ಬಿದ್ದಿಲ್ಲಾ ತಟ್ಟಿಗೆ
ಹಚ್ಚಿಡಲು ಎಣ್ಣಿಯಿಲ್ಲಾ ಚಿಮಿಣಿಗೆ
ಅಬ್ಬರಿಸುವ ಮಳೆರಾಯಗೆ ಹಬ್ಬವಾದರೇ
ತಾಯವ್ವನ ಬದುಕು ಮಬ್ಬಾಗಿದೆ….!!
ಹಳೆಮಳೆಗೆ ಮ್ಯಾಳ್ಗೀ ಮಣ್ಣು ಕುಸಿದು
ಜಂತಿ ತೊಲೆಯ ಅಸ್ತಿಪಂಜರಕ್ಕೆ
ಪ್ಲಾಸ್ಟಿಕ್ ಹಾಳೆ ಹೋದಿಕೆ
ಉಳಿದಿದ್ದೂಂದೆ ನೆತ್ತಿಗೆ ಆಸರೆ
ಮಿಂಚು ಗುಡುಗಿನ ಸಪ್ಪಳಕೆ
ಉಸಿರು ಬಿಗಿ ಹಿಡಿದು ಕುಳಿತಿದ್ದಾಳೆ ತಾಯವ್ವ
ಮಳೆನೀರಿನೊಂದಿಗೆ ಕಣ್ಣೀರು ಬೆರಸುತ್ತಾ....!!
ಇನ್ನು ಹೆಚ್ಚಾಯ್ತಿ ಮಳೆ ಅಬ್ಬರ ಅಭ೯ಟ
ಗಾಳಿ ಹೋಡತಕ್ಕೆ ತರಗುಡುವ
ಗಿಡಮರದ ಸಪ್ಪಳ ನೀರಿನ ಭೋಗೆ೯ರತ
ಕಿತ್ತು ಹಾರುವ ಹಂಚು ತಗಡಿನ ಸಪ್ಪಳ
ಮಕ್ಕಳು ಮಂದಿ ಚೀರುವ ಅಳುವ ಆಲಾಪ
ಗುಡುಗಿನ ಶಬ್ಧ ಮಿಂಚನ ಬೆಳಕು
ಮಳೆ ಕತ್ತಲು ಮನದಿ ಭಯ ಅಷ್ಟೇ….!!
ಸಣ್ಣಗೆ ಬೆಳಕು ಹರಿದು ನಿರಾಳ
ವಿರಾಮ ಕೊಟ್ಟ ಮಳೆರಾಯ
ತನ್ನ ವಿಶ್ರಾಂತಿಗೆ
ತಾಯವ್ವ ಮೈಕೊಡವಿ ಕಣ್ಣ್
ಬಿಟ್ಟಳು ಬೆಳಕು!
ಸತ್ತ ಜೀವ ಮರಳಿ ಬಂದಂತೆ
ನಿಟ್ಟುಸಿರು
ಹಿಂದೊಮ್ಮೆ ಕೇಳಿದ್ದಳು ಕೈ ಮುಗಿದು
ಬಾ ಮಳೆರಾಯ ಹೊಲಕ್ಕೆ ಹಸಿಯಾಗು
ಈಗ ಕೈಯೆತ್ತಿ ಬೇಡುವಳು ಬಾರದಿರೆಂದು
ನೀ ಹೀಗೆ ಬಂದರೆ ಬೀದಿಯ ಮಕ್ಕಳ ಗತಿಯೇನು?
ಮುಖವೆತ್ತಿದರೇ ಸೂರಿಗೆ ಹೊಚ್ಚಿದ
ಹಾಳೆಯು ಮಾಯೆ
ಬೆಳದ ಮಕ್ಕಳೀಗ ನನ್ನಿಂದ ಮಾಯೆ
ಬಯಲಲ್ಲಿ ಬಯಲಾಗಿ ನಿಂತ ತಾಯವ್ವ
ಶಪಿಸಿದಳು ಮಳೆರಾಯನಿಗೆ
“ ನಿನ್ನ ಮನೆ ಹಾಳಾಗ ”……!!!!!
-ರತ್ನಾ ಎಂ ಅಂಗಡಿ, ಹುಬ್ಬಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
